Site icon Vistara News

Health Tips: ಏನ್ ನಿಂಗೆ ಕೊಬ್ಬಾ ಅನ್ನಬೇಡಿ ಕೊಬ್ಬೂ ಇರಬೇಕು!

Health Tips

ಕೊಬ್ಬಿನ ಆಹಾರಗಳು ಎನ್ನುತ್ತಿದ್ದಂತೆ ಬೆಚ್ಚಿ ಬೀಳುತ್ತೇವೆ. ಮೈ-ಕೈಯೆಲ್ಲ ಕೊಬ್ಬು ತುಂಬಿ ಬಲೂನಿನಂತೆ ಊದಿಕೊಂಡು, ಒಂದು ದಿನ ಫಟ್ಟೆಂದು ಒಡೆದು ಹೋದೀತೆನ್ನುವ ಹಾಗೆ ಹೆದರಿ ನಡುಗುತ್ತೇವೆ. ನಮ್ಮ ಎಲ್ಲಾ ರಕ್ತನಾಳಗಳೂ ಕೊಲೆಸ್ಟ್ರಾಲ್‌ ತುಂಬಿಕೊಂಡು ಬಿರಿದು ಹೋಗುತ್ತವೆ ಎಂದು ಮಾಧ್ಯಮಗಳಲ್ಲೆಲ್ಲಾ ಭೀತಿ ಹುಟ್ಟಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಲೋ-ಫ್ಯಾಟು, ಲೋ-ಕಾರ್ಬು ಎನ್ನುತ್ತಾ ತುದಿಬುಡವಿಲ್ಲದ ಏನೇನೋ ಡಯೆಟ್‌ಗಳನ್ನು ಮಾಡಿಕೊಂಡು ದೇಹವನ್ನು ಸೊರಗಿಸುತ್ತೇವೆ. ಅಷ್ಟಾದರೂ ನಮ್ಮ ಫಿಟ್‌ನೆಸ್‌ ಗುರಿಯನ್ನು ತಲುಪುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಬದಲಿಗೆ ಮೈ-ಕೈಯೆಲ್ಲ ನೋವಾಗಿ ಕೀಲುಗಳು ʻಕಿರ್‌…ʼಗುಡಲು ಪ್ರಾರಂಭಿಸುತ್ತವೆ. ಏನಿದರರ್ಥ? ಕೊಬ್ಬಿನ ಆಹಾರಗಳು ನಮಗೆ ಅಗತ್ಯವೆಂದೇ? ಹೌದಾದರೆ, ಎಂಥ ಕೊಬ್ಬು (Health Tips) ನಮಗೆ ಬೇಕು? ಆಹಾರದಲ್ಲಿ ಸಮತೋಲನ ಸಾಧಿಸುವುದೆಂದರೆ ದೇಹಕ್ಕೆ ಬೇಕಾದಷ್ಟು ಒಳ್ಳೆಯ ಕೊಬ್ಬಿನ ಆಹಾರಗಳನ್ನೂ ನೀಡುವುದು ಎಂದೇ ಅರ್ಥ. ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ, ಕೋಶಗಳ ಬೆಳವಣಿಗೆಗೆ, ಶಕ್ತಿ ಸಂಚಯನಕ್ಕೆ, ಸತ್ವಗಳನ್ನು ಹೀರಿಕೊಳ್ಳುವುದಕ್ಕೆ- ಇಂಥ ಹಲವು ಕೆಲಸಗಳಿಗೆ ಕೊಬ್ಬಿನಂಶ ನಮಗೆ ಬೇಕಾಗುತ್ತದೆ. ಅಂದಮಾತ್ರಕ್ಕೆ ಕರಿದ ಆಹಾರಗಳನ್ನು ಮನಸೋಇಚ್ಛೆ ತಿನ್ನಬಹುದು ಎಂದರ್ಥವಲ್ಲ. ಮತ್ಸಾಹಾರಗಳು, ಡೇರಿ ಮತ್ತು ಸಸ್ಯಜನ್ಯ ಆಹಾರಗಳು ನಮ್ಮ ದೇಹಕ್ಕೆ ಅಗತ್ಯವಾದ ಒಳ್ಳೆಯ ಕೊಬ್ಬನ್ನು ಯಥೇಚ್ಛವಾಗಿ ಒದಗಿಸಬಲ್ಲವು. ಸಸ್ಯಾಹಾರಿಗಳಿಗೆ ಸೂಕ್ತವಾದಂಥ ಕೊಬ್ಬಿನ ಮೂಲಗಳನ್ನು ಇಲ್ಲಿ ವಿವರಿಸಲಾಗಿದೆ.

ಅವಕಾಡೊ

ಬೆಣ್ಣೆ ಹಣ್ಣು ಎಂದೂ ಕರೆಯಲಾಗುವ ಈ ಹಣ್ಣಿನ ಋತುವೇ ಮಳೆಗಾಲದ ಹೊತ್ತು. ಇದೀಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಬೆಣ್ಣೆ ಹಣ್ಣನ್ನು ತೃಪ್ತಿಯಾಗುವಷ್ಟು ಸವಿಯಿರಿ. ಮಾನೊಅನ್‌ಸ್ಯಾಚುರೇಟೆಡ್‌ ಎಂದು ಇದರಲ್ಲಿರುವ ಕೊಬ್ಬನ್ನು ಕರೆಯಲಾಗುತ್ತದೆ. ಹೃಯದ ಆರೋಗ್ಯಕ್ಕೆ ಹೇಳಿ ಮಾಡಿಸಿದಂಥ ಹಣ್ಣಿದು. ಇದನ್ನು ಸ್ಯಾಂಡ್‌ವಿಚ್‌, ಸ್ಮೂದಿ, ಸಲಾಡ್‌ಗಳ ಜೊತೆಗೆ ಸೇರಿಸಿಕೊಂಡು ತಿನ್ನಬಹುದು ಅಥವಾ ಹಾಗೆಯೇ ಸವಿಯಲೂಬಹುದು.

ಚೀಸ್‌

ಇದರಲ್ಲಿ ಹಲವು ರೀತಿಯ ರುಚಿಕರ ಆಯ್ಕೆಗಳು ಲಭ್ಯವಿವೆ. ಅದರಲ್ಲೂ ಕಡಿಮೆ ಕೊಬ್ಬಿನ ಫೆಟಾ ಅಥವಾ ಕಾಟೇಜ್‌ ಚೀಸ್‌ಗಳು, ಪನೀರ್‌ನಂಥವು ಸಿಕ್ಕಾಪಟ್ಟೆ ಒಳ್ಳೆಯ ಸತ್ವಗಳನ್ನು ಒದಗಿಸುತ್ತವೆ. ಪ್ರೊಟೀನ್‌ ಸಹ ಇವುಗಳಲ್ಲಿ ಸಾಂದ್ರವಾಗಿದ್ದು, ಉತ್ತಮ ಕೊಬ್ಬಿನಂಶವನ್ನು ದೇಹಕ್ಕೆ ನೀಡುತ್ತವೆ. ಆಹಾರಗಳ ರುಚಿಯನ್ನೂ ವೃದ್ಧಿಸುತ್ತವೆ.

ಕಾಯಿ-ಬೀಜಗಳು

ಬಾದಾಮಿ, ವಾಲ್‌ನಟ್‌, ಗೋಡಂಬಿ, ಪಿಸ್ತಾ ಮುಂತಾದ ಕಾಯಿಗಳಂಥವು, ಅಗಸೆ, ಚಿಯಾ, ಸೂರ್ಯಕಾಂತಿ ಬೀಜ, ಕುಂಬಳ ಬೀಜದಂಥ ಸಣ್ಣ ಬೀಜಗಳು ಅತ್ಯಂತ ಆರೋಗ್ಯಕರ ಕೊಬ್ಬನ್ನು ನೀಡುವುದರ ಜೊತೆಗೆ, ನಾರು ಮತ್ತು ಪ್ರೊಟೀನ್‌ಗಳನ್ನೂ ದೇಹಕ್ಕೆ ಒದಗಿಸುತ್ತವೆ. ಇವುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ಆರೋಗ್ಯಕ್ಕೆ ಬಹಳಷ್ಟು ಲಾಭಗಳನ್ನು ತಂದು ಕೊಡಬಲ್ಲದು. ಹೃದಯ, ಮೆದುಳುಗಳನ್ನು ಸ್ವಸ್ಥವಾಗಿಡುವುದಕ್ಕೆ ಇಂಥ ಒಳ್ಳೆಯ ಕೊಬ್ಬುಗಳು ಬೇಕು.

ಆಲಿವ್‌ ಎಣ್ಣೆ

ಇದು ಮೆಡಿಟರೇನಿಯನ್‌ ಆಹಾರಪದ್ಧತಿಯಲ್ಲಿ ಹೇರಳವಾಗಿ ಬಳಕೆಯಲ್ಲಿದೆ. ಇದರಲ್ಲಿಯೂ ಮಾನೊಅನ್‌ಸ್ಯಾಚುರೇಟೆಡ್‌ ಕೊಬ್ಬಿನಂಶ ವಿಫುಲವಾಗಿದೆ. ಈ ಕೊಬ್ಬು ಹೃದಯದ ಆರೋಗ್ಯ ರಕ್ಷಣೆಗೆ ಪೂರಕವಾದದ್ದು. ಆದರೆ ಇದನ್ನು ಹೆಚ್ಚಿನ ಉಷ್ಣತೆಯಲ್ಲಿ ಬಿಸಿ ಮಾಡಲು ಸಾಧ್ಯವಿಲ್ಲ. ಕಡಿಮೆ ಉಷ್ಣತೆಯ ಆಹಾರಗಳ ತಯಾರಿಕೆಗೆ, ಸಲಾಡ್‌ಗಳಿಗೆ ಇದನ್ನು ಹೇರಳವಾಗಿ ಬಳಸಬಹುದು.

ಕೊಬ್ಬರಿ ಎಣ್ಣೆ

ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಯಲ್ಲೂ ಒಳ್ಳೆಯ ಕೊಬ್ಬಿನಂಶವಿದೆ. ಇದರಲ್ಲಿರುವ ಮಧ್ಯಮ ಕೊಂಡಿಯ ಟ್ರೈಗ್ಲಿಸರೈಡ್‌ಗಳು (ಎಂಸಿಟಿ) ಆರೋಗ್ಯಕ್ಕೆ ಪೂರಕ ಎನ್ನುತ್ತವೆ ಅ‍್ಯಯನಗಳು. ಅಡುಗೆಯಲ್ಲಿ ತೆಂಗಿನ ಕಾಯಿಯನ್ನು ಬಳಸುವುದರ ಜೊತೆಗೆ, ತೆಂಗಿನ ಹಾಲು ಮತ್ತು ತೆಂಗಿನ ಎಣ್ಣೆಯನ್ನೂ ಹಿತ-ಮಿತವಾಗಿ ಬಳಸುವುದು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ: Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

ಮೊಸರು, ತುಪ್ಪ

ಸಾಮಾನ್ಯವಾಗಿ ತುಪ್ಪದಿಂದ ದೊರೆಯುವ ಕೊಬ್ಬಿನ ಮೂಲವನ್ನು ಎಲ್ಲರೂ ಶಿಫಾರಸು ಮಾಡುವುದಿಲ್ಲ. ಆದರೆ ಇದು ಸಹ ಮೀಡಿಯಂ ಚೈನ್‌ ಟ್ರೈಗ್ಲಿಸರೈಡ್‌ಗಳ ಸಾಲಿಗೇ ಬರುತ್ತದೆ. ಮಿತವಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಮೊಸರು ಒಳ್ಳೆಯ ಕೊಬ್ಬಿನೊಂದಿಗೆ ಸಾಕಷ್ಟು ಪ್ರಮಾಣದ ಪ್ರೊಬಯಾಟಿಕ್‌ ಅಂಶಗಳನ್ನೂ ನೀಡುತ್ತದೆ.

Exit mobile version