Site icon Vistara News

Health Tips: ಬೇಸಿಗೆಯಲ್ಲಿ ಕೋಲ್ಡ್ ವಾಟರ್ ಕುಡಿಯುವುದು ಅಪಾಯಕಾರಿಯೆ?

Health Tips cold water

ಸೆಕೆ ತಡೆಯಲಾಗುತ್ತಿಲ್ಲ. ಊಟ-ತಿಂಡಿ ಎಲ್ಲವನ್ನೂ ಬಿಟ್ಟು ಪೀಪಾಯಿಗಟ್ಟಲೆ ಪೇಯಗಳನ್ನು ಕುಡಿಯುತ್ತಿರಬೇಕೆಂಬ ಬಯಕೆ ಬರುವುದು ಸಹಜ. ಅದರಲ್ಲೂ ಹೊರಗೆ ಬಿಸಿಲು ಏರುತ್ತಿದ್ದಂತೆಯೇ ಫ್ರಿಜ್ ಒಳಗಿನ ತಂಪಾದ ಪೇಯಗಳತ್ತ ಮನಸ್ಸು ಹಾತೊರೆಯುತ್ತದೆ. ನೀರಾದರೂ ಸೈ- ಕೊರೆಯುವಷ್ಟು ತಣ್ಣಗೇ ಇರಲಿ ಎಂದು ಬಯಸುತ್ತೇವೆ. ಅದರಲ್ಲೂ ಬೇಸಿಗೆಯ ಆರಂಭದಲ್ಲಂತೂ ಸಿಕ್ಕಾಪಟ್ಟೆ ತಣ್ಣೀರು, ಐಸ್ಕ್ರೀಮುಗಳದ್ದೇ ಬಯಕೆಯಾಗುತ್ತದೆ. ಹೀಗೆ ಫ್ರಿಜ್‌ನಿಂದ ತೆಗೆದಿದ್ದನ್ನು ನೇರ ಗಂಟಲಿಗೆ ಸುರಿದುಕೊಳ್ಳುವಾಗೆಲ್ಲಾ, `ಬೇಡ! ಆರೋಗ್ಯ ಕೆಡುತ್ತದೆ’ ಎಂದು ಮನೆಯ ಹಿರಿಯರು ಎಚ್ಚರಿಸುವುದು ಸಾಮಾನ್ಯ ಸಂಗತಿ. ಹಾಗಾದರೆ ಫ್ರಿಜ್‌ನಲ್ಲಿರುವ ತಣ್ಣಗಿನ ನೀರು ಅಥವಾ ಇನ್ನೇನನ್ನಾದರೂ ಸದಾ ಕುಡಿಯುತ್ತಿದ್ದರೆ (Health Tips) ಆರೋಗ್ಯ ಕೆಡುವುದು ಹೌದೇ? ಕುಡಿದರೇನಾಗುತ್ತದೆ?

ಸಾಮಾನ್ಯವಾಗಿ ಈ ನೀರು ಆರೋಗ್ಯಕ್ಕೆ ಸುರಕ್ಷಿತವೇ ಆಗಿರುತ್ತದೆ. ಕೆಲವೊಮ್ಮೆ ಕುಡಿದರೆ ಆರೋಗ್ಯಕ್ಕೆ ಹೇಳುವಂಥ ತೊಂದರೆಯೇನೂ ಆಗುವುದಿಲ್ಲ. ಆದಾಗ್ಯೂ ಚಿಲ್ಡ್ ನೀರು ಸದಾ ಕುಡಿಯುತ್ತಿದ್ದರೆ ಮೂಗು-ಗಂಟಲಲ್ಲಿ ಕಫ ಕಟ್ಟಿದಂತಾಗುತ್ತದೆ ಎಂದು ಹಲವಾರು ಮಂದಿ ದೂರುವುದು ಸಾಮಾನ್ಯ. ಇದಲ್ಲದೆ, ಮೈಗ್ರೇನ್ ಸಮಸ್ಯೆ ಇರುವವರಲ್ಲಿ ಅತಿಯಾದ ತಣ್ಣಗಿನ ಪಾನೀಯಗಳು (Health Tips) ಇದ್ದಕ್ಕಿದ್ದಂತೆ ತಲೆನೋವಿಗೆ ದಾರಿ ಮಾಡಿಕೊಡುತ್ತವೆ. ಇದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂದು ಪರಿಣತರಲ್ಲಿಯೇ ಕೆಲವರ ವಾದವಿದೆ. ಆದರೆ ಅನುಭವಿಗಳು ಈ ವಾದಕ್ಕೆ ಪುಷ್ಟಿ ನೀಡುವವರಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಸಮಸ್ಯೆಗಳು ದಾರಿ ಕಾಯಬಹುದು.

ಅಜೀರ್ಣದ ತೊಂದರೆ

ಅತಿಯಾಗಿ ತಣ್ಣೀರು ಕುಡಿಯುವುದು ಜೀರ್ಣಕ್ರಿಯೆಗೆ ತೊಡಕುಂಟು ಮಾಡಬಹುದು. ಅದರಲ್ಲೂ ಹೆಚ್ಚಿನ ಪ್ರಮಾಣದ ಚಿಲ್ಡ್ ನೀರನ್ನು ಕಡಿಮೆ ಸಮಯದಲ್ಲಿ ಹೊಟ್ಟೆಗಿಳಿಸಿದರೆ ಸಮಸ್ಯೆಗಳ ಪ್ರಮಾಣವೂ ಹೆಚ್ಚು. ಇದರಿಂದ ಹೊಟ್ಟೆಯುಬ್ಬರ, ಆಹಾರ ಪಚನವಾಗದಿರುವುದು ಮುಂತಾದ ತೊಂದರೆಗಳು ಕಾಣಿಸಿಕೊಂಡು ಆರೋಗ್ಯವನ್ನು ಹದಗೆಡಿಸುತ್ತವೆ.

ಹಲ್ಲಿನ ಸಮಸ್ಯೆ

ಅತಿಯಾದ ತಣ್ಣಗಿನ ವಸ್ತುಗಳು ಹಲ್ಲಿನ ತೊಂದರೆ ಇರುವವರಿಗೆ ಸಾಕಷ್ಟು ಉಪದ್ರವವನ್ನು ಕೊಡುತ್ತವೆ. ಸಂವೇದನೆಗಳು ಹೆಚ್ಚಿದ್ದರಂತೂ ಬಿಸಿ-ತಣ್ಣ ಎಂದಲ್ಲದೆ ಮಾಮೂಲಿ ಆಹಾರ ತೆಗೆದುಕೊಳ್ಳುವುದೂ ಕಷ್ಟ ಎನ್ನುವ ಹಂತಕ್ಕೆ ಬರುತ್ತದೆ. ಹಾಗಾಗಿ ಒಸಡು ಮತ್ತು ಹಲ್ಲಿನ ತೊಂದರೆ ಇರುವವರಿಗೆ ತಣ್ಣಗಿನ ಪಾನೀಯಗಳು ಹೇಳಿಸಿದ್ದಲ್ಲ.

ನೀರಿನ ಪ್ರಮಾಣ ಕಡಿಮೆ

ಸಾಮಾನ್ಯ ತಾಪಮಾನದ ನೀರನ್ನು ಕುಡಿಯುವಷ್ಟು ಚಿಲ್ಡ್ ನೀರನ್ನು ಕುಡಿಯುವುದು ಸಾಧ್ಯವಿಲ್ಲ. ನಾಲ್ಕಾರು ಗುಟುಕುಗಳು ಕುಡಿಯುತ್ತಿದ್ದಂತೆ ಸಾಕು ಎನಿಸಲು ಆರಂಭಿಸುತ್ತದೆ. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಪ್ರಮಾಣ ಕ್ಷೀಣಿಸಬಹುದು. ದೇಹಕ್ಕೆ ಅಗತ್ಯವಾದಷ್ಟು ನೀರು ದೊರೆಯದೇ ಹೋಗುವ ಸಾಧ್ಯತೆಯೂ ಇದೆ. ನಮ್ಮ ಜೀರ್ಣಾಂಗಗಳ ಕ್ಷಮತೆಗೆ, ಚರ್ಮ ಮತ್ತು ಕಿಡ್ನಿಗಳ ಸುಸ್ಥಿತಿಗೆ, ದೇಹದ ಉಷ್ಣತೆ ನಿಯಂತ್ರಿಸಿ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು- ಹೀಗೆ ಬಹಳಷ್ಟು ಕೆಲಸಗಳಿಗೆ ನಮ್ಮ ದೇಹಕ್ಕೆ ನೀರು ಅಗತ್ಯವಾಗಿ ಬೇಕು.

ರಕ್ತನಾಳಗಳ ತೊಂದರೆ

ಅತಿಯಾದ ತಣ್ಣೀರಿನ ಸೇವನೆಯಿಂದ ಹೊಟ್ಟೆಯ ಭಾಗದಲ್ಲಿರುವ ರಕ್ತನಾಳಗಳು ಸಂಕುಚಿತಗೊಳ್ಳಬಹುದು. ಇದರಿಂದ ಆಹಾರದಲ್ಲಿರುವ ಪೋಷಕಾಂಶಗಳು ಸರಿಯಾಗಿ ಹೀರಲ್ಪಡದೆ ವ್ಯರ್ಥವಾಗಬಹುದು. ಹಾಗಾಗಿ ಊಟ-ತಿಂಡಿಯ ಜೊತೆಗೆ ಫ್ರಿಜ್‌ನ ತಣ್ಣೀರನ್ನು ಕುಡಿಯದಿರುವುದು ಒಳ್ಳೆಯದು.

ಗಂಟಲು ನೋವು

ಈಗಾಗಲೇ ನೆಗಡಿ, ಕೆಮ್ಮು ಅಥವಾ ಗಂಟಲಲ್ಲಿ ಸಂವೇದನೆಗಳಿದ್ದರೆ ಅವೆಲ್ಲವೂ ಹೆಚ್ಚಾಗಬಹುದು. ಹಾಗಾಗಿ ಆರೋಗ್ಯದ ಸಮಸ್ಯೆಗಳು ಇದ್ದವರಿಗೆ ಶೀತಲ ಜಲ ಹೇಳಿಸಿದ್ದಲ್ಲ. ಹಾಗೆಂದು ಎಂಥಾ ತಣ್ಣೀರು ಕುಡಿದರೂ ಏನೂ ಆಗದೆ ಗುಂಡುಕಲ್ಲಿನಂತೆ ಇರುವವರಿಗೇನೂ ಕೊರತೆಯಿಲ್ಲ. ಆರೋಗ್ಯಕ್ಕೆ ಒಗ್ಗಿದರೆ ಯಾವ ತೊಂದರೆಯೂ ಆಗದಿರಬಹುದು. ಅಪರೂಪಕ್ಕೆ ಅಥವಾ ತೀರಾ ಬಾಯಾರಿದಾಗ ತಣ್ಣೀರು ಕುಡಿದರೆ ಸಾಕು ಎನ್ನುವವರೂ ಇದ್ದಾರೆ. ಆದರೆ ನಂನಮ್ಮ ಆರೋಗ್ಯಕ್ಕೆ ಇದು ಹೇಳಿಸಿದ್ದಲ್ಲ , ಇಂಥ ಕೆಲವು ಚಿಕ್ಕ-ಪುಟ್ಟ ತೊಂದರೆಗಳು ಬರುತ್ತವೆ ಎನಿಸಿದರೆ, ಅದರಿಂದ ದೂರ ಉಳಿಯುವುದು ಕ್ಷೇಮ.

ಇದನ್ನೂ ಓದಿ: Health Tips: ದಿನಕ್ಕೊಂದು ಬಾಳೆಹಣ್ಣು: ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯ ಆಹಾರ!

Exit mobile version