ದೇಹದಲ್ಲಿ ಮೂಳೆ ಗಟ್ಟಿಯಾಗಿರಲು ಕ್ಯಾಲ್ಶಿಯಂ ಬೇಕೇ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿಯೇ ನಾವು ಕ್ಯಾಲ್ಶಿಯಂನಿಂದ ಶ್ರೀಮಂತವಾಗಿರುವ ಆಹಾರವನ್ನು ತಿನ್ನುವ ಬಗೆಗೆ ಗಮನ ಹರಿಸುತ್ತೇವೆ. ನಮ್ಮ ಮಕ್ಕಳಿಗೆ ಹಾಲು ಕುಡಿಸುತ್ತೇವೆ. ಕ್ಯಾಲ್ಶಿಯಂ ಕೊರತೆ ಅವರಿಗೆ ಬಾರದಿರಲಿ ಎಂಬುದನ್ನು ನೋಡಿಕೊಳ್ಳುತ್ತೇವೆ. ಆದರೂ, ಬಹಳ ಸಾರಿ ನಮಗೇ ಅರಿವಿಲ್ಲದೆ, ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಪೂರೈಕೆ ಆಗಿರುವುದಿಲ್ಲ. ಇದರಿಂದಾಗಿ ಕೇವಲ ಮೂಳೆಗೆ ಸಂಬಂಧಿಸಿದ್ದಷ್ಟೇ ಅಲ್ಲ, ಬೇರೆ ಸಮಸ್ಯೆಗಳೂ ಬರಬಹುದು. ರಕ್ತದ ಒತ್ತಡ, ಹೃದಯದ ಆರೋಗ್ಯ, ಮಿದುಳಿನ ಆರೋಗ್ಯ, ದೇಹದ ತೂಕ ಇವೆಲ್ಲವಕ್ಕೂ ಕ್ಯಾಲ್ಶಿಯಂನ ಸಮತೋಲನಕ್ಕೂ ಸಂಬಂಧವಿದೆ. ಹಾಗಾಗಿ, ಕ್ಯಾಲ್ಶಿಯಂನ ಮಟ್ಟದಲ್ಲಿ ಕೊಂಚ ಏರುಪೇರಾದರೂ ದೇಹದ ಆರೋಗ್ಯದಲ್ಲಿ ನಮಗೆ ಏರಿಳಿತ ಕಾಣುತ್ತವೆ. ಹಾಗಾಗಿ, ದೇಹದಲ್ಲಿ ಸಣ್ಣಪುಟ್ಟ ಬದಲಾವಣೆಯಾದರೂ ನಮ್ಮ ಗಮನ ಅತ್ಯಂತ ಅಗತ್ಯ. ನಮ್ಮ ದೇಹಕ್ಕೆ ಕ್ಯಾಲ್ಶಿಯಂನ ಕೊರತೆಯಿದೆ ಎಂದು ನಾವು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡೋಣ.
೧. ಹಲ್ಲಿನಲ್ಲಿ ಹುಳುಕು: ಕೆಲವು ಖನಿಜಾಂಶಗಳು ದೇಹದ ಕೆಲವು ಭಾಗಗಳು ಸರಿಯಾಗಿ ಕೆಲಸ ಮಾಡಲು ಬೇಕೇ ಬೇಕು. ಕ್ಯಾಲ್ಶಿಯಂ ಹಾಗೂ ಹಲ್ಲಿನ ಸಂಬಂಧ ಅಂಥದ್ದು. ಈ ಕ್ಯಾಲ್ಶಿಯಂ ಎಂಬ ಖನಿಜಾಂಶ ಕೇವಲ ಹಲ್ಲಿನ ಆರೋಗ್ಯ ಕಾಪಾಡುವುದಷ್ಟೇ ಅಲ್ಲ, ಹಲ್ಲಿನ ಗಟ್ಟಿಯಾದ ತಳಪಾಯವನ್ನೇ ಹಾಕುತ್ತದೆ. ಹಾಗಾಗಿ ಹಲ್ಲಿನಲ್ಲಿ ಯಾವುದೇ ಹುಳುಕು, ಕ್ಯಾವಿಟಿಯಂತಹ ತೊಂದರೆಗಳು ಆಗಾಗ ಆಗುತ್ತಲೇ ಇರುತ್ತವೆ ಎಂದಾದಲ್ಲಿ ಅಲ್ಲಿ ನಿಮಗೆ ಕ್ಯಾಲ್ಶಿಯಂ ಕೊರತೆಯಿದೆ ಎಂದೇ ಅರ್ಥ. ನಾವು ಸುಲಭವಾಗಿ ಸಿಹಿತಿಂಡಿಯ ಮೇಲೆ ದೂರಿ, ಅದರಿಂದಾಗಿಯೇ ಹುಳುಕಾಗಿದೆ ಎನ್ನಬಹುದು. ಆದರೆ, ಕ್ಯಾಲ್ಶಿಯಂ ಕೊರತೆಯೂ ಅದಕ್ಕೆ ಕಾರಣವಾಗಿರಬಹುದು ಎಂಬುದನ್ನು ನೆನಪಿನಲ್ಲಿಡಬೇಕು.
೨.ಮಾಂಸಖಂಡಗಳ ಸೆಳೆತ: ಬಹಳ ಸಾರಿ, ಮೂಳೆ ಅಥವಾ ಎಲುಬಿನ ಸಂಬಂಧೀ ಸಮಸ್ಯೆ ಬಂದಾಕ್ಷಣ ಮಾತ್ರ ಅದಕ್ಕೆ ಕ್ಯಾಲ್ಶಿಯಂನ ಸಂಬಂಧ ಹುಡುಕುತ್ತೇವೆ. ಆದರೆ, ಮಾಂಸಖಂಡಗಳಿಗೂ ಕ್ಯಾಲ್ಶಿಯಂಗೂ ಸಂಬಂಧವಿದೆ. ಆಗಾಗ ನಿಮಗೆ ಮಾಂಸಖಂಡಗಳ ಸೆಳೆತ, ಉಳುಕಿನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದರೆ, ನಿಮಗೆ ಕ್ಯಾಲ್ಶಿಯಂ ಕೊರತೆಯಿದೆ ಎಂದೇ ಅರ್ಥ.
೩. ಉಗುರು ಮುರಿಯುವುದು: ನಿಮ್ಮ ಉಗುರು ದುರ್ಬಲವಾಗಿದೆಯೇ? ಆಗಾಗ ಮುರಿಯುತ್ತದೆಯೋ? ಅಥವಾ ಉಗುರಿನ ಸಿಪ್ಪೆ ಏಳುತ್ತಿದೆಯೋ? ಹಾಗಿದ್ದರೆ ನಿಮ್ಮ ಕ್ಯಾಲ್ಶಿಯಂ ಮಟ್ಟ್ವನ್ನು ಪರೀಕ್ಷಿಸಿಕೊಳ್ಳಿ. ಉಗುರಿನ ಆರೋಗ್ಯಕ್ಕೆ ಕ್ಯಾಲ್ಶಿಯಂ ಅತ್ಯಂತ ಅಗತ್ಯ. ಕ್ಯಾಲ್ಶಿಯಂನ ಕೊರತೆಯಿಂದಷ್ಟೇ ಉಗುರು ಮುರಿಯುವಂತಹ, ದುರ್ಬಲತೆಯಂತಹ ಸಮಸ್ಯೆ ಬರಬಹುದು.
೪. ಮೂಳೆ ದುರ್ಬಲತೆ: ಮೂಳೆ ಅಥವಾ ಎಲುಬಿನ ಆರೋಗ್ಯಕ್ಕೆ ಕ್ಯಾಲ್ಶಿಯಂ ಅತ್ಯಂತ ಅಗತ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಶೇ ೯೯ರಷ್ಟು ಕ್ಯಾಲ್ಶಿಯಂ ದೇಹದ ಮೂಳೆಗಳಲ್ಲೇ ಸಂಗ್ರಹವಾಗುತ್ತದೆ. ಹಾಗಾಗಿ, ಸರಿಯಾದ ಮಟ್ಟದಲ್ಲಿ ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಸೇರದಿದ್ದರೆ, ಖಂಡಿತವಾಗಿಯೂ ಅದರ ಪರಿಣಾಮ ಮೂಳೆಗಳ ಮೇಲೆ ಕಾಣುತ್ತದೆ. ಆಗಾಗ ಮೂಳೆ ಮುರಿತದಂತಹ ಸಮಸ್ಯೆ ಕಂಡರೂ ಇದೂ ಕಾರಣವಿರಬಹುದು. ಕ್ಯಾಲ್ಶಿಯಂ ಕಡಿಮೆಯಾಗಿದ್ದಾಗ ಮೂಳೆ ಸವೆತ, ರಿಕೆಟ್ಸ್‌ನಂತಹ ಕಾಯಿಲೆಗಳ ಸಂಭವ ಹೆಚ್ಚು.
೫. ನಿದ್ರಾಹೀನತೆ: ನಿದ್ದೆಯ ಸಮಸ್ಯೆ ನಿಮಗಿದೆಯೇ? ಇದಕ್ಕೆ ಬೇರೆ ಕಾರಣಗಳಿರಬಹುದು ಎಂದು ನಿಮಗೆ ಅನಿಸಿರಬಹುದು. ಆದರೆ, ಕ್ಯಾಲ್ಶಿಯಂ ಕೂಡಾ ನಿದ್ದೆಯ ಜೊತೆ ಸಂಬಂಧ ಹೊಂದಿದೆ ಎಂಬ ತಿಳುವಳಿಕೆ ನಿಮಗಿದೆಯೇ? ಹೌದು. ಕ್ಯಾಲ್ಶಿಯಂನ ಕೊರತೆಯೂ ಕೂಡಾ ನಿದ್ರಾಹೀನತೆಗೆ ಕಾರಣವಾಗಬಹುದು. ಇದರರ್ಥ, ಮಲಗುವ ಮೊದಲು ಕ್ಯಾಲ್ಶಿಯಂನಿಂದ ಸಮೃದ್ಧವಾಗಿರುವ ಆಹಾರ ಸೇವಿಸಬೇಕು ಎಂದಲ್ಲ. ಆದರೆ, ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಶಿಯಂ ಕೂಡಾ ಇರಬೇಕು. ಕ್ಯಾಲ್ಶಿಯಂ ಮಟ್ಟ ದೇಹದಲ್ಲಿ ಸಮತೋಲನ ಕಾಯ್ದುಕೊಂಡಿದ್ದರೆ ಸರಿಯಾದ ಸಮಯಕ್ಕೆ ದೇಹಕ್ಕೆ ಸರಿಯಾದ ನಿದ್ದೆ ಬರಲು ಸಹಾಯವಾಗುತ್ತದೆ.