Site icon Vistara News

Health Tips: ಒಂದೇ ಕಡೆ ಕೂತಿರುತ್ತೀರಾ? ಸಮಸ್ಯೆಗಳು ಒಂದೆರಡಲ್ಲ!

Health Tips

ದೀರ್ಘಕಾಲ ಒಂದೇ ಕಡೆ ಕೂತು ಕೆಲಸ ಮಾಡುವವರೇ ನೀವು? (Health Tips) ಹಾಗಾದರೆ ನೀವಿದನ್ನು ಓದಲೇಬೇಕು. ಕಾರಣ ಯಾವುದೇ ಇರಲಿ, ಒಂದೆಡೆ ದೀರ್ಘ ಕಾಲ ಕೂತಿರುತ್ತೀರಿ ಎಂದಾದರೆ ಸಾವಿಗೆ ಬೇಗ ಹತ್ತಿರವಾಗುತ್ತೀರಿ ಎನ್ನುತ್ತಾರೆ ಹೃದಯ ತಜ್ಞರು. ಜಡ ಜೀವನದಿಂದ ಸಾವು ಬೇಗನೇ ಆಕ್ರಮಿಸುವ ಸಾಧ್ಯತೆ ಶೇ. ೩೦ರಷ್ಟು ಹೆಚ್ಚುತ್ತದೆ ಎನ್ನುವುದು ಅಧ್ಯಯನಗಳು ಕಂಡುಕೊಂಡ ಸತ್ಯ. ಏನು ಹೀಗೆಂದರೆ? ಅದು ಹೇಗೆ ಸಾಧ್ಯ?
ಜಡ ಜೀವನವೆಂದರೆ ಎಚ್ಚರವಿದ್ದಾಗ ಒಂದೆಡೆ ಕೂರುವ ಅಥವಾ ಮಲಗುವ ಮೂಲಕ ಅತಿ ಕಡಿಮೆ ಶಕ್ತಿಯನ್ನು ವ್ಯಯಿಸುವುದು- ಟಿವಿ ನೋಡುವುದರಿಂದ ಹಿಡಿದು, ಮೊಬೈಲು ಇಲ್ಲವೇ ಕಂಪ್ಯೂಟರ್‌ ಹಿಡಿದು ಕೂರುವುದು ಅಥವಾ ಬಿದ್ದುಕೊಂಡು ಓದುವವರೆಗೆ ಯಾವುದೇ ಕೆಲಸಗಳು ಇದರಲ್ಲಿ ಬರಬಹುದು. ಇದರಿಂದ ದೇಹದಲ್ಲಿ ರಕ್ತಸಂಚಾರ ಕಡಿಮೆಯಾಗಿ, ಸ್ನಾಯುಗಳಲ್ಲಿ ಸಂಚಲನ ಕುಂಠಿತವಾಗಿ, ಚಯಾಪಚಯ ಏರುಪೇರಾಗಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಇದನ್ನು ಸರಿಪಡಿಸಲು ಕಠಿಣವಾದ ವ್ಯಾಯಾಮದಿಂದಲೂ ಕಷ್ಟಸಾಧ್ಯ ಎನ್ನುತ್ತಾರೆ ಅಧ್ಯಯನಕಾರರು. ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ದೀರ್ಘಕಾಲ ಒಂದೇ ಕಡೆ ಕೂತಿರುವುದರಿಂದ?

ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ

ಬೊಜ್ಜು, ಮಧುಮೇಹ, ಬಿಪಿ: ಬಹಳ ಹೊತ್ತಿನವರೆಗೆ ಜಡವಾಗಿ ಕೂತಿರುವುದರಿಂದ, ನಮ್ಮ ದೇಹದಲ್ಲಿ ಕೊಬ್ಬಿನಾಂಶಗಳನ್ನು ವಿಘಟಿಸುವ ಲಿಪೊಪ್ರೊಟೀನ್‌ ಲಿಪೇಸ್‌ ಎಂಬ ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ. ಈ ಕಿಣ್ವಗಳ ಚಟುವಟಿಕೆ ಕಡಿಮೆಯಾದರೆ ಟ್ರೈಗ್ಲಿಸರೈಡ್‌ ಮಟ್ಟ ಏರಿ, ಬೊಜ್ಜು ಹೆಚ್ಚುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಏರಿಕೆಯಾಗಿ ಕ್ರಮೇಣ ಮಧುಮೇಹಕ್ಕೆ ಆಹ್ವಾನ ನೀಡುತ್ತದೆ. ಬದಲಿಗೆ, ಪ್ರತಿ 30-60 ನಿಮಿಷಗಳಿಗೆ ಒಮ್ಮೆ ಎದ್ದು ನಾಲ್ಕಾರು ನಿಮಿಷಗಳ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಈ ಕಿಣ್ವಗಳ ಮಟ್ಟ ಕುಸಿಯದಂತೆ ನೋಡಿಕೊಳ್ಳಬಹುದು.

ಸ್ನಾಯುಗಳ ಬಲಹೀನತೆ

ಮಾಂಸಖಂಡಗಳ ತತ್ವ ಒಂದೇ- ಬಳಸಿ ಇಲ್ಲವೇ ಕಳೆದುಕೊಳ್ಳಿ (ಯೂಸ್ ಇಟ್‌ ಆರ್‌ ಲೂಸ್‌ ಇಟ್‌) ಸ್ನಾಯುಗಳನ್ನು ಬಳಸದೆ, ಅವುಗಳಲ್ಲಿ ಸಂಕೋಚ-ವಿಕಾಸಗಳಿಲ್ಲದೆ ಜಡವಾಗಿದ್ದರೆ ಅವು ಕ್ರಮೇಣ ಬಲಹೀನಗೊಳ್ಳುತ್ತವೆ. ಸ್ನಾಯುಗಳಲ್ಲಿ ಹುದುಗಿರುವ ಪ್ರೊಟೀನ್‌ಗಳು ನಶಿಸಿ, ಉಬ್ಬಿರುವ ಮಾಂಸಪೇಶಿಗಳ ಬದಲಿಗೆ ಕೊಬ್ಬಿರುವ ಭಾಗಗಳು ಕಾಣತೊಡಗುತ್ತವೆ. ಆಗಾಗ ಸ್ನಾಯುಗಳಲ್ಲಿ ಸಂಚಲನವಿದ್ದರೆ, ಅವುಗಳು ದುರ್ಬಲವಾಗದಂತೆ ತಡೆಯಬಹುದು. ಹಾಗಾಗಿ ಆಗಾಗ ಎದ್ದು ಓಡಾಡಿ.

ರಕ್ತಸಂಚಾರ ಕುಂಠಿತ

ಒಂದೇ ಕಡೆ ಕೂತಿದ್ದರೆ ರಕ್ತನಾಳಗಳಿಗೂ ತೊಂದರೆ. ನಾಳಗಳು ಬಿಗಿದಂತಾಗಿ ರಕ್ತಸಂಚಾರಕ್ಕೆ ತೊಡಕಾಗುತ್ತದೆ. ಪರಿಣಾಮವೆಂದರೆ ಉಬ್ಬಿದ ವೆರಿಕೋಸ್‌ ವೇನ್‌, ರಕ್ತ ಹೆಪ್ಪುಗಟ್ಟುವುದು, ರಕ್ತದೊತ್ತಡ ಏರುವುದು- ಇಂಥವು ಗಂಟುಬೀಳಬಹುದು. ಹಾಗಾಗಿ ಚಟುವಟಿಕೆಯನ್ನು ಆಗಾಗ ಇರಿಸಿಕೊಳ್ಳುವುದು, ಚುಟುಕು ವ್ಯಾಯಾಮಗಳು, ನೀರು ಕುಡಿಯಲೋ ಅಥವಾ ಬಾತ್‌ರೂಮಿಗಾಗಿಯೋ ಎದ್ದು ಓಡಾಡುವುದು ಹಲವು ರೀತಿಯಲ್ಲಿ ಉಪಯುಕ್ತ.

ಬೆನ್ನು, ಕುತ್ತಿಗೆ ನೋವು

ಸದಾ ಕಾಲ ಕೂತೇ ಇರುವುದರಿಂದ ಬೆನ್ನುಹುರಿ, ಕುತ್ತಿಗೆಯ ಸ್ನಾಯುಗಳು, ಸೊಂಟದ ಡಿಸ್ಕ್‌ ಮೇಲೆ ಅತಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದ ಬೆನ್ನಿನ ಕೆಳಭಾಗದಲ್ಲಿ ನೋವು, ಕುತ್ತಿಗೆ, ಭುಜ, ನಡು ಬೆನ್ನಲ್ಲೂ ತೀವ್ರ ನೋವು ಕಾಣಬಹುದು. ಜೊತೆಗೆ, ಕೆಲವೇ ಸ್ನಾಯುಗಳನ್ನು ವಿಪರೀತ ಉಪಯೋಗಿಸುವುದರಿಂದ, ಅಡ್ಡ ಪರಿಣಾಮಗಳು ಅಲ್ಲೂ ಕಾಣುತ್ತವೆ.

ಹೃದ್ರೋಗಗಳ ಭೀತಿ ಹೆಚ್ಚಳ

ಹೆಚ್ಚಿನ ಸಮಸ್ಯೆ ಇರುವುದು ಇಲ್ಲಿ. ಮೇಲ್ನೋಟಕ್ಕೆ ಬೊಜ್ಜಿಲ್ಲದಂತೆ ಕಾಣುವವರಲ್ಲೂ ಹೃದಯ ತೊಂದರೆ ಕೊಡುತ್ತಿದೆ. ಜಡಜೀವನದಿಂದ ಹೃದಯದ ತೊಂದರೆಗಳು ಶೇ.147ರಷ್ಟು ಹೆಚ್ಚುತ್ತವೆ ಎಂಬುದು ಅ‍ಧ್ಯಯನಗಳ ಮಾತು. ಇದರ ಬದಲಿಗೆ, ಆಗಾಗ ಚಲನೆಯಲ್ಲಿರುವುದು ಮತ್ತು ವಾರಕ್ಕೆ 150 ನಿಮಿಷಗಳ ಮಧ್ಯಮಗತಿಯ ವ್ಯಾಯಾಮದಿಂದ ಹೃದಯವನ್ನು ಆರೋಗ್ಯವಾಗಿ ಇರಿಸಬಹುದು.

ದುರ್ಬಲ ಮೂಳೆಗಳು

ಸ್ನಾಯುಗಳ ದೌರ್ಬಲ್ಯವು ಕ್ರಮೇಣ ಮೂಳೆಗಳನ್ನೂ ದುರ್ಬಲಗೊಳಿಸುತ್ತದೆ. ಇದರಿಂದ ಆಸ್ಟಿಯೊಪೊರೊಸಿಸ್‌ನಂಥ ತೊಂದರೆಗಳು ಅಮರಿಕೊಳ್ಳಬಹುದು. ಹಾಗಾಗಿ ಅಲ್ಪ ಪ್ರಮಾಣದ ತೂಕ ಎತ್ತುವುದು, ಪ್ರತಿರೋಧಕತೆಯ ತರಬೇತಿ, ಕಾರ್ಡಿಯೊ ಮಾದರಿಯ ವ್ಯಾಯಾಮಗಳು ಮೂಳೆಗಳ ಆರೋಗ್ಯಕ್ಕೆ ಒಳಿತನ್ನು ಮಾಡುತ್ತವೆ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Exit mobile version