ನಿಮಗೆ ಬೆಂಡೆಕಾಯಿ ನೀರು ಕುಡಿದು ಗೊತ್ತೇ? ಅರೆ, ಇದೇನಿದು (Health Tips in Kannada) ಬೆಂಡೆಕಾಯಿ ನೀರು ಎಂದು ಆಶ್ಚರ್ಯಪಡಬೇಡಿ. ಬೆಂಡೆಕಾಯಿಯನ್ನು (Lady finger okra) ಕತ್ತರಿಸಿ ನೀರಿನಲ್ಲಿ ರಾತ್ರಿ ಹಾಕಿಟ್ಟು ಬೆಳಗ್ಗೆ ಅದ್ದ ಮೇಲೆ ಆ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಬೆಂಡೆಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ಹೀಗೆ ಮಾಡುವ ಮೂಲಕ ನಿತ್ಯವೂ ಬೆಂಡೆಕಾಯಿಯ ಪೋಷಕಾಂಶಗಳನ್ನು ದೇಹಕ್ಕೆ ಲಭಿಸುವಂತೆ ಮಾಡಬಹುದು. ಬನ್ನಿ, ಇದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ ಬನ್ನಿ.
ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳ
ಬೆಂಡೆಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಫ್ರೀ ರ್ಯಾಡಿಕಲ್ಸ್‌ಗಳನ್ನು ಕಡಿಮೆ ಮಾಡಿ, ಆಕ್ಸಿಡೇಟಿವ್ ಒತ್ತಡವನ್ನೂ ಇಳಿಸುವ ಜೊತೆಗೆ ಅಂಗಾಂಶ ಮಟ್ಟದಲ್ಲಿ ಹಾನಿಯಾಗುವುದನ್ನು ತಪ್ಪಿಸುತ್ತದೆ. ಇದರಿಂದ ಕ್ಯಾನ್ಸರ್, ಹೃದಯದ ಕಾಯಿಲೆ ಸೇರಿದಂತೆ ಮಾರಣಾಂತಿಕ ಕಾಯಿಲೆಗಳ ರಿಸ್ಕ್ ಕಡಿಮೆಯಾಗುತ್ತದೆ.
ಮಧುಮೇಹ ಕಾಯಿಲೆ ಹತೋಟಿ
ಬೆಂಡೆಕಾಯಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಸಕ್ಕರೆಯ ಹೀರಿಕೆಯನ್ನು ಇದು ತಡೆಯುತ್ತದೆ. ಪರಿಣಾಮವಾಗಿ ಮಧುಮೇಹದಂತಹ ಕಾಯಿಲೆ ಹತೋಟಿಗೆ ಬರುತ್ತದೆ.
ಇದನ್ನೂ ಓದಿ: Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ
ಜೀರ್ಣಕ್ರಿಯೆ ಆಗುವಲ್ಲಿ ಸಹಾಯ
ಜೀರ್ಣಾಂಗವ್ಯೂಹ ವ್ಯವಸ್ಥೆಗೆ ಬೆಂಡೆಕಾಯಿ ಒಳ್ಳೆಯದು. ಜೀರ್ಣಾಂಗನಾಳಗಳನ್ನು ಇದು ಸರಿಯಾಗಿಡುವ ಜೊತೆಗೆ, ಸಹಜವಾಗಿ ಜೀರ್ಣಕ್ರಿಯೆ ಆಗುವಲ್ಲಿ ಸಹಾಯ ಮಾಡುತ್ತದೆ.
ಕೊಲೆಸ್ಟೆರಾಲ್ ಕಡಿಮೆ ಮಾಡುತ್ತದೆ
ಬೆಂಡೆಕಾಯಿಯಲ್ಲಿರುವ ನಾರಿನಂಶ ಕೊಲೆಸ್ಟೆರಾಲ್ ಅನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಕೊಲೆಸ್ಟೆರಾಲ್ ಕಡಿಮೆಯಾಗುವ ಮೂಲಕ ಸಹಜವಾಗಿಯೇ ಹೃದಯಕ್ಕೆ ಬೆಂಡೆಕಾಯಿ ಒಳ್ಳೆಯದನ್ನೇ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಒಳ್ಳೆಯದು
ಚರ್ಮದ ಆರೋಗ್ಯಕ್ಕೆ ಬೆಂಡೆಕಾಯಿ ಬಹಳ ಒಳ್ಳೆಯದು. ಚರ್ಮಕ್ಕೆ ಬೇಕಾದ ನೀರಿನಂಶವನ್ನು ಇದು ನೀಡುವ ಮೂಲಕ ಸದಾ ಚರ್ಮವನ್ನು ನಯವಾಗಿ ಆರೋಗ್ಯವಾಗಿ ಇರಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಹಾಗೂ ಎ ಧಾರಾಳವಾಗಿ ಇರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊರಗಿನಿಂದ ದಾಳಿ ಮಾಡುವುದರ ವಿರುದ್ಧ ಪ್ರತಿದಾಳಿ ನಡೆಸಿ ದೇಹವನ್ನು ರೋಗ ಬರದಂತೆ ಕಾಪಾಡುತ್ತದೆ.
ಎಲುಬಿನ ಆರೋಗ್ಯಕ್ಕೆ ಒಳ್ಳೆಯದು
ಬೆಂಡೆಕಾಯಿಯಲ್ಲಿ ವಿಟಮಿನ್ ಕೆ ಹಾಗೂ ಕ್ಯಾಲ್ಸಿಯಂ ಇರುವುದರಿಂದ ಎಲುಬಿನ ಆರೋಗ್ಯಕ್ಕೆ ಇದು ಒಳ್ಳೆಯದನ್ನೇ ಮಾಡುತ್ತದೆ. ಎಲುಬಿನ ಸವೆತವಾಗದಂತೆ ತಡೆಯುತ್ತದೆ. ಹಾಗೂ ಎಲುಬಿನ ಸಾಂದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ
ತಿನ್ನುವ ಚಟ ಕಡಿಮೆ
ಬೆಂಡೆಕಾಯಿ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿರುವ ಅನುಭವವಾಗಿ, ಅನಗತ್ಯ ತಿನ್ನುವ ಚಟ ಕಡಿಮೆಯಾಗುತ್ತದೆ. ಆ ಮೂಲಕ ತೂಕ ಇಳಿಯುತ್ತದೆ.
ಬೆಂಡೆಕಾಯಿಯಲ್ಲಿ ವಿಟಮಿನ್ ಎ ಗೂ ಬೀಟಾ ಕೆರಟಿನ್ ಇರುವುದರಿಂದ ಇದು ಕಣ್ಣಿನ ಆರೋಗ್ಯವನ್ನು ಚೆನ್ನಾಗಿಡುವಲ್ಲಿ ಸಹಾಯ ಮಾಡುತ್ತದೆ. ಕಣ್ಣಿನ ಸಮಸ್ಯೆಗಳು ಬರದಂತೆ ತಡೆಯುತ್ತದೆ.
ಹಾಗಾದರೆ, ಈ ಬೆಂಡೆಕಾಯಿ ನೀರನ್ನು ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಇಲ್ಲಿ ಉತ್ತರವಿದೆ:
ಬೆಂಡೆಕಾಯಿಯನ್ನು ಅದರ ಮೈಮೇಲಿರುವ ಕೊಳೆ ಹಾಗೂ ರಾಸಾಯನಿಕಗಳು ಹೋಗುವಂತೆ ಚೆನ್ನಾಗಿ ತೊಳೆಯಿರಿ. ನಂತರ ಅದರ ತುದಿಗಳನ್ನು ಕತ್ತರಿಸಿ ತೆಗೆದು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಕತ್ತರಿಸಿದ ಬೆಂಡೆಕಾಯಿಯನ್ನು ಒಂದು ಬಾಟಲಿಯಲ್ಲಿ ಅಥವಾ ಲೋಟದಲ್ಲಿ ಹಾಕಿಟ್ಟು ನೀರು ಹಾಕಿ ಮುಚ್ಚಿಡಿ. ರಾತ್ರಿ ಹೀಗೆ ಮಾಡಿಟ್ಟು ಮಲಗಿದರೆ, ಬೆಳಗ್ಗೆ ಎದ್ದ ಮೇಲೆ ಬೆಂಡೆಕಾಯಿಗಳನ್ನು ಅದರಿಂದ ತೆಗೆದು ಅದರ ನೀರನ್ನು ಕುಡಿಯಿರಿ. ಬೆಳಗ್ಗೆ ಸಾಧ್ಯವಾಗದಿದ್ದರೆ ದಿನದ ಬೇರೆ ಹೊತ್ತಿನಲ್ಲೂ ಇದನ್ನು ನೀರಿಗೆ ಬದಲಾಗಿ ಕುಡಿಯಬಹುದು. ಇದರ ಮೂಲಕ ಸಾಕಷ್ಟು ಆರೋಗ್ಯ ಲಾಭಗಳನ್ನು ನೀವು ಪಡೆಯಬಹುದು.