Site icon Vistara News

Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

Health Tips Kannada

ಕುಂಬಳಕಾಯಿ ಎನ್ನುತ್ತಿದ್ದಂತೆ (Health Tips Kannada) ಹೆಗಲು ಮುಟ್ಟಿಕೊಳ್ಳುವ ವಿಷಯ ಅಲ್ಲವಿದು. ಕುಂಬಳಬೀಜದ ವಿಷಯ ನಾವಿಲ್ಲಿ ಮಾತಾಡುತ್ತಿರುವುದು. ʻಅಲ್ಲೇನಿದೆ. ಬರೀ ಕುಂಬಳಕಾಯಿʼ ಎನ್ನುವಂಥ ಮಾತುಗಳಿಂದ ಅದೊಂದು ಕೇವಲವಾದ ವಸ್ತು ಎನ್ನುವಂಥ ಭಾವ ಮೂಡುತ್ತದೆ. ಆದರೆ ಕುಂಬಳಕಾಯಿಯ ಸತ್ವಗಳ ಬಗ್ಗೆ ತಿಳಿದರೆ, ಆಡಿಕೊಳ್ಳುವ ಬಾಯಿಗಳೆಲ್ಲ ಮುಚ್ಚಿಕೊಳ್ಳಬಹುದು. ಇಡೀ ಕುಂಬಳಕಾಯಿ ಬಿಡಿ, ಅದರ ಬೀಜಗಳ ಮಹಾತ್ಮೆಯನ್ನು ತಿಳಿದುಕೊಂಡರೂ ಸಾಕು. ನಾವಿಂದು ಮಾಡುವುದಕ್ಕೆ ಹೊರಟಿರುವುದು ಅದನ್ನೇ… ಕುಂಬಳ ಬೀಜಗಳ ಸದ್ಗುಣಗಳನ್ನು ತಿಳಿಯಲು. ಹಲವು ಸಮಸ್ಯೆಗಳಿಗೆ ಸರಳ ಸಮಾಧಾನದಂತೆ ಈ ಪುಟ್ಟ ಬೀಜಗಳು ಕಂಡುಬರುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯದ ಆರೋಗ್ಯ ಸುಧಾರಿಸುವವರೆಗೆ ಹಲವು ರೀತಿಯಲ್ಲಿ ಕುಂಬಳಬೀಜ ನಮಗೆ ಉಪಕಾರಿಯಾಗಬಲ್ಲದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಜೀವಗಳು, ಹಸಿವಾದಾಗ ಅಥವಾ ಕಳ್ಳ ಹಸಿವೆಯನ್ನು ನಿವಾರಿಸುವುದನ್ನು ಸುಮ್ಮನೆ ಬಾಯಾಡುವುದಕ್ಕೆ ಜೊತೆಯಾಗುತ್ತವೆ. ಇದನ್ನು ಗೋಡಂಬಿಯಂತೆ ಹಲವು ಖಾದ್ಯಗಳಿಗೆ ಬಳಸಬಹುದು. ಚಿಟಿಕೆ ಉಪ್ಪಿನೊಂದಿಗೆ ಹುರಿದರೆ, ಚಹಾ ಜೊತೆಗೆ ಬಾಯಿಗೆಸೆದುಕೊಳ್ಳಬಹುದು.

ಪ್ರತಿರೋಧಕತೆ ಹೆಚ್ಚಳ

ವಿಟಮಿನ್‌ ಇ ಮತ್ತು ಜಿಂಕ್‌ ಸತ್ವಗಳಿಂದ ಸಮೃದ್ಧವಾಗಿರುವ ಈ ಬೀಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಸೋಂಕುಗಳ ವಿರುದ್ಧ ಹೋರಾಡುವಂಥ ಸಾಮರ್ಥ್ಯ ವಿಟಮಿನ್‌ ಇ ಗಿದೆ. ದೇಹದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ಕಟ್ಟಿಹಾಕುವ ಸಾಧ್ಯತೆಯೂ ಇ ಜೀವಸತ್ವಕ್ಕಿದೆ. ಪ್ರತಿರೋಧಕ ಶಕ್ತಿಯನ್ನು ಜಾಗೃತಗೊಳಿಸುವ ಬಗ್ಗೆ ಸತುವಿನ ಕಾರ್ಯಸಾಮರ್ಥ್ಯ ಕಡಿಮೆಯೇನಿಲ್ಲ. ಹಾಗಾಗಿ ಮಳೆಗಾಲದ ಸೋಂಕುಗಳನ್ನು ಮಟ್ಟ ಹಾಕುವುದಕ್ಕೆ ಉಳಿದೆಲ್ಲ ಕ್ರಮಗಳ ಜೊತೆಗೆ ಕುಂಬಳಬೀಜ ಬಾಯಾಡಿಸುವುದನ್ನು ಮರೆಯಬೇಡಿ.

ನಿದ್ದೆ ಹೆಚ್ಚಳ

ಕುಂಬಳಬೀಜದಲ್ಲಿ ಟ್ರಿಪ್ಟೊಫ್ಯಾನ್‌ ಎಂಬ ಅಮೈನೊ ಆಮ್ಲವಿದೆ. ಇದು ಸೆರೊಟೋನಿನ್‌ ಮತ್ತು ಮೆಲಟೋನಿನ್‌ನಂಥ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನುಗಳು ನಮ್ಮ ಮೂಡ್‌ ಮತ್ತು ನಿದ್ದೆಯನ್ನು ನಿಯಂತ್ರಿಸುತ್ತವೆ. ಹಾಗಾಗಿ ನಿದ್ರಾಹೀನತೆಯನ್ನು ದೂರ ಮಾಡಿ, ಕಣ್ತುಂಬಾ ನಿದ್ದೆ ತರಿಸಿ, ದೇಹ-ಮನಸ್ಸುಗಳ ಆರೋಗ್ಯವನ್ನು ಕಾಪಾಡುವಲ್ಲಿ ಈ ಕಿರುಬೀಜಗಳದ್ದು ದೊಡ್ಡ ಕಾಣಿಕೆ.

ಉತ್ಕರ್ಷಣ ನಿರೋಧಕತೆ

ಇದರಲ್ಲಿ ವಿಟಮಿನ್‌ ಇ ಮಾತ್ರವಲ್ಲ, ದೊಡ್ಡ ಪ್ರಮಾಣದಲ್ಲಿ ಕೆರೊಟಿನಾಯ್ಡ್‌ಗಳೂ ಇವೆ. ಇವೆಲ್ಲ ದೇಹವನ್ನು ಉರಿಯೂತದಿಂದ ಕಾಪಾಡುವ ಗುಣವನ್ನು ಹೊಂದಿವೆ. ದೇಹದ ಕೋಶಗಳನ್ನು ಮುಕ್ತಕಣಗಳಿಂದ ಕಾಪಾಡಿ, ಅವುಗಳ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ಇದರಿಂದ ದಾಂಗುಡಿಯಿಡುವ ಮಾರಕ ರೋಗಗಳನ್ನು ದೂರ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಜೀರ್ಣಕಾರಿ

ಇದರಲ್ಲಿರುವ ನಾರಿನಂಶದಿಂದಾಗಿ ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಿ, ಪಚನಕ್ರಿಯೆಯನ್ನು ಚುರುಕಾಗಿಸುತ್ತದೆ. ನಾರುಯುಕ್ತ ಆಹಾರಗಳು ಜೀರ್ಣಾಂಗಗಳ ಆರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಕೆಗೂ ಸೂಕ್ತವಾದವು. ಇಂಥ ಆಹಾರಗಳು ಬೇಗನೇ ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ಬೇಗ ಹಸಿವಾಗದಂತೆ ತಡೆಯುತ್ತವೆ.

ಮೆಗ್ನೀಶಿಯಂ ವಿಫುಲ

ದೇಹದ ಹಲವು ಕೆಲಸಗಳನ್ನು ನಿರ್ವಹಿಸುವುದಕ್ಕೆ ನಮಗೆ ಮೆಗ್ನೀಶಿಯಂ ಅಗತ್ಯವಾದ ಖನಿಜ. ರಕ್ತದೊತ್ತಡ ಸಮತೋಲನದಲ್ಲಿ ಇರಿಸುವುದು, ಸ್ನಾಯು ಮತ್ತು ನರಗಳ ಆರೋಗ್ಯ ರಕ್ಷಣೆ, ಮೂಳೆಗಳನ್ನು ಭದ್ರಗೊಳಿಸುವುದು ಮತ್ತು ದೇಹಕ್ಕೆ ಬೇಕಾದ ಶಕ್ತಿ ಒದಗಿಸುವಂಥ ಹಲವು ಕೆಲಸಗಳು ಈ ಖನಿಜದ ಪಾಲಿಗಿದೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಬದುಕಿನ ಸ್ವಾಸ್ಥ್ಯ ಹೆಚ್ಚಿಸುವುದಕ್ಕೆ ಮೆಗ್ನೀಶಿಯಂ ಬೇಕು. ಈ ಖನಿಜ ಕುಂಬಳ ಬೀಜದಲ್ಲಿ ಹೇರಳವಾಗಿದೆ.

ಕೊಲೆಸ್ಟ್ರಾಲ್‌ ಕಡಿಮೆ

ಕುಂಬಳಕಾಯಿ ಬೀಜಗಳಲ್ಲಿ ಆರೋಗ್ಯಯುತ ಕೊಬ್ಬು ಮತ್ತು ಪ್ರೊಟೀನ್‌ಗಳು ತುಂಬಿವೆ. ಆರೋಗ್ಯಕರ ಕೊಬ್ಬಿನ ಸೇವನೆಯಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬು ಜಮೆಯಾಗುವುದನ್ನು ತಡೆಯಬಹುದು. ಇದರಿಂದ ಹೃದಯದ ತೊಂದರೆಗಳನ್ನೂ ದೂರ ಇರಿಸಬಹುದು. ಹಾಗಾಗಿ ಸುಮ್ಮನೆ ತಿನ್ನಿ, ಹುರಿದು ತಿನ್ನಿ, ಟೋಸ್ಟ್‌ ಮಾಡಿ ತಿನ್ನಿ, ಬೇರೆ ಖಾದ್ಯಗಳಿಗೆ ಬಳಸಿ- ಹೇಗಾದರೂ ಸರಿ, ಕುಂಬಳ ಬೀಜವನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ, ಆರೋಗ್ಯ ಹೆಚ್ಚಿಸಿಕೊಳ್ಳಿ.

Exit mobile version