Site icon Vistara News

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Health Tips Kannada

ಬಹುತೇಕರಿಗೆ ದಿನದ ಆರಂಭ ಎಂದರೆ ಒಂದು ಕಪ್‌ ಚಹಾ ಅಥವಾ ಕಾಫಿ. ಇದೊಂದು ಸಂಪ್ರದಾಯದಂತೆ ಎಷ್ಟೋ ವರ್ಷಗಳಿಂದ ನಮ್ಮನ್ನು ಪೊರೆಯುತ್ತಿದೆ. ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಅದೇನೋ ಕಳೆದುಕೊಂಡ ಭಾವ ಹಲವರನ್ನು ಕಾಡುತ್ತದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಒಳ್ಲೆಯದಲ್ಲ ಎಂಬುದು ಗೊತ್ತಿದ್ದರೂ, ಈ ಚಹಾ ಕುಡಿಯುವ ಅಭ್ಯಾಸವನ್ನು ಬಿಡಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಅದೇನೇ ಆಗಲಿ, ಚಹಾ ಮಾತ್ರ ಬೇಕು. ಆದರೆ, ನೆನಪಿಡಿ. ಎಲ್ಲ ಸಮಯದಲ್ಲೂ ಚಹಾ ಕಾಫಿ ಸೇವನೆ ಒಳ್ಳೆಯದಲ್ಲ. ಕೆಲವು ಸಮಯಗಳಲ್ಲಿ ಇವುಗಳ ಸೇವನೆ ಮಾಡುವುದರಿಂದ ನಾವು ಸೇವಿಸುವ ಆಹಾರಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರದೆ ನಷ್ವಾಗಬಹುದು. ಇನ್ನೂ ಕೆಲವೊಮ್ಮೆ ಇವು ಜೀರ್ಣಕ್ರಿಯೆಯನ್ನೇ ಬಾಧಿಸಬಹುದು. ಅಷ್ಟೇ ಅಲ್ಲ, ನಮ್ಮ ದೇಹದ ಹಲವು ಸಮಸ್ಯೆಗಳಿಗೆ ಮೂಲ ಕಾರಣ ಈ ನಮ್ಮ ಕೆಟ್ಟ ಅಭ್ಯಾಸದಿಂದಲೂ ಇರಬಹುದು. ಬನ್ನಿ, ಚಹಾ ಹಾಗೂ ಕಾಫಿಯನ್ನು ನಾವು ಯಾವ ಸಮಯದಲ್ಲಿ ಕುಡಿಯಬಾರದು (Health Tips Kannada) ಎಂಬುದನ್ನು ನೋಡೋಣ.

ಬೆಳಗ್ಗೆ ಎದ್ದ ಕೂಡಲೇ

ಬಹುತೇಕ ಎಲ್ಲರಿಗೂ ಇರುವ ಅಭ್ಯಾಸವಿದು. ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್‌ ಚಹಾ ಕೈಯಲ್ಲಿದ್ದರೇ ದಿನ ಆರಂಭವಾದ ಹಾಗೆ. ಈ ಅಭ್ಯಾಸ ಅನೇಕರಿಗಿದೆ. ಇದನ್ನು ಬಿಡುವುದು ಕಷ್ಟ ನಿಜವೇ. ಆದರೆ, ಬೆಳಗ್ಗೆ ಎದ್ದ ಕೂಡಲೇ ಚಹಾ ಅಥವಾ ಕಾಫಿಯನ್ನು ಹೊಟ್ಟೆಗಿಳಿಸುವುದರಿಂದ ಇದರಲ್ಲಿರುವ ಕೆಫೀನ್‌ ಅಂಶವು ಖಾಲಿ ಹೊಟ್ಟೆಯ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಹಾರ್ಮೋನ್‌ ಉತ್ಪಾದನೆಯ ವ್ಯವಸ್ಥೆಯನ್ನೂ ಇದೂ ಹದಗೆಡಿಸುವುದಲ್ಲದೆ, ಇದರಿಂದ ಮಾನಸಿಕವಾಗಿಯೂ ಒತ್ತಡ ಇತ್ಯಾದಿ ಸಮಸ್ಯೆಗಳು ಬರಬಹುದು.

ಇದನ್ನೂ ಓದಿ: Contact Lens: ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!

ಊಟ ತಿಂಡಿಯ ಜೊತೆಗೆ

ನಿಮಗೆ ಊಟ ತಿಂಡಿಯ ಜೊತೆಗೆ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಇದ್ದರೆ ಮತ್ತೊಮ್ಮೆ ಯೋಚಿಸಿ. ಚಹಾ ಮತ್ತು ಕಾಫಿ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಯನ್ನೇ ಹಾಳುಗೆಡವಬಹುದು. ನೀವು ಪ್ರೊಟೀನ್‌ಯುಕ್ತ ಆಹಾರ ತೆಗೆದುಕೊಂಡರೆ, ಅದರ ಜೊತೆಗೆ ಚಹಾ/ಕಾಫಿಯನ್ನೂ ಸೇವಿಸಿದರೆ ಪ್ರೊಟೀನ್‌ ನಿಮ್ಮ ದೇಹದಕ್ಕೆ ಒದಗದು. ಅಷ್ಟೇ ಅಲ್ಲ, ಪ್ರೊಟೀನ್‌ ಕರಗಲು ಕಷ್ಟವಾಗುತ್ತದೆ. ನಿಮ್ಮ ಆಹಾರದಲ್ಲಿರುವ ಕಬ್ಬಿಣದಂಶವೂ ಕೂಡಾ ದೇಹಕ್ಕೆ ಸೇರಲು ಕಷ್ಟವಾಗಬಹುದು. ಹಾಗಾಗಿ, ಆಹಾರದ ಜೊತೆಗೆ ಚಹಾ ಕಾಫಿ ಸೇವನೆ ಮಾಡುವುದರಿಂದ ನಿಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಕರಗಿ ನಿಮ್ಮ ದೇಹಕ್ಕೆ ಸೇರುವ ಕ್ರಿಯೆ ನಿಧಾನವಾಗುತ್ತದೆ. ಹಾಗೆಯೇ ಪೋಷಕಾಂಶಗಳು ನಷ್ಟವಾಗಲೂಬಹುದು.

ಸಂಜೆ ನಾಲ್ಕು ಗಂಟೆಯ ನಂತರ

ಸಂಜೆ ಕಾಫಿ ಅಥವಾ ಚಹಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡ ಮಂದಿ ಇಲ್ಲೊಮ್ಮೆ ಕೇಳಿ. ಚಹಾ ಅಥವಾ ಕಾಫಿಯನ್ನು ನೀವು ಮಲಗುವುದಕ್ಕೂ ಹತ್ತು ಗಂಟೆಗಳ ಮೊದಲು ಸೇವಿಸಬೇಕಂತೆ. ಆದರೆ ಇದು ಸಾಧ್ಯವಾಗದಿದ್ದರೆ, ಕನಿಷ್ಟ ಆರು ಗಂಟೆಗಳ ಮೊದಲು ಸೇವಿಸಬಹುದಂತೆ. ಅಂದರೆ, ಸಂಜೆ ನಾಲ್ಕು ಗಂಟೆಗೂ ಮೊದಲು ಕಾಫಿ ಚಹಾ ಸೇವಿಸಿ. ಇದು ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ಪಿತ್ತಕೋಶವನ್ನೂ ಆರೋಗ್ಯವಾಗಿಡುತ್ತದೆ. ಕಾರ್ಟಿಸಾಲ್‌ ಮಟ್ಟವನ್ನೂ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ.
ಈ ಸಮಯವನ್ನು ಹೊರತುಪಡಿಸಿ, ಉಳಿದ ಸಮಯಗಳಲ್ಲಿ ನೀವು ನಿಮ್ಮ ಇಷ್ಟದ ಚಹಾ ಕಾಫಿಯನ್ನು ಕುಡಿಯಬಹುದು. ಆದರೆ, ಇದು ಅತಿಯಾಗದಿರಲಿ. ಅಂದು ದಿನಕ್ಕೆ 300 ಮಿಲಿಗ್ರಾಂಗಿಂತ ಹೆಚ್ಚಿನ ಕೆಫೀನ್‌ ನಿಮ್ಮ ಹೊಟ್ಟೆ ಸೇರದಿರಲಿ. ಸುಮಾರು 150 ಎಂಎಲ್‌ ಕಾಫಿಯಲ್ಲಿ 80ರಿಂದ 120 ಮಿಲಿಗ್ರಾಂ ಕೆಫೀನ್‌ ಇದೆ. ಇನ್‌ಸ್ಟ್ಯಾಂಟ್‌ ಕಾಫಿಯಲ್ಲಿ 50-65 ಎಂಜಿ ಕೆಫೀನ್‌ ಇದ್ದರೆ, ಚಹಾದಲ್ಲಿ 30-65 ಎಂಜಿ ಕೆಫೀನ್‌ ಇದೆ. ಹೀಗಾಗಿ, ಈ ಬಗ್ಗೆ ಎಚ್ಚರ ವಹಿಸಿ ಹಿತಮಿತವಾಗಿ ನಿಮ್ಮ ಪ್ರೀತಿಯ ಪೇಯವನ್ನು ನಿತ್ಯವೂ ಕುಡಿಯಬಹುದು ಎಂಬುದು ತಜ್ಞರ ಮಾತು.

Exit mobile version