ಎಲ್ಲೆಡೆ ಈಗ ಜ್ವರದ ಹವಾ. ಶೀತ, ನೆಗಡಿ, ಕೆಮ್ಮು, ಕಫ ಇತ್ಯಾದಿ ಎಲ್ಲರನ್ನೂ ಬಾಧಿಸುತ್ತಿದೆ. ಇದ್ದಕ್ಕಿದ್ದಂತೆ ಬದಲಾದ ಹವಾಮಾನ, ಬಿಸಿಲ ಬೇಗೆ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ ವೈರಸ್ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತದೆ. ಹಾಗಾಗಿಯೇ ಯಾವಾಗಲೂ ಬದಲಾಗುವ ಋತುವಿನ ಸಂದರ್ಭ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಉತ್ತಮ ಆಹಾರ, ಜಂಕ್‌ನಿಂದ ದೂರವಿರುವುದು, ಹವಾಮಾನಕ್ಕೆ ತಕ್ಕ ಹಾಗೆ ಕೆಲವೊಂದು ಆಹಾರಗಳ ಸೇರ್ಪಡೆ ಎಲ್ಲವೂ ನಮ್ಮನ್ನು ರೋಗಗಳಿಂದ ಮುಕ್ತವಾಗಿಡಬಲ್ಲದು. ಹಾಗಾಗಿ, ಇಂಥ ಸಂದರ್ಭ ಯಾವೆಲ್ಲ ಆಹಾರವನ್ನು ನಾವು ನಮ್ಮ ನಿತ್ಯಾಹಾರ ಪದ್ಧತಿಯಲ್ಲಿ ಸೇರ್ಪಡೆಗೊಳಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು ನೋಡೋಣ.
೧. ಸಿಟ್ರಸ್ ಹಣ್ಣುಗಳು: ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವ ಹಣ್ಣುಗಳು ಹಾಗೂ ಆಹಾರ ಪದಾರ್ಥಗಳು ನಮ್ಮಲ್ಲಿ ರೋಗ ನಿರೋಧಕತೆಯನ್ನೂ ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ. ಕಿತ್ತಳೆ, ಮುಸಂಬಿ, ನಿಂಬೆಹಣ್ಣು ಮತ್ತಿತರ ಸಿ ವಿಟಮನಿನ್ ಸಮೃದ್ಧ ಹಣ್ಣುಗಳನ್ನು ತಿನ್ನುವ ಮೂಲಕ ಶೀತ ನೆಗಡಿಯಿಂದ ದೂರವಿರಬಹುದು.
೨. ಬಾದಾಮಿ: ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾದಾಮಿಯನ್ನು ನಿತ್ಯವೂ ಸೇವಿಸುವುದು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಇ, ಝಿಂಕ್, ಮೆಗ್ನೀಶಿಯಂ ಹಾಗೂ ಪ್ರೊಟೀನ್‌ಗಳು ಹೇರಳವಾಗಿದ್ದು ಇವೆಲ್ಲವೂ ರೋಗನಿರೋಧಕತೆಯನ್ನು ಹೆಚ್ಚು ಮಾಡುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ನಿತ್ಯವೂ ಮೂರ್ನಾಲ್ಕು ಬಾದಾಮಿಯನ್ನು ನೆನೆಸಿ, ಸಿಪ್ಪೆ ಸುಲಿದು ತಿನ್ನುವ ಅಭ್ಯಾಸ ಒಳ್ಳೆಯದು.
೩. ಅರಿಶಿನ: ಅರಿಶಿನ ಎಂಬ ಹಳದಿ ಚಿನ್ನ ನಿಜಕ್ಕೂ ದೇಹದ ಮೇಲೆ ಮಾಡುವ ಮ್ಯಾಜಿಕ್ ದೊಡ್ಡದು. ಇದರಿಂದ ಅನೇಕ ಉಪಯೋಗಗಳಿವೆ. ಹಾಲಿಗೆ ಅರಿಶಿನ ಹಾಕಿ ಬಿಸಿ ಮಾಡಿ ಕುಡಿಯುವುದರ ಮೂಲಕ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಬಹುದು.
ಇದನ್ನೂ ಓದಿ: Vitamin C Benefits: ವಿಟಮಿನ್ ಸಿ ನಮಗೇಕೆ ಬೇಕು? ಇಲ್ಲಿವೆ ಕಾರಣಗಳು
೪. ಗ್ರೀನ್ ಟೀ: ಗ್ರೀನ್ ಟೀಯನ್ನು ಕುಡಿಯುವುದರಿಂದ ಕೇವಲ ತೂಕ ಇಳಿಸುವುದಷ್ಟೇ ಅಲ್ಲ ಹಲವಾರು ಆರೋಗ್ಯಕರ ಲಾಭಗಳಿವೆ. ಗ್ರೀನ್ ಟೀಯಲ್ಲಿ ರೋಗಾಣುಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್‌ಗಳಿದ್ದು ಇದನ್ನು ಸೇವಿಸುವುದರಿಂದ ರೋಗಾಣುಗಳಿಂದ ದೂರವಿರಬಹುದು.
೫. ಮಜ್ಜಿಗೆ: ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಕೇವಲ ದೇಹವನ್ನು ತಂಪು ಮಾಡಿಕೊಳ್ಳುವ ಲಾಭ ಮಾತ್ರ ಇದೆ ಎಂದರೆ ತಪ್ಪಾದೀತು. ಮಜ್ಜಿಗೆ ಕ್ಯಾಲ್ಶಿಯಂನಿಂದ ಸಮೃದ್ಧವಾಗಿರುವ ಪೇಯ. ಅಷ್ಟೇ ಅಲ್ಲ. ಇದರಲ್ಲಿ ದೇಹ ರೋಗನಿರೋಧಕತೆಯನ್ನು ಹೆಚ್ಚು ಮಾಡಿಸಿಕೊಳ್ಳಲು ಪೂರಕ ಸತ್ವವಿದೆ. ಮಜ್ಜಿಗೆಗೆ ಚಿಟಿಕೆ ಕಲ್ಲುಪ್ಪು, ಕರಿಮೆಣಸು, ಪುದಿನ ಇತ್ಯಾದಿಗಳನ್ನು ಜಜ್ಜಿ ಸೇರಿಸಿ ಕುಡಿಯುವುದರಿಂದ ತಾಜಾ ಅನುಭೂತಿಯನ್ನು ಪಡೆಯಬಹುದು.
ಇಷ್ಟೇ ಅಲ್ಲ, ಎಲ್ಲ ಕಾಲದಲ್ಲೂ, ನಮ್ಮ ನಿತ್ಯಾಹಾರ ಪದ್ಧತಿಯಲ್ಲಿ ಬೆಳ್ಳುಳ್ಳಿ, ಶುಂಠಿ, ಕಿವಿ, ಪಪ್ಪಾಯಿ, ಬ್ರೊಕೋಲಿ, ಬಸಳೆ, ಮೊಸರು, ದೊಣ್ಣೆ ಮೆಣಸಿನಕಾಯಿ ಇತ್ಯಾದಿಗಳ ಜೊತೆಗೆ ಹಲವು ಬೀಜಗಳನ್ನೂ ಸೇರಿಸುವುದರಿಂದ ಸದೃಢವಾಗಿರಬಹುದು. ಋತು ಬದಲಾವಣೆಯ ಸಂದರ್ಭ ಉಂಟಾಗುವ ರೋಗಗಳಿಂದ ದೇಹ ನಿರೋಧಕತೆ ಬೆಳೆಸಿಕೊಂಡು ಆರೋಗ್ಯಪೂರ್ಣವಾಗಿರಬಹುದು.
ಇದನ್ನೂ ಓದಿ: Foods High In Vitamin C: ನಿತ್ಯದ ಆಹಾರದಲ್ಲಿ ವಿಟಮಿನ್ ಸಿ ಹೆಚ್ಚಿಸಿಕೊಳ್ಳುವುದು ಹೀಗೆ