ಮೊಟ್ಟೆಯಲ್ಲಿ ಅತ್ಯಂತ ಹೆಚ್ಚು ಪ್ರೊಟೀನ್ ಇದೆ ಎಂಬ ಸತ್ಯ ಎಲ್ಲ ಫಿಟ್‌ನೆಸ್ ಪ್ರಿಯರಿಗೂ ಗೊತ್ತಿರುವ ಸತ್ಯ. ಫಿಟ್‌ನೆಸ್ ಪ್ರಿಯರು ಫಿಟ್ ಆಗಿರಲು ನಿತ್ಯವೂ ಮೊಟ್ಟೆ ತಿನ್ನುವುದು ಸಾಮಾನ್ಯ. ತೂಕ ಇಳಿಕೆಗೆ ಫಿಟ್ ಆಗಿರಲು ಪ್ರೊಟೀನ್‌ಯುಕ್ತ ಆಹಾರ (protein rich food) ದೇಹಕ್ಕೆ ಬೇಕೇ ಬೇಕು. ಒಂದು ಮೊಟ್ಟೆಯಲ್ಲಿ ಆರು ಗ್ರಾಂನಷ್ಟು ಪ್ರೊಟೀನ್ ಇದ್ದರೆ, 100 ಗ್ರಾಂ ಮೊಟ್ಟೆಯಲ್ಲಿ 13 ಗ್ರಾಂ ಪ್ರೊಟೀನ್ ಇರುತ್ತದೆ. ಆದರೆ, ಮೊಟ್ಟೆ ತಿನ್ನಲು ಇಷ್ಟಪಡದ ಸಸ್ಯಾಹಾರಿಗಳಿಗೆ ಮೊಟ್ಟೆಯನ್ನು ಹೊರತುಪಡಿಸಿದರೆ, ಸುಲಭವಾಗಿ ನಿತ್ಯದ ಬಳಕೆಗೆ ಸಿಗುವ ಪ್ರೊಟೀನ್‌ಯುಕ್ತ ಸರಳ ಆಹಾರ ಸಿಗುವುದು ಕಷ್ಟ ಎಂಬ ನಂಬಿಕೆಯೇ ಹೆಚ್ಚು ಜನಜನಿತ. ಹಾಗಾದರೆ ಸಸ್ಯಾಹಾರಿಗಳಿಗೆ ನಿತ್ಯವೂ ತಿನ್ನಬಹುದಾದ ಪ್ರೊಟೀನ್‌ನ ಪರ್ಯಾಯ ಮೂಲಗಳೇನು ಎಂಬುದನ್ನು ತಿಳಿಯೋಣ ಬನ್ನಿ.
1. ಸೋಯಾಬೀನ್: ಬಹಳಷ್ಟು ಮಂದಿ ಸೋಯಾಬೀನ್ ತಿನ್ನಲು ಇಷ್ಟಪಡುವುದಿಲ್ಲ. ಆದರೆ, ಸಸ್ಯಮೂಲದ ಪ್ರೊಟೀನ್‌ಗಳ ಪೈಕಿ ಅತ್ಯಂತ ಹೆಚ್ಚು ಪ್ರೊಟೀನ್ ಇರುವ ಆಹಾರಗಳಲ್ಲಿ ಸೋಯಾಬೀನ್ ಮುಂಚೂಣಿಯಲ್ಲಿ ನಿಲ್ಲುತ್ತದೆ. 100 ಗ್ರಾಂ ಸೋಯಾಬೀನ್‌ನಲ್ಲಿ 36 ಗ್ರಾಂ ಪ್ರೊಟೀನ್ ಇದೆಯಂತೆ. ಹಾಗಾಗಿ ಇದು ಮೊಟ್ಟೆ ತಿನ್ನದ ಮಂದಿಗೆ ಅತ್ಯುತ್ತಮ ಪರ್ಯಾಯ ಆಹಾರ. ಸೋಯಾಹಾಲು, ಸೋಯಾಬೀನ್ ಕರಿ ಇತ್ಯಾದಿಗಳನ್ನು ವಾರಕ್ಕೊಮ್ಮೆಯಾದರೂ ಸೇವಿಸಬಹುದು.
2. ಕಾಬೂಲಿ ಕಡಲೆ ಅಥವಾ ಚೆನ್ನಾ: ಚೆನ್ನಾ ಕಾಳಿನಲ್ಲಿ ಅತ್ಯುತ್ತಮ ಪ್ರೊಟೀನ್ ಇದೆ. 100 ಗ್ರಾಂ ಕಾಳಿನಲ್ಲಿ 19 ಗ್ರಾಂ ಪ್ರೊಟೀನ್ ಇರುವುದರಿಂದ ಇದೂ ಕೂಡಾ ಮೊಟ್ಟೆಯಂತೆಯೇ ಅತ್ಯುತ್ತಮ ಪ್ರೊಟೀನ್ ಮೂಲ. ಚೆನ್ನಾ ಉಸಲಿ, ಚೆನ್ನಾ ಮಸಾಲಾ ಮತ್ತಿತರ ಪದಾರ್ಥಗಳನ್ನು ಆಗಾಗ ತಿನ್ನುವ ಮೂಲಕ ಅಥವಾ ಕಾಳನ್ನು ನೆನೆಸಿ ಬೇಯಿಸಿ ತಿನ್ನುವ ಮೂಲಕ, ಮೊಳಕೆ ಬರಿಸಿ ಸೇವಿಸುವ ಮೂಲಕ ಪ್ರೊಟೀನ್ ಪಡೆಯಬಹುದು.
3. ಹುರುಳಿಕಾಳು ಅಥವಾ ಹುರುಳಿಕಾಳಿನ ಹಿಟ್ಟು: ಹುರುಳಿ ಕಾಳೂ ಕೂಡಾ ಅತ್ಯಂತ ಹೆಚ್ಚು ಪ್ರೊಟೀನ್ ಇರುವ ಇನ್ನೊಂದು ಧಾನ್ಯ. ಇದರ ಹಿಟ್ಟಿನಿಂದ ಮಾಡಿದ ಚಪಾತಿ, ಪ್ಯಾನ್‌ಕೇಕ್, ರೋಟಿ, ಅಥವಾ ಹುರುಳಿಕಾಳಿನ ಸಾರು ಇತ್ಯಾದಿಗಳ ಮೂಲಕ ಹುರುಳಿಕಾಳನ್ನು ಸೇವಿಸಬಹುದು. 100 ಗ್ರಾಂ ಹುರುಳಿಕಾಳಿನಲ್ಲಿ 132 ಗ್ರಾಂಗಳಷ್ಟು ಪ್ರೊಟೀನ್ ಇದೆ.
ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಕಾಡುವ ಎದೆಯುರಿಗೆ ಈ ಮಸಾಲೆ ಪದಾರ್ಥಗಳೇ ಕಾರಣ!
4. ಚಿಯಾ ಬೀಜಗಳು: ಪುಟಾಣಿ ಚಿಯಾ ಬೀಜಗಳು ತನ್ನಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್, ಒಮೆಗಾ 3 ಫ್ಯಾಟಿ ಆಸಿಡ್‌ಗಳನ್ನೂ ಸಾಕಷ್ಟು ಹೊಂದಿರುವ ಅತ್ಯುತ್ತಮ ಆಹಾರ. ನಿತ್ಯವೂ ಚಿಯಾ ಬೀಜಗಳ ಸೇವನೆಯಿಂದ ದೇಹಕ್ಕೆ ಪ್ರೊಟೀನ್ ಕೂಡಾ ಸಾಕಷ್ಟು ಲಭ್ಯವಾಗುತ್ತದೆ. 100 ಗ್ರಾಂ ಚಿಯಾ ಬೀಜಗಳಲ್ಲಿ 17 ಗ್ರಾಂ ಪ್ರೊಟೀನ್ ಇದೆಯಂತೆ. ಚಿಯಾ ಬೀಜದ ಪುಡ್ಡಿಂಗ್, ಚಿಯಾ ಬೀಜಗಳ ಐಸ್‌ಕ್ಯಾಂಡಿ, ನಿಂಬೆಹಣ್ಣಿನ ಜ್ಯೂಸ್‌ಗೆ ಚಿಯಾ ಬೀಜಗಳನ್ನು ಸೇರಿಸುವುದು, ಸಲಾಡ್ ಜೊತೆಗೆ ಸೇರಿಸುವುದು ಮತ್ತಿತರ ವಿಧಾನಗಳಿಂದ ಚಿಯಾ ನಿಮ್ಮ ಹೊಟ್ಟೆ ಸೇರುವಂತೆ ಮಾಡಬಹುದು. ಅಥವಾ ಸರಳವಾಗಿ ನೀರಿನಲ್ಲಿ ಒಂದರ್ಧ ಗಂಟೆ ನೆನೆ ಹಾಕಿ ಹಾಗೆಯೇ ಸೇವಿಸಬಹುದು.
5. ಕ್ವಿನೋವಾ: ಕ್ವಿನೋವಾ ಬೀಜಗಳೂ ಕೂಡಾ ಇತ್ತೀಚೆಗಿನ ದಿನಗಳಲ್ಲಿ ತೂಕ ಇಳಿಕೆ ಮಾಡುವ ಆಸಕ್ತರ ವಲಯದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿರುವ ಆಹಾರ. 100 ಗ್ರಾಂ ಕ್ವಿನೋವಾದಲ್ಲಿ 16 ಗ್ರಾಂಗಳಷ್ಟು ಪ್ರೊಟೀನ್ ಇದೆ. ಇದರಲ್ಲಿ 9 ಬಗೆಯ ಅಮೈನೋ ಆಸಿಡ್‌ಗಳಿದ್ದು ಇದೊಂದು ಸಂಪೂರ್ಣ ತೂಕ ಇಳಿಕೆಯ ಆಹಾರ ಎಂದು ಪರಿಗಣಿಸಲ್ಪಡುತ್ತದೆ.
ಇದನ್ನೂ ಓದಿ: Food Tips: ನೆನಪಿಡಿ, ತಾಮ್ರದ ಪಾತ್ರೆಯಲ್ಲಿ ಈ ಎಲ್ಲ ಅಡುಗೆಗಳನ್ನು ಮಾಡಬೇಡಿ!