ಕಣ್ಣಿನಷ್ಟು ದೊಡ್ಡ ಉಡುಗೊರೆ ನಮ್ಮ ಜೀವನದಲ್ಲಿ ಇನ್ನೊಂದಿಲ್ಲ. ಜಗತ್ತನ್ನು ನೋಡಲು ನಮಗಿರುವ ಎರಡು ಕಣ್ಣುಗಳು ಕಾಣಿಕೆಯೇ ಸಿ. ಆದರೆ ಇತ್ತೀಚೆಗಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಅತಿಯಾದ ಗ್ಯಾಜೆಟ್ ಬಳಕೆಗಳಿಂದ ಕಣ್ಣಿನ ಆರೋಗ್ಯ ಎಲ್ಲರಲ್ಲೂ ಕ್ಷೀಣಿಸುತ್ತಿದೆ. ಆದರೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕೆಲವು ಪ್ರಕೃತಿದತ್ತ ಆಹಾರಾಭ್ಯಾಸಗಳಿಂದ ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಯಾವೆಲ್ಲ ಆಹಾರಗಳು ಕಣ್ಣಿನ ಆರೋಗ್ಯಕ್ಕೆ ಸಹಕಾರಿ ಎಂಬುದನ್ನು ನೋಡೋಣ.
೧. ಕ್ಯಾರೆಟ್: ಕ್ಯಾರೆಟ್ ಎ ಮಿಟಮಿನ್‌ನ ಸಮೃದ್ಧ ಆಕರ. ಹಾಗಾಗಿ ಕಣ್ಣಿಗೆ ಬಹಳ ಒಳ್ಳೆಯದು. ಕ್ಯಾರೆಟ್ ತಿನ್ನುವುದರಿಂದ ರಾತ್ರಿಯ ಮಂದದೃಷ್ಠಿ ತೊಂದರೆಯಿದ್ದವರು ಪರಿಹಾರ ಪಡೆಯಬಹುದು. ಕಣ್ಣಿನ ಇತರ ಹಲವು ತೊಂದರೆಗಳಿಗೂ ಕ್ಯಾರೆಟ್ ಮುಖ್ಯವಾದ ನೈಸರ್ಗಿಕ ಉಪಾಯ.ಕ್ಯಾರೆಟ್‌ನ ಹಲವು ಬಗೆಯ ಅಡುಗೆಗಳ ಮೂಲಕ ನಿತ್ಯ ಕ್ಯಾರೆಟ್ ಸೇವನೆ ಅಭ್ಯಾಸ ಮಾಡಿಕೊಳ್ಳಬಹುದು. ಕ್ಯಾರೆಟ್ ಸೂಪ್, ಕ್ಯಾರೆಟ್ ಚಟ್ನಿ, ಕ್ಯಾರೆಟ್ ಸಬ್ಜಿ, ಸಾಂಬಾರು ಇತ್ಯಾದಿಗಳಲ್ಲೂ ಕ್ಯಾರೆಟ್ ನಿತ್ಯ ಬಳಸಬಹುದು. ಅಷ್ಟೇ ಅಲ್ಲದೆ, ಹಸಿ ಕ್ಯಾರೆಟ್ಟನ್ನು ತಿನ್ನುವುದರಿಂದ ಈ ಎಲ್ಲಕ್ಕಿಂತ ಹೆಚ್ಚು ಉಪಯೋಗ ಪಡೆಯಬಹುದು.
೨. ಮೀನು: ಮೀನು ಕಣ್ಣಿಗೆ ಒಳ್ಳೆಯದು. ಇದರಲ್ಲಿರುವ ಒಮೆಗಾ ೩ ಕಣ್ಣಿನ ಹಲವು ತೊಂದರೆಗಳಿಗೆ ರಾಮಬಾಣ. ಮೀನನ್ನು ತಿನ್ನುವುದರಿಂದ ಕಣ್ಣು ಹಾಗೂ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ, ಕಣ್ಣಿನ ದೃಷ್ಠಿಯಿಂದ ರೋಗನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಬೇಕಿದ್ದರೆ ಮೀನು ತಿನ್ನಬಹುದು.
೩. ಬಸಳೆ: ಬಸಳೆಯಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದರಲ್ಲಿರುವ ಕೆರಾಟಿನಾಯ್ಡ್‌ಗಳು ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಇನ್‌ಫ್ಲಾಮೇಟರಿ ಗುಣಗಳ್ನು ಹೊಂದಿದೆ. ಹೀಗಾಗಿ ಇದು ನಿಧಾನವಾಗಿ ಮಾಂಸಖಂಡಗಳು ಕರಗುತ್ತಾ ಹೋಗುವುದುದ ಹಾಗೂ ಕಣ್ಣಿನ ಪೊರೆ (ಕ್ಯಾಟರ್ಯಾಕ್ಟ್) ಬರದಂತೆ ತಡೆಯುತ್ತದೆ. ಹಣ್ಣಿನ ಸ್ಮೂದಿಗಳು, ದಾಲ್ ಮತ್ತಿತರ ಆಹಾರಗಳಲ್ಲಿ ಬಸಳೆ ಸೊಪ್ಪನ್ನು ಸೇರಿಸುವ ಮೂಲಕ ಹೆಚ್ಚು ಬಸಳೆಯನ್ನು ನಿತ್ಯಾಹಾರದಲ್ಲಿ ಬಳಸಬಹುದು.
೪. ಮೊಟ್ಟೆ: ಮೊಟ್ಟೆಯ ಹಳದಿ ಭಾಗ ಒಳ್ಳೆಯದಲ್ಲ ಎಂದು ಬಿಸಾಕಿ ಬಿಡುವ ಮಂದಿಗೆ ಇದು ಕಿವಿಮಾತು. ಇದರಲ್ಲಿರುವ ಹಲವಾರು ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಅಗತ್ಯ ಎಂಬುದನ್ನು ನೆನಪಿಡಿ.
೫. ಹಾಲಿನ ಉತ್ಪನ್ನಗಳು: ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ಇದು ಕಣ್ಣಿಗೆ ಒಳ್ಳೆಯದು. ವಿಟಮಿನ್ ಎ ಕಣ್ಣಿನ ಕಾರ್ನಿಯಾವನ್ನು ರಕ್ಷಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಇದರಲ್ಲಿರುವ ಝಿಂಕ್ ರಾತ್ರಿಯ ಕಣ್ಣಿನ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.
೬. ಓಯ್‌ಸ್ಟರ್: ಓಯ್‌ಸ್ಟರ್‌ಗಳಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ಇದು ಕಣ್ಣಿಗೆ ಒಳ್ಳೆಯದು.
ಇದನ್ನೂ ಓದಿ | Eye Care | ದೃಷ್ಟಿ ವರ್ಧನೆಗೆ ಪೂರಕವಾದ ಹಣ್ಣುಗಳು ಯಾವವು ಗೊತ್ತೇ?
೭. ಬ್ರೊಕೋಲಿ: ಬ್ರೊಕೋಲಿ ಎಂಬ ಹಸಿರು ತರಕಾರಿಯಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್ ಎ, ಇ, ಸಿ ಹಾಗೂ ಲ್ಯುಟೀನ್ ಇದ್ದು ಇದು ಕಣ್ಣಿಗೆ ಬಹಳ ಉತ್ತಮ ಆಹಾರ.
೮. ಸಿಟ್ರಸ್ ಹಣ್ಣುಗಳು: ವಿಟಮಿನ್ ಸಿ ಹೇರಳವಾಗಿರುವ ನಿಂಬೆಹಣ್ಣು, ಮುಸಂಬಿ, ಕಿತ್ತಳೆ, ಕಿವಿಗಳು ಕಣ್ಣಿಗೆ ಹಾನಿಯಾಗದಂತೆ ರಕ್ಷಿಸುತ್ತವೆ. ಕಣ್ಣಿನ ರಕ್ತನಾಳಗಳನ್ನು ಆರೋಗ್ಯವಾಗಿಡುವಲ್ಲಿ ಇವುಗಳ ಪಾತ್ರ ದೊಡ್ಡದು.
೯. ಸಿಹಿಗೆಣಸು: ಸಿಹಿಗೆಣಸು ಕಣ್ಣನ್ನು ಚುರುಕಾಗಿಸುವ ಸಾಮರ್ಥ್ಯ ಪಡೆದಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳ ಕಣ್ಣಿನಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕುವಂತೆ ಮಾಡುತ್ತದೆ.
೧೦. ಸೂರ್ಯಕಾಂತಿ ಬೀಜ: ಸೂರ್ಯಕಾಂತಿ ಬೀಜ ಕೇವಲ ಕಣ್ಣಷ್ಟೇ ಅಲದೆ ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ಬೀಜಗಳಲ್ಲಿ ಒಂದು. ಇದರಲ್ಲಿ ವಿಟಮಿನ್ ಇ ಹೇರಳವಾಗಿದ್ದು, ಪ್ರೊಟೀನ್ ಹಾಗೂ ಆರೋಗ್ಯಕರ ಕೊಬ್ಬು ಇದೆ. ಕಣ್ಣಿನಲ್ಲಿ ಊತವನ್ನು ಕಡಿಮೆ ಮಾಡುವ ಗುಣವನ್ನು ಇದು ಹೊಂದಿದ್ದು, ವಿಷಕಾರಿ ಕಣಗಳನ್ನು ಹೊಡೆದೋಡಿಸುತ್ತದೆ. ಕೇವಲ ಸೂರ್ಯಕಾಂತಿ ಬೀಜವಲ್ಲದೆ, ಎಲ್ಲ ಬೀಜಗಳೂ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದೇ.
ಇದನ್ನೂ ಓದಿ | Eye care | ನಮ್ಮ ನಿತ್ಯದ ಅಭ್ಯಾಸಗಳೇ ಕಣ್ಣಿನ ತೊಂದರೆಗೆ ಕಾರಣವಾಗುತ್ತಿದೆಯೇ?!