Site icon Vistara News

Healthcare Tips For Women: 30 ವರ್ಷದ ಬಳಿಕ ಮಹಿಳೆಯರು ಮಾಡಿಸಿಕೊಳ್ಳಲೇಬೇಕಾದ ಆರೋಗ್ಯ ಪರೀಕ್ಷೆಗಳಿವು

Healthcare Tips For Women

ಕುಟುಂಬದ ಎಲ್ಲರ ದೇಖರೇಖಿ ಮಾಡುವ ಭರದಲ್ಲಿ, ವೃತ್ತಿಯ ಅಥವಾ ಉದ್ಯೋಗದ ಒತ್ತಡಗಳನ್ನು ಎದುರಿಸುವ ನಡುವಲ್ಲಿ, ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ಹೋಗುವುದು ಕಡಿಮೆ. ಆದರೆ ವೈಯಕ್ತಿಯ ಸ್ವಾಸ್ಥ್ಯ ಎನ್ನುವ ಕಲ್ಪನೆ ಇತ್ತೀಚೆಗೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಫಿಟ್‌ನೆಟ್‌ ಮತ್ತು ಸತ್ವಭರಿತ ಆಹಾರದ ಸೇವನೆಯತ್ತ ನಗರ ಪ್ರದೇಶಗಳ ಒಂದಿಷ್ಟು ಮಹಿಳೆಯರು ಮನಮಾಡಿದ್ದಾರೆ. ಇದಿಷ್ಟೇ ಅಲ್ಲ, 30ರ ವಯೋಮಾನದ ನಂತರ ಮಹಿಳೆಯರು (Healthcare tips for women) ತಮ್ಮ ದೇಹಾರೋಗ್ಯದ ಬಗ್ಗೆ ಹಲವು ರೀತಿಯಲ್ಲಿ ಗಮನ ನೀಡಬೇಕಾಗುತ್ತದೆ. ಇದಕ್ಕೆ ನೆರವಾಗುವಂಥ ಒಂದಿಷ್ಟು ವೈದ್ಯಕೀಯ ಪರೀಕ್ಷೆಗಳನ್ನೂ ಕಾಲಕಾಲಕ್ಕೆ ಮಾಡಿಸಬೇಕಾಗುತ್ತದೆ. ಯಾವುವು ಆ ಪರೀಕ್ಷೆಗಳು? ಅದರಿಂದ ಏನಾಗುತ್ತದೆ?

ಎಚ್‌ಪಿವಿ ಮತ್ತು ಪ್ಯಾಪ್‌ ಟೆಸ್ಟ್‌

ಗರ್ಭ ಕೊರಳಿನ ಕ್ಯಾನ್ಸರ್‌ ಪತ್ತೆಗೆ ಅಗತ್ಯವಾದ ಪರೀಕ್ಷೆಗಳಿವು. 30 ವರ್ಷದ ನಂತರ ಮಹಿಳೆಯರು ಪ್ರತಿ ಐದು ವರ್ಷಗಳಿಗೊಮ್ಮೆ ಈ ಪರೀಕ್ಷೆಗಳನ್ನು ಮಾಡಿಸಬೇಕು. ಇದರಿಂದ ಗರ್ಭಕೊರಳಿನ ಕೋಶಗಳಲ್ಲಿ ಯಾವುದಾದರೂ ಅಸಾಮಾನ್ಯ ಬೆಳವಣಿಗೆಗಳಿದ್ದರೆ ಮುಂಚಿತವಾಗಿಯೇ ಪತ್ತೆಯಾಗುತ್ತದೆ. ಇಂಥ ಕ್ಯಾನ್ಸರ್‌ಕಾರಕ ಕೋಶಗಳ ಇರುವಿಕೆ ಪ್ರಾರಂಭದಲ್ಲೇ ಪತ್ತೆಯಾದರೆ ಚಿಕಿತ್ಸೆಯನ್ನೂ ಪರಿಣಾಮಕಾರಿಯಾಗಿ ನೀಡುವುದಕ್ಕೆ, ಪೂರ್ಣ ಗುಣವಾಗುವುದಕ್ಕೆ ಸಾಧ್ಯವಿದೆ. ಎಚ್‌ಪಿವಿ ಪರೀಕ್ಷೆಯಿಂದ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್‌ ಪ್ಯಾಪಿಲೋಮ ವೈರಸ್‌ನ ಇರುವಿಕೆ ಪತ್ತೆ ಮಾಡಬಹುದು.

ಮ್ಯಾಮೊಗ್ರಾಮ್‌

ಸ್ತನ ಕ್ಯಾನ್ಸರ್‌ನ ಪತ್ತೆಗೆ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. 30ರ ನಂತರ ಸ್ತನ ಪರೀಕ್ಷೆಗಳನ್ನು ಮಾಡಿಕೊಳ್ಳುವುದು ಅಗತ್ಯ. 40ರ ನಂತರ ಎರಡು ವರ್ಷಕ್ಕೊಮ್ಮೆ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳುವುದು ಸೂಕ್ತ. ಈ ಪರೀಕ್ಷೆಯಲ್ಲಿ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್‌ ಕೋಶಗಳನ್ನು ಪತ್ತೆ ಮಾಡಬಹುದು. ಇದರಿಂದ ಚಿಕಿತ್ಸೆಯೂ ಪರಿಣಾಮಕಾರಿಯಾಗಿ, ಬದುಕುಳಿಯುವ ಪ್ರಮಾಣವೂ ಹೆಚ್ಚುತ್ತದೆ.

ಮೂಳೆ ಸಾಂದ್ರತೆ ಪರೀಕ್ಷೆ

ವಯಸ್ಸು ಹೆಚ್ಚುತ್ತಿದ್ದಂತೆ ಮಹಿಳೆಯರನ್ನು ಕಾಡುವ ಹಲವು ತೊಂದರೆಗಳ ಪೈಕಿ ಆಸ್ಟಿಯೊಪೊರೊಸಿಸ್‌ ಸಹ ಒಂದು. ಈ ಕಾಯಿಲೆಯಲ್ಲಿ, ಮೂಳೆಗಳು ಅಲ್ಲಲ್ಲಿ ಟೊಳ್ಳಾಗಿ ಮುರಿಯುವ ಸಾಧ್ಯತೆ ಉಂಟಾಗುತ್ತದೆ. ಮೂಳೆ ಸಾಂದ್ರತೆ ಪರೀಕ್ಷೆ ಅಥವಾ ಡೆಕ್ಸಾ ಸ್ಕ್ಯಾನ್‌ನಿಂದ ಮೂಳೆಗಳ ಸಾಂದ್ರತೆ ಎಲ್ಲಾದರೂ ಕಡಿಮೆಯಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು.

ಬಿಪಿ ಪರೀಕ್ಷೆ

ಒತ್ತಡದ ಜೀವನದಿಂದಾಗಿ ರಕ್ತದ ಏರೊತ್ತಡದ ಸಮಸ್ಯೆ 30ರ ನಂತರವೇ ಕಾಣಬರುತ್ತಿದೆ. ಇದರಿಂದ ಹೃದಯದ ತೊಂದರೆಗಳು, ಪಾರ್ಶ್ವವಾಯುವಿನಂಥ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹಾಗಾಗಿ ಸಮಸ್ಯೆಯ ಆರಂಭವನ್ನು ಗುರುತಿಸಿದರೆ, ಅದನ್ನು ಹತೋಟಿಯಲ್ಲಿ ತರುವುದಕ್ಕೆ ಬೇಕಾದ ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಲು ಅನುಕೂಲ

ಮಧುಮೇಹ ಪರೀಕ್ಷೆ

ಸಕ್ಕರೆ ಕಾಯಿಲೆಯಂತೂ ಮಕ್ಕಳಾದಿಯಾಗಿ ಎಲ್ಲ ವಯೋಮಾನದ ಜನರನ್ನು ಬಾಧಿಸುತ್ತಿದೆ. 30ರ ನಂತರ ಮಹಿಳೆಯರು ಈ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಿದ್ದರೆ ಮಧುಮೇಹ-ಪೂರ್ವ ‍ಸ್ಥಿತಿಯಲ್ಲೇ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಡಯಾಬಿಟಿಸ್‌ ರಿವರ್ಸಲ್‌ ಎನ್ನುವುದು ಈಗಿನ ಹೊಸ ಸಾಧ್ಯತೆ.

ಕೊಲೆಸ್ಟ್ರಾಲ್‌ ತಪಾಸಣೆ

ಲಿಪಿಡ್‌ ಪರೀಕ್ಷೆ ಅಥವಾ ಕೊಲೆಸ್ಟ್ರಾಲ್‌ ಪರೀಕ್ಷೆಯೂ 30 ನಂತರ ಬೇಕಾಗುತ್ತದೆ. ದೇಹದ ಚಯಾಪಚಯ ಸರಿಯಾಗಿ ಇಲ್ಲದಿದ್ದಾಗ ಬಾಧಿಸಬಹುದಾದ ತೊಂದರೆಗಳಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಳವೂ ಒಂದು. ಇದನ್ನೂ ಪ್ರಾರಂಭದಲ್ಲಿ ಪತ್ತೆ ಮಾಡಿದರೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು, ವೈದ್ಯರ ಸಲಹೆಯ ಮೇಲೆಗೆ ಚಿಕಿತ್ಸೆಯನ್ನೂ ತೆಗೆದುಕೊಂಡರೆ ಹೃದಯವನ್ನು ಜೋಪಾನ ಮಾಡಿಕೊಳ್ಳಬಹುದು.

ಥೈರಾಯ್ಡ್‌ ಪರೀಕ್ಷೆ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಾಣಬರುತ್ತಿರುವ ಸಮಸ್ಯೆಯಿದು. ಕೆಲವೊಮ್ಮ ಅಟೊಇಮ್ಯೂನ್‌ ಕಾಯಿಲೆಗಳೂ ಇದಕ್ಕೆ ಕಾರಣವಾಗಿರಬಹುದು. ಆದರೆ ಥೈರಾಯ್ಡ್‌ ಹೆಚ್ಚು-ಕಡಿಮೆ ಇಲ್ಲದಂತೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ೩೦ರ ನಂತರ ನೋಡಬೇಕಾಗುತ್ತದೆ. ತೂಕ ಏರಿಳಿತ, ಸುಸ್ತು, ಕೂದಲು ಉದುರುವುದು ಮುಂತಾದ ಲಕ್ಷಣಗಳಿದ್ದರೆ ವೈದ್ಯರ ಸಲಹೆಯ ಮೇರೆಗೆ ಈ ಪರೀಕ್ಷೆಯನ್ನು ಶೀಘ್ರವಾಗಿ ಮಾಡಿಸಬೇಕಾಗಬಹುದು. ಥೈರಾಯ್ಡ್‌ ಸಮಸ್ಯೆಯ ಲಕ್ಷಣಗಳು ಇಲ್ಲದಿದ್ದರೆ, 30ರ ನಂತರ ಪ್ರತಿ ಎರಡು ವರ್ಷಗಳಿಗೆ ನೋಡಿದರೆ ಸಾಕಾಗುತ್ತದೆ.

ಕೊಲೊರೆಕ್ಟಲ್‌ ಕ್ಯಾನ್ಸರ್‌ ಪರೀಕ್ಷೆ

ಇದು ಕರುಳು ಮತ್ತು ಗುದದ್ವಾರದ ನಡುವಿನ ಭಾಗದ ಪರೀಕ್ಷೆ. ಇದನ್ನು ಸಾಮಾನ್ಯವಾಗಿ 50ರ ನಂತರ ಮಾಡಿಸಲು ಸೂಚಿಸಲಾಗುತ್ತದೆ. ಆದರೆ ಕುಟುಂಬದಲ್ಲಿ ಇಂಥ ಪ್ರಕರಣಗಳಿದ್ದರೆ, ಮುಂಚಿತವಾಗಿಯೇ ಮಾಡಿಸುವುದು ಸೂಕ್ತ. ಕೊಲೊನೊಸ್ಕೊಪಿಯಂಥ ಪರೀಕ್ಷೆಗಳಲ್ಲಿ ಪ್ರಾರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಪತ್ತೆ ಮಾಡಬಹುದು.

ಇದನ್ನೂ ಓದಿ: Benefits of Bamboo Shoots: ಮೂಳೆಗಳ ನೋವು, ಮಲಬದ್ಧತೆ ನಿವಾರಣೆಗೆ ಎಳೆಯ ಬಿದಿರು ಸೇವನೆ ಮದ್ದು

Exit mobile version