Site icon Vistara News

Health Tips Kannada: ಹೊಟ್ಟೆಯುಬ್ಬರಕ್ಕೆ ಇವೆ ಸರಳ ಮನೆಮದ್ದುಗಳು

Stomach Ache. Women Have Abdominal Pain, Indigestion, Gastritis,

ಹೊಟ್ಟೆ ಉಬ್ಬರಿಸುವುದು (Health Tips Kannada) ಎಲ್ಲರಿಗೂ ಎಂದಾದರೂ ಇದ್ದಿದ್ದೇ. ಊಟ ಮಾಡಿದ್ದಕ್ಕಿಂತಲೂ ಹೆಚ್ಚು ಹೊಟ್ಟೆ ಭಾರ ಎನಿಸುವುದು, ಹೊಟ್ಟೆಯೇ ಊದಿಕೊಂಡ ಅನುಭವ, ಒಂದೇ ಸಮನೆ ತೇಗು, ವಾಯುವಿನ ಉಪದ್ರದಿಂದ ಬರುವ ಹೊಟ್ಟೆನೋವು- ಇವೆಲ್ಲ ಜೀರ್ಣಾಂಗಗಳಲ್ಲಿ ಏನೋ ಸರಿ ಇಲ್ಲ ಎಂಬುದನ್ನು ಸೂಚಿಸುತ್ತವೆ. ಹೀಗಾಗುವುದಕ್ಕೆ ಕಾರಣಗಳು ಇಲ್ಲದಿಲ್ಲ. ಸರಿಯಾಗಿ ಅಗಿಯದೆ ಗಬಗಬ ತಿನ್ನುವುದು, ನೀರು ಕುಡಿಯುವಾಗ ಒಂದಿಷ್ಟು ಗಾಳಿಯನ್ನೂ ಕುಡಿಯುವುದು, ಸಿಕ್ಕಾಪಟ್ಟೆ ತಿನ್ನುವುದು, ಅಜೀರ್ಣ, ಮಲಬದ್ಧತೆ, ಯಕೃತ್‌ನ ತೊಂದರೆಗಳು, ಗರ್ಭಾವಸ್ಥೆಯೇ ಮುಂತಾದ ಹಲವು ಕಾರಣಗಳಿರಬಹುದು ಹೊಟ್ಟೆ ಉಬ್ಬರಿಸುವುದಕ್ಕೆ. ಕೆಲವು ಆಹಾರಗಳು ಹೊಟ್ಟೆಯಲ್ಲಿ ವಾಯುವಿನ ಉಪಟಳವನ್ನು ಉಂಟುಮಾಡುತ್ತವೆ. ಬೀನ್ಸ್‌, ಕಾಳುಗಳು, ಎಲೆಕೋಸು, ಬ್ರೊಕೊಲಿ, ತೀರಾ ಉಪ್ಪಿನ ತಿನಿಸುಗಳು ಈ ಸಾಲಿಗೆ ಸೇರಿವೆ. ಕೆಲವರಿಗೆ ಗೋದಿ ಸೇವಿಸಿದರೆ ಅಥವಾ ಹಾಲು ಕುಡಿದಾಗಲೂ ಹೊಟ್ಟೆ ಊದಿಕೊಂಡು ಪುಗ್ಗಿಯಂತಾಗುತ್ತದೆ. ಹೀಗೆ ಪದೇಪದೆ ಆಗುತ್ತಿದ್ದರೆ ಜೀರ್ಣಾಂಗಗಳ ಸ್ಥಿತಿಗತಿಯನ್ನೊಮ್ಮೆ ವೈದ್ಯರಿಂದ ಪರಿಶೀಲಿಸಿಕೊಳ್ಳುವುದು ಸೂಕ್ತ. ಇರಿಟಬಲ್‌ ಬವೆಲ್‌ ಸಿಂಡ್ರೋಮ್‌, ಜಿಇಆರ್‌ಡಿ ಮುಂತಾದ ತೊಂದರೆಗಳು ಜೀರ್ಣಾಂಗಗಳ ಆರೋಗ್ಯವನ್ನು ಬುಡಮೇಲು ಮಾಡುತ್ತಿದ್ದರೆ, ಅದಕ್ಕೆ ಚಿಕಿತ್ಸೆ ಅಗತ್ಯ. ತಿನ್ನುವ ಆಹಾರದಲ್ಲಿ ಯಾವುದು ಹೊಟ್ಟೆಗೆ ಒಗ್ಗುತ್ತದೆ ಎಂಬ ಬಗ್ಗೆಯೂ ಗಮನ ಬೇಕು. ಜೊತೆಗೆ, ಕಾಳುಗಳನ್ನು ದೀರ್ಘಕಾಲ ನೆನೆಸುವುದು, ನಡುವೆ ಒಂದೆರಡು ಸಾರಿ ನೀರು ಬದಲಾಯಿಸುವುದರಿಂದ ಅದರಲ್ಲಿರುವ ಹೊಟ್ಟೆ ಊದಿಸುವ ರಾಸಾಯನಿಕದ ಅಂಶವನ್ನು ಕಡಿಮೆ ಮಾಡಬಹುದು. ಸೋಡಾದಂಥ ಕಾರ್ಬನ್‌ಯುಕ್ತ ಪೇಯಗಳು ಪರಿಸ್ಥಿತಿಯನ್ನು ಬಿಗಡಾಯಿಸುತ್ತವೆ. ಈ ಅವ‍ಸ್ಥೆಯ ಉಪಶಮನಕ್ಕೆ ಕೆಲವು ಸರಳ ಮನೆಮದ್ದುಗಳು ಅಥವಾ ಚಹ/ಕಷಾಯಗಳು ಇಲ್ಲಿವೆ.

ಪುದೀನಾ ಚಹ

ಇದರಲ್ಲಿರುವ ಮೆಂಥಾಲ್‌ ಅಂಶವು ಸ್ನಾಯುಗಳ ಸಂಕೋಚವನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗಗಳ ಸ್ನಾಯುಗಳನ್ನು ಸಡಿಲ ಮಾಡಿ, ಬಿಗಿದ ಹೊಟ್ಟೆಗೆ ಆರಾಮ ನೀಡುತ್ತದೆ. ಒಂದು ಲೋಟ ನೀರಿಗೆ ಅರ್ಧ ಹಿಡಿ ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ, ಬೆಚ್ಚಗಿರುವಾಗಲೇ ಕುಡಿದರೆ ಹೊಟ್ಟೆಯುಬ್ಬರ, ಗ್ಯಾಸ್‌ ಕಡಿಮೆಯಾಗುತ್ತದೆ.

ಶುಂಠಿ ಚಹ

ಈ ಬೇರು ವಾಯುಹರವೆಂದೇ ಪ್ರಸಿದ್ಧಿ ಪಡೆದಿದೆ. ಹೊಟ್ಟೆಯೊಳಗಿನ ಉರಿಯೂತವನ್ನು ಶಮನ ಮಾಡಿ, ಜೀರ್ಣಾಂಗಗಳ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದಾಗಿ ಅಜೀರ್ಣ, ಹೊಟ್ಟೆನೋವು ಕಡಿಮೆಯಾಗುತ್ತದೆ. ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಕೊಂಚ ಬಿಸಿ ಇರುವಾಗಲೇ ಕುಡಿದು ಆರಾಮ ಪಡೆಯಿರಿ.

ಸೋಂಪಿನ ಚಹ

ಜೀರ್ಣಾಂಗಗಳ ಸಾಮರ್ಥ್ಯ ಸುಧಾರಿಸುವುದಕ್ಕೆ ಮತ್ತು ವಾಯುಪ್ರಕೋಪ ಕಡಿಮೆ ಮಾಡುವುದಕ್ಕೆ ಇದು ಅತ್ಯಂತ ಉಪಯುಕ್ತವಾದ ಪೇಯ. ಇದು ಕರುಳಿನ ಬಾಧೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಜೀರ್ಣಕ್ರಿಯೆಯನ್ನು ಪ್ರಚೋದಿಸಿ ಇನ್ನೂ ಹೆಚ್ಚಿನ ವಾಯುಬಾಧೆ ಆಗದಂತೆ ತಡೆಯುತ್ತದೆ. ಇದನ್ನು ಬಾಯಿಗೆ ಹಾಕಿ ಜಗಿದು ತಿನ್ನಲೂಬಹುದು, ಚಹಾ/ಕಷಾಯಗಳನ್ನೇ ಸೇವಿಸಬೇಕೆಂದಿಲ್ಲ.

ಜೀರಿಗೆ ಕಷಾಯ

ಎಂಥ ಹಠಮಾರಿ ಹೊಟ್ಟೆಯುಬ್ಬರವನ್ನಾದರೂ ಓಡಿಸಬಲ್ಲ ಸಾಮರ್ಥ್ಯ ಜೀರಿಗೆಯದ್ದು. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಜೀರ್ಣಾಂಗಗಳ ಆರೋಗ್ಯವನ್ನು ಸುಧಾರಿಸಿ, ಪಚನಕ್ರಿಯೆಯನ್ನೂ ಉತ್ತಮಗೊಳಿಸಬಹುದು. ಆಸಿಡಿಟಿಯಂಥ ತೊಂದರೆಯಿದ್ದು, ತೇಗು ಬರುತ್ತಿದ್ದರೆ ಇದು ಒಳ್ಳೆಯ ಔಷಧಿ.

ಕೊತ್ತಂಬರಿ ಕಷಾಯ

ಧನಿಯಾ ಬೀಜಗಳ ಸದ್ಗುಣಗಳು ಒಂದೆರಡೇ ಅಲ್ಲ. ಜೀರ್ಣಾಂಗಗಳ ಉರಿಯೂತವನ್ನು ಕಡಿಮೆ ಮಾಡಿ, ಅವುಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ. ಜೊತೆಗೆ ಹೊಟ್ಟೆಯಲ್ಲಿನ ಕಚ್ಚುವ-ಚುಚ್ಚುವ ನೋವನ್ನು ಕಡಿಮೆ ಮಾಡಿ, ಬಿಡುಗಡೆಯ ಭಾವ ಮೂಡಿಸುತ್ತದೆ.

ಇದನ್ನೂ ಓದಿ: Seedling Potatoes: ಮೊಳಕೆ ಬಂದ ಆಲೂಗಡ್ಡೆಯನ್ನು ತಿನ್ನೋದು ಒಳ್ಳೆಯದಲ್ಲ, ಯಾಕೆ ಗೊತ್ತೇ?

ದಾಲ್ಚಿನ್ನಿ ಚಹ

ಸಿನ್ನಮನ್‌ ಚಹ ಹಲವು ದೇಶಗಳಲ್ಲಿ ಪ್ರಸಿದ್ಧ. ಗಾಢವಾದ ಸುವಾಸನೆಯಿಂದಲೇ ಸೆಳೆಯುವ ಈ ಚಹ ತನ್ನ ಪರಿಮಳಕ್ಕೆ ಮಾತ್ರವಲ್ಲ, ಜೀರ್ಣಕಾರಿ ಗುಣಗಳಿಗೂ ಹೆಸರುವಾಸಿ. ತಿಂದಿದ್ದು ಪಚನವಾಗುವಂತೆ ಮಾಡಿ, ಅಜೀರ್ಣದಿಂದ ಹೊಟ್ಟೆಯುಬ್ಬರಿಸುವುದನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೂ ಆರಾಮ ನೀಡಿ, ಒತ್ತಡ ಕಡಿಮೆ ಮಾಡುತ್ತದೆ.

Exit mobile version