Site icon Vistara News

Health Tips: ಊಟದ ಜೊತೆಗೆ ನೀರು ಕುಡಿಯುವುದು ಕೆಟ್ಟದ್ದೋ, ಒಳ್ಳೆಯದೋ?

water with lunch

ಈ ಪ್ರಶ್ನೆ, ಗೊಂದಲ ಸಾಮಾನ್ಯವಾಗಿ ಎಲ್ಲರಲ್ಲೂ ಇರುವಂಥದ್ದು. ಆದರೂ, ಊಟಕ್ಕೆಂದು ಟೇಬಲ್‌ ಮುಂದೆ ಕೂತರೆ ಕೈ ನಿರಾಯಾಸವಾಗಿ ಮುಂದೆ ಇಟ್ಟಿರುವ ನೀರಿನ ಮೇಲೆ ಹೋಗುತ್ತದೆ. ಗಟಗಟನೆ ಕುಡಿದೂ ಬಿಡುತ್ತೇವೆ. (drinking water) ಊಟದ ಜೊತೆಗೆ ನೀರಿಲ್ಲದಿದ್ದರೆ, ಏನೋ ಕಳೆದುಕೊಂಡಂತೆ ಭಾವ ಶುರುವಾಗುತ್ತದೆ. ಗಂಟಲು ಕಟ್ಟಿದರೆ, ಊಟ ಸರಿಯಾಗಿ ಗಂಟಲೊಳಗೆ ಇಳಿಯದಿದ್ದರೆ, ಗಂಟಲೊಣಗಿದಂತಾದರೆ ಇತ್ಯಾದಿ ಆಲೋಚನೆಗಳು ಓಡುತ್ತವೆ. ಆಗಾಗ ಕುಡಿಯಲು ನೀರಿಲ್ಲದಿದ್ದರೆ ಊಟ ಸಾಧ್ಯವೇ ಇಲ್ಲ ಎಂಬ ಭಾವನೆ ಬಹುತೇಕ ಎಲ್ಲರದ್ದು. ಆದರೆ ಈ ನಿಮ್ಮ ಅಭ್ಯಾಸವೇ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸತ್ಯ ನಿಮಗೆ ಗೊತ್ತೇ?

ಹೌದು. ಊಟದ ಜೊತೆಗೆ ನೀರು ಕುಡಿಯುವುದು ಒಳ್ಳೆಯದಲ್ಲ. ಇದರಿಂದ ನೀವು ಸಾಕಷ್ಟು ಜೀರ್ಣಕ್ರಿಯೆಯ ಸಂಬಂಧೀ ತೊಂದರೆಗಳನ್ನು ಆಹ್ವಾನಿಸಿಕೊಂಡಂತೆ. ಹಾಗಾದರೆ, ಬನ್ನಿ ಈ ಗೊಂದಲವನ್ನು ನಿವಾರಿಸಿಕೊಳ್ಳೋಣ.

1. ಇದು ಜೀರ್ಣರಸದ ಶಕ್ತಿಯನ್ನು ಕುಂದಿಸುತ್ತದೆ: ಆಹಾರವನ್ನು ಒಳಗೆ ತೆಗೆದುಕೊಳ್ಳುವ ಸಂದರ್ಭ ದೇಹದ ಆಯಾ ಅನ್ನಾಂಗಗಳು ಬಿಡುಗಡೆ ಮಾಡುವ ಜೀರ್ಣರಸಗಳು ಆಹಾರವನ್ನು ಕರಗಿಸುವಲ್ಲಿ ನೆರವಾಗುತ್ತದೆ. ನಮಗೆ ಹಸಿವಾದಾಗ, ಮೊದಲು ನೀರು ಕುಡಿದರೆ, ಈ ಎಲ್ಲಾ ರಸಗಳು ನೀರಿನ ಸೇರ್ಪಡೆಯಿಂದ ತಮ್ಮ ಶಕ್ತಿ ಕಳೆದುಕೊಳ್ಳುತ್ತದೆ ಅಂದರೆ ಈ ರಸಗಳ ಸಾರಗುಂದುತ್ತದೆ. ಹೀಗಾದ ತಕ್ಷಣ, ಆಹಾರದ ಕರಗುವಿಕೆ ನಿಧಾನವಾಗುವುದಲ್ಲದೆ, ಜೀರ್ಣ ಸಂಬಂಧೀ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಆಹಾರ ಕರಗದೆಯೂ ಉಳಿಯಬಹುದು.

2. ನೀರು ಕುಡಿಯುವುದರಿಂದ ಜೊಲ್ಲುರಸದ ಉತ್ಪತ್ತಿಯೂ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿರುವ ಜೀರ್ಣರಸಗಳಿಗೆ ಆದಂತೆಯೇ ಜೊಲ್ಲುರಸದ ಮೇಲೂ ನೀವು ಕುಡಿವ ನೀರು ಪರಿಣಾಮ ಬೀರುತ್ತದೆ. ನೀವು ನೀರು ಕುಡಿದ ತಕ್ಷಣ ಬಾಯಿಯಲ್ಲಿರುವ ಜೊಲ್ಲುರಸ ದುರ್ಬಲಗೊಳ್ಳುತ್ತದೆ. ಅಗಿಯುವ ಮೂಲಕ ಆಹಾರದ ಜೀರ್ಣಕ್ರಿಯೆ ಬಾಯಿಯಿಂದಲೇ ಆರಂಭವಾಗುವುದರಿಂದ ಇದು ಖಂಡಿತ ಪರಿಣಾಮ ಬೀರುತ್ತದೆ. ಹೀಗಾಗಿ ಊಟ ಮಾಡುತ್ತಿರುವಾಗ ಆಗಾಗ ನೀರು ಕುಡಿದರೆ, ಇವುಗಳ ಗತಿ ನಿಧಾನವಾಗುತ್ತದೆ.

3. ಬಹಳಷ್ಟು ಜನರಿಗೆ ಅಸಿಡಿಟಿ ಸಮಸ್ಯೆಯಿರುತ್ತದೆ. ಆದರೆ, ಸಮಸ್ಯೆಯ ಮೂಲ ಯಾವುದು ಎಂದು ಗೊತ್ತಿರುವುದಿಲ್ಲ. ಜೀರ್ಣರಸಗಳೊಂದಿಗೆ ಆಹಾರ ಸೇರಿ ಸಣ್ಣ ಸಣ್ಣ ಕಣಗಳಾಗಿ ಮಾರ್ಪಡುವ ಹೊತ್ತಲ್ಲಿ ನೀರೂ ಸೇರಿಕೊಂಡರೆ, ಇವುಗಳ ಗತಿ ಸಹಜವಾಗಿಯೇ ನಿಧಾನವಾಗುತ್ತದೆ. ಹೀಗೆ ಆಹಾರ ಸರಿಯಾಗಿ ಸರಿಯಾದ ಕ್ರಮದಲ್ಲಿ ಜೀರ್ಣವಾಗದಿದ್ದಾಗ ಅರೆ ಜೀರ್ಣವಾದ ಆಹಾರ ಮುಂದಿನ ಪ್ರಕ್ರಿಯೆಗೆ ತಳ್ಳಲ್ಪಡುತ್ತದೆ. ಹೀಗೆ ಅನ್ನನಾಳಕ್ಕೆ ಬಂದಿಳಿದ ಆಹಾರ ಎದೆಯುರಿ ಹಾಗೂ ಅಸಿಡಿಟಿಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: Health Tips: ಹುಷಾರು! ಸಿಗರೇಟಿನ ಬೂದಿಯಿಂದಲೂ ಚರ್ಮರೋಗ ಬರಬಹುದು!

4. ಊಟ ಮಾಡುವಾಗ ಮಧ್ಯದಲ್ಲಿ, ಅಥವಾ ಮೊದಲೇ, ಸ್ವಲ್ಪ ಸ್ವಲ್ಪ ನೀರು ಸೇವಿಸುತ್ತಾ ಇದ್ದರೆ ಇನ್ಸುಲಿನ್‌ ಉತ್ಪಾದನೆ ಹೆಚ್ಚಾಗುತ್ತದೆ. ಸಕ್ಕರೆ ಹಾಗೂ ಪಿಷ್ಟ (ಸ್ಟಾರ್ಚ್‌) ಹೆಚ್ಚಿರುವ ಆಹಾರಗಳನ್ನು ಸೇವಿಸಿದ್ದರೆ (ಉದಾಹರಣೆಗೆ ಜೇನುತುಪ್ಪ, ಆಲೂಗಡ್ಡೆ, ವೈಟ್‌ ಬ್ರೆಡ್‌, ಅನ್ನ ಇತ್ಯಾದಿ) ಇನ್ಸುಲಿನ್‌ ಹೆಚ್ಚಾಗುತ್ತದೆ. ನಿಮ್ಮ ದೇಹದಲ್ಲಿ ಆಗ ಪಚನಕ್ರಿಯೆ ನಿದಾನವಾಗಿ, ಅದು ಗ್ಲುಕೋಸ್‌ ಹೆಚ್ಚಿರುವ ಆಹಾರ ಪದಾರ್ಥಗಳ ಕೊಬ್ಬನ್ನು ಹಾಗೆಯೇ ಉಳಿಸಿಬಿಡುತ್ತದೆ. ಆಗ ರಕ್ತದ ಸಕ್ಕರೆಯ ಅಂಶ ಏರುಪೇರಾಗುತ್ತದೆ.

5. ಊಟದ ಮಧ್ಯೆ ಆಗಾಗ ನೀರು ಕುಡಿಯುವುದರಿಂದ ಇನ್ಸುಲಿನ್‌ ಪ್ರಮಾಣದಲ್ಲಿ ಏರಿಕೆಯಾಗುವ ಕಾರಣ ಸಹಜವಾಗಿಯೇ ತೂಕವೂ ಹೆಚ್ಚಾಗುತ್ತದೆ. ಇದರಿಂದ, ಜೀರ್ಣಕ್ರಿಯೆ ದುರ್ಬಲವಾಗಿರುವ ಮಂದಿಯೇ ಬೊಜ್ಜು ಪಡೆದುಕೊಂಡು ತೂಕ ಹೆಚ್ಚಿಸಿಕೊಳ್ಳುತ್ತಾರೆ.

ಹಾಗಾಗಿಯೇ ಆದಷ್ಟೂ ಕಡಿಮೆ ಉಪ್ಪಿರುವ ಆಹಾರ ಒಳ್ಳೆಯದು. ಊಟದ ಸಂದರ್ಭ ಬಾಯಾರಿಕೆಯಾಗುತ್ತದೆ ಎಂದಾದಲ್ಲಿ, ಊಟಕ್ಕಿಂತ ಸುಮಾರು ಅರ್ಧ ಗಂಟೆ ಮೊದಲು ನೀರು ಕುಡಿಯುವುದು ಒಳ್ಳೆಯದು. ಇದರಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ತಪ್ಪಿಸಬಹುದು.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಆಹಾರಕ್ಕೆ ಅನುಗುಣವಾಗಿ ಉತ್ತಮ ಅಭ್ಯಾಸಗಳನ್ನೂ ರೂಢಿಸಿಕೊಳ್ಳುವ ಮೂಲಕ ಆರೋಗ್ಯವನ್ನೇ ಭಾಗ್ಯವನ್ನಾಗಿಸಿಕೊಳ್ಳಬಹುದು.

ಇದನ್ನೂ ಓದಿ: Health Tips: ನಿಃಶಕ್ತಿ, ಶಕ್ತಿಹೀನತೆಯ ಬೇಸಿಗೆಗೆ ನಮಗೆ ಬೇಕು ಶಕ್ತಿವರ್ಧಕ ಆಹಾರ!

Exit mobile version