ಎಲ್ಲರ ದೇಹಪ್ರಕೃತಿಯೂ ಒಂದೇ ಆಗಿರುವುದಿಲ್ಲ. ಪ್ರತಿಯೊಬ್ಬರ ದೇಹವೂ ಅದರದೇ ಆದ ರೀತಿಯಲ್ಲಿ ವಿಶೇಷವೇ. ಹಾಗಾಗಿಯೇ ಎಲ್ಲ ಆಹಾರವೂ ಎಲ್ಲರಿಗೂ ಆಗಿ ಬರುವುದಿಲ್ಲ. ಒಬ್ಬೊಬ್ಬರ ದೇಹಕ್ಕೆ ಕೆಲವೊಂದು ಆಹಾರಗಳು ವ್ಯತಿರಿಕ್ತವಾಗಿ ವರ್ತಿಸುತ್ತವೆ. ಕೆಲವು ಆಹಾರ ಸೇವನೆಯಿಂದ ಕೆಲವರಿಗೆ ಅಲರ್ಜಿ ಉಂಟಾಗಬಹುದು. ಯಾವುದೋ ಬೀಜ ತಿಂದ ತಕ್ಷಣ ಅಲರ್ಜಿಯಿಂದಾಗಿ ದೇಹದಲ್ಲಿ ಕೆಂಪು ಬೊಬ್ಬೆಗಳೇಳಬಹುದು. ಅಥವಾ ಮೈಮೇಲೆ ತುರಿಕೆ ಉಂಟಾಗಬಹುದು. ಆಥವಾ ಅಲರ್ಜಿಯಿಂದ ವಿಪರೀತ ಸೀನು ಬರಬಹುದು, ಕಣ್ಣು ಕೆಂಪಾಗುವುದು ಇತ್ಯಾದಿ ಅಲರ್ಜಿಗಳು ಕೆಲವು ಆಹಾರದಿಂದ ಕೆಲವರಿಗೆ ಆಗುವ ಸಂಭವವಿದೆ. ಆದರೆ, ಬಹುತೇಕರಿಗೆ ಈ ಅಲರ್ಜಿ ಯಾವುದರಿಂದ ಆಗಿದ್ದು ಎಂಬುದನ್ನು ಕಂಡು ಹಿಡಿಯುವುದೇ ಕಷ್ಟವಾಗುತ್ತದೆ. ಯಾವುದನ್ನು ತಿಂದಿದ್ದರಿಂದ ಹೀಗಾಯಿತು ಎಂಬ ಕಾರಣ ಹುಡುಕುವುದು ಕಷ್ಟವಾಗುತ್ದೆ. ಇಂಥ ಸಮಸ್ಯೆ ಹಲವರಿಗೆ ಆಗುತ್ತಿದ್ದರೆ ಅಂಥವರಿಗೆ ಆಹಾರದ ಮೇಲಿನ ಅಸಹನೆ ಹಾಗೂ ಆಹಾರದ ಅಲರ್ಜಿಯ ಬಗೆಗಿನ ವ್ಯತ್ಯಾಸವನ್ನು ಹೀಗೆ ತಿಳಿಯಬಹುದು.
ಆಹಾರದ ಅಲರ್ಜಿ ಎಂದರೆ, ಒಂದು ಆಹಾರದ ಬಗೆಗೆ ದೇಹದ ರೋಗ ನಿರೋಧಕ ವ್ಯವಸ್ಥೆ ಪ್ರತಿಕ್ರಿಯಿಸುವ ಬಗೆ. ಇದನ್ನು ಸೇವಿಸುವುದರಿಂದ ಈ ದೇಹಕ್ಕೆ ಅಪಾಯವಿದೆ ಎಂದು ದೇಹ ಮುನ್ನೆಚ್ಚರಿಕೆ ನೀಡುವ ಒಂದು ವಿಧಾನವಿದು. ಒಂದು ಸಣ್ಣ ತುಣುಕನ್ನು ಸೇವಿಸುವುದರಿಂದಲೂ ದೇಹ ಇಂತಹ ಆಹಾರದ ವಿರುದ್ಧವೇ ವರ್ತಿಸುತ್ತದೆ. ದೇಹ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತದೆ. ಇದಕ್ಕೆ ಇರುವ ಒಂದೇ ಉಪಾಯ ಎಂದರೆ, ದೇಹವನ್ನು ಸೂಕ್ಷ್ಮವಾಗಿ ಗಮನಿಸಿ ಯಾವ ಆಹಾರ ಸೇವನೆಯಿಂದ ಹೀಗೆ ಆಗುತ್ತಿದೆ ಎಂದು ತಿಳಿದುಕೊಂಡು ಅಂಥ ಆಹಾರವನ್ನು ಬಿಡುವುದು.
ವಾಂತಿ, ಹೊಟ್ಟೆನೋವು, ಉಸಿರಾಡಲು ಕಷ್ಟವಾಗುವುದು, ಬಾಯಿಯಲ್ಲಿ ತುರಿಕೆ, ಕಣ್ಣು, ಬಾಯಿ ಅಥವಾ ಮುಖ ಊದಿಕೊಳ್ಳುವುದು ಇತ್ಯಾದಿ ಆಹಾರದ ಅಲರ್ಜಿಯ ಲಕ್ಷಣಗಳು.
ಗೋಧಿ: ಬಹಳ ಸಾಮಾನ್ಯವಾದ ಅಲರ್ಜಿಗಳಲ್ಲೊಂದು. ಗೋಧಿಯಲ್ಲಿರುವ ಪ್ರೊಟೀನ್‌ನ ಜೊತೆ ದೇಹ ವ್ಯತಿರಿಕ್ತವಾಗಿ ವರ್ತಿಸಿದಾಗ ಉಂಟಾಗುವ ಅಲರ್ಜಿ ಇದು. ಸಣ್ಣ ಮಕ್ಕಳಲ್ಲಿ ಇದು ಸಾಮಾನ್ಯವಾದ ಅಲರ್ಜಿಯಾಗಿದ್ದು ಕೆಲವೊಮ್ಮೆ ಇದು ಗಂಭೀರ ಪರಿಣಾಮಗಳನ್ನೂ ಉಂಟು ಮಾಡಬಲ್ಲದು.
ಹಾಲು: ಹಾಲಿನ ಅಲರ್ಜಿ ಮಕ್ಕಳಲ್ಲಿ ಸಾಮಾನ್ಯ. ಇದೂ ಕೂಡಾ ಹಾಲಿನಲ್ಲಿರುವ ಪ್ರೊಟೀನ್ ಜೊತೆ ವಿರುದ್ಧವಾಗಿ ವರ್ತಿಸಿದಾಗ ಉಂಟಾಗುತ್ತದೆ. ಕೆಲವರಲ್ಲಿ ಇದು ಉಸಿರಾಟಕ್ಕೂ ಕಷ್ಟವಾಗುವಂತಹ ಗಂಭೀರ ಪರಿಣಾಮವನ್ನೂ ಬೀರಬಹುದು.
ಮೊಟ್ಟೆ: ಮೊಟ್ಟೆಯಿಂದಲೂ ಕೆಲವರಿಗೆ ಅಲರ್ಜಿಯಾಗಬಹುದು. ಮೊಟ್ಟೆ ತಿಂದು ಕೆಲವೇ ಗಂಟೆಗಳಲ್ಲಿ ಅಥವಾ ಕೆಲವು ನಿಮಿಷಗಳಲ್ಲಿ ಈ ಅಲರ್ಜಿ ಉಂಟಾಗುತ್ತದೆ. ಇದು ಮೊಟ್ಟೆಯಲ ಬಿಳಿಬಾಗದಿಂದಾಗುವ ಅಲರ್ಜಿ.
ನೆಲಗಡಲೆ: ನೆಲಗಡಲೆಯಿಂದಲೂ ಹಲವರಿಗೆ ಅಲರ್ಜಿ ಉಂಟಾಗಬಹುದು. ತುರಿಕ, ದದ್ದುಗಳಂತಹ ಅಲರ್ಜಿಯಿದು.
ಇದನ್ನೂ ಓದಿ: Food Tips: ಬೇಸಿಗೆಯಲ್ಲಿ ನೀವು ಟ್ರೈ ಮಾಡಲೇಬೇಕಾದ ಐಸ್‌ಕ್ರೀಂ ಜೋಡಿಗಳಿವು!
ಆದರೆ ಆಹಾರದ ಬಗ್ಗೆ ದೇಹ ತೋರುವ ಅಸಹನೆ ಎಂಬುದು ಬೇರೆಯೇ. ಇದು ಉಂಟಾಗುವುದು ದೇಹ ಕೆಲವೊಂದು ಆಹಾರವನ್ನು ಸರಿಯಾಗಿ ಜೀರ್ಣ ಮಾಡಲು ಶಕ್ತವಾಗದಿದ್ದಾಗ. ಇದು ಅಲರ್ಜಿಯಷ್ಟು ಗಂಭೀರವಲ್ಲದಿದ್ದರೂ ಇದರಿಂದಲೂ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಉಂಟಾಗುತ್ತದೆ. ಇದು ಕೆಲವು ಗಂಟೆಗಳ ಕಾಲ ದೇಹದಲ್ಲಿ ನಡೆಯುವ ಅಸಹಜ ಪ್ರಕ್ರಿಯೆ. ಗ್ಯಾಸ್, ಹೊಟ್ಟೆಯುಬ್ಬರ, ಎದೆ ಉರಿ, ಬೇದಿ, ತಲೆನೋವು, ಮೈಗ್ರೇನ್ ಇತ್ಯಾದಿಗಳು ಇದಕ್ಕೆ ಉದಾಹರಣೆ. ಲ್ಯಾಕ್ಟೋಸ್ ಅಥವಾ ಡೈರಿ ಉತ್ಪನ್ನಗಳು, ಕೆಫೀನ್, ಸಲ್ಫೈಟ್‌ಗಳಂತಹ ಅಂಶಗಳು ಇಂತಹ ಪರಿಣಾಮ ಬೀರುತ್ತವೆ. ಇದನ್ನು ಅಲರ್ಜಿಯೆಂದು ಹೇಳಲಾಗುವುದಿಲ್ಲ.
ಇದೂ ಆಹಾರದ ಅಲರ್ಜಿಯೂ ಬೇರೆಬೇರೆಯಾಗಿದ್ದರೂ ಇವೆರಡರಿಂದಲೂ ಆರೋಗ್ಯದ ಮೇಲೆ ಪರಿಣಾಮ ಇದ್ದೇ ಇದೆ. ಡೈರಿ ಉತ್ಪನ್ನಗಳಿಂದ ಕೆಲವರಿಗೆ ಹೊಟ್ಟೆಯುಬ್ಬರ, ಹೊಟ್ಟೆನೋವು, ಕೆಫೀನ್‌ನಿಂದ ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಪ್ರಿಸರ್ವೇಟಿವ್‌ಗಳಲ್ಲಿರುವ ಸಲ್ಫೈಟ್‌ನಿಂದ ಕೆಲವರಿಗೆ ಅಸ್ತಮಾ, ಕೆಮ್ಮು, ಉಬ್ಬಸದಂತಹ ತೊಂದರೆಗಳೂ ಕಂಡುಬರಬಹುದು. ಹಾಗಾಗಿ, ದೇಹದ ಮೇಲೆ ಇಂತಹ ವ್ಯತಿರಿಕ್ತ ಪರಿಣಾಮ ಬೀರುವ ಆಹಾರಗಳಿಂದ ದೂರವಿರುವುದು ಅತ್ಯಂತ ಒಳ್ಳೆಯದು. ಪ್ರತಿಯೊಬ್ಬರೂ ಆವರವರ ದೇಹವನ್ನು ಸೂಕ್ಷ್ಮವಾಗಿ ಗಮನಿಸಿ ಯಾವ ಆಹಾರ ತನ್ನ ದೇಹಕ್ಕೆ ಹೊಂದುವುದಿಲ್ಲ ಎಂಬುದನ್ನು ಕಂಡು ಹಿಡಿಯುವುದು ಅತ್ಯಂತ ಅಗತ್ಯ.
ಇದನ್ನೂ ಓದಿ: Food Tips: ಡಯಟ್‌ನಲ್ಲಿದ್ದೂ ಪಾನಿಪುರಿ ತಿನ್ನಬೇಕೇ? ಡಯಟ್ ಫ್ರೆಂಡ್ಲೀ ಪಾನಿಪುರಿಗೆ ಕೆಲವು ಸಲಹೆಗಳು!