ಬೆಂಗಳೂರು: ತಡರಾತ್ರಿಯವರೆಗೆ ಎದ್ದಿರುವುದು ಈಗಿನ (Health Tips in Kannada) ಮಂದಿಗೆ ಬಹಳ ಸಾಮಾನ್ಯವಾದ ಅಭ್ಯಾಸ. ಕೆಲಸದ ಒತ್ತಡ, ಕಚೇರಿಯ ಕೆಲಸಗಳು, ಸಾಮಾಜಿಕ ಜಾಲತಾಣಗಳ ವೀಕ್ಷಣೆ, ಸಿನಿಮಾ ನೋಡುವುದು, ಪಾರ್ಟಿ ಮಾಡುವುದು ಇತ್ಯಾದಿ ಇತ್ಯಾದಿ ಜೀವನಕ್ರಮ ಬದಲಾವಣೆಗಳಿಂದ ತಡರಾತ್ರಿ ಹನ್ನೆರಡು ಕಳೆದರೂ ಅನೇಕರಿಗೆ ನಿದ್ದೆ ಹತ್ತಿರ ಸುಳಿಯುವುದಿಲ್ಲ. ಹೀಗೆ ತಡವಾಗಿ ಮಲಗುವ ಅಭ್ಯಾಸ ಮಾಡಿಕೊಂಡ ಅನೇಕರಿಗೆ, ಇದು ಆರೋಗ್ಯದ ಮೇಲೆ ಎಂಥಾ ಪರಿಣಾಮ ಬೀರೀತು ಎಂಬ ಬಗ್ಗೆ ಸಣ್ಣ ವಯಸ್ಸಿನಲ್ಲಿ ತಿಳಿದೇ ಇರುವುದಿಲ್ಲ. ಆದರೆ, ಈ ಕೆಟ್ಟ ಅಭ್ಯಾಸವು ದಿನ ಕಳೆದ ಹಾಗೆ ನಿಧಾನವಾಗಿ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಅರ್ಥವಾಗುವಾಗ ಬಹಳ ತಡವಾಗಿರುತ್ತದೆ. ಬನ್ನಿ, ರಾತ್ರಿ ತಡವಾಗಿ ಮಲಗುವ ಅಭ್ಯಾಸವಿದ್ದರೆ ಏನೆಲ್ಲ ಆರೋಗ್ಯದ ರಿಸ್ಕ್‌ಗಳಿವೆ ಎಂಬುದನ್ನು ನೋಡೋಣ
ನೈಸರ್ಗಿಕ ನಿದ್ದೆಯ ಅಭ್ಯಾಸಕ್ಕೆ ಪೆಟ್ಟು
ತಡರಾತ್ರಿಯವರೆಗೆ ಎದ್ದಿರುವುದರಿಂದ ನಮ್ಮ ದೇಹದ ನೈಸರ್ಗಿಕ ನಿದ್ದೆಯ ಅಭ್ಯಾಸಕ್ಕೆ ಪೆಟ್ಟು ಬೀಳುತ್ತದೆ. ಮಾನವನ ದೇಹ ರಾತ್ರಿಯ ನಿದ್ದೆಗೆ ಸೂಕ್ತವಾದುದು. ರಾತ್ರಿಯ ವೇಳೆ ಸೊಂಪಾದ ನಿದ್ದೆ ಸಿಕ್ಕರಷ್ಟೇ ಆತ ಮರುದಿನ ಸೂರ್ಯ ಏಳುವ ಹೊತ್ತಿನಲ್ಲಿ ಮತ್ತೆ ಎಡೆಬಿಡದೆ ಕೆಲಸ ಮಾಡುವಷ್ಟು ಶಕ್ತಿ, ಚೈತನ್ಯ ಪಡೆಯುತ್ತಾನೆ. ನಿದ್ದೆ ಸಿಗದೇ ಇದ್ದರೆ, ಈ ನೈಸರ್ಗಿಕ ವ್ಯವಸ್ಥೆಯ ಮೇಲೆ ಪೆಟ್ಟು ಬೀಳುತ್ತದೆ.
ನಿದ್ದೆಯ ನಷ್ಟ
ತಡರಾತ್ರಿಯವರೆಗೆ ಎದ್ದಿರುವುದರಿಂದ ನಮಗೆ ದಕ್ಕಬೇಕಾದಷ್ಟು ಪ್ರಮಾಣದ ನಿದ್ದೆ ದಕ್ಕುವುದಿಲ್ಲ. ನಮ್ಮ ದೇಹಕ್ಕೆ ಅಗತ್ಯವಿರುವ ನಿದ್ದೆಯನ್ನು ನಾವು ನೀಡದೆ ಇದ್ದರೆ ಅದು ಖಂಡಿತವಾಗಿಯೂ ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೊಜ್ಜು, ಮಧುಮೇಹ ಇತ್ಯಾದಿ ಸಮಸ್ಯೆಗಳು ಬರುವ ಸಂಭವ ಹೆಚ್ಚು. ದೇಹದ ರೋಗನಿರೋಧಕ ವ್ಯವಸ್ಥೇಯೇ ಹದಗೆಡುತ್ತದೆ.
ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ
ಹಾರ್ಮೋನಿನಲ್ಲಿ ವ್ಯತ್ಯಾಸ
ತಡವಾಗಿ ನಿದ್ದೆ ಮಾಡುವುದರಿಂದ ಹಾರ್ಮೋನು ಸಮಸ್ಯೆಗಳೂ ಹೆಚ್ಚಾಗುತ್ತವೆ. ಹಾರ್ಮೋನಿನ ಅಸಮತೋಲನದಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರಲಾರಂಭಿಸುತ್ತವೆ. ಹೆಚ್ಚು ಕ್ಯಾಲರಿ ಆಹಾರ ತಿನ್ನಬೇಕೆನ್ನುವ ಚಪಲ ಹೆಚ್ಚುತ್ತದೆ. ಇದರಿಂದ ಅತಿಯಾಗಿ ತಿನ್ನುವುದು ಹಾಗೂ ತೂಕ ಹೆಚ್ಚಾಗುವ ಸಂಭವ ಹೆಚ್ಚಾಗುತ್ತದೆ.
ಏಕಾಗ್ರತೆ ಕಡಿಮೆ
ನಿದ್ದೆ ಕಡಿಮೆಯಾದ ತಕ್ಷಣ ಬೆಳಗಿನ ಹೊತ್ತು ಮಾಡಬೇಕಾದ ಕೆಲಸಗಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ಸ್ಮರಣಶಕ್ತಿ ಕುಗ್ಗುತ್ತದೆ.
ಮಾನಸಿಕವಾಗಿ ಕಿರಿಕಿರಿ
ನಿದ್ದೆ ತಡವಾಗಿ ಮಾಡಿದರೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ದೇಹಕ್ಕೆ ಒತ್ತಡದ ಹಾರ್ಮೋನನ್ನು ಸಮತೋಲನಕ್ಕೆ ತರಲು ಸಾಧ್ಯವಾಗುವುದಿಲ್ಲ. ಇದರಿಂದ ಉದ್ವೇಗ, ಮಾನಸಿಕವಾಗಿ ಕಿರಿಕಿರಿಯ ಅನುಭವವಾಗುತ್ತದೆ. ದೀರ್ಘವಾಗಿ ಉಸಿರಾಡುವುದು, ಧ್ಯಾನ, ವ್ಯಾಯಾಮದಂತಹ ಚಟುವಟಿಕೆಗಳಿಂದ ಇದನ್ನು ಹಿಡಿತಕ್ಕೆ ತರಬಹುದು.
ರೋಗ ನಿರೋಧಕ ಶಕ್ತಿ ಕ್ಷೀಣ
ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಅಷ್ಟೇ ಅಲ್ಲ, ಇದರಿಂದಾಗಿ ಬಹುಬೇಗನೆ ಆರೋಗ್ಯ ಹದಗೆಡುವುದು, ರೋಗ ವಾಸಿಯಾಗದಿರುವುದು, ರೋಗದ ವಿರುದ್ಧ ಹೋರಾಡುವ ಶಕ್ತಿ ಕುಗ್ಗುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ.
ಮುಂದೆ ನಿದ್ರಾಹೀನತೆ ಸಮಸ್ಯೆ
ತಡರಾತ್ರಿಯವರೆಗೆ ಎದ್ದಿರುವುದರಿಂದ ಮುಂದೆ ನಿಧಾನವಾಗಿ ನಿದ್ರಾಹೀನತೆಯಂತಹ ಸಮಸ್ಯೆಯು ಎದುರಾಗುತ್ತದೆ. ಇದರಿಂದಾಗಿ ಮಾನಸಿಕವಾಗಿ ಏರುಪೇರು, ಖಿನ್ನತೆ, ಉದ್ವೇಗವೂ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
ಅವಘಡಕ್ಕೆ ಕಾರಣ
ತಡವಾಗಿ ನಿದ್ದೆ ಮಾಡುವುದರಿಂದ ದೇಹಕ್ಕೆ ಬೇಕಾದಷ್ಟು ನಿದ್ದೆ ಸರಿಯಾಗಿ ಸಿಗದೇ ಹೋಗುವ ಸಂಭವವೇ ಹೆಚ್ಚು. ತಡವಾಗಿ ಎದ್ದರೆ ನೈಸರ್ಗಿಕವಾಗಿ ದೇಹಕ್ಕೆ ಸಿಗಬೇಕಾದ ನಿದ್ದೆ ಪರಿಪೂರ್ಣವಾಗಿ ಸಿಗದೇ ಹೋಗುವುದರಿಂದ, ನಿದ್ದೆಗೆಟ್ಟಂತಾಗಿ, ಇದು ಅಫಘಾತ, ಅವಘಡಗಳಿಗೂ ಕೆಲವೊಮ್ಮೆ ಕಾರಣವಾಗುತ್ತದೆ. ವಾಹನ ಚಾಲನೆಯೂ ಸೇರಿದಂತೆ ನಮ್ಮ ಚಲನಾ ಕೌಶಲ್ಯಗಳಿಗೆ ಸಂಬಂಧಿಸಿದ ಶಕ್ತಿಯು ನಿದ್ದೆಯಿಲ್ಲದ ಕಾರಣ ಕುಗ್ಗುವುದರಿಂದ ಅವಘಡ, ಅಫಘಾತಗಳಂತಹ ಅಪಾಯ ಹೆಚ್ಚು.
ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ
ಹಾಗಾಗಿ ಒಟ್ಟಾರೆಯಾಗಿ ಮಾನಸಿಕ, ದೈಹಿಕ ಆರೋಗ್ಯಕ್ಕೆ ನೈಸರ್ಗಿಕವಾಗಿ ಅಗತ್ಯವಿರುವಷ್ಟು ನಿದ್ದೆಯ ಅಗತ್ಯವಿದ್ದೇ ಇದೆ. ಅಷ್ಟೇ ಅಲ್ಲ, ಅದಕ್ಕೆ ಶಿಸ್ತಿನಿಂದ ಸಮಯಪಾಲನೆಯೂ ಅಗತ್ಯ. ನಿದ್ದೆಯ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲ. ದೇಹದ ಆರೋಗ್ಯ ನಿದ್ದೆಯ ಮೇಲೆಯೂ ಅವಲಂಬಿಸಿರುವುದರಿಂದ ನಿದ್ದೆಗೆ ಪ್ರಾಮುಖ್ಯ ಕೊಡುವುದು ಬಹಳ ಮುಖ್ಯ.