ದೇಹದಲ್ಲಾಗುವ ಯಾವುದೇ ರಾಸಾಯನಿಕ ಪ್ರಕ್ರಿಯೆಗೂ ನಾವು ಸೇವಿಸುವ ಆಹಾರ, ಗಾಳಿ, ನೀರಿನ ಅವಶ್ಯಕತೆ ಇದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ (Health Tips) ನಾವು ಉತ್ತಮ ಆಹಾರ (Healthy Food) ಸೇವಿಸಲೇಬೇಕು ಎಂಬ ಸತ್ಯ ನಮಗೆ ತಿಳಿದಿದೆ. ನೈಸರ್ಗಿಕವಾಗಿ ಸಿಗುವ ಆಹಾರಗಳನ್ನು ಸೇವಿಸುವುದಷ್ಟೇ ಅಲ್ಲ, ಈಗ ನಾವು ಸಂಸ್ಕರಿಸಿದ ಆಹಾರಗಳನ್ನೂ ಸಾಕಷ್ಟು ಹೊಟ್ಟೆಗಿಳಿಸುತ್ತಿದ್ದೇವೆ. ಪ್ಯಾಕೆಟ್ಟುಗಳಲ್ಲಿ ಸುಲಭವಾಗಿ ದೊರೆಯುವ ಆಹಾರ, ಅರ್ಧ ತಯಾರಿಸಲ್ಪಟ್ಟ ರೆಡಿ ಟು ಈಟ್‌ಗಳು ಸೇರಿದಂತೆ ನಾನಾ ಬಗೆಯಲ್ಲಿ ನಮ್ಮ ದೇಹಕ್ಕೆ ಸಂಸ್ಕರಿಸಿದ ಆಹಾರ (processed food) ಸೇರುತ್ತದೆ. ಆಹಾರವನ್ನು ಮಾರುಕಟ್ಟೆಯಲ್ಲಿ ಖರೀದಿಸುವಾಗ ಅದರೊಳಗೆ ಯಾವೆಲ್ಲ ವಸ್ತುಗಳನ್ನು ಬಳಸಿದ್ದಾರೆ, ಯಾವೆಲ್ಲ ವಸ್ತುಗಳನ್ನು ಹಾಕಿ ಆ ವಸ್ತು ತಯಾರಿಸಲಾಗಿದೆ ಅಥವಾ ಅದರಲ್ಲಿರುವ ಪೋಷಕಾಂಶಗಳ ಪ್ರವಾಣಗಳೆಷ್ಟು ಎಂಬ ಯಾವ ವಿಚಾರವನ್ನೂ ನಾವು ಹೆಚ್ಚು ತಲೆ ಕೆಡಿಸಿಕೊಳ್ಳದೆ, ಎಲ್ಲರೂ ಖರೀದಿಸುತ್ತೇವೆ. ಮಕ್ಕಳಿಗೂ ಪ್ಯಾಕೆಟ್ಟುಗಳನ್ನು ಖರೀದಿಸಿ ಕೊಡುತ್ತೇವೆ. ಸುಲಭವಾಗಿ ದೊರೆಯುವಾಗ, ಕಷ್ಟಪಟ್ಟು ಮಾಡುವ ಅಭ್ಯಾಸ ಬಹುತೇಕ ಮರೆತೇ ಹೋಗಿದೆ. ಅಥವಾ ಒಂದಿಷ್ಟನ್ನು ಮನೆಯಲ್ಲೇ ಮಾಡಿ, ಕೆಲವಕ್ಕೆ ಮಾರುಕಟ್ಟೆಯ ರೆಡಿಮೇಡ್ ಆಹಾರಗಳನ್ನೇ (ready to eat) ಅವಲಂಬಿಸುವುದು ನಮಗೆ ಅಭ್ಯಾಸವೇ ಆಗಿಬಿಟ್ಟಿದೆ.ಆದರೆ ನಿಜವಾಗಿ ನೋಡಿದರೆ, ನಮಗೆ ನಾವು ಏನು ತಿನ್ನುತ್ತಿದ್ದೇವೆ ಎಂಬ ಅರಿವೇ ಇಲ್ಲ!
ಹೌದು, ಅಧ್ಯಯನಗಳ ಪ್ರಕಾರ, ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಆಹಾರಗಳಿಗೆ ಸುಮಾರು 3000ಕ್ಕೂ ಹೆಚ್ಚು ಬಗೆಯ ವಿವಿಧ ರಾಸಾಯನಿಕಗಳನ್ನು ಸೇರಿಸುತ್ತಾರಂತೆ. ಕೃತಕ ಬಣ್ಣ, ರುಚಿ, ಪರಿಮಳ, ಹೆಚ್ಚು ಕಾಲ ಇಳಿಯುವ ಪ್ರಿಸರ್ವೇಟಿವ್‌ಗಳು ಸೇರಿದಂತೆ ಆಹಾರಕ್ಕೆ ಹಲವು ಕಾರಣಗಳಿಗಾಗಿ ಇಂತಹ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಅವೆಲ್ಲವೂ ಆಹಾರದೊಳಗೆ ಸೇರಿಕೊಂಡರೆ ನಮಗೆ ನಾವು ತಿನ್ನುವ ಆಹಾರದಲ್ಲಿ ಏನಿದೆ ಎಂದೇ ತಿಳಿದೇ ಇರುವುದಿಲ್ಲ. ಬಹುತೇಕ ಇಂತಹ ರಾಸಾಯನಿಕಗಳನ್ನು ಕಾರ್ಸಿನೋಜೆನ್‌ಗಳೆಂದು ಕರೆಯಲಾಗುತ್ತಿದ್ದು, ಇವು ನಮ್ಮ ದೇಹಕ್ಕೆ ಅತ್ಯಂತ (Harmful chemicals) ಮಾರಕವಾಗಿವೆ. ಹಾಗಾದರೆ ಬನ್ನಿ, ನೀವು ಖರೀದಿಸುವ ಆಹಾರ ತಯಾರಿಕೆಗೆ ಇವನ್ನು ಬಳಸಿದ್ದರೆ, ಅವನ್ನು ಬಳಸಬೇಡಿ. ಅವು ಯಾವುವು ಎಂಬುದನ್ನು ನೋಡೋಣ.
1. ಹೈ ಫ್ರಕ್ಟೋಸ್ ಕಾರ್ನ್ ಸಿರಪ್ (ಎಚ್‌ಎಫ್‌ಸಿಎಸ್): ಈ ರಾಸಾಯನಿಕ ನಮ್ಮ ದೇಹಕ್ಕೆ ಸೇರಿದರೆ ಇದು ದೇಹದಲ್ಲಿರುವ ಲಿಪೋಪ್ರೊಟೀನ್‌ನನ್ನು ಹೆಚ್ಚು ಮಾಡುವ ಮೂಲಕ ಬಹುಬೇಗನೆ ಮಧುಮೇಹದಂಥ ಖಾಯಿಲೆ ತರಿಸುತ್ತದೆ.
2. ಕೃತಕ ಸಿಹಿಗಳು: ಅಸ್ಪಾಟೇಮ್ ಎಂಬ ಕೃತಕ ಸಿಹಿಯನ್ನು ಇಂದು ಬಹುತೇಕ ಆಹಾರಗಳಿಗೆ ಹಾಕಲಾಗುತ್ತದೆ. ಇದು ನಮ್ಮ ದೇಹ ಸೇರುವುದರಿಂದ ತಲೆನೋವು, ತಲೆಸುತ್ತು, ವರ್ಟಿಗೋ, ತೊದಲು ಮಾತು, ಸ್ಮರಣ ಶಕ್ತಿ ಕಡಿಮೆಯಾಗುವುದು, ಕಿವಿ ಗುಂಯ್‌ಗುಡುವುದು, ರುಚಿಗ್ರಹಣ ಶಕ್ತಿ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳು ಮುಂದೆ ಕಾಡಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಡ್ರಿಂಕ್‌ಗಳಲ್ಲಿ ಇದನ್ನು ಸಕ್ಕರೆಯ ಬದಲಾಗಿ ಬಳಸಿರುತ್ತಾರೆ.
3. ಮೋನೋಸೋಡಿಯಂ ಗ್ಲುಟಮೇಟ್: ಇದು ರುಚಿಯನ್ನು ಹೆಚ್ಚಿಸುವ ರಸಾಯನಿಕ. ಇದರಿಂದ ಆಹಾರದ ರುಚಿ ಹೆಚ್ಚಾಗುತ್ತದೆಯಾದರೂ, ಅಂಗಾಂಶಗಳಿಗೆ ಹಾನಿ ಮಾಡುತ್ತದೆ.
4. ಟ್ರಾನ್ಸ್‌ಫ್ಯಾಟ್: ಹೊರಗಿನ ತಿಂಡಿಗಳಲ್ಲಿ ಟ್ರಾನ್ಸ್‌ಫ್ಯಾಟ್ ಅಧಿಕವಾಗಿರುವುದನ್ನು ನೀವು ಪ್ಯಾಕಟ್ಟುಗಳ ಹಿಂಬದಿಯಲ್ಲಿ ಬರೆದಿರುವುದನ್ನು ಓದಿರಬಹುದು. ಇದರಿಂದ ಎಲ್‌ಡಿಎಲ್ ಕೊಲೆಸ್ಟೆರಾಲ್‌ನಲ್ಲಿ ಏರಿಕೆಯಾಗುತ್ತದೆ.
5. ಕೃತಕ ಬಣ್ಣಗಳು: ಕೃತಕ ಬಣ್ಣಗಳಿಂದ ತಯಾರಿಸಿದ ಆಹಾರಗಳ ಅತಿಯಾದ ಸೇವನೆಯಿಂದ ಮಕ್ಕಳ ನಡವಳಿಕೆಯ ಸಂಬಂಧಿ ಸಮಸ್ಯೆಗಳೂ ಬರಬಹುದು. ಮಾನಸಿಕ ಸಮಸ್ಯೆಗಳೂ ಮಕ್ಕಳಿಗೆ ಬರುವ ಸಾಧ್ಯತೆಗಳಿವೆ.
6. ಸಲ್ಫರ್ ಡೈ ಆಕ್ಸೈಡ್: ಈಗಾಗಲೇ ಯುಎಸ್‌ನಲ್ಲಿ ಬಹಿಷ್ಕಾರ ಹಾಕಲಾಗಿರುವ ಇದನ್ನು ಹಣ್ಣು ತರಕಾರಿಗಳನ್ನು ತಾಜಾ ಆಗಿ ಇರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದ ಶ್ವಾಸಕೋಶದ ತೊಂದರೆಗಳು, ಅಧಿಕ ರಕ್ತದೊತ್ತಡದಂತ ಸಮಸ್ಯೆಗಳೂ ಬರಬಹುದು.
7. ಪೊಟಾಶಿಯಂ ಬ್ರೋಮೇಟ್: ಕೆಲವು ಬಗೆಯ ಬ್ರೆಡ್‌ಗಳಲ್ಲಿ ಇದನ್ನು ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ಖಾಯಿಲೆಗಳೂ ಬರಬಹುದು.
ಹೊರಗಿನ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಈಗಿನ ಕಾಲಘಟ್ಟದಲ್ಲಿ ಸಾಧ್ಯವಿಲ್ಲ ನಿಜ. ಆದರೆ, ಆದಷ್ಟೂ ಇಂತಹ ವಸ್ತುಗಳು ನೀವು ತಿನ್ನುವ ಆಹಾರದಲ್ಲಿದೆಯೇ ಎಂದು ಗಮನಿಸಬಹುದು. ಪ್ರಕೃತಿಯಲ್ಲೇ ದೊರೆವ ಅವಸ್ತುಳನ್ನು ಬಳಸಿಕೊಂಡು ಮನೆಯಲ್ಲೇ ತಾಜಾ ಆಗಿ ತಯಾರಿಸಿ ತಿನ್ನುವುದೇ ಹೆಚ್ಚು ಒಳ್ಳೆಯದು. ಆರೋಗ್ಯಕರ ಕೂಡಾ.
ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಇವುಗಳಲ್ಲಿ ಯಾವುದು ಒಳ್ಳೆಯದು?