ನಿತ್ಯವೂ ಬೆಳಗ್ಗೆ ಏನು ತಿಂಡಿ ಮಾಡುವುದು ಎನ್ನುವ ಚಿಂತೆ ಕಾಡುತ್ತದೆ. ಬೆಳಗ್ಗಿನ ಉಪಾಹಾರವು (Healthy Breakfast) ಕೇವಲ ಹೊಟ್ಟೆ ತುಂಬಿಸಿದರೆ ಸಾಲದು. ಆರೋಗ್ಯಕರವಾಗಿಯೂ (healthy) ಇರಬೇಕು. ಅದರಲ್ಲೂ ಮುಖ್ಯವಾಗಿ ವಿವಿಧ ಋತುಗಳಿಗೆ (season) ತಕ್ಕಂತೆ ಆಹಾರ (food) ಸೇವನೆ ಮಾಡುವುದು ಬಹುಮುಖ್ಯ.
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಹುಮುಖ್ಯವಾಗಿರುತ್ತದೆ. ಇದರಿಂದ ವಿವಿಧ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಇದಕ್ಕಾಗಿ ಮನೆಯಲ್ಲೇ ಸುಲಭವಾಗಿ ಸಿದ್ಧಪಡಿಸಬಹುದು ಕೆಲವು ಆರೋಗ್ಯಕರ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಉಪಾಹಾರಗಳು ಇಂತಿದೆ. ನೀವೂ ಟ್ರೈ ಮಾಡಿ.
ಮಸಾಲಾ ಓಟ್ಸ್ ಉಪ್ಮಾ
ಬೇಕಾಗುವ ಸಾಮಗ್ರಿಗಳು: 1 ಕಪ್ ತ್ವರಿತ ಓಟ್ಸ್, ಸಣ್ಣದಾಗಿ ಕತ್ತರಿಸಿರುವ 1 ಸಣ್ಣ ಈರುಳ್ಳಿ, 1 ಟೊಮೆಟೊ, 1 ಹಸಿರು ಮೆಣಸಿನಕಾಯಿ, ಅರ್ಧ ಟೀ ಚಮಚ ಸಾಸಿವೆ, ಅರ್ಧ ಟೀ ಚಮಚ ಜೀರಿಗೆ, ಕೆಲವು ಕರಿಬೇವಿನ ಎಲೆಗಳು, ರುಚಿಗೆ ತಕ್ಕಷ್ಟು ಉಪ್ಪು, ಅಲಂಕಾರಕ್ಕಾಗಿ ತಾಜಾ ಕೊತ್ತಂಬರಿ ಸೊಪ್ಪು, ಸ್ವಲ್ಪ ನಿಂಬೆ ರಸ.
ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು ಹಾಕಿ. ಬಳಿಕ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿಗಳನ್ನು ಹಾಕಿ ಹುರಿಯಿರಿ. ಈಗ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ಅನಂತರ ಓಟ್ಸ್, ಉಪ್ಪು ಮತ್ತು ನೀರನ್ನು ಸೇರಿಸಿ. ಓಟ್ಸ್ ಮೃದು ಮತ್ತು ನಯವಾಗುವರೆಗೆ ಬೇಯಿಸಿ. ಬಳಿಕ ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ನಿಂಬೆ ರಸವನ್ನು ಹಿಂಡಿ.
ಇದರಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಬಿಸಿಯಾಗಿರುವಾಗಲೇ ಸವಿಯಿರಿ.
ಬಾದಾಮಿ ಹಾಲಿನ ಕ್ವಿನೋವಾ ಗಂಜಿ
ಬೇಕಾಗುವ ಸಾಮಗ್ರಿಗಳು: 1 ಕಪ್ ಕ್ವಿನೋವಾ, 2 ಕಪ್ ಬಾದಾಮಿ ಹಾಲು, 1 ಚಮಚ ಜೇನುತುಪ್ಪ ಅಥವಾ ಮೇಪಲ್ ಸಿರಪ್, ಅರ್ಧ ಟೀ ಚಮಚ ದಾಲ್ಚಿನ್ನಿ ಪುಡಿ, ಕತ್ತರಿಸಿದ ಬೀಜಗಳು ಮತ್ತು ಒಣಗಿದ ಹಣ್ಣುಗಳು
ಮಾಡುವ ವಿಧಾನ: ನೀರಿನಲ್ಲಿ ಕ್ವಿನೋವಾವನ್ನು ಮೊದಲು ಚೆನ್ನಾಗಿ ತೊಳೆಯಿರಿ. ಬಳಿಕ ಪಾತ್ರೆಯಲ್ಲಿ ಕ್ವಿನೋವಾ ಮತ್ತು ಬಾದಾಮಿ ಹಾಲನ್ನು ಸೇರಿಸಿ. ಕುದಿಯಲು ಒಲೆಯ ಮೇಲೆ ಇರಿಸಿ. ಇದು ಬೇಯಲು ಸುಮಾರು 15- 20 ನಿಮಿಷಗಳು ಬೇಕಾಗುತ್ತದೆ. ಚೆನ್ನಾಗಿ ಬೆಂದ ಬಳಿಕ ಜೇನುತುಪ್ಪ ಅಥವಾ ಮೇಪಲ್ ಸಿರಪ್ ಮತ್ತು ದಾಲ್ಚಿನ್ನಿ ಪುಡಿಯನ್ನು ಬೆರೆಸಿ. ಅನಂತರ ಕತ್ತರಿಸಿದ ಬೀಜಗಳು ಮತ್ತು ಒಣಗಿದ ಹಣ್ಣುಗಳನ್ನು ಬೆರೆಸಿ. ಬೆಚ್ಚಗೆ ಇರುವಾಗಲೇ ಬಡಿಸಿ ಸವಿಯಿರಿ.
ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುವ ಕ್ವಿನೋವಾ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡುತ್ತದೆ.
ತರಕಾರಿ ಬೇಸನ್ ಚೀಲಾ
ಬೇಕಾಗುವ ಸಾಮಗ್ರಿಗಳು: 1 ಕಪ್ ಕಡಲೆ ಹಿಟ್ಟು, ಅರ್ಧ ಕಪ್ ನುಣ್ಣಗೆ ಕತ್ತರಿಸಿದ ಮಿಶ್ರ ತರಕಾರಿಗಳು- ಬೆಲ್ ಪೆಪರ್, ಈರುಳ್ಳಿ, ಟೊಮ್ಯಾಟೊ, ಪಾಲಕ್, ಸಣ್ಣದಾಗಿ ಕತ್ತರಿಸಿದ 1 ಹಸಿರು ಮೆಣಸಿನಕಾಯಿ, ಅರ್ಧ ಟೀ ಚಮಚ ಅರಿಶಿನ ಪುಡಿ, ಅರ್ಧ ಟೀ ಚಮಚ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯವಿರುವಷ್ಟು ನೀರು, ಅಲಂಕಾರಕ್ಕಾಗಿ ತಾಜಾ ಕೊತ್ತಂಬರಿ ಸೊಪ್ಪು, ಕೊಂಚ ಆಲಿವ್ ಎಣ್ಣೆ
ಇದನ್ನೂ ಓದಿ: Health Food Tips: ಈ ಕೆಲವು ಆಹಾರಗಳ ಸೇವನೆಯಿಂದ ಬಾಯಾರಿ, ಗಂಟಲೊಣಗಿ ನೀರು ಬೇಕೆನಿಸುತ್ತದೆ!
ಮಾಡುವ ವಿಧಾನ: ಒಂದು ಬಟ್ಟಲಿನಲ್ಲಿ, ಕಡಲೆ ಹಿಟ್ಟು, ಕತ್ತರಿಸಿದ ತರಕಾರಿ, ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಮಿಶ್ರಣ ಮಾಡಿ. ಬಳಿಕ ನೀರು ಸೇರಿಸಿ ಹಿಟ್ಟು ಕಲಸಿ. ಹಿಟ್ಟು ದೋಸೆ ಹದಕ್ಕೆ ಆಗುವಷ್ಟು ಇರಲಿ. ನಾನ್-ಸ್ಟಿಕ್ ಪ್ಯಾನ್ ಅಥವಾ ಬಾಣಲೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಆಲಿವ್ ಎಣ್ಣೆಯನ್ನು ಹಚ್ಚಿ ಬಾಣಲೆಯಲ್ಲಿ ದೋಸೆಯಂತೆ ಹೊಯ್ಯಿರಿ. ಎರಡೂ ಬದಿಗಳಲ್ಲಿ ಕಂದು ಬಣ್ಣ ಬರುವವರೆಗೆ ಬೇಯಿಸಿ. ಬಳಿಕ ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಚಟ್ನಿ ಅಥವಾ ಮೊಸರಿನೊಂದಿಗೆ ಬಿಸಿಯಾಗಿ ಬಡಿಸಿ.
ಪ್ರೋಟೀನ್ ಸಮೃದ್ಧವಾಗಿರುವ ಈ ದೋಸೆ ದೇಹಕ್ಕೆ ಶಕ್ತಿ ತುಂಬುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.