Site icon Vistara News

Health Tips: ನಿಮ್ಮ ಪ್ರಿಯವಾದ ಅನ್ನವನ್ನು ಬಿಡದೆ, ತೂಕ ಇಳಿಸಿಕೊಳ್ಳಬಹುದು ಗೊತ್ತೇ?

rice health tips

ದಕ್ಷಿಣ ಭಾರತವೂ ಸೇರಿದಂತೆ ನಮ್ಮದೇಶದ ಹಲವು ರಾಜ್ಯಗಳಲ್ಲಿ ಅನ್ನ ಮುಖ್ಯ ಆಹಾರ. ನಿತ್ಯವೂ ಅನ್ನ ತಿನ್ನದಿದ್ದರೆ ಆ ದಿನದ ಆಹಾರ ಸರಿಯಾಗಿ ಆಗಿಲ್ಲ, ಮನಸ್ಸು ದೇಹ ಎರಡೂ ತೃಪ್ತಿಯನ್ನು ಕಂಡಿಲ್ಲ ಎಂಬ ಭಾವನೆ ಹಲವರಿಗೆ. ಇದು ಸಹಜ ಕೂಡಾ. ಅನ್ನದ ಜೊತೆಗೆ ಕಲಸಿಕೊಳ್ಳಲು ಕೇವಲ ಉಪ್ಪಿನಕಾಯಿ ಸಿಕ್ಕಿದರೂ ಸಾಕು ಸ್ವರ್ಗ ಸುಖ ಎಂಬುದು ಹಲವರ ಅನುಭವ ಕೂಡಾ. ಯಾಕೆಂದರೆ ಅನ್ನ ಎಂಬ ನಿತ್ಯಾಹಾರ ನಮಗೆ ಕೇವಲ ಒಂದು ಆಹಾರವಷ್ಟೇ ಅಲ್ಲ, ಅದು ನಾಡಿಮಿಡಿತ, ಭಾವನೆ! ಇಷ್ಟು ಪ್ರೀತಿಸುವ ಅನ್ನದ ವಿಚಾರಕ್ಕೆ ಬಂದರೆ, ಬಹುತೇಕರಿಗೆ ಅನ್ನ ಆರೋಗ್ಯಕ್ಕೆ ಹಾಳು, ಅನ್ನದಿಂದ ತೂಕ ಹೆಚ್ಚಾಗುತ್ತದೆ (Carbohydrate) ಎಂಬ ನಂಬಿಕೆಗಳೇ ನಮಗೆ ಹೆಚ್ಚು. ಅದಕ್ಕಾಗಿ ತೂಕ ಇಳಿಸುವ ಮಂದಿ ಅನ್ನಕ್ಕೆ ಗುಡ್‌ ಬೈ ಹೇಳಿ ಬೇರೆ ಆಹಾರಗಳತ್ತ ಹೊರಳುವುದುಂಟು. ಆದರೆ ಇದು ನಿಜವಾಗಿಯೂ ಅಗತ್ಯವಿದೆಯೇ? ದೇಹಕ್ಕೆ ಒಗ್ಗಿಹೋದ ನಮ್ಮ ನಿತ್ಯಾಹಾರವನ್ನು ಬದಲಿಸಿ ತೂಕ ಇಳಿಸುವ (Weight loss) ಸಾಹಸ ಬೇಕೇ ಎಂಬ ಬಗ್ಗೆ ಹಲವರಲ್ಲಿ ಜಿಜ್ಞಾಸೆಯೂ ಇದೆ. ಆದರೆ, ಉಪಾಯವಿಲ್ಲದೆ ಎಲ್ಲರೂ ಅನುಸರಿಸುವ ತಂತ್ರದಂತೆ ಹಾಗೂ ಹೆಚ್ಚು ಪ್ರಸಿದ್ಧಿಯಲ್ಲಿರುವ ಮಾರ್ಗವನ್ನೇ ಅನುಸರಿಸಿ ಊಟ ಬಿಡುತ್ತಾರೆ!

ಹಾಗಾದರೆ ಅನ್ನ ತಿನ್ನುವುದರಿಂದ ತೂಕ ಹೆಚ್ಚುತ್ತದೆಯೇ ಎಂಬ ಪ್ರಶ್ನೆಗೆ ನಿಜವಾದ ಉತ್ತರ ʻಇಲ್ಲʼ. ಹೌದು. ನಾವು ನೀವು ಅಂದುಕೊಂಡಷ್ಟು ಅನ್ನ ಕೆಟ್ಟದ್ದಲ್ಲ. ಆದರೆ, ಸರಿಯಾದ ಕ್ರಮದಲ್ಲಿ ಅನ್ನು ಉಣ್ಣುವುದನ್ನು ನಾವು ಕಲಿತುಕೊಂಡರೆ ಅನ್ನ ಯಾವ ತೊಂದರೆಯನ್ನೂ ನಮಗೆ ಕೊಡುವುದಿಲ್ಲ. ಬದಲಾಗಿ, ನಮಗೆ ಯಾವ ತೊಂದರೆಯೂ ಆಗದಂತೆ ನಾವು ನಮ್ಮ ಆರೋಗ್ಯವನ್ನೂ ತೂಕವನ್ನೂ ಕಾಯ್ದುಕೊಳ್ಳಬಹುದು. ನಮಗೆ ಇಷ್ಟವಾದ ಆಕಾರದಲ್ಲಿ ನಮ್ಮ ದೇಹ ಪ್ರಕೃತಿಗೆ ಅನುಸಾರವಾಗಿ ನಾವಿರಬಹುದು.

ಹಾಗಾದರೆ ಅನ್ನ ತಿನ್ನುವ ಮೂಲಕ ತೂಕ ಇಳಿಸಬಹುದೇ ಎಂಬ ಪ್ರಶ್ನೆಯೂ ಇದರ ಜೊತೆಗೇ ಬರುವುದು ನಿಜವೇ. ಆದರೆ ಇದು ಸ್ವಲ್ಪ ಸವಾಲೆಸೆಯುವಂತಹ ಪ್ರಶ್ನೆ. ಯಾಕೆಂದರೆ ತೂಕ ಇಳಿಕೆಯ ನೆಲೆಯಲ್ಲಿ ನೋಡಿದರೆ ಅನ್ನ ಒಳ್ಳೆಯದೂ ಕೆಟ್ಟದ್ದೂ ಆಗಿ ಏಕಕಾಲದಲ್ಲಿ ವರ್ತಿಸಬಲ್ಲದು. ಎಲ್ಲರಿಗೂ ಗೊತ್ತಿರುವಂತೆ ಅನ್ನದಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್‌ ಇರುವುದರಿಂದ ಅನ್ನದಿಂದ ತೂಕ ಹೆಚ್ಚಾಗಲೂಬಹುದು. ಆದರೆ, ಅನ್ನವನ್ನು ಕರಗಿಸುವುದು ಸುಲಭ. ಅನ್ನದ ಜೊತೆಗೆ ಆರೋಗ್ಯಕರ ಆಹಾರಗಳನ್ನು ಸೇರಿಸಿ ತಿಂದರೆ, ಇದು ದೇಹಕ್ಕೆ ಅತ್ಯಂತ ಒಳ್ಳೆಯ ಕೆಲಸವನ್ನೇ ಮಾಡುತ್ತದೆ ಎಂಬುದು ನಿಜ.

ಹಾಗಾದರೆ ತೂಕ ಇಳಿಸುವ ಮಂದಿ ಅನ್ನ ತಿನ್ನುವುದನ್ನು ಬಿಡದೆ ತೂಕ ಇಳಿಸುವುದು ಹೇಗೆ ಎಂಬ ಪ್ರಶ್ನೆ ಈಗ ನಿಮ್ಮನ್ನು ಕಾಡಬಹುದು. ಅಂತಹ ಸಂದೇಹ ಇರುವ ಮಂದಿ ಅನ್ನ ತಿನ್ನುವಾಗ ಈ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ: Weight Loss: ವೇಗವಾಗಿ ತೂಕ ಇಳಿಸುವ ಶಾರ್ಟ್‌ಕಟ್‌ ಇದೆಯೇ? ಇಲ್ಲಿವೆ ಟಿಪ್ಸ್!

1. ಅನ್ನ ತಿನ್ನಿ, ಆದರೆ ಷ್ಟು ಎಂಬುದರ ಮೇಲೆ ಗಮನ ಇರಲಿ. ತೂಕ ಇಳಿಸುವ ಮಂದಿ ನೀವಾಗಿದ್ದರೆ, ಒಂದು ಊಟಕ್ಕೆ ಒಂದು ಬೌಲ್‌ ಅನ್ನ ತಿಂದರೆ ಸಾಕು. ಆದರೆ, ಇದರ ಜೊತೆಗೆ ಸಾಕಷ್ಟು ಪ್ರೊಟೀನ್‌ ಇರುವ ಮೊಳಕೆ ಕಾಳುಗಳು, ಬೇಳೆ ಕಾಳುಗಳು, ತರಕಾರಿಗಳು ಅನ್ನದ ಎರಡು ಪಟ್ಟಾದರೂ ಇರಲಿ.

2. ಅನ್ನವನ್ನು ಚೆನ್ನಾಗಿ ಬೇಯಿಸಿ. ಅನ್ನವನ್ನು ಬೇಯಿಸುವಾಗ ಹೆಚ್ಚು ನೀರು ಹಾಕಿ ಬೇಯಿಸಿ ಆಮೇಲೆ ಬೆಂದ ಅನ್ನದಿಂದ ಗಂಜಿಯನ್ನು ಬೇರ್ಪಡಿಸುವುದರಿಂದ ಅನ್ನದಲ್ಲಿರುವ ಹೆಚ್ಚಿನ ಸ್ಟಾರ್ಚ್‌ ಅಂದರೆ ಗಂಜಿಯ ಅಂಶವನ್ನು ತೆಗೆಯಬಹುದು.

3. ತೂಕ ಇಳಿಸುವ ಮಂದಿ ಅನ್ನವನ್ನು ಮಧ್ಯಾಹ್ನದೂಟಕ್ಕೆ ಉಣ್ಣುವುದು ಬೆಸ್ಟ್‌. ಸರಿಯಾದ ಸಮಯಕ್ಕೆ ಅನ್ನ ಉಣ್ಣುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅನ್ನಕ್ಕಿಂತ ಹೆಚ್ಚು ತರಕಾರಿ, ದಾಲ್‌ ನಿಮ್ಮ ತಟ್ಟೆಯಲ್ಲಿರಲಿ. ಈ ಕ್ರಮಗಳನ್ನು ಅನುಸರಿಸಿದರೆ ಖಂಡಿತಾ ಅನ್ನ ತಿನ್ನುತ್ತಲೇ ತೂಕ ಇಳಿಸಿಕೊಳ್ಳುವ ನಿಮ್ಮ ಗುರಿಯನ್ನು ನೀವು ತಲುಪಬಹುದು.

ಇದನ್ನೂ ಓದಿ: Carbohydrates | ಪ್ರೊಟೀನೋ… ಕಾರ್ಬೋಹೈಡ್ರೇಟೋ…? ಗೊಂದಲಕ್ಕೆ ಇಲ್ಲಿದೆ ಮದ್ದು!

Exit mobile version