ಭಾರತದಲ್ಲಿ ನಾವು ಹೆಚ್ಚಿನ ಮಂದಿ (Health Tips) ನಿತ್ಯವೂ ಹಾಲು ಕುಡಿಯುವುದು ರೂಢಿ. ಮಕ್ಕಳಿಗೂ ಹಾಲು ನಿತ್ಯವೂ ಎರಡೆರಡು ಬಾರಿ ಕುಡಿಸುತ್ತೇವೆ. ಅಷ್ಟೇ ಅಲ್ಲ, ಹಾಲಿನ ಉಪಯೋಗವೂ ಜಾಸ್ತಿಯೇ. ನೇರವಾಗಿ ಹಾಲು ಕುಡಿಯದಿದ್ದರೂ ಒಂದಿಲ್ಲೊಂದು ಬಗೆಯಲ್ಲಿ ದಿನವೂ ಚಹಾ, ಕಾಫಿ, ಡೆಸರ್ಟ್‌ಗಳು, ಪನೀರ್, ತುಪ್ಪ, ಬೆಣ್ಣೆ ಹೀಗೆ ಹಲವಾರು ಹಾಲಿನ ಉತ್ಪನ್ನಗಳು ನಮ್ಮ ಹೊಟ್ಟೆ ಸೇರುತ್ತಲೇ ಇರುತ್ತವೆ. ಹಾಲಿನ ಹಾಗೂ ಹಾಲಿನ ಉತ್ಪನ್ನಗಳ ಮೂಲಕ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸೇರುತ್ತಿವೆ ಅಂದುಕೊಂಡರೆ ಕೆಲವೊಮ್ಮೆ ನಮ್ಮ ಲೆಕ್ಕಾಚಾರ ತಪ್ಪಾಗಬಹುದು ಕಾರಣ ಇಂದು ಎಲ್ಲ ಆಹಾರ ವಸ್ತುಗಳಲ್ಲೂ ಇರುವ ಕಲಬೆರಕೆ ಸಾಮಾನ್ಯ. ನೀವು ಖರೀದಿ ಮಾಡುವ ಹಾಲು ಸರಿಯಾದ ಆರೋಗ್ಯಕರ ಮಾದರಿಯಲ್ಲಿ ಪ್ಯಾಕೇಜ್ ಮಾಡಿಲ್ಲವಾದರೆ, ಅದರಲ್ಲಿ ಕಲಬೆರೆಕೆಯಾಗಿರುವ ಸಾಧ್ಯತೆಗಳು ಹೆಚ್ಚು. ಕೇವಲ ನೀರಷ್ಟೇ ಅಲ್ಲ, ಡಿಟರ್ಜೆಂಟ್‌ಗಳು, ಯೂರಿಯಾ, ಸ್ಟಾರ್ಚ್, ಗ್ಲೂಕೋಸ್ ಇತ್ಯಾದಿಗಳ ಕಲಬೆರಕೆಯೂ ಹಾಲಿನ ಜೊತೆಗೆ ಸೇರಿರುವ ಸಂಭವವಿದೆ.
ಪೋಷಕಾಂಶದಲ್ಲಿ ನಷ್ಟ
ಹಾಲಿಗೆ ನೀರು ಸೇರಿಸುವುದರಿಂದ ಪೋಷಕಾಂಶದಲ್ಲಿ ನಷ್ಟವಾಗುತ್ತದೆ. ಹಾಲಿಗೆ ಸೇರಿಸುವ ನೀರು ಉತ್ತಮ ಗುಣಮಟ್ಟದ್ದಲ್ಲವಾದರೆ, ಅಥವಾ ಕಲುಷಿತವಾಗಿದ್ದರೆ ಅದು ಇದು ಆರೋಗ್ಯಕ್ಕೂ ಅಪಾಯವೇ. ಇನ್ನಷ್ಟು ರೋಗಗಳನ್ನೂ ಆಹ್ವಾನಿಸುತ್ತದೆ. ಸಂಶೋಧನಾ ವರದಿಗಳ ಪ್ರಕಾರ, ಹಾಲಿಗೆ ನೀರು ಸೇರಿಸುವುದರಿಂದ ಹಾಲಿನಲ್ಲಿರುವ ಘನ ಅಂಶಗಳ ಕಡಿಮೆಯಾಗುವುದಷ್ಟೇ ಅಲ್ಲ, ಅದರ ನೊರೆ ಹಾಗೂ ಕ್ರೀಮೀ ಗುಣವೂ ಕಡಿಮೆಯಾಗುತ್ತದೆ. ತೆಳುವಾಗುತ್ತದೆ. ಹಾಗಾಗಿ ಇದಕ್ಕೆ ಯೂರಿಯಾದಂತಹ ರಾಸಾಯನಿಕಗಳನ್ನು ಹಾಕುವುದರಿಂದ ಮತ್ತೆ ಹಾಲು ದಪ್ಪವಾಗಿ ಕ್ರೀಮೀ ಗುಣವನ್ನು ಪಡೆಯುತ್ತದೆ. ಹೀಗೂ ಕಲಬೆರಕೆಯನ್ನು ಮಾಡುವ ಮೂಲಕ ಕಲಬೆರಕೆಯಾಗಿರುವುದೇ ತಿಳಿಯದಂತೆ ಮಾಡುತ್ತಾರೆ. ಹೀಗಾಗಿ, ಯೂರಿಯಾದಂತಹ ರಾಸಾಯನಿಕ ಬೆರಕೆಯಾದರೆ ಹಾಲು ಉತ್ತಮ ಹಾಲಿನಂತೆಯೇ ಮೇಲ್ನೋಟಕ್ಕೆ ಕಂಡುಬರುವುದರಿಂದ ಮೋಸ ಹೋಗುವ ಸಾಧ್ಯತೆಗಳೇ ಹೆಚ್ಚು. ಜೊತೆಗೆ ಕಿಡ್ನಿ ಹಾಗೂ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿಕೊಂಡಂತೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಇತ್ತೀಚೆಗೆ ಎಫ್‌ಎಸ್‌ಎಸ್‌ಎಐ ಹಂಚಿಕೊಂಡ ಸರಳವಾದ ಹಾಗೂ ಸುಲಭವಾದ ಹಾಲಿನ ಪರೀಕ್ಷೆಯನ್ನು ನೀವೂ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಬಹುದು. ನಿಮ್ಮ ಹಾಲಿಗೆ ನೀರು ಸೇರಿಸಲಾಗಿದೆಯೋ ಎಂಬುದನ್ನು ನೀವು ಈ ಮೂಲಕ ಪತ್ತೆ ಹಚ್ಚಬಹುದು ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.
ಗಾಜಿನ ತಟ್ಟೆಯ ಮೇಲೆ ಹಾಕಿ
ಒಂದು ಸ್ವಚ್ಛವಾದ ಗ್ಲಾಸ್ ಸ್ಲೈಡ್ ಅಥವಾ ಪ್ಲೇಟ್ ಅನ್ನು ತೆಗೆದುಕೊಳ್ಳಿ. ಒಂದೆರಡು ಎಂಎಲ್ ಹಾಲನ್ನು ಈ ಪ್ಲೇಟ್ ಅಥವಾ ಗಾಜಿನ ತಟ್ಟೆಯ ಮೇಲೆ ಹಾಕಿ. ಆ ಹಾಲಿನ ಬಿಂದು ಬಹಳ ನಿಧಾನವಾಗಿ ಹರಿದರೆ ಹಾಗೂ ಹರಿದ ಜಾಗದಲ್ಲಿ ಬಿಳಿಯ ಮಾರ್ಕ್ ಅನ್ನು ಉಳಿಸಿದೆ ಎಂದಾದಲ್ಲಿ ನಿಮ್ಮ ಹಾಲು ಶುದ್ಧವಾಗಿದೆ ಎಂದರ್ಥ. ಹಾಲು ತಕ್ಷಣ ಹರಿದು ಹೋದರೆ ಹಾಗೂ ಯಾವುದೇ ಮಾರ್ಕ್ ಅನ್ನು ಉಳಿಸಿಲ್ಲವಾದರೆ, ಖಂಡಿತವಾಗಿ ಆ ಹಾಲಿಗೆ ನೀರು ಸೇರಿಸಲಾಗಿದೆ ಎಂದರ್ಥ.
ಇದನ್ನೂ ಓದಿ: Constipation Problem: ಮಲಬದ್ಧತೆಯ ಸಮಸ್ಯೆಯೇ? ಸರಳ ಪರಿಹಾರಗಳು ಇಲ್ಲಿವೆ!
ಯೂರಿಯಾ ಕಲಬರಕೆ ಪತ್ತೆ ಹೇಗೆ?
ಹಾಗಾದರೆ ನಿಮ್ಮ ಹಾಲಿಗೆ ಯೂರಿಯಾ ಸೇರಿಸಿ ಕಲಬರಕೆ ಮಾಡಿದ್ದಾರೆ ಎಂದರೆ ಅದನ್ನು ಕಂಡು ಹಿಡಿಯುವುದು ಹೇಗೆ ಅಂತೀರಾ? ಅದಕ್ಕೂ ಎಫ್‌ಎಸ್‌ಎಸ್‌ಎಐ ಸರಳ ಉಪಾಯವನ್ನು ಹೇಳಿದೆ. ಒಂದು ಟೆಸ್ಟ್ ಟ್ಯೂಬ್‌ನಲ್ಲಿ ಒಂದು ಚಮಚದಷ್ಟು ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಚಮಚದಷ್ಟು ಸೋಯಾಬೀನ್ ಅಥವಾ ಗೊಗರಿ ಬೇಳೆಯ ಪುಡಿಯನ್ನು ಸೇರಿಸಿ. ಟೆಸ್ಟ್ ಟ್ಯೂಬ್ ಅನ್ನು ಚೆನ್ನಾಗಿ ಕುಲುಕಿಸುವ ಮೂಲಕ ಅವನ್ನು ಮಿಕ್ಸ್ ಮಾಡಿ. ನಂತರ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಕೆಂಪು ಲಿಟ್ಮಸ್ ಪೇಪರನ್ನು ಟೆಸ್ಟ್ ಟ್ಯೂಬ್ ಒಳಗೆ ಮುಳುಗಿಸಿ. ಒಂದರ್ಧ ನಿಮಿಷ ಕಾಯಿರಿ. ನಂತರ ಈ ಪೇಪರನ್ನು ಅದರಿಂದ ಹೊರಗೆ ತೆಗೆಯಿರಿ. ಯಾವುದೇ ಕಲಬೆರಕೆಯಾಗಿರದಿದ್ದರೆ ಈ ಲಿಟ್ಮಸ್ ಪೇಪರ ನತನ ಬಣ್ಣ ಬದಲಾಯಿಸದು. ಆದರೆ, ಕಲಬೆರಕೆಯ ಹಾಲು ನಿಮ್ಮದಾಗಿದ್ದರೆ ನಿಮ್ಮ ಈ ಕೆಂಪು ಲಿಟ್ಮಸ್ ಪೇಫರ್ ನೀಲಿಯಾಗಿ ಬದಲಾಗುತ್ತದೆ.