ನಮ್ಮ ಮನಸ್ಸು ಹಾಗೂ ದೇಹಕ್ಕೆ ಪರಸ್ಪರ ಸಂಬಂಧವಿದೆ ಎಂಬ ನಂಬಿಕೆ ನಮ್ಮದು. ಆದರೆ, ನಮ್ಮ ಬೇರೆ ಬೇರೆ ಭಾವನೆಗಳಿಗೂ (emotions) ನಮ್ಮ ದೇಹದ ಒಂದೊಂದು ಅಂಗಕ್ಕೂ ಸಂಬಂಧವಿರುವುದನ್ನು ಅರ್ಥ ಮಾಡಿಕೊಳ್ಳಲು ನಮಗೆ ಸ್ವಲ್ಪ ಹೆಚ್ಚೇ ಸಮಯ ಬೇಕು. ಯಾಕೆಂದರೆ ಇದರ ಅಸ್ತಿತ್ವವನ್ನು ಒಪ್ಪಿಕೊಂಡರೂ ಪ್ರತಿಯೊಂದು ಭಾವನೆಗೂ ಇಂಥ ಅಂಗಕ್ಕೂ ಸಂಬಂಧ ಇದೆ ಎಂಬುದನ್ನು ನಾವು ಹೆಚ್ಚು ಯೋಚಿಸುವುದಿಲ್ಲ. ಆದರೆ, ಈ ಬಗ್ಗೆ ಸಾಕಷ್ಟು ಸಂಶೋಧನೆಗಳೂ ನಡೆದಿದ್ದು, ಇವೆಲ್ಲವೂ, ಮನುಷ್ಯನ ಬೇರೆ ಬೇರೆ ಭಾವನೆಗಳಿಗೂ ದೇಹದ ವಿವಿಧ ಅಂಗಗಳೊಂದಿಗೆ ಸಂಬಂಧ ಇದೆ ಎಂಬುದನ್ನು ಪುಷ್ಟೀಕರಿಸಿವೆ. ಹಾಗಾದರೆ, ಯಾವ ಭಾವನೆಗೆ ಯಾವ ಅಂಗ ನೇರವಾಗಿ ಸಂಬಂಧಿಸಿದೆ ಎಂಬುದನ್ನು ನೋಡೋಣ.
೧. ಸಂತೋಷ- ಹೃದಯ: ಚೀನಾದ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಪ್ರಕಾರ ಸಂತೋಷ, ಖುಷಿ ಹಾಗೂ ಉತ್ಸಾಹಗಳಿಗೆ ನಮ್ಮ ಹೃದಯದ ಜೊತೆ ನೇರಾನೇರ ಸಂಬಂಧ ಇದೆ ಎಂಬುದನ್ನು ಬಲವಾಗಿ ನಂಬುತ್ತಾರೆ. ಹೆಚ್ಚಿನ ಉತ್ಸಾಹ ನಮ್ಮ ಹೃದಯಬಡಿತವನ್ನು ಹೆಚ್ಚು ಮಾಡುತ್ತದೆ. ಖುಷಿಯ ನೇರ ಪರಿಣಾಮ ನಮಗೆ ಹೃದಯದ ಮೂಲಕ ಕಾಣುತ್ತದೆ ಹಾಗೂ ಅರಿವಿಗೆ ಬರುತ್ತದೆ ಕೂಡಾ.
೨. ಸಿಟ್ಟು- ಯಕೃತ್ತು: ಕೋಪ, ಸಿಟ್ಟು ಎಂಬ ಭಾವನೆ ನೇರವಾಗಿ ನಮ್ಮ ಪಿತ್ತಕೋಶ ಅಂದರೆ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದಂತೆ. ನಮ್ಮಲ್ಲಿರುವ ಸಿಟ್ಟು ಎಂಬ ಭಾವನೆಯು ಪಿತ್ತಕೋಶದಲ್ಲಿ ಇರುತ್ತದಂತೆ. ನಮಗೆ ಸಿಟ್ಟು ಬಂದಾಗ ಹೆಚ್ಚು ಪಿತ್ತರಸ ಉತ್ಪತ್ತಿಯಾಗುವುದಷ್ಟೇ ಅಲ್ಲ, ಪಿತ್ತಕೋಶದ ಆರೋಗ್ಯವೂ ಹದಗೆಡುತ್ತದಂತೆ. ಹಾಗಾಗಿ, ಪಿತ್ತಕೋಶ ಅಂದರೆ ನಮ್ಮ ಲಿವರ್ ಚೆನ್ನಾಗಿರಬೇಕೆಂದರೆ ನಾವು ಕೋಪ ನಿಗ್ರಹಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಸಿಟ್ಟು ತಲೆನೋವನ್ನು ತರುವುದಷ್ಟೇ ಅಲ್ಲ ನಮ್ಮ ಹೊಟ್ಟೆಯ ಆರೋಗ್ಯವನ್ನೂ ಹದಗೆಡಿಸುತ್ತದೆ.
ಇದನ್ನೂ ಓದಿ: Health Tips | ಈ ಕಾಂಬಿನೇಷನ್ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!
೩. ನೋವು/ ಹತಾಶೆ- ಶ್ವಾಸಕೋಶ: ಚೀನಾದ ಸಾಂಪ್ರದಾಯಿಕ ವೈದ್ಯಪದ್ಧತಿಗಳು ನಂಬುವಂತೆ ನೋವು, ದುಃಖ, ಹತಾಶೆಗಳು ಹೆಚ್ಚು ಪ್ರಭಾವ ಬೀರುವುದು ನಮ್ಮ ಶ್ವಾಸಕೋಶದ ಮೇಲಂತೆ. ಅಷ್ಟೇ ಅಲ್ಲ, ದೊಡ್ಡ ಕರುಳಿನ ಮೇಲೂ ದುಃಖ ಅತ್ಯಂತ ಹೆಚ್ಚು ಪರಿಣಾಮ ಬೀರುತ್ತದಂತೆ. ಹಾಗಾಗಿಯೇ ಅತೀವ ದುಃಖವಾದಾಗ ಹತಾಶೆಯಲ್ಲಿದ್ದಾಗ ತಲೆಸುತ್ತಿ ಬವಳಿ ಬಂದಂತಾಗುವುದು, ಉಸಿರಾಡಲು ಕಷ್ಟವಾಗುವುದು ಅಥವಾ ಹೊಟ್ಟೆಯಲ್ಲಿ ಅಲ್ಸರ್‌ಗಳಾಗುವುದು ಇತ್ಯಾದಿಗಳಿಗೂ ನಮ್ಮ ಭಾವನೆಗಳಿಗೂ ಸಂಬಂಧವಿದೆ ಎಂಬುದು ನಿಜವೇ ಆಗಿದೆ. ಮಾನಸಿಕವಾಗಿ ನೊಂದಿದ್ದಾಗ ಕಾಡುವ ಹೊಟ್ಟೆಯ ಸಮಸ್ಯೆಗಳಿಗೂ ಇದೇ ಕಾರಣ.
೪. ಭಯ- ಕಿಡ್ನಿ: ಭಯವೆಂಬುದು ಬಹಳ ಕಾಲ ನಮ್ಮನ್ನು ಕಂಗೆಡಿಸುತ್ತಿದ್ದರೆ, ಭಯ ದಿನಟ್ಟಲೆ ನಮ್ಮನ್ನು ಕಾಡಿದರೆ, ಅದರ ಪರಿಣಾಮ ಖಂಡಿತವಾಗಿಯೂ ಕಿಡ್ನಿಯ ಮೇಲಾಗುತ್ತದಂತೆ. ಅದಕ್ಕಾಗಿಯೇ, ಭಯ ಹೆಚ್ಚಾದಾಗ ನಮಗೆ ಆಗಾಗ ಮೂತ್ರ ವಿಸರ್ಜನೆಯ ಅಗತ್ಯ ಹೆಚ್ಚಾಗುತ್ತದೆ. ಭಯದಿಂದ ನಿಂತಲ್ಲೇ ಮೂತ್ರ ವಿಸರ್ಜನೆಯಾಗುವುದು ತಮಾಷೆಯಾಗಿ ಕಂಡರೂ ಇದು ಕಿಡ್ನಿಯ ಮೇಲಾಗುವ ಪರಿಣಾಮದಿಂದಾಗಿಯೇ ಆಗಿದೆ. ಮುಖ್ಯವಾಗಿ ಮಕ್ಕಳಲ್ಲಿ ಈ ಭಯದ ಪರಿಣಾಮ ಕಿಡ್ನಿಯ ಮೇಲಾಗುವುದು ಕಾಣುತ್ತದೆ.
೫. ಚಿಂತಾಕ್ರಾಂತ- ಗುಲ್ಮ: ನಮ್ಮಲ್ಲಿ ಚಿಂತೆ ಹೆಚ್ಚಾದಾಗ ಅದರ ನೇರ ಪರಿಣಾಮ ಬೀರುವುದು ಗುಲ್ಮದ ಮೇಲೆ. ನಮ್ಮ ಕೆಂಪು ರಕ್ತ ಕಣಗಳು, ಬಿಳಿ ರಕ್ತಕಣಗಳು ಹಾಗೂ ಪ್ಲೇಟ್‌ಲೆಟ್‌ಗಳ ಮಟ್ಟವನ್ನು ಕಾಯ್ದುಕೊಳ್ಳುವ ಕೆಲಸ ಮಾಡುವ ಗುಲ್ಮ ನಾವು ಚಿಂತಾಕ್ರಾಂತರಾದಾಗ ನಮ್ಮೆಲ್ಲ ಶಕ್ತಿಯನ್ನು ಹೀರಿ ಬಸವಳಿದಂತೆ ಮಾಡುತ್ತದೆ. ಇದು ನಮ್ಮಲ್ಲಿ ಏಕಾಗ್ರತೆಯನ್ನು ಕಡಿಮೆಮಾಡಿ, ಎಲ್ಲ ಕೆಲಸಗಳಲ್ಲೂ ನಿರುತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.
ಇದನ್ನೂ ಓದಿ: Health Tips | ಹೊಸ ವರ್ಷದ ಕನಸು ಗುರಿಗಳ ಪೈಕಿ ಇವಿಷ್ಟು ವರ್ಷಪೂರ್ತಿ ಮುಖ್ಯವಾಗಿರಲಿ!