ʻಅಯ್ಯೋ ತುಪ್ಪವಾ? ತಿಂದ್ರೆ ದಪ್ಪ ಆಗ್ತೇನೆ, ಬೇಡʼ, ʻತೆಂಗಿನಕಾಯಿಯಾ? ಬೇಡಪ್ಪಾ, ನಾ ಡಯಟ್‌ನಲ್ಲಿದ್ದೇನೆʼ ಎಂಬ ಡೈಲಾಗುಗಳು ನಮ್ಮ ನಡುವೆ ಸಾಮಾನ್ಯ. ತುಪ್ಪ ತಿಂದರೆ ದಪ್ಪ ಆಗುತ್ತೇವೆ ಅಂದುಕೊಳ್ಳುವುದರಿಂದ ಹಿಡಿದು, ಆಹಾರ ಸೇವನೆಯ ವಿಚಾರದಲ್ಲಿ ನಮ್ಮಲ್ಲಿ ಅನೇಕ ಸಂಶಯಗಳು, ತಪ್ಪು ತಿಳುವಳಿಕೆಗಳು ಇದ್ದೇ ಇದೆ. ಕೊಬ್ಬು ಇರುವ ಪದಾರ್ಥಗಳೆಲ್ಲ ಕೆಟ್ಟದ್ದು, ತಿಂದರೆ ನಾವು ದಪ್ಪ ಆಗಿಬಿಡುತ್ತೇವೆ ಎಂಬ ಭ್ರಮೆ ನಮ್ಮನ್ನು ಬಿಡುವುದೇ ಇಲ್ಲ. ಅಸಲಿಗೆ ಕೊಬ್ಬಿನಲ್ಲೂ ಒಳ್ಳೆಯದು ಕೆಟ್ಟದ್ದು ಎಂಬುದಿದೆ ಎಂಬ ಸಾಮಾನ್ಯ ಜ್ಞಾನ ಇರಬೇಕು. ಮಾರುಕಟ್ಟೆಯಲ್ಲಿಸಿಗುವ ಕುರುಕಲು ಸೇರಿದಂತೆ ಪ್ಯಾಕೆಟ್ ತಿನಿಸುಗಳು ಸಂಸ್ಕರಿಸಿದ ಆಹಾರಗಳಲ್ಲಿರುವ ಟ್ರಾನ್ಸ್ ಫ್ಯಾಟ್ ದೇಹಕ್ಕೆ ಮಾರಕ. ಕೆಲವು ಎಣ್ಣೆಗಳು, ಆಹಾರ ಪದಾರ್ಥಗಳಲ್ಲಿ ಸ್ಯಾಚುರೇಟೆಡ್ ಫ್ಯಾಟ್‌ಗಳು ಹೆಚ್ಚಿದ್ದು ಅಂಥವುಗಳನ್ನೂ ನಾವು ಕಡಿಮೆ ಮಾಡಬೇಕು. ಆದರೆ, ದೇಹಕ್ಕೆ ಅಗತ್ಯವಾದ ಹೃದಯಸ್ನೇಹಿಯಾದ ಅನ್‌ಸ್ಯಾಚುರೇಟೆಡ್ ಕೊಬ್ಬನ್ನು ಮಾತ್ರ ನಾವು ನಿತ್ಯಾಹಾರದಲ್ಲಿ ಕೈಬಿಡಬಾರದು. ತೂಕ ಕಡಿಮೆಗೊಳಿಸುವ ಮಂದಿಗೂ ಈ ಕೊಬ್ಬು ಒಳ್ಳೆಯದು.
ಹಾಗಾದರೆ ಒಳ್ಳೆಯ ಕೊಬ್ಬು ಯಾವೆಲ್ಲ ಆಹಾರದಲ್ಲಿದೆ ಎಂಬುದನ್ನು ನೋಡೋಣ.
1. ತುಪ್ಪ: ಒಮೆಗಾ ೩ ಹಾಗೂ ಒಮೆಗಾ ೬ ಪ್ಯಾಟಿ ಆಸಿಡ್ ಇರುವ ತುಪ್ಪದ ಸೇವನೆ ಒಳ್ಳೆಯದು. ತೂಕ ಇಳಿಸುವಾಗಲೂ ಹಿತಮಿತವಾಗಿ ತುಪ್ಪ ತಿನ್ನುವುದು ಒಳ್ಳೆಯದು. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ.
2. ವಾಲ್ನಟ್: ಇದರಲ್ಲಿ ಪಾಲಿ ಅನ್‌ಸ್ಯಾಚುರೇಟೆಡ್ ಫ್ಯಾಟ್ ಇದ್ದು ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಬಾಯಿ ಚಪಲವನ್ನು ಉದ್ದೀಪಿಸುವ ಮಿದುಳಿನ ಭಾಗವನ್ನು ಇದು ನಿಯಂತ್ರಿಸುವುದರಿಂದ ತಿನ್ನುವ ಬಯಕೆಯೂ ಕಡಿಮೆಯಾಗುತ್ತದೆ. ಆದರೆ ಹೆಚ್ಚೆಂದರೆ ದಿನಕ್ಕೊಂದೆರಡು ವಾಲ್ನಟ್ ಸೇವಿಸುವುದು ಒಳ್ಳೆಯದು.
ಇದನ್ನೂ ಓದಿ: Health Tips: ರಾತ್ರಿಯೂಟದ ಸಂದರ್ಭ ಯಾವೆಲ್ಲ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ ಗೊತ್ತೇ?
3. ತೆಂಗಿನಕಾಯಿ: ತೆಂಗಿನಕಾಯಿ ಪಚನಕ್ರಿಯೆಗೆ ಒಳ್ಳೆಯದು ಹಾಗೂ ಇದು ಕೊಲೆಸ್ಟೆರಾಲ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ಉಳಿದ ಅಡುಗೆ ಎಣ್ಣೆಗಳಿಗೆ ಹೋಲಿಸಿದರೆ ತೆಂಗಿನ ಎಣ್ಣೆ ಒಳ್ಳೆಯದು.
4. ಅಗಸೆ ಬೀಜಗಳು: ಫ್ಯ್ಲಾಕ್‌ಸೀಡ್ ಅಥವಾ ಅಗಸೆ ಬೀಜದಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್ ಹೇರಳವಾಗಿರುವುದರಿಂದ ಇದರಲ್ಲಿ ಆಂಟಿ ಇನ್‌ಫ್ಲಾಮೇಟರಿ ಗುಣಗಳನ್ನೂ ಹೊಂದಿದೆ.
5. ಅವಕಾಡೋ: ಬೆಣ್ಣೆಹಣ್ಣು ಅಥವಾ ಅವಕಾಡೋ ಹೆಚ್ಚು ಕ್ಯಾಲರಿ ಹೊಂದಿದ್ದರೂ ಇದರಲ್ಲಿ ಉತ್ತಮ ನಾರಿನಂಶ ಹೆಚ್ಚಿರುವುದರಿಂದ ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿದಂತೆ ಇರಿಸುವ ತಾಕತ್ತನ್ನು ಹೊಂದಿದೆ.
6. ಆಲಿವ್/ ಆಲಿವ್ ಎಣ್ಣೆ: ಆಲಿವ್ ಎಣ್ಣೆ ಕಡಿಮೆ ಕ್ಯಾಲರಿ ಇರುವ, ತೂಕ ಇಳಿಸುವ ಮಂದಿ ನೆಮ್ಮದಿಯಿಂದ ಬಳಸಬಹುದಾದ ಎಣ್ಣೆಯಿದು. ಇದರಲ್ಲಿ ಒಳ್ಳೆಯ ಆರೋಗ್ಯಪೂರ್ಣ ಮೋನೋ ಸ್ಯಾಚುರೇಟೆಡ್ ಕೊಬ್ಬು ಇರುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಹೊತ್ತು ತರುತ್ತದೆ.
ಇದನ್ನೂ ಓದಿ: Health Tips: ಇವುಗಳ ಮೂಲಕ ಶೀತ, ಜ್ವರ, ನೆಗಡಿಯಿಂದ ದೂರವಿರಲು ರೋಗ ನಿರೋಧಕತೆ ಹೆಚ್ಚಿಸಿಕೊಳ್ಳಿ!