ಮಗುವಿನ ಹೆರಿಗೆಯ ನಂತರ ಮತ್ತೆ ಕೆಲಸಕ್ಕೆ ಮರಳುವುದು ಬಹಳ ಸವಾಲಿನ ಕೆಲಸ. ಅದರಲ್ಲೂ, ಬಾಣಂತನದ ಸಂದರ್ಭ ಆವರಿಸಿಕೊಳ್ಳುವ ಖಿನ್ನತೆಯಂತಹ (postpartum depression (PPD) ಸಮಸ್ಯೆಯೂ ಆರಂಭವಾದರೆ ಇದು ತ್ರಾಸದಾಯಕವಾದ ಪಯಣ. ಬಹಳಷ್ಟು ಹೊಸ ತಾಯಂದಿರು ಮಗು ಹುಟ್ಟುತ್ತಿದ್ದಂತೆಯೇ ಅದರ ಲಾಲನೆ ಪೋಷಣೆಯಲ್ಲೇ ಕಳೆದುಹೋಗಿ ಇದ್ದಕ್ಕಿದ್ದಂತೆ ಬೇಸರ, ಏಕತಾನತೆ, ಉದ್ವೇಗ, ಖಿನ್ನತೆ ಇತ್ಯಾದಿ ಮಾನಸಿಕ ತಲ್ಲಣಗಳನ್ನು ಅನುಭವಿಸುತ್ತಾರೆ. ಇದು ಮಗುವಿನ ಪೋಷಣೆಯ ಮೇಲೂ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈ ಸಂದರ್ಭ ಆಕೆಯನ್ನು ಕಾಳಜಿ ಮಾಡುವ ಕುಟುಂಬ, ಜೊತೆಗಿರುವ ಸಂಗಾತಿ ಅತ್ಯಂತ ಮುಖ್ಯ.
ಮಹಿಳೆ ಗರ್ಭಿಣಿಯಾಗಿದ್ದಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾಳೆ. ತನ್ನ ದೇಹದಲ್ಲಾಗುವ ಬದಲಾವಣೆ, ತೂಕದಲ್ಲಿ ಏರಿಕೆ, ದೈಹಿಕವಾದ ನೋವುಗಳು, ಇತ್ಯಾದಿಗಳನ್ನು ದಾಟಿ ಮಗುವಿಗೆ ಜನ್ಮ ನೀಡುತ್ತಾಳೆ. ತಾಯಿಯಾಗುವುದು ಅದ್ಭುತ ಅನುಭವ, ಪ್ರಕೃತಿಯ ವಿಸ್ಮಯವೇ ಆದರೂ, ಬಹಳಷ್ಟು ಮಹಿಳೆಯರಿಗೆ ಈ ಹಂತದಲ್ಲಿ ಖಿನ್ನತೆಯಂಥ ಲಕ್ಷಣಗಳೂ ಕಂಡು ಬರುತ್ತವೆ. ಬಹಳಷ್ಟು ಮಂದಿಗೆ ಮತ್ತೆ ಕೆಲಸಕ್ಕೆ ಮರಳುವುದು ಬಹಳ ಸವಾಲಾಗಿ ಪರಿಣಮಿಸುತ್ತದೆ. ಇದರಿಂದ ಆಗುವ ಮನೋತಲ್ಲಣಗಳು, ಮಗುವನ್ನು ಮನೆಯಲ್ಲೇ ಬಿಟ್ಟು ಹೋಗುವಾಗ ಆಗುವ ಗಿಲ್ಟ್, ತಾಯ್ತನಕ್ಕೆ ನ್ಯಾಯ ಸಲ್ಲಿಸಲಾಗದ ಕೊರಗು, ಮನೆಯಲ್ಲಿನ ಹಾಗೂ ಕಚೇರಿಯ ಕೆಲಸಗಳನ್ನು ಸಂಭಾಳಿಸಲು ಕಷ್ಟವಾಗುವುದು, ನಿದ್ದೆಯಿಲ್ಲದ ರಾತ್ರಿಗಳು, ಮೈತುಂಬ ಕೆಲಸ, ಜೊತೆಗೆ ತನ್ನ ಆರೋಗ್ಯದ ಕಾಳಜಿ ಇತ್ಯಾದಿಗಳು ಆಕೆಯನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಬಹಳಷ್ಟು ಸಾರಿ ಇದು ಮಾನಸಿಕ ಸಮಸ್ಯೆಯತ್ತಲೂ ದೂಡುತ್ತದೆ. ಹಾಗಾಗಿ, ಹೊಸ ತಾಯಂದಿರು ಮೊದಲೇ ಇದರ ಗಂಭೀರತೆಯನ್ನು ಅರಿತುಕೊಂಡು ಜಾಗರೂಕರಾಗಿರಬೇಕು. ಇವೆಲ್ಲವುಗಳನ್ನು ನಿಭಾಯಿಸಲು ಸಾಧ್ಯವಾಗುವಂಥ ಕೆಲವು ಟಿಪ್ಸ್ ಇಲ್ಲಿವೆ. ಮಗು ಹುಟ್ಟಿದ, ಕೆಲಸಕ್ಕೆ ಹೊರಟ ಪ್ರತಿ ತಾಯಂದಿರೂ ಪ್ರಾಮಾಣಿಕವಾಗಿ (Health tips Kannada) ಇವನ್ನು ಪ್ರಯತ್ನಿಸಬಹುದು.
ನಿಮ್ಮ ಭಾವನೆಗಳನ್ನು ಮನಬಿಚ್ಚಿ ಹೇಳಿ
ಜೀವನದಲ್ಲಾದ ಬದಲಾವಣೆಗಳಿಂದ ಮನಸ್ಸಿನಲ್ಲಾಗುವ ಕ್ಷೋಭೆಯನ್ನು ಜೊತೆಗಿರುವ ಮಂದಿಗೆ ಬಿಡಿಸಿ ಹೇಳಿ. ಯಾವ ಭಾವನೆಯನ್ನೂ ಮುಚ್ಚಿಟ್ಟುಕೊಳ್ಳಬೇಡಿ. ನಿಮಗಾಗುತ್ತಿರಯವ ಮಾನಸಿಕ ತಲ್ಲಣಗಳನ್ನು, ಅನುಭವಗಳನ್ನು ಮನಬಿಚ್ಚಿ ಹೇಳಿದರೆ, ನೀವು ತಾಯಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ಸೋತಿದ್ದೀರಿ ಎಂಬರ್ಥವಲ್ಲ.
ಮನೋವೈದ್ಯರನ್ನು ಭೇಟಿಯಾಗಿ
ಹೊಸ ತಾಯಿಯ ಮನಸ್ಸಿನ ತಲ್ಲಣಗಳು ಪ್ರಪಂಚದ ಹೊಸ ಸಂಗತಿಯೇನಲ್ಲ. ಇದು ಸಾಮಾನ್ಯ. ಇದು ಗಂಭೀರ ಸ್ವರೂಪವನ್ನು ತಾಳುತ್ತದೆ ಎನಿಸುತ್ತಿದ್ದರೆ ಖಂಡಿತವಾಗಿ ಮನೋವೈದ್ಯರನ್ನೊಮ್ಮೆ ಭೇಟಿಯಾಗಿ. ಸಲಹೆ ಪಡೆಯಿರಿ.
ಹಿತೈಷಿಗಳನ್ನು ಸುತ್ತ ಇರಿಸಿಕೊಳ್ಳಿ
ನಿಮ್ಮನ್ನು ಅರ್ಥ ಮಾಡಿಕೊಳ್ಳುವ, ಗೆಳೆಯರು, ಕುಟುಂಬಸ್ಥರು, ಸಹೋದ್ಯೋಗಿಗಳನ್ನು ಸುತ್ತಮುತ್ತ ಇರಿಸಿಕೊಳ್ಳಿ. ನೆಗೆಟಿವ್ ಹರಡುವ ಮಂದಿಯನ್ನು ದೂರವಿರಿಸಿ.
ಹೊಂದುವ ಕೆಲಸ ಮಾಡಿ
ಸಾಧ್ಯವಾದರೆ ನಿಮಗೆ ಹೊಂದಿಕೆಯಾಗುವ ವೃತ್ತಿಸಮಯವನ್ನು ಕೇಳಿ ಪಡೆಯಿರಿ. ನಿಮಗೆ ಬೇರೆ ಮುಖ್ಯ ಜವಾಬ್ದಾರಿಗಳಿರುವುದರಿಂದ ಕೆಲಕಾಲ ನಿಮಗೆ ಹೊಂದುವಂಥ ವೃತ್ತಿ ಆದ್ಯತೆಯತ್ತ ಹೊರಳಿ.
ಸಹೋದ್ಯೋಗಿಗಳ ನೆರವು ಪಡೆಯಿರಿ
ನಿಮ್ಮ ಸಹೋದ್ಯೋಗಿಗಳ ಜೊತೆ ಮಾತನಾಡಿ. ಅವರ ಸಹಕಾರ ಪಡೆಯಿರಿ. ನಿಮ್ಮ ಅನನುಕೂಲತೆಗಳನ್ನು, ಹೊಂದಿಕೆಯಾಗದ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿ.
ನಿಮ್ಮ ಕಾಳಜಿ ಮಾಡಿಕೊಳ್ಳಿ
ನಿಮ್ಮನ್ನು ನೀವು ಕೆಳಕ್ಕೆ ತಳ್ಳಬೇಡಿ. ಮಗುವಿನ ಆರೈಕೆ ಮಾಡಲು ನೀವು ಆರೋಗ್ಯವಾಗಿ ಪುಟಿಯುವ ಚಿಲುಮೆಯಂತಿದ್ದರೆ ಮಾತ್ರ ಸಾಧ್ಯ. ಹಾಗಾಗಿ ನಿಮ್ಮ ಕಾಳಜಿಗೆ ಸಮಯ ಕಡ್ಡಾಯವಾಗಿ ಮೀಸಲಿಡಿ. ಒಳ್ಳೆಯ ನಿದ್ದೆ, ವ್ಯಾಯಾಮ, ಪೋಷಕಾಂಶಯುಕ್ತ ಆಹಾರ, ನಿಮಗಾಗಿ ದಿನದ ಒಂದಿಷ್ಟು ಸಮಯ ಇರಲಿ.
ಚಿಕ್ಕ ಹೆಜ್ಜೆಯಿಡಿ
ಅತಿಯಾದ, ಸಾಧ್ಯವಾಗದ ಗುರಿಗಳನ್ನಿಡಬೇಡಿ. ನಿಮ್ಮ ಕೈಯಲ್ಲಿ ಸಾಧ್ಯವಾಗುವ, ತಲುಪಬಹುದಾದ ಗುರಿಗಳು ನಿಮ್ಮೆದುರಿರಲಿ. ನಿಧಾನವಾಗಿ ನಿಮ್ಮನ್ನು ನೀವು ಪಳಗಿಸಿಕೊಳ್ಳಿ. ಅವಸರ ಬೇಡ.
ನಿಮ್ಮ ಹಾಗೂ ಮಗುವಿನ ಸಮಯ
ಮಗುವಿನ ಜೊತೆಗೆ ಸಮಯ ಕಳೆಯಿರಿ. ಮಗುವಿನ ಸಣ್ಣ ಸಣ್ಣ ಬೆಳವಣಿಗೆಯಲ್ಲೂ ಹಿತ ಕಾಣಿ. ಕೆಲಸಕ್ಕೆ ಹೋಗುತ್ತಿದ್ದರೂ, ಒಂದಿಷ್ಟು ಸಮಯ ಮಗುವಿನ ಜೊತೆಗೆ ಗುಣಮಟ್ಟ್ದ ಸಮಯ ಕಳೆಯಿರಿ. ಕಚೇರಿಯಲ್ಲಿದ್ದಾಗಲೂ ಈಗಿನ ತಂತ್ರಜ್ಞಾನಗಳ ಮೂಲಕ ಮಗುವಿನ ಮೇಲೆ ಒಂದು ಕಣ್ಣಿಟ್ಟಿರಬಹುದು.
ಇದನ್ನೂ ಓದಿ: Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?
ಧ್ಯಾನ, ಪ್ರಾಣಾಯಾಮ ಮಾಡಿ
ಒಂದಿಷ್ಟು ಸಮಯ ಉಸಿರಾಟದ ಅಭ್ಯಾಸಗಳು, ಧ್ಯಾನ, ಪ್ರಾಣಾಯಾಮಕ್ಕೆ ಸಮಯ ಇಡಿ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ, ನಿಮಗೆ ಅಗತ್ಯವಾಗಿ ಈ ಸಮಯದಲ್ಲಿ ಬೇಕಾಗಿರುವ ಶಾಂತಿ ನೆಮ್ಮದಿಯನ್ನು ನೀಡುತ್ತದೆ.