ಬಿಸಿಬಿಸಿಯಾದ ಆಲೂ ಪರಾಠಾದ ಮೇಲೆ ತುಂಡು ಬೆಣ್ಣೆ ಹಾಗೆಯೇ ಕರಗುತ್ತಿದ್ದರೆ, ಅದನ್ನು ಕೈಯಲ್ಲಿ ಮುರಿದು ಮೊಸರಿನ ಜೊತೆಗೆ ಅದ್ದಿ ಅದ್ದಿ ತಿನ್ನುವುದು ಸ್ವರ್ಗ ಸುಖ ಅಂತ ನಿಮಗೆ ಬಹಳ ಸಲ ಅನಿಸಿರಬಹುದಲ್ಲವೇ? ಆದರೆ, ನಿಜವಾದ ಅರ್ಥದಲ್ಲಿ ಇದು ತಿನ್ನಬಾರದ ಜೋಡಿಯಂತೆ. ನಮಗೇ ಗೊತ್ತಿಲ್ಲದ ಹಾಗೆ ಮೊಸರಿನ ಜೊತೆಗೆ ಆರೋಗ್ಯಕರ ಜೋಡಿಯಾಗದ ಜೋಡಿಗಳನ್ನು ನಾವು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ, ನಿಜಾರ್ಥದಲ್ಲಿ ಅವು ಸರಿಯಾದ ಜೋಡಿಯೇ ಆಗಿರುವುದಿಲ್ಲ.
ಭಾರತದಲ್ಲಿ ಮೊಸರು ಎಂಬುದು ನಿತ್ಯದ ಆಹಾರವಾದ್ದರಿಂದ ಅದಿಲ್ಲದೆ ಬಹುತೇಕದ ಆಹಾರಕ್ರಮ ಪೂರ್ಣವಾಗುವುದಿಲ್ಲವಾದ್ದರಿಂದ ಎಷ್ಟೋ ಸಾರಿ ನಮಗೇ ಗೊತ್ತಿಲ್ಲದೆ ಕೆಲವು ತಪ್ಪುಗಳನ್ನು ನಾವು ಮಾಡುತ್ತಿರುತ್ತೇವೆ. ಮೊಸರಿನಲ್ಲಿ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್‌ಗಳು, ಕ್ಯಾಲ್ಶಿಯಂ ಮತ್ತಿತರ ಖನಿಜಾಂಶಗಳು ಇದ್ದು, ಇವು ದೇಹದ ಅಗತ್ಯ ಪೋಷಕಾಂಶಗಳನ್ನು ಪೂರೈಸುತ್ತವಾದರೂ ಬಹಳಷ್ಟು ಸಾರಿ ನಾವು ಮೊಸರಿನೊಂದಿಗೆ ಸೇರಿಸಿ ತಿನ್ನುವ ಜೋಡಿ ಆಹಾರಗಳಿಂದಾಗಿ ನಮಗೆ ಅಸಿಡಿಟಿ, ಗ್ಯಾಸ್, ಎದೆಯುರಿ, ಹೊಟ್ಟೆಯುಬ್ಬರ, ಜೀರ್ಣಕ್ರಿಯೆ ಸಮಸ್ಯೆಗಳು ತಲೆದೋರುತ್ತವೆ. ಆಯುರ್ವೇದದ ಪ್ರಕಾರ ವಿರುದ್ಧ ಗುಣದ ಆಹಾರಗಳನ್ನು ಜೊತೆಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಒಂದಕ್ಕೊಂದು ಹೊಂದಿಕೆಯಾಗದ ಗುಣಗಳ ಆಹಾರಗಳನ್ನು ಜೊತೆಯಾಗಿ ಸೇವಿಸುವುದರಿಂದ ಸಾಕಷ್ಟು ಜೀರ್ಣಕ್ರಿಯೆ ತೊಂದರೆಗಳು ಎದುರಾಗುತ್ತವೆ. ಹಾಗಾದರೆ ಬನ್ನಿ, ಮೊಸರಿನ ಜೊತೆಗೆ ಯಾವೆಲ್ಲ ಆಹಾರಗಳು ಒಳ್ಳೆಯ ಜೋಡಿಯಲ್ಲ ನೋಡೋಣ.
1. ಬೆಲ್ಲ ಮತ್ತು ಮೊಸರು: ಬೆಲ್ಲ ಸಕ್ಕರೆಗಿಂತ ಒಳ್ಳೆಯದು ನಿಜ. ಇದೇ ಕಾರಣಕ್ಕೆ ಬಹಳಷ್ಟು ಮಂದಿ ಸಕ್ಕರೆಯ ಬದಲಿಎ ಬೆಲ್ಲವನ್ನು ಬಳಸುವುದುಂಟು. ಆದರೆ, ಬೆಲ್ಲ ಸಕ್ಕರೆಯಂತೆ ಎಲ್ಲದಕ್ಕೂ ಸರಿ ಹೊಂದುವುದಿಲ್ಲ. ಮೊಸರಿನ ಜೊತೆಗೆ ಬೆಲ್ಲ ಯೋಗ್ಯ ಜೋಡಿಯಲ್ಲ. ಮೊಸರು ಶೀತ ಪ್ರಕೃತಿಯಾದರೆ, ಬೆಲ್ಲ ಉಷ್ಣ ಪ್ರಕೃತಿಯದ್ದು. ಹಾಗಾಗಿ ಮೊಸರಿನ ಜೊತೆಗೆ ಬೆಲ್ಲ ಸೇರಿಸಿದರೆ ಕೆಮ್ಮು, ಶೀತ, ಜ್ವರದಂತಹ ಆರೋಗ್ಯ ಸಮಸ್ಯೆಳೂ ಬರಬಹುದು ಎನ್ನುತ್ತಾರೆ ತಜ್ಞರು.
2. ಹಾಲು ಮತ್ತು ಮೊಸರು: ಎಷ್ಟೋ ವರ್ಷಗಳಿಂದ ನಾವು ಹಾಲು ಹಾಗೂ ಮೊಸರನ್ನು ಜೊತೆಜೊತೆಯಾಗಿ ಬಳಸುತ್ತಾ ಬಂದಿದ್ದೇವೆ. ಆದರೆ, ಹಾಲು ಹಾಗೂ ಮೊಸರು ಒಳ್ಳೆಯ ಕಾಂಬಿನೇಶನ್ ಅಲ್ಲವಂತೆ. ಯಾವುದೇ ಹುಳಿ ಬಂದ ಆಹಾರವನ್ನು ಹಾಲಿನ ಜೊತೆ ಬೆರೆಸುವುದು ಒಳ್ಳೆಯ ಅಭ್ಯಾಸ ಅಲ್ಲ. ಇದರಿಂದ ಹೊಟ್ಟೆ ಕೆಡುವ ಸಂಭವ ಹೆಚ್ಚು.
3. ಚಹಾ ಮತ್ತು ಮೊಸರು: ಚಹಾದ ಜೊತೆಗೆ ಮೊಸರು ತಿನ್ನುವ ಅಭ್ಯಾಸವಿದ್ದರೆ ಖಂಡಿತ ಬಿಡಿ. ಚಹಾದ ಜೊತೆ ಮೊಸರು ಯಾರಾದರೂ ತಿನ್ನುತ್ತಾರಾ ಎಂದು ಮರುಪ್ರಶ್ನೆ ಹಾಕಬೇಡಿ. ಚಹಾದ ಜೊತೆಗೆ ಮೊಸರಿನಿಂದ ಮಾಡಿದ ತಿನಿಸುಗಳಾದ ದಹಿ ಕೆಬಾಬ್, ದಹಿ ಸ್ಯಾಂಡ್‌ವಿಚ್ ಮತ್ತಿತರ ತಿನಿಸುಗಳೂ ಕೂಡಾ ಒಳ್ಳೆಯದಲ್ಲ. ತಂಪು ಹಾಗೂ ಉಷ್ಣ ಪ್ರಕೃತಿಯ ಎರಡು ವಿರುದ್ಧ ಆಹಾರಗಳಿವು.
4. ಮಾವಿನಹಣ್ಣು ಹಾಗೂ ಮೊಸರು: ಬಹಳಷ್ಟು ಮಂದಿ ಮ್ಯಾಂಗೋ ಶೇಕ್‌ಗೆ ಮೊಸರು ಹಾಕಿ ಮ್ಯಾಂಗೋ ಲಸ್ಸಿ ಮಾಡುವುದುಂಟು. ರುಚಿಯಾಗಿರುತ್ತದೆ ನಿಜ. ಆದರೆ, ಇದೂ ಕೂಡಾ ಒಳ್ಳೆಯ ಕಾಂಬಿನೇಶನ್ ಅಲ್ಲವಂತೆ. ಯಾಕೆಂದರೆ ಮೊಸರಿನಲ್ಲಿ ಪ್ರಾಣಿಜನ್ಯ ಪ್ರೊಟೀನ್ ಇದ್ದು ಇದು ಹಣ್ಣುಗಳ ಜೊತೆ ಬೆರೆತು ದೇಹದೊಳಗೆ ಹುಳಬರುವ ಸಾಧ್ಯತೆ ಹೆಚ್ಚಿರುವುದರಿಂದ ಇದು ಅಜೀರ್ಣದಂತಹ ತೊಂದರೆಗಳನ್ನು ಆಹ್ವಾನಿಸುತ್ತದೆ.
5. ಈರುಳ್ಳಿ ಮತ್ತು ಮೊಸರು: ನಾವೆಲ್ಲ ಈರುಳ್ಳಿ ಕತ್ತರಿಸಿ ಮೊಸರಿನಿಂದ ಮಾಡುವ ರೈತಾಕ್ಕೆ ಹಾಕುತ್ತೇವೆ. ಇದು ರುಚಿಯಲ್ಲಿ ಅದ್ಭುತವಾಗಿರುತ್ತದೆ ನಿಜ. ಆದರೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದಂತೆ. ಈರುಳ್ಳಿಯದು ಉಷ್ಣ ಪ್ರಕೃತಿಯಾದರೆ, ರೈತಾ ಶೀತ ಪ್ರಕೃತಿ. ಇವೆರಡನ್ನು ಸೇರಿಸಿದರೆ, ಚರ್ಮದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದಂತೆ. ಮುಖ್ಯವಾಗಿ ಮೊಡವೆ, ಚರ್ಮದ ಅಲರ್ಜಿ, ಕಜ್ಜಿ, ತುರಿಕೆ ಇತ್ಯಾದಿ.
ಇದನ್ನೂ ಓದಿ: Benefits Of Eating Yogurt: ಮೊಸರು ತಿನ್ನುವ ಲಾಭಗಳೇನು ಗೊತ್ತೇ?
6. ಮೊಸರು ಹಾಗೂ ಮೀನು: ಮೀನು ಹಾಗೂ ಮೊಸರು ಎರಡರಲ್ಲೀ ಪ್ರೊಟೀನ್ ಹೇರಳವಾಗಿದೆ. ಹಾಗಾಗಿ ಎರಡು ಪ್ರೊಟೀನ್‌ಯುಕ್ತ ಆಹಾರಗಳ ಜೋಡಿ ಯಾವತ್ತೂ ಒಳ್ಳೆಯದಲ್ಲ. ಊಟದ ಜೊತೆಗೆ ಒಂದು ಪ್ರೊಟೀನ್‌ಯುಕ್ತ ಆಹಾರವಿದ್ದರೆ ಸಾಕು ಎನ್ನುತ್ತಾರೆ ತಜ್ಞರು. ಯಾಕೆಂದರೆ, ಪ್ರಟೀನನ್ನು ಕರಗಿಸುವುದಕ್ಕೆ ದೇಹಕ್ಕೆ ಹೆಚ್ಚು ಶ್ರಮ ಬೇಕಾಗುತ್ತದೆ.
7. ಪರಾಠಾ ಮತ್ತು ಮೊಸರು: ಇದು ಬಹುತೇಕರಿಗೆ ಕೆಟ್ಟ ಸುದ್ದಿಯಾಗಿ ಕೇಳಬಹುದು. ಯಾಕೆಂದರೆ ಪರಾಠಾದ ಜೊತೆಗೆ ಮೊಸರು ತಿನ್ನುವುದು ಅತ್ಯಂತ ಪ್ರಸಿದ್ಧ ಹಾಗೂ ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಕಾಂಬಿನೇಶನ್. ಆದರೆ, ಪರಾಠಾದಲ್ಲಿ ಹೆಚ್ ಎಣ್ಣೆಯಂಶ ಇರುವುದರಿಂದ ಅದನ್ನು ಮೊಸರಿನ ಜೊತೆ ಸೇರಿಸಿದಾಗ ಜೀರ್ಣಕ್ರಿಯೆ ನಿಧಾನವಾಗುತ್ತದೆ. ದೇಹದಲ್ಲಿ ಆಲಸ್ಯ ಹೆಚ್ಚುತ್ತದೆ.
ಇದನ್ನೂ ಓದಿ: Watermelon: ಕಲ್ಲಂಗಡಿ ಹಣ್ಣನ್ನು ಕತ್ತಲಾದ ಮೇಲೆ ತಿನ್ನಬಾರದು ಯಾಕೆ ಗೊತ್ತೇ?