Site icon Vistara News

Health Tips Kannada: ಉಪ್ಪು ತಿನ್ನುವುದು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮುಖ್ಯ!

Health Tips Kannada

ʻರುಚಿಗೆ ತಕ್ಕಷ್ಟು ಉಪ್ಪುʼ ಎಂದು (Health Tips Kannada) ಹೇಳುವುದು ಹೌದಾದರೂ ಉಪ್ಪು ಬಾಯಿಯ ರುಚಿಗೆ ಮಾತ್ರವಲ್ಲ, ದೇಹದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತದೆ. ಹಾಗೆಂದು ಅದನ್ನು ಸಿಕ್ಕಾಪಟ್ಟೆ ತಿನ್ನುವಂತಿಲ್ಲ. ಆದರೆ ನಾವು ತಿನ್ನುತ್ತಿರುವ ಉಪ್ಪಿನ ಪ್ರಮಾಣ ಮಿತಿಮೀರುತ್ತಿಲ್ಲ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ.
ನಾವು ಉಪ್ಪನ್ನೇಕೆ ತಿನ್ನುತ್ತೇವೆ? ಆಹಾರದ ರುಚಿ ಹೆಚ್ಚಿಸುವುದಕ್ಕೆ ಎಂದು ಸುಲಭವಾಗಿ ಹೇಳಬಹುದು. ಆದರೆ ಅದಷ್ಟಕ್ಕೆ ಮಾತ್ರ ಉಪ್ಪು ಬೇಕೆ ನಮಗೆ? ಉಪ್ಪು ಇಲ್ಲದಿದ್ದರೆ ಕಷ್ಟವಾಗುವ ಹಾಗೆ, ಉಪ್ಪು ಹೆಚ್ಚಾದರೂ ತಿನ್ನಲಾಗದು ತಾನೇ? ಆದರೆ ಎಷ್ಟು ಉಪ್ಪು ತಿಂದರೆ ಹೆಚ್ಚು ಅಥವಾ ಕಡಿಮೆ ಎನ್ನುವುದು ಹೇಗೆ ತಿಳಿಯಬೇಕು ನಾವು? ಬಾಯಿ ರುಚಿಯ ಮೂಲಕ ಮಾತ್ರವೇ? ಕೆಲವು ಪಾಕಗಳಲ್ಲಿ ಉಪ್ಪಿನ ರುಚಿ ಹೆಚ್ಚಿಲ್ಲದಿದ್ದರೂ, ಸೋಡಿಯಂ ಅಂಶ ಹೆಚ್ಚಿದೆ ಎನ್ನುತ್ತಾರಲ್ಲ, ಇದನ್ನು ಹೇಗೆ ತಿಳಿಯಬೇಕು? ಎಷ್ಟು ಉಪ್ಪು ತಿಂದರೆ ಹೆಚ್ಚು ಎನ್ನುವುದಕ್ಕೆ ಏನಾದರೂ ಸೂಚನೆಗಳಿವೆಯೇ?

ಉಪ್ಪೇಕೆ ಬೇಕು?

ಮೊದಲಿಗೆ ಉಪ್ಪು ಎಂದರೆ ರುಚಿಗೆ ಮಾತ್ರವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಉಪ್ಪು ಅಥವಾ ಸೋಡಿಯಂಗೆ ನಮ್ಮ ದೇಹದಲ್ಲಿ ಹೆಚ್ಚಿನ ಕೆಲಸವಿದೆ. ನಮ್ಮ ಶರೀರದ ಕೋಶಗಳಲ್ಲಿರುವ ನೀರಿನಂಶದ ನಿರ್ವಹಣೆಗೆ, ಸ್ನಾಯುಗಳ ಸಂಚಲನಕ್ಕೆ, ನರಗಳ ಕ್ಷಮತೆಗೆ, ಸಣ್ಣ ಕರುಳಿನಲ್ಲಿ ಕೆಲವು ಸತ್ವಗಳು ಹೀರಲ್ಪಡುವುದಕ್ಕೆ, ರಕ್ತದೊತ್ತಡ ನಿರ್ವಹಣೆಗೆ- ಹೀಗೆ ಬಹಳಷ್ಟು ಕೆಲಸಗಳಿಗೆ ಸೋಡಿಯಂ ಆವಶ್ಯಕ. ಇವೆಲ್ಲ ನಮಗೆ ದೊರೆಯುವ ಮುಖ್ಯ ಮೂಲವೆಂದರೆ ಉಪ್ಪು. ಆದರೆ ಅದನ್ನಾದರೂ ತಿನ್ನುವುದು ಹೆಚ್ಚಾಗಬಾರದು. ತಿನ್ನುತ್ತಿರುವ ಉಪ್ಪಿನ ಪ್ರಮಾಣ ಹೆಚ್ಚು ಎಂಬುದಕ್ಕೆ ದೇಹ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಏನು ಆ ಲಕ್ಷಣಗಳು?

ರಕ್ತದೊತ್ತಡ

ಬಿಪಿ ಅಥವಾ ರಕ್ತದೊತ್ತಡ ಹೆಚ್ಚಿದೆಯೇ? ಉಪ್ಪು ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ತಿನ್ನುತ್ತಿರುವ ಪ್ರಮಾಣ ಹೆಚ್ಚಿದೆಯೇ ಎಂಬುದನ್ನು ಗಮನಿಸಿ. ಹೆಚ್ಚು ಉಪ್ಪಿನಕಾಯಿ, ಚಿಪ್ಸ್‌, ಬೇಕರಿ ತಿಂಡಿಗಳು ಹೊಟ್ಟೆ ಸೇರುತ್ತಿವೆಯೇ? ಹೌದೆಂದಾದರೆ, ರಕ್ತದೊತ್ತಡ ಹೆಚ್ಚುವುದಕ್ಕೆ ಅದೂ ಕಾರಣವಾಗಿರಬಹುದು.

ಊದಿಕೊಳ್ಳುವುದು

ಕೈಬೆರಳುಗಳು, ಪಾದ, ಕಾಲುಗಳು, ಕಿಬ್ಬೊಟ್ಟೆಯಲ್ಲಿ ಊತ ಕಾಣುತ್ತಿದೆಯೇ? ಇದು ದೇಹದಲ್ಲಿ ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ ಉಳಿಯುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ದೇಹಕ್ಕೆ ಹೆಚ್ಚಿನ ಪ್ರಮಾಣದ ಉಪ್ಪಿನಂಶ ದೊರೆತಾಗ, ಹೆಚ್ಚು ನೀರಿನಂಶ ಶರೀರದಲ್ಲಿ ಉಳಿಯುವುದು ಸಾಮಾನ್ಯ. ಹಾಗಾಗಿ ಉಪ್ಪು ಎಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ಪರಿಶೀಲಿಸಲು ಇದು ಸಕಾಲ.

ಬಾಯಾರಿಕೆ

ಉಪ್ಪು ತಿಂದವ ನೀರು ಕುಡಿಯಲೇ ಬೇಕೆಂಬ ಗಾದೆ ಸುಳ್ಳಲ್ಲ. ಅತಿಯಾಗಿ ಉಪ್ಪು ತಿಂದರೆ ಬಾಯಾರಿಕೆ ತಪ್ಪಿದ್ದಲ್ಲ. ಅತಿಯಾಗಿ ದಾಹ ಕಾಡುತ್ತಿದೆ ಎಂದಾದರೆ ಉಪ್ಪೆಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ಗಮನಿಸುವುದು ಅಗತ್ಯ. ರಕ್ತದಲ್ಲಿರುವ ಅಧಿಕ ಸೋಡಿಯಂ ಅಂಶವನ್ನು ತೆಗೆಯುವ ಭರದಲ್ಲಿ ಕೋಶಗಳಲ್ಲಿರುವ ನೀರಿನಂಶವೆಲ್ಲ ಕೆಲವೊಮ್ಮೆ ಖಾಲಿಯಾಗಿಬಿಡುತ್ತದೆ. ಆಗ ಬಾಯಾರಿಕೆ ಹೆಚ್ಚುತ್ತದೆ.

ಹೃದಯದ ಬಡಿತ ಏರುಪೇರು

ಸೋಡಿಯಂ ಮತ್ತು ಪೊಟಾಶಿಯಂನಂಥ ಖನಿಜಗಳ ಸಮತೋಲನ ವ್ಯತ್ಯಾಸವಾಗಬಹುದು ಅಧಿಕ ಉಪ್ಪು ತಿನ್ನುವುದರಿಂದ. ಇದರಿಂದ ಹೃದಯದ ಬಡಿತದಲ್ಲೂ ಏರುಪೇರು ಉಂಟಾಗಬಹುದು. ಅದರಲ್ಲೂ ಹೃದಯದ ಸಮಸ್ಯೆಗಳು ಇರುವವರಲ್ಲಿ ಈ ತೊಂದರೆ ಇನ್ನೂ ಹೆಚ್ಚಬಹುದು.

ತಲೆನೋವು

ಯಾವುದೇ ಕಾರಣಕ್ಕೂ ತಲೆನೋವು ಬರುವುದು ಸಾಮಾನ್ಯವಾದರೂ, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಬರುವುದು ಹೆಚ್ಚು. ಉಪ್ಪು ತಿನ್ನುವುದು ಹೆಚ್ಚಿದರೆ, ದೇಹದಲ್ಲಿ ನೀರಿನಂಶ ಕಡಿಮೆಯಾಗುವ ಸಾಧ್ಯತೆಯೂ ಇರುವುದರಿಂದ, ಪದೇಪದೆ ನಿರ್ಜಲೀಕರಣದಿಂದ ತಲೆನೋವು ಬರುತ್ತಿದೆ ಎಂದಾದರೆ, ತಿನ್ನುತ್ತಿರುವ ಉಪ್ಪಿನ ಪ್ರಮಾಣವೆಷ್ಟು ಎಂಬುದನ್ನು ಪರಿಶೀಲಿಸುವುದು ಮುಖ್ಯ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಕಿಡ್ನಿ ಸಮಸ್ಯೆ

ದೇಹಕ್ಕೆ ಅನಗತ್ಯ ಎನಿಸಿದ ಬಹಳಷ್ಟನ್ನು ವಿಸರ್ಜಿಸಲು ಮೂತ್ರಪಿಂಡಗಳು ಹಗಲಿರುಳು ಶ್ರಮಿಸುತ್ತಲೇ ಇರುತ್ತವೆ. ಉಪ್ಪಿನಂಶ ಹೆಚ್ಚು ಉಳಿಯುತ್ತಿದೆ ದೇಹದಲ್ಲಿ ಎಂದಾದರೆ ಅದನ್ನು ವಿಸರ್ಜಿಸಲು ಸಹ ಕಿಡ್ನಿಗಳು ಹೆಚ್ಚುವರಿ ಕೆಲಸ ಮಾಡಬೇಕು. ಹೀಗೆ ಅತಿಯಾಗಿ ಕೆಲಸ ಮಾಡುವುದರಿಂದ ಕ್ರಮೇಣ ಮೂತ್ರಪಿಂಡಗಳು ಸೋತು, ರೋಗಗಳಿಗೆ ಈಡಾಗಬಹುದು.

Exit mobile version