ನೀವು ತೂಕ ಇಳಿಸುವೆಡೆ ಗಮನ ಹರಿಸುತ್ತಾ ನಿಮ್ಮ ಆಹಾರಾಭ್ಯಾಸಗಳಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರೆ ಖಂಡಿತವಾಗಿ ನೀವು ನಿಮ್ಮ ನಿತ್ಯಾಹಾರದಲ್ಲಿ ಮೊಳಕೆ ಕಾಳುಗಳನ್ನೂ ಸೇರಿಸಿರುತ್ತೀರಿ. ಮೊಳಕೆ ಕಾಳುಗಳಲ್ಲಿ ಸಾಕಷ್ಟು ಪ್ರೊಟೀನ್‌ಗಳೂ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳಿರುವುದರಿಂದಲೇ ಇದನ್ನು ಪೋಷಕಾಂಶಗಳ ವಿಚಾರದಲ್ಲಿ ಪವರ್ ಹೌಸ್ ಎಂದೂ ಕರೆಯುತ್ತಾರೆ. ಕಾಳುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು, ಅದನ್ನು ನೀರಿನಲ್ಲಿ ನೆನೆಹಾಕಿ, ನಂತರ ಒಂದೆರಡು ದಿನ ಮೊಳಕೆ ಬರಿಸಿಕೊಳ್ಳುವುದು ಕೊಂಚ ತಾಳ್ಮೆ ಬೇಡುವ ಕೆಲಸವಾದರೂ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ಸತ್ಯವು ಇಷ್ಟು ತಾಳ್ಮೆಯನ್ನು ಕಾಯುವಂತೆ ಮಾಡುತ್ತದೆ. ಹಾಗಾದರೆ, ಮೊಳಕೆ ಕಾಳುಗಳು ನಿಜವಾಗಿಯೂ ಬೇಕಾದಷ್ಟು ಪ್ರೊಟೀನನ್ನು ಹೊಂದಿವೆಯೇ? ಇದು ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಆಹಾರವೇ? ನಿಮಗೆ ಈ ಸಂದೇಹ ಇನ್ನೂ ಇದ್ದರೆ, ಗೊಂದಲಗಳಿದ್ದರೆ ಇಲ್ಲಿದೆ (Health Tips) ಉತ್ತರ.
ಮೊಳಕೆ ಹೆಸರುಕಾಳಿನಲ್ಲಿ ಪ್ರೊಟೀನ್ ಎಷ್ಟಿದೆ?
ಪೋಷಕಾಂಶ ತಜ್ಞರು ಹೇಳುವ ಪ್ರಕಾರ, ಸಾಮಾನ್ಯವಾಗಿ ಹೆಸರು ಬೇಳೆಯಲ್ಲಿರುವ ಪ್ರೊಟೀನ್‌ಗಿಂತಲೂ ಮೊಳಕೆ ಬಂದ ಹೆಸರುಕಾಳಿನಲ್ಲಿ ಕಡಿಮೆ ಇರುತ್ತದೆ. ಇದಕ್ಕೆ ಕಾರಣವನ್ನೂ ಅವರೇ ಹೇಳುತ್ತಾರೆ. ಹೆಸರು ಕಾಳನ್ನು ನೀರಿನಲ್ಲಿ ನೆನೆಸಿ ಅದನ್ನು ಮೊಳಕೆ ಬರಿಸುವ ಪ್ರಕ್ರಿಯೆಯಲ್ಲಿ, ಅದರಲ್ಲಿರುವ ಕಾರ್ಬೋಹೈಡ್ರೇಟ್, ಪ್ರೊಟೀನ್ ಕೊಬ್ಬು ಮತ್ತಿತರ ಎಲ್ಲ ಬಗೆಯ ಪೋಷಕಾಂಶಗಳನ್ನೂ ಬಳಸಿಕೊಂಡೇ ಅದು ಮೊಳಕೆಯೊಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಕಾಳಿನಲ್ಲಿರುವ ಒಂದಿಷ್ಟು ಪೋಷಕಾಂಶವು ಬಳಕೆಯಾಗಿಬಿಡುತ್ತದೆ. ಅಲ್ಲದೆ, ನೂರು ಗ್ರಾಂನಷ್ಟು ಕಾಳು ಮೊಳಕೆ ಬಂದ ಮೇಲೆ ೩೦೦ ಗ್ರಾಂನಷ್ಟು ತೂಕ ಪಡೆದುಕೊಳ್ಳುತ್ತದೆ. ಕಾರಣ ಅದರಲ್ಲಿರುವ ನೀರಿನ ಅಂಶ. ಹೀಗಾಗಿ 300 ಗ್ರಾಂ ಮೊಳಕೆ ಕಾಳನ್ನು ಒಮ್ಮೆಲೇ ತಿನ್ನಲು ಸಾಧ್ಯವಾಗುವುದಿಲ್ಲ. ಬದಲಾಗಿ ನೂರು ಗ್ರಾಂ ಕಾಳನ್ನು ನಾವು ಸುಲಭವಾಗಿ ಒಂದು ದಿನದಲ್ಲಿ ತಿನ್ನಬಹುದು. ಆದರೆ ನೂರು ಗ್ರಾಂ ಮೊಳಕೆ ಕಾಳು ನಮಗೆ 8 ಗ್ರಾಂನಷ್ಟೇ ಪ್ರೊಟೀನ್ ಅನ್ನು ನೀಡಬಹುದು ಎಂಬುದು ಪೋಷಕಾಂಶ ತಜ್ಞರುಗಳ ಲೆಕ್ಕಾಚಾರ. ಮೊಳಕೆ ಕಾಳಿಗೆ ಹೋಲಿಸಿದರೆ ಹೆಸರು ಬೇಳೆ ಅಥವಾ ಹೆಸರು ಕಾಳಿನಲ್ಲಿ 350 ಕ್ಯಾಲರಿಗಳಿದ್ದು ಇದರಲ್ಲಿ 24 ಗ್ರಾಂ ಪ್ರೊಟೀನ್ ಲಭ್ಯವಾಗುತ್ತದೆ. ಆದರೆ, ಮೊಳಕೆ ಕಾಳಿನಲ್ಲಿ ಪ್ರೊಟೀನ್ ಹೆಚ್ಚಿರುತ್ತದೆ ಎಂಬುದು ಹಲವು ವರ್ಷಗಳಿಂದ ತಪ್ಪು ತಿಳಿಯಲಾಗಿದೆ. ಆದರೆ, ಮೊಳಕೆ ಕಾಳಿನಲ್ಲಿರುವ ಒಳ್ಳೆಯ ಗುಣ ಎಂದರೆ ಇದು ಪ್ರೊಟೀನನ್ನು ದೇಹಕ್ಕೆ ಸೇರುವ ಸಾಧ್ಯತೆಯನ್ನು ಹಿಗ್ಗಿಸುತ್ತದೆ ಹಾಗೂ ದೇಹದಲ್ಲಿ ಪ್ರೊಟೀನ್ ಕರಗುವುದಿಕೆ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಪ್ರೊಟೀನ್ ಸುಲಭವಾಗಿ ಸೇರುತ್ತದೆ.
ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!
ಮೊಳಕೆ ಛೋಲೆ ಒಳ್ಳೆಯದು
ಇನ್ನೂ ಒಂದು ತಪ್ಪು ತಿಳುವಳಿಕೆ ಎಂದರೆ, ಎಲ್ಲ ಬಗೆಯ ಮೊಳಕೆ ಕಾಳಿನಲ್ಲಿ ಹೆಚ್ಚು ಪ್ರೊಟೀನ್ ಇದೆ ಎಂದು ತಿಳಿದಿರುವುದು. ಆದರೆ ಎಲ್ಲ ಕಾಳುಗಳೂ ಕೂಡಾ ಮೊಳಕೆಯೊಡೆವ ಸಂದರ್ಭ ಹೆಚ್ಚು ಪ್ರೊಟೀನ್ ಹೊಂದಿರುವುದಿಲ್ಲ. ಬಹುಮುಖ್ಯವಾಗಿ, ಮೊಳಕೆಯೊಡೆದ ಮೇಲೆ ಹೆಚ್ಚು ಪ್ರೊಟೀನ್ ಹೊಂದಿರುವ ಕಾಳು ಎಂದರೆ ಕಡಲೆ ಕಾಳು. ಅಧರೆ, ಛೋಲೆ ಅಥವಾ ಕಾಬೂಲಿ ಕಡಲೆ. ಅಷ್ಟೇ ಅಲ್ಲ, ಇದರಲ್ಲಿರುವ ವಿಟಮಿನ್ ಬಿ ಹಾಗೂ ಸಿಯ ಪ್ರಮಾಣವೂ ಹೆಚ್ಚಾಗುತ್ತದೆ. ಜೊತೆಗೆ ಅವುಗಳು ದೇಹಕ್ಕೆ ಹೀರಲ್ಪಡುವ ಪ್ರಮಾಣವೂ ಹೆಚ್ಚಾಗುತ್ತದೆ. ಇದು ಆಹಾರದ ಗಾತ್ರವನ್ನೂ ಹಿಗ್ಗಿಸುತ್ತದೆ. ಹೀಗಾಗಿ, ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಅನುಭವವನ್ನೂ ಇದು ನೀಡುತ್ತದೆ. ಇದೇ ಕಾರಣಕ್ಕೆ ಇವನ್ನು ತೂಕ ಇಳಿಸುವ ಸಂದರ್ಭ ತಿಂದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು. ಆದರೆ ಹೆಸರು ಕಾಳನ್ನು ಮಾತ್ರ ಮೊಳಕೆಯೊಡೆವಷ್ಟು ಸಮಯ ನೀಡದೇ, ಅದನ್ನು ನೀರಲ್ಲಿ ನೆನೆ ಹಾಕಿ ಮೆತ್ತಗಾದ ತಕ್ಷಣ, ಚೀಲಾ, ದೋಸೆ, ಚಾಟ್, ಟಿಕ್ಕಿಯಂತಹ ತಿನಿಸುಗಳನ್ನು ಮಾಡಿ ಅಥವಾ ಹದವಾಗಿ ಹಬೆಯಲ್ಲಿ ಬೇಯಿಸಿ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ಪೋಷಕಾಂಶ ತಜ್ಞರು.