ನಾವು ಭಾರತೀಯರಿಗೆ ಮಸಾಲೆಯಿಲ್ಲದ ಅಡುಗೆಯನ್ನು ಊಹನೆ ಮಾಡಲೂ ಸಾಧ್ಯವಿಲ್ಲ. ಸರಿಯಾದ ಸಂಪರ್ಕ , ಸಂವಹನ ಸಾಧನಗಳಿಲ್ಲದ ಕಾಳದಲ್ಲೇ, ಮಸಾಲೆ ಪದಾರ್ಥದ ಮೂಲಕವೇ ಇಡೀ ಪ್ರಪಂಚವನ್ನು ಭಾರತ ತನ್ನೆಡೆಗೆ ಆಕರ್ಷಿಸಿದ್ದು ಈಗ ಇತಿಹಾಸ. ಇಂತಹ ಮಸಾಲೆ ಪದಾರ್ಥಗಳು ಭಾರತದ ಪ್ರತಿ ರಾಜ್ಯದಲ್ಲೂ ಒಂದಿಲ್ಲೊಂದು ರೀತಿಯಲ್ಲಿ, ನಾನಾ ಅಡುಗೆಗಳ ರೂಪದಲ್ಲಿ ಜನಮಾನಸವನ್ನು ತನ್ನ ಬಿಗಿಮುಷ್ಟಿಯಲ್ಲಿರುವುದೂ ಸುಳ್ಳಲ್ಲ. ಮಸಾಲೆ ಪದಾರ್ಥಗಳೆಡೆಗಿನ ಭಾರತೀಯರ ಮೋಹವೇ ಅಂತದ್ದು. ಅದಿಲ್ಲದೆ ಅಸ್ತಿತ್ವವೇ ಇಲ್ಲ ಎಂಬಷ್ಟು ಪ್ರತಿ ಅಡುಗೆಯಲ್ಲೂ ಮಸಾಲೆ ಪದಾರ್ಥಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ.
ಆಹಾರದ ರುಚಿಯನ್ನು ಇನ್ನಷ್ಟು ಮತ್ತಷ್ಟು ಉತ್ತಮಗೊಳಿಸುವಲ್ಲಿ ಮಸಾಲೆ ಪದಾರ್ಥಗಳ ಪಾತ್ರ ದೊಡ್ಡದು. ಆದರೆ, ಭಾರತದಲ್ಲಿ ಬೇಸಗೆಯ ಧಗೆ ಬಹುತೇಕ ರಾಜ್ಯಗಳಲ್ಲಿ ತೀವ್ರ ಸ್ವರೂಪನ್ನೇ ಪಡೆದಿರುತ್ತದೆ. ಹಾಗಾಗಿ ಇಂಥ ಮಸಾಲೆಗಳ ಅತಿಯಾದ ಬಳಕೆ ಬೇಸಗೆಯಲ್ಲಿ ಮಾತ್ರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು.
ಕೆಂಪು ಮೆಣಸು: ಖಾರ ಎಂಬ ರುಚಿಯ ಅಮಲನ್ನು ಒಮ್ಮೆ ಹತ್ತಿಸಿಕೊಂಡರೆ ಬಹುತೇಕರು, ಮತ್ತೆ ಸಪ್ಪೆಯ ರುಚಿಯನ್ನು ಅಪ್ಪಿಕೊಳ್ಳುವುದಿಲ್ಲ. ಖಾರವಿಲ್ಲದ ಅಡುಗೆಯನ್ನು ಕನಸಿನಲ್ಲೂ ಯೋಚಿಸಲಾರರು. ರುಚಿಯೇ ಇಲ್ಲದ, ಪೇಲವ ಆಹಾರವೆಂಬಂತೆ ಖಾರವಿಲ್ಲದ ಅಡುಗೆಯನ್ನು ಮೂದಲಿಸಿಯಾರು. ಆದರೆ, ವಿಪರೀತ ಖಾರದಡುಗೆ ಖಂಡಿತ ದೇಹಕ್ಕೆ ಒಳ್ಳೆಯದಲ್ಲ. ಎಷ್ಟೇ ಅಭ್ಯಾಸಬಾದರೂ, ಬೇಸಗೆಯಲ್ಲಿ ಖಾರದಿಂದ ಸ್ವಲ್ಪ ದೂರ ಉಳಿಯುವುದೇ ಒಳ್ಳೆಯದು. ಮೂಗು ಬಾಯಿ, ಮೈಯಿಡೀ, ನೀರಿಳಿಸಿಕೊಂಡು ಧಗಧಗ ಉರಿವ ಬಿಸಿಲಲ್ಲಿ ಖಾರವಾದ ಅಡುಗೆಗಳನ್ನು ಉಂಡರೆ ಹೊಟ್ಟೆ ಹೇಗೆ ತಂಪಾಗಿದ್ದೀತು? ಹೊಟ್ಟೆ ಹಾಗೂ ಎದೆಯುರಿಯನ್ನು ಇದು ಖಂಡಿತಾ ತಂದೊಡ್ಡಬಹುದು. ಹಾಗಾಗಿ, ಖಾರವನ್ನು ಬೇಸಿಗೆಯಲ್ಲಾದರೂ ಕಡಿಮೆ ಮಾಡಿ.
ಶುಂಠಿ: ಶುಂಠಿ ಕೂಡಾ ಖಾರವೇ! ಶುಂಠಿ ಹೇರಳವಾಗಿ ಉಪಯೋಗವಾಗುವುದು ಚಹಾದಲ್ಲಿ. ಪ್ರತಿದಿನ ಎದ್ದು ಚಹಾವೊಂದನ್ನು ಹೀರುತ್ತಾ ಪತ್ರಿಕೆ ಕೈಲಿ ಹಿಡಿಯದಿದ್ದರೆ ಬಹುತೇಕರಿಗೆ ಇಂದೂ ಬೆಳಗು ಬೆಳಗೆನಿಕೊಳ್ಳುವುದಿಲ್ಲ. ಶುಂಠಿ ಹಾಕಿದ ಚಹಾದ ಸ್ವಾದವೇ ಬೇರೆ. ಅದರಲ್ಲೂ ಧೋ ಎಂದು ಸುರಿವ ಮಳೆಯ ಹಿನ್ನೆಲೆಯಿದ್ದರೆ ಮುಗೀತು, ಶುಂಠಿ ಚಹಾದ ಸ್ಥಾನ ಯಾರಿಗೂ ಕದಿಯಲು ಸಾಧ್ಯವಿಲ್ಲ. ಒಮ್ಮೆ ಶುಂಠಿಯ ಹಾಕಿದ ಚಹಾ ಮೋಡಿ ಮಾಡಿದರೆ, ಆಗಾಗ ಇದೇ ಚಹಾ ಬೇಕೆನಿಸುವುದು ಸಹಜ. ಉತ್ತರ ಭಾರತದೆಲ್ಲೆಡೆ, ಶುಂಠಿ ಹಾಕಿದ ಚಹಾವೇ ಹೆಚ್ಚು ಜನಪ್ರಿಯವಾದರೂ ಅವರು ಬೇಸಗೆಯಲ್ಲಿ ಚಹಾಕ್ಕೆ ಶುಂಠಿ ಬಳಕೆ ನಿಲ್ಲಿಸಿಬಿಡುತ್ತಾರೆ. ಇದಲ್ಲದೆ, ಹಲವು ದಿನನಿತ್ಯದ ಆಹಾರಗಳಿಗೆ ನಾವು ಶುಂಠಿ ಬಳಸುತ್ತೇವೆ. ಆದರೆ, ಬೇಸಿಗೆಯಲ್ಲಿ ಅತಿಯಾದ ಶುಂಠಿ ಬಳಕೆ, ಎದೆಯುರಿ, ಹೊಟ್ಟೆನೋವು, ಬೇಧಿಯನ್ನು ತರಬಹುದು ಎಂದು ನೆನಪಿರಲಿ.
ಇದನ್ನೂ ಓದಿ: Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!
ಬೆಳ್ಳುಳ್ಳಿ: ಬೆಳ್ಳುಳ್ಳಿ ಬಹುತೇಕ ಭಾರತೀಯರ ಅಡುಗೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಆರೋಗ್ಯಕ್ಕೆ ಒಳ್ಳೆಯದು ಕೂಡಾ. ಆದರೆ ಉಷ್ಣಗುಣವನ್ನು ಹೊಂದಿದ ಇದು ಬೇಸೆಗೆಗೆ ಮಾತ್ರ ತಾಳೆಯಾಗುವುದಿಲ್ಲ. ಇದನ್ನು ಬೇಸಿಗೆಯಲ್ಲಿ ಮಿತಿಗಿಂತ ಹೆಚ್ಚು ಸೇವಿಸಿದರೆ ದೇಹದ ಉ಼ಷ್ಣ ಪ್ರಕೃತಿ ಹೆಚ್ಚಾಗಿ, ದೇಹದಲ್ಲೀ ಆಮ್ಲೀಯತೆಯನ್ನು ಸೃಷ್ಟಿಸಿ ರಕ್ತಸ್ರಾವ, ಹೊಟ್ಟೆನೋವನ್ನು ತರಬಹುದು. ಇದನ್ನು ತಹೆಚ್ಚು ತಿಂದರೆ ವಾಸನೆಯುಕ್ತ ಬೆವರು, ಬಾಯಿಯ ಕೆಟ್ಟವಾಸನೆಯ ಸಮಸ್ಯೆಯನ್ನಂತೂ ಪ್ರತ್ಯೇಕ ಹೇಳಬೇಕಾಗಿಲ್ಲ.
ಗರಂಮಸಾಲೆ: ಕೆಲವು ದಿಢೀರ್ ಅಡುಗೆಗಳ ಸ್ವಾದವನ್ನು ದಿಢೀರ್ ಹೆಚ್ಚಿಸುವ್ಲಿ ಗರಂಮಸಾಲೆಯ ಪಾತ್ರ ದೊಡ್ಡದು. ವಿವಿಧ ಮಸಾಲೆಗಳನ್ನು ಪುಡಿ ಮಾಡಿ ಮಾಡುವ ಈ ಗರಂ ಮಸಾಲೆ ಎಂಬ ಮಿಶ್ರಣವನ್ನು ಆದಷ್ಟು ಕಡಿಮೆ ಬಳಸಿದರೆ, ಬೇಸಗೆಯಲ್ಲಿ ಆರೋಗ್ಯವೇ ಭಾಗ್ಯವಾಗಬಹುದು. ಇಲ್ಲವಾದಲ್ಲಿ ಪದೇ ಪದೇ ಎದೆಯುರಿ ಕಟ್ಟಿಟ್ಟ ಬುತ್ತಿ. ಹಾಗಾಗಿ ಆದಷ್ಟೂ ಮಸಾಲೆಯುಕ್ತ ಆಹಾರ ಸೇವನೆ ಬೇಸಗೆಯಲ್ಲಿ ಕಡಿಮೆ ಮಾಡಿ, ತಂಪಾದ ಹಿತಮಿತ ಆಹಾರ ಸೇವನೆ ಜೊತೆಗೆ ದೇಹಕ್ಕೆ ತಂಪೆರೆಯುವ ಪ್ರಕೃತಿದತ್ತ ಪಾನೀಯಗಳನ್ನು ಇವುಗಳ ಸ್ಥಾನದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.
ಇದನ್ನೂ ಓದಿ: Indian Spices: ಮನೆಯೊಳಗಿನ ಮಸಾಲೆ ಡಬ್ಬಿಯಲ್ಲಿದೆ ಮನೆಯವರ ಆರೋಗ್ಯ!