Site icon Vistara News

Health Tips: ಇತ್ತೀಚೆಗೆ ಸಾಮಾನ್ಯವಾದ ಅಸ್ಥಿರಂಧ್ರತೆ ಅಥವಾ ಆಸ್ಟಿಯೋಪೋರೋಸಿಸ್‌ ಸಮಸ್ಯೆಗೆ ಪರಿಹಾರವೇ ಇಲ್ಲವೇ?

osteoporosis

ಆಸ್ಟಿಯೋಪೋರೋಸಿಸ್‌ (Osteoporosis) ಅಂದರೆ, ಅಸ್ಥಿರಂಧ್ರತೆ ಅಥವಾ ಮೂಳೆಗಳು ದುರ್ಬಲಗೊಳ್ಳುವ ಸಮಸ್ಯೆ. ಮೂಳೆಗಳಲ್ಲಿ ಸಾಂದ್ರತೆ (bone health) ಕಡಿಮೆಯಾಗಿ, ಮೂಳೆಗಳು ಬಿರುಕುಬಿಡುವುದು ಹಾಗೂ ಬಹುಬೇಗನೆ ಮುರಿಯುವ ಸಮಸ್ಯೆ ಇದರದ್ದು. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಅಥವಾ ಮಹಿಳೆಯರಲ್ಲಿ ಮೆನೋಪಾಸ್‌ ನಂತರ ಕಾಣಿಸಿಕೊಳ್ಳುವ ಈ ಸಮಸ್ಯೆ, ಇಂದು ವಯಸ್ಸಿನ ಹಂಗಿಲ್ಲದೆ ಕಾಣಿಸಿಕೊಳ್ಳುತ್ತಿದೆ.

ಆಸ್ಟಿಯೋಪೊರೋಸಿಸ್‌ (Osteoporosis) ಇರುವ ಮಂದಿಗೆ ಇಂಥದ್ದೇ ಆದ ಸಮಸ್ಯೆ ಎಂಬುದಿರುವುದಿಲ್ಲ. ಆರಂಭದಲ್ಲಿ ಅಸಲಿಗೆ ಈ ಸಮಸ್ಯೆ ಗೊತ್ತೂ ಆಗುವುದಿಲ್ಲ. ಮೂಳೆಗಳು ಅವುಗಳ ಪಾಡಿಗೆ ದುರ್ಬಲಗೊಳ್ಳುವುದರ ಸೂಚನೆ ಆರಂಭದಲ್ಲಂತೂ ಗೊತ್ತೇ ಆಗುವುದಿಲ್ಲ. ಆದರೆ, ಶಕ್ತಿಹೀನತೆಯಂತಹ ಸಮಸ್ಯೆಗಳು, ಸೊಂಟನೋವು, ಬೆನ್ನುನೋವು, ಕುತ್ತಿಗೆಯ ಸಮೀಪ ಗೂನಿನಂತಾಗುವುದು, ಬೆನ್ನುಹುರಿ ಸಮಸ್ಯೆಗಳು, ಸಣ್ಣಪುಟ್ಟ ಏಟುಗಳಿಗೂ ಆಗಾಗ ಮೂಳೆ ಮುರಿಯುವುದು (osteoporosis problems) ಇತ್ಯಾದಿಗಳು ಆಗಬಹುದು. ಕಾಲಕ್ರಮೇಣ ಸಮಸ್ಯೆ ಉಲ್ಬಣಗೊಂಡಾಗ ಎತ್ತರ ಕಡಿಮೆಯಾಗಬಹುದು. ವೈದ್ಯರ ಬಳಿ ಹೋದಾಗ ಮಾತ್ರವೇ ಈ ಸಮಸ್ಯೆಯ ಬಗ್ಗೆ ಅರಿವಾಗುತ್ತದೆ.

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಹಾರ್ಮೋನಿನ ಏರುಪೇರು (hormone imbalance) ಹಾಗೂ ದೇಹದ ಇನ್ನಿತರ ವಿಚಾರಕ್ಕೆ ಸಂಬಂಧಿಸಿ ಇದು ಹೀಗಾಗಬಹುದು. ಅದಕ್ಕಾಗಿಯೇ ಮಹಿಳೆಯರು ಮೆನೋಪಾಸ್‌ (menopause) ನಂತರ ಕ್ಯಾಲ್ಶಿಯಂ ಬಗೆಗೆ ಹೆಚ್ಚಿನ ಗಮನ ಹರಿಸಬೇಕು. ಇದಲ್ಲದೆ, ದೇಹ ಪ್ರಕೃತಿ, ಅನುವಂಶೀಯತೆ, ಕೆಲವು ರೋಗಗಳ ಇತಿಹಾಸ ಇರುವುದರಿಂದ, ಸ್ಟೀರಾಯ್ಡ್‌ ಸೇವನೆ ಮಾಡಿರುವುದರಿಂದ, ದಿನವಿಡೀ ಕುಳಿತು ಮಾಡುವ ವೃತ್ತಿಯಲ್ಲಿರುವುದರಿಂದ ಹೀಗೆ ಹತ್ತು ಹಲವು ಕಾರಣಗಳು ಇಂದು ಈ ಸಮಸ್ಯೆ ಹೆಚ್ಚಾಗುತ್ತಿರಲು ಕಾರಣವಾಗಿದೆ.

ಇತ್ತೀಚೆಗೆ ಇಂಥ ಸಮಸ್ಯೆಗಳು ಹೆಚ್ಚಾಗುತ್ತಿರುವುದರಿಂದ ಈ ಕೆಲವು ಮುಂಜಾಗರೂಕತೆಗಳಿಂದ (Health tips) ಈ ಸಮಸ್ಯೆ ಬರದಂತೆ ಮೊದಲೇ ಎಚ್ಚರಿಕೆ ವಹಿಸಬಹುದು. ಅಷ್ಟೇ ಅಲ್ಲ, ಇದನ್ನು ಗುಣಪಡಿಸುವ ಯಾವುದೇ ವಿಧಾನಗಳು ಇಲ್ಲದಿದ್ದರೂ, ಈ ಸಮಸ್ಯೆ ಬಂದ ಮೇಲೂ ಇದು ಹೆಚ್ಚಾಗದಂತೆ ತಡೆಗಟ್ಟಬಹುದು. ಹಾಗಾಗಿ, ಶಿಸ್ತುಬದ್ಧ ಜೀವನಕ್ರಮ ಹಾಗೂ ಇದಕ್ಕು ಪೂರಕ ಆಹಾರ ಕ್ರಮ (osteoporosis remedy) ಅತ್ಯಗತ್ಯ.

1. ಕ್ಯಾಲ್ಶಿಯಂ ಹಾಗೂ ವಿಟಮಿನ್‌ ಡಿ ಹೆಚ್ಚಿರುವ ಆಹಾರಗಳನ್ನು ಸೇವಿಸಲು ಆರಂಭಿಸಿ. ಹಾಳು, ಮೀನು, ಹಸಿರು ತರಕಾರಿಗಳನ್ನು ಸೇವಿಸಲು ಮರೆಯಬೇಡಿ. ಇವುಗಳು ನಿಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡಿ ಅವುಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಮೂಳೆ ಇನ್ನೂ ಹೆಚ್ಚಿನ ಸಮಸ್ಯೆಗಳಿಗೆ ಈಡಾಗುವುದು ತಪ್ಪುತ್ತದೆ. ಹಾಗಾಗಿ ಆಹಾರದ ಬಗೆಗೆ ಗಮನ ಇರುವುದು ಅತ್ಯಂತ ಅವಶ್ಯಕ.

2. ವ್ಯಾಯಾಮ ಕೂಡಾ ಅತ್ಯಂತ ಅವಶ್ಯಕವಾದದ್ದು. ಮೂಳೆ ಸಮಸ್ಯೆ ಇದೆ, ಮೂಳೆಗಳು ದುರ್ಬಲಗೊಂಡಿವೆ ಎಂದುಕೊಂಡು, ವ್ಯಾಯಾಮವನ್ನು ನಿಲ್ಲಿಸುವುದು ಇತ್ಯಾದಿ ಮಾಡಬೇಡಿ. ವೈದ್ಯರ ಸಲಹೆ ಪಡೆದು ಎಂತಹ ವ್ಯಾಯಾಮಗಳನ್ನು ಮಾಡಬಹುದು ಇತ್ಯಾದಿಗಳ ನೆರವು ಪಡೆಯಿರಿ. ಶಕ್ತಿ ಹೆಚ್ಚಿಸುವ ವ್ಯಾಯಾಮಗಳು, ಕಾರ್ಡಿಯೋ ಇತ್ಯಾದಿಗಳನ್ನು ಮಾಡಬಹುದಾಗಿದೆ. ಆದರೂ ಪ್ರತಿಯೊಬ್ಬರ ವಯಸ್ಸು ಹಾಗೂ ಶಕ್ತಿ ಸಾಮರ್ಥ್ಯವನ್ನು ಹೊಂದಿಕೊಂಡು ವೈದ್ಯರ ಸಲಹೆಯ ಮೂಲಕ ಮುಂದುವರಿಯಬಹುದು.

ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!

3. ಮೂಳೆಗಳನ್ನು ಬಲಗೊಳಿಸುವ ಬಗೆಯ ಆಟಗಳನ್ನು ಆಡಬಹುದು. ಮುಖ್ಯವಾಗಿ ಟೆನಿಸ್‌, ಬ್ಯಾಡ್ಮಿಂಟನ್‌ ಇತ್ಯಾದಿಗಳು ಒಳ್ಳೆಯದು. ನೊಯಮಿತವಾಗಿ ಇವುಗಳನ್ನು ಆಡುವ ಮೂಲಕವೂ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ.

4. ಎಲ್ಲಕ್ಕಿಂತ ಬಹುಮುಖ್ಯವಾಗಿ ಆಲ್ಕೋಹಾಲ್‌ ಅಥವಾ ಮದ್ಯಪಾನದಿಂದ ದೂರವಿರಿ. ಮದ್ಯಪಾನ ಮಾಡುವುದರಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಹಾಗೂ ಮೂಳೆಯ ಶಕ್ತಿಯನ್ನು ಕುಂದಿಸುತ್ತದೆ. ಆಸ್ಟಿಯೋಪೋರೋಸಿಸ್‌ಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚು. ಹಾಗಾಗಿ, ಮದ್ಯಪಾನಿಗಳಲ್ಲಿ ಮೂಳೆಗಳು ದುರ್ಬಲಗೊಂಡಿರುವುದು ಹೆಚ್ಚು.

5. ಧೂಮಪಾನದ ಅಭ್ಯಾಸವಿದ್ದರೆ, ಅದನ್ನೂ ಬಿಡುವುದು ಒಳ್ಳೆಯದು. ಯಾಕೆಂದರೆ ಧೂಮಪಾನದಿಂದಲೂ ಈ ಸಮಸ್ಯೆ ಹೆಚ್ಚಾಗುತ್ತದೆ. ಧೂಮಪಾನದಿಂದ ಮೂಳೆಗಳು ದುರ್ಬಲಗೊಳ್ಳೆವುದಷ್ಟೇ ಅಲ್ಲ, ಮೂಳೆಗಳನ್ನು ಬೆಳೆಸುವ ಅಂಗಾಶಗಳ ಬೆಳವಣಿಗೆಯೂ ಕುಂಟೀತವಾಗುತ್ತದೆ.

ಇದನ್ನೂ ಓದಿ: Health Tips: ಎಸಿ ರೂಮಿನೊಳಗೆ ಕೂರುವ ಅಭ್ಯಾಸ ಅತಿಯಾದರೆ ಈ ಸಮಸ್ಯೆಗಳೂ ಬರಬಹುದು, ಎಚ್ಚರ!

Exit mobile version