ಇತ್ತೀಚಿನ ದಿನಗಳಲ್ಲಿ ಅಡುಗೆ ಮನೆಯೆಲ್ಲವೂ ಸಾಕಷ್ಟು ವೈವಿಧ್ಯಮಯ ಉಪಕರಣಗಳಿಂದ ತುಂಬಿ ಹೋಗಿವೆ. ಅಡುಗೆಯ ಕೆಲಸ ವೇಗವಾಗಿ, ರುಚಿಯಾಗಿ ಆಗಲು ನಾನಾ ಬಗೆಯ ಉಪಕರಣಗಳಿಂದು ಮನುಷ್ಯನ ನಿತ್ಯದ ಸಾಥಿಯಾಗಿವೆ. ಆದರೆ, ಇವುಗಳಿಂದಾಗಿ ನಮ್ಮ ಹಳೆಯ ಪದ್ಧತಿಗಳ ಮೂಲಕ ಅಡುಗೆ ಮಾಡುವುದು ಬಹುತೇಕ ಕಡಿಮೆಯಾಗಿದೆ. ಹೀಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಾಗುವ ಉಪಕರಣಗಳ ಪೈಕಿ ಏರ್ ಫ್ರೈಯರ್ ಕೂಡಾ ಒಂದು. ಏರ್ ಫ್ರೈಯರ್ ಎಂಬ ಪುಟಾಣಿ ಉಪಕರಣ ಬಿಸಿ ಗಾಳಿಯನ್ನು ಬಳಸಿ ಅಡುಗೆ ಮಾಡುವ ಉಪಕರಣವಾಗಿದ್ದು ಇದು ಕೆಲವು ಬಗೆಯ ಫಾಸ್ಟ್ ಫುಡ್ ಸೇರಿದಂತೆ, ಎಣ್ಣಿರಹಿತ ಅಡುಗೆಯಲ್ಲಿಂದು ಹೆಚ್ಚು ಬಳಕೆಯಾಗುತ್ತಿದೆ. ಹೀಗಾಗಿ, ಡಯಟ್ ಪ್ರಿಯರು, ಫಿಟ್‌ನೆಸ್ ಪ್ರಿಯರು ಇದರ ಬಳಕೆಯನ್ನಿಂದು ಹೆಚ್ಚು ಮಾಡಿದ್ದಾರೆ. ಆದರೆ ಇದು ಎಲ್ಲ ಅಡುಗೆಗೂ ಸೂಕ್ತವಲ್ಲ. ಹಾಗಾದರೆ ಬನ್ನಿ, ಏರ್ ಫ್ರೈಯರ್‌ನಲ್ಲಿ ಯಾವ ಬಗೆಯ ಅಡುಗೆಯನ್ನು ನಾವು ಮಾಡಬಾರದು ಎಂಬುದನ್ನು ನೋಡೋಣ.
1. ಪಕೋಡಾ, ಬಜ್ಜಿ ಮಾಡಬೇಡಿ: ನೀರು ಹಾಕಿ ರುಬ್ಬಿಕೊಂಡ ತೇವಯುಕ್ತ ಹಿಟ್ಟುಗಳನ್ನು ಉಪಯೋಗಿಸಿ ಮಾಡುವ ತಿಂಡಿಗಳನ್ನು ಮಾಡಲು ಏರ್ ಫ್ರೈಯರ್ ಬಳಸಬಾರದು. ಅದು ಪಕೋಡಾ ಇರಲಿ, ವಡಾವೇ ಆಗಿರಲಿ, ಗರಿಗರಿಯಾಗಿ ಎಣ್ಣೆ ಕಡಿಮೆ ಹಾಕಿ ಏರ್ ಫ್ರೈಯರ್‌ನಲ್ಲಿ ಮಾಡುತ್ತೇನೆ ಎಂದು ನೀವಂದುಕೊಂಡರೆ ಅದು ಶುದ್ಧ ಮೂರ್ಖತನ. ಯಾಕೆಂದರೆ ಇದು ಎಣ್ಣೆ ಕಡಿಮೆ ಬಳಕೆ ಮಾಡುತ್ತದೆ ಎಂದು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು. ಆದರೆ ಖಂಡಿತವಾಗಿಯೂ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದಷ್ಟು ಗರಿಗರಿಯಾಗಿ, ರುಚಿರುಚಿಯಾಗಿ ಏರ್ ಫ್ರೈಯರ್‌ನಲ್ಲಿ ಆಗದು. ಅಷ್ಟೇ ಅಲ್ಲ, ಇದು ಕೊನೆಗೆ ನಿರಾಶೆಯಲ್ಲಿಯೇ ಅಂತ್ಯಗೊಳ್ಳುವುದರಿಂದ ಅಪರೂಪಕ್ಕೊಮ್ಮೆ ಡೀಪ್ ಫ್ರೈಯ ತಿಂಡಿಗಳನ್ನು ತಿನ್ನಬಹುದು ಎಂದು ನಿಮ್ಮನ್ನು ನೀವು ಸಮಾಧಾನಿಸಿಕೊಂಡು ಸಹಜವಾಗಿ ಮಾಡುವ ಬಗೆಯಲ್ಲಿಯೇ ಮಾಡಿ ತಿನ್ನಿ.
2. ಚೀಸ್ ಬಳಕೆ: ಚೀಸ್ ಹಾಕಿ ಮಾಡುವ ತಿನಿಸುಗಳನ್ನು ಏರ್ ಫ್ರೈಯರ್‌ನಲ್ಲಿ ಅದ್ಭುತವಾಗಿ ಮಾಡಬಹುದು ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಎಣಿಕೆ ತಪ್ಪು. ಯಾಕೆಂದರೆ ಚೀಸ್ ಏರ್ ಫ್ರೈಯರ್‌ನಲ್ಲಿ ಸರಿಯಾಗಿ ಕರಗದು. ಹಾಗಾಗಿ ಚೀಸ್‌ಗೆ ಮೈಕ್ರೋವೇವ್ ಅವನ್ ಸೂಕ್ತ.
3. ಬ್ರೊಕೊಲಿ: ಬ್ರೊಕೋಲಿಯನ್ನೂ ಏರ್ ಫ್ರೈಯರ್‌ನಲ್ಲಿಡಬಾರದು. ಇದು ಬ್ರೊಕೋಲಿಯನ್ನು ಒಣಕಲಾಗಿಸುತ್ತದೆ. ರುಚಿಹೀನವನ್ನಾಗಿಸುತ್ತದೆ. ಇದರಲ್ಲಿರುವ ತೇವಾಂಶ ಪೂರ್ತಿ ಹೋಗಿ ಇದು ಸೀದು ಹೋಗುವುದೇ ಹೆಚ್ಚು. ಆದರೆ ನಿಮಗೆ ಬ್ರೊಕೋಲಿಯನ್ನು ಏರ್ ಫ್ರೈಯರ್‌ನಲ್ಲಿಡಬೇಕಾದ ಪರಿಸ್ಥಿತಿ ಬಂದರೆ ಸ್ವಲ್ಪ ನೀರು ಚಿಮುಕಿಸಿ ಅಡುಗೆ ಮಾಡಿ.
ಇದನ್ನೂ ಓದಿ: Health Tips: ತೇಗುವುದೇ ನಿಮ್ಮ ಸಮಸ್ಯೆಯೇ? ಹಾಗಾದರೆ ಇಲ್ಲಿದೆ ನಿಮಗೆ ಉತ್ತರ!
4. ಚಿಕನ್: ಇಡಿಯ ಚಿಕನ್ ಅನ್ನು ಏರ್ ಫ್ರೈಯರ್‌ನಲ್ಲಿಟ್ಟು ಬೇಯಿಸಲು ಹೊರಡಬೇಡಿ. ಇದರ ಗಾತ್ರ ದೊಡ್ಡದಿರುವುದರಿಂದ ಸರಿಯಾಗಿ ಇದು ಬೇಯದು. ಒಳಭಾಗದಲ್ಲಿ ಬೇಯದೆ ಹಾಗೇ ಉಳಿಯುವ ಸಂದರ್ಭವೇ ಹೆಚ್ಚು. ಹೊರಗಿನ ಭಾಗ ಹೆಚ್ಚು ಬೆಂದು, ಸೀದು ಒಳಭಾಗ ಬೇಯದೆ ಹಾಗೆ ಉಳಿಯಬಹುದು.
5. ಪಾಪ್‌ಕಾರ್ನ್: ಪಾಪ್‌ಕಾರ್ನ್ ಯಾರಿಗಿಷ್ಟವಿಲ್ಲ ಹೇಳಿ. ಮನೆಯಲ್ಲಿ ಎಲ್ಲರೂ ಜೊತೆಯಾಗಿ ಸಿನಿಮಾ ನೋಡುವಾಗ ಫಟಾಫಟ್ ಪಾಪ್‌ಕಾರ್ನ್ ಮಾಡುತ್ತೇನೆ ಎಂದು ಏರ್ ಫ್ರೈಯರ್‌ನಲ್ಲಿ ಮಾಡುವ ಪ್ರಯತ್ನ ಮಾಡಬೇಡಿ. ಯಾಕೆಂದರೆ ಮೈಕ್ರೋವೇವ್ ಅವನ್‌ನಲ್ಲಿ ಬೇಗ ಮಾಡಲು ಸಾಧ್ಯವಾಗುವಂತೆ ಇಲ್ಲೂ ಸಾಧ್ಯ ಎಂದು ನೀವು ಅಂದುಕೊಂಡರೆ ನಿಮ್ಮ ಎಣಿಕೆ ತಪ್ಪು. ಯಾಕೆಂದರೆ ಮೈಕ್ರೋವೇವ್ ತಲುಪಬಹುದಾದ ಉಷ್ಣತೆಯ ಮಟ್ಟಕ್ಕೆ ಏರ್ ಫ್ರೈಯರ್ ತಲುಪುವುದಿಲ್ಲ. ಹಾಗೂ, ಪಾಪ್ ಕಾರ್ನ್‌ಗೆ ಹೆಚ್ಚು ಉಷ್ಣತೆಯ ಅಗತ್ಯ ಇರುವುದರಿಂದ ಪಾಪ್ ಕಾರ್ನ್ ಮಾಡಲು ಏರ್ ಫ್ರೈಯರ್‌ನಲ್ಲಿ ಸಾದ್ಯವಾಗುವುದಿಲ್ಲ.
ಇದನ್ನೂ ಓದಿ: Health Tips: ನಿಮ್ಮ ಪ್ರಿಯವಾದ ಅನ್ನವನ್ನು ಬಿಡದೆ, ತೂಕ ಇಳಿಸಿಕೊಳ್ಳಬಹುದು ಗೊತ್ತೇ?