Site icon Vistara News

Health Tips: ಮೋದಿ ಆರೋಗ್ಯದ ಹಿಂದಿದೆ ‘ನುಗ್ಗೆಕಾಯಿ ಮಹಿಮೆ’; ತೂಕ ಇಳಿಕೆಗೆ ನುಗ್ಗೆ ಹೇಗೆ ನೆರವು?

paratha

paratha

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ರಾಜಕಾರಣದಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಒಂದು ದಿನವೂ ರಜೆ ಮಾಡದೆ ಅವರು ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ಮಧ್ಯೆ ಚುನಾವಣೆ ಇದ್ದರೆ ದೇಶಾದ್ಯಂತ ಓಡಾಡಿ ಪ್ರಚಾರದಲ್ಲಿಯೂ ತೊಡಗಿಕೊಳ್ಳುತ್ತಾರೆ. ಹೀಗೆ ಸದಾ ಕ್ರಿಯಾಶೀಲರಾಗಿರಲು ಅವರ ಜೀವನ ಶೈಲಿಯೂ ಕಾರಣ. ಮೋದಿ ಯೋಗ, ಧ್ಯಾನ ಮತ್ತು ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವ ಪೂಲಕ ಸದಾ ಫಿಟ್‌ ಆಗಿರುತ್ತಾರೆ. ಮೋದಿ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರದ ಭಾಗವಾಗಿ ನುಗ್ಗೆ ಪರೋಟಗಳನ್ನು (Moringa parathas) ಸೇವಿಸುವುದನ್ನು ಉಲ್ಲೇಖಿಸಿದ್ದಾರೆ. ಹಾಗಾದರೆ ನುಗ್ಗೆ ಹೇಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ? ತೂಕ ಇಳಿಕೆಗೆ ಇದು ಹೇಗೆ ನೆರವಾಗುತ್ತದೆ? ಎನ್ನುವುದರ ವಿವರ ಇಲ್ಲಿದೆ (Health Tips).

ಪೋಷಕಾಂಶಗಳಿಂದ ಸಮೃದ್ಧ

ನುಗ್ಗೆ ಎಲೆ ಜೀವಸತ್ವಗಳು (ಎ, ಸಿ, ಇ ಮತ್ತು ಬಿ-ಕಾಂಪ್ಲೆಕ್ಸ್), ಖನಿಜಗಳು (ಕ್ಯಾಲ್ಶಿಯಂ, ಮೆಗ್ನೀಶಿಯಮ್, ಪೊಟ್ಯಾಶಿಯಮ್) ಮತ್ತು ಪ್ರೋಟೀನ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವು ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತವೆ. ಮಾತ್ರವಲ್ಲ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತವೆ. ನುಗ್ಗೆ ನೈಸರ್ಗಿಕವಾಗಿ ಹಸಿವನ್ನು ನಿಗ್ರಹಿಸುತ್ತದೆ. ಇದರಲ್ಲಿ ಫೈಬರ್ ಅಂಶಗಳು ಧಾರಾಳವಾಗಿವೆ. ಜತೆಗೆ ಹೆಚ್ಚಿನ ಕ್ಯಾಲರಿಯನ್ನು ನಾಶ ಮಾಡುತ್ತದೆ.

ಕೊಬ್ಬು ನಿಯಂತ್ರಿಸುತ್ತದೆ

ನುಗ್ಗೆ ಸಕ್ಕರೆ ಅಂಶಗಳನ್ನು ಹೊಸ ಕೊಬ್ಬಿನ ಕೋಶಗಳಾಗಿ ಪರಿವರ್ತಿಸುವುದನ್ನು ತಡೆಯುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್‌ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದರಲ್ಲಿನ ಮೆಥಿಯೋನಿನ್ ಕೊಬ್ಬನ್ನು ಹೀರಿಕೊಳ್ಳುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಹೊಟ್ಟೆಯ ಕೊಬ್ಬು ನೈಸರ್ಗಿಕವಾಗಿ ಕರಗುತ್ತದೆ. ದೇಹವು ಆಹಾರವನ್ನು ಪರಿಣಾಮಕಾರಿಯಾಗಿ ಹೀರಿಕೊಂಡಾಗ ಮತ್ತು ಸರಿಯಾಗಿ ಕರಗಿದಾಗ ಸಹಜವಾಗಿ ತೂಕ ಕಡಿಮೆಯಾಗುತ್ತದೆ.

ಸಂಶೋಧನೆ ಏನು ಹೇಳುತ್ತದೆ?

ಅಧಿಕ ತೂಕ ಹೊಂದಿದ 41 ಮಂದಿಗೆ 8 ವಾರಗಳ ಕಾಲ ಒಂದೇ ರೀತಿಯ ಆಹಾರ ಮತ್ತು ವ್ಯಾಯಾಮ ಒದಗಿಸಿ ಅಧ್ಯಯನ ನಡೆಸಲಾಗಿದೆ. ಜತೆಗೆ ಅವರಿಗೆ 900 ಮಿಗ್ರಾಂ ನುಗ್ಗೆಕಾಯಿ, ಅರಿಶಿನ ಮತ್ತು ಕರಿಬೇವಿನ ಎಲೆಗಳ ಪೂರಕ ಮಿಶ್ರಣವನ್ನು ನೀಡಲಾಗಿತ್ತು. ಪರಿಣಾಮ ಅವರು ಸುಮಾರು 4.8 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಸಂಶೋಧನಾಕಾರರು ತಿಳಿಸಿದ್ದಾರೆ. 2021ರಲ್ಲಿ ನಡೆಸಿದ ಇನ್ನೊಂದು ಅಧ್ಯಯನದಲ್ಲಿ ನುಗ್ಗೆ ಎಲೆಯಲ್ಲಿನ ಸಾರವು ಬೊಜ್ಜು ವಿರೋಧಿ ಗುಣ ಹೊಂದಿದೆ ಎನ್ನುವುದು ಸಾಬೀತಾಗಿದೆ.

ಆ್ಯಂಟಿ ಆ್ಯಕ್ಸಿಡೆಂಟ್‌ ಗುಣ

ನುಗ್ಗೆಕಾಯಿಯಲ್ಲಿ ಕ್ವೆರ್ಸೆಟಿನ್, ಕ್ಲೋರೊಜೆನಿಕ್ ಆಮ್ಲ ಮತ್ತು ಬೀಟಾ-ಕ್ಯಾರೋಟಿನ್‌ನಂತಹ ಆ್ಯಂಟಿ ಆ್ಯಕ್ಸಿಡೆಂಟ್‌ ಗುಣಗಳಿವೆ. ಇದು ಉರಿಯೂತದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೊಬ್ಬು ಹೀರಿಕೊಳ್ಳುವ ನಾರಿನಾಂಶ

ಮೊದಲೇ ಹೇಳಿದಂತೆ ನುಗ್ಗೆಕಾಯಿಯಲ್ಲಿ ನಾರಿನಾಂಶ ಅಧಿಕವಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಮಾಡುತ್ತದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು ಸರಿಯಾದ ಪೋಷಕಾಂಶ ಹೀರಿಕೊಳ್ಳಲು ಮತ್ತು ತ್ಯಾಜ್ಯವನ್ನು ಸಮರ್ಪಕವಾಗಿ ಹೊರ ಹಾಕಲು ನೆರವಾಗುತ್ತದೆ. ಇದು ತೂಕ ಇಳಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: Drumstick Leaves Benefits: ಸರ್ವಗುಣ ಸಂಪನ್ನ ನುಗ್ಗೆಸೊಪ್ಪಿನ ಮಹಾತ್ಮೆ!

ಎಚ್ಚರಿಕೆ ವಹಿಸಿ

ನುಗ್ಗೆ ಸೇವನೆಯಿಂದ ಮಾತ್ರ ತೂಕ ಇಳಿಕೆಯಾಗುವುದಿಲ್ಲ ಎನ್ನುವುದನ್ನು ಗಮನಿಸಿ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆ ಸೇರಿದಂತೆ ಸಾಕಷ್ಟು ಅಂಶಗಳ ಸಂಯೋಜನೆಗಳ ಜತೆಗೆ ನುಗ್ಗೆಯ ಸೇವನೆ ಕೊಬ್ಬು ಕರಗಲು ನೆರವಾಗುತ್ತದೆ. ತೂಕ ಇಳಿಕೆಗಾಗಿ ಒಮ್ಮಿಂದೊಮ್ಮೆಗೆ ಅತಿಯಾದ ನುಗ್ಗೆಯ ಬಳಕೆ ಸಲ್ಲ. ಮಧುಮೇಹಿಗಳು, ಗರ್ಭಿಣಿಯರು ಅಥವಾ ಇತರ ಅರೋಗ್ಯ ಸಮಸ್ಯೆ ಹೊಂದಿರುವವರು ನುಗ್ಗೆ ಸೇವನೆಯ ಮುನ್ನ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯ. ನಿಯಮಿತವಾಗಿ ತೆಗೆದುಕೊಳ್ಳುವ ಔಷಧಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version