ಮಳೆಗಾಲವೆಂದರೆ ಮನಸ್ಸು ಕವಿಯಾಗುತ್ತದೆ ನಿಜ. ಆದರೆ, ದೇಹ ಮಾತ್ರ ಆಲಸ್ಯದ ಗೂಡಾಗುತ್ತದೆ. ಅಷ್ಟೇ ಅಲ್ಲ, ಸುಲಭವಾಗಿ ಶೀತ, ನೆಗಡಿ, ಕೆಮ್ಮು ಮತ್ತಿತರ ಸಮಸ್ಯೆಗಳಿಗೂ ತುತ್ತಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಆಗಾಗ ಬಿಸಿಬಿಸಿಯಾದ ಪೇಯಗಳು ನಮ್ಮ ದೇಹ ಸೇರಬೇಕು. ದೇಹ ಬೆಚ್ಚಗಿರಬೇಕು. ಅದಕ್ಕಾಗಿ, ಆಗಾಗ ಕಾಫಿ ಚಹಾಗಳನ್ನೇ ಕುಡಿಯುವುದಲ್ಲ, ಇಂತಹ ಬಗೆಬಗೆಯ ಪೇಯಗಳನ್ನು ಹೀರಿ ನಮ್ಮ ರೋಗ ನಿರೋಧಕ ಶಕ್ತಿಯನ್ನು (Immunity drinks) ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳುತ್ತಲೇ ಇರಬೇಕು. ಬನ್ನಿ ಯಾವೆಲ್ಲ ಪೇಯಗಳಿಂದ (Healthy monsoon drinks) ನಮ್ಮ ರೋಗ ನಿರೋಧಕತೆ ಹೆಚ್ಚಾಗುತ್ತದೆ ನೋಡೋಣ.
1. ಓಂಕಾಳು ಅರಿಶಿನ ಹಾಲು: ಅರಿಶಿನ ಹಾಲು ಎಂಬ ಗೋಲ್ಡನ್ ಡ್ರಿಂಕ್ ಕೇವಲ ಬಣ್ಣದಲ್ಲಿ ಮಾತ್ರ ಚಿನ್ನ ಅಲ್ಲ. ಗುಣದಲ್ಲೂ ಕೂಡಾ. ಅನಾದಿಕಾಲದಿಂದಲೂ ಅರಿಶಿನ ಹಾಕಿ ಕುದಿಸಿ ಹಾಲು ಕುಡಿಯುವುದರಿಂದಾಗುವ ಲಾಭಗಳನ್ನು ನಮಗೆ ದಾಟಿಸಿ ಹೋಗಿದ್ದಾರೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನೂ ನೀಡುತ್ತದೆ. ಮಳೆಗಾಲಕ್ಕೆ ಅಗತ್ಯ ಬೇಕಾಗುವ ಹಾಗೂ ನಿತ್ಯವೂ ಕುಡಿಯಲೇಬೇಕಾದ ಪೇಯ ಇದು. ಮಳೆಗಾಲದಲ್ಲಿ ಈ ಅರಿಶಿನ ಹಾಲಿಗೆ ಕೊಂಚ ಓಂಕಾಳನ್ನೂ ಸೇರಿಸುವುದು ಒಳ್ಳೆಯದು.
2. ಬಾದಾಮ್ ಖಾವಾ: ಕಾಶ್ಮೀರದ ಖಾವಾ ಕೂಡಾ ಮಳೆಗಾಲಕ್ಕೆ ಅತ್ಯಂತ ಒಳ್ಳೆಯ ಪೇಯ. ಕಾಶ್ಮೀರದ ಕೇಸರಿ, ಬಾದಾಮಿಯನ್ನೂ ಹಾಕಿ ಮಾಡುವ ಪೇಯವಿದು. ಗ್ರೀನ್ ಟೀ ಬ್ಯಾಗ್‌ಗಳನ್ನೂ ಇದರ ಜೊತೆಗೆ ಸೇರಿಸಬಹುದು. ಏಲಕ್ಕಿ, ಚೆಕ್ಕೆ, ಲವಂಗ, ಕೇಸರಿ ಎಲ್ಲವನ್ನೂ ಕುಟ್ಟಿ ಪುಡಿ ಮಾಡಿಕೊಂಡು ನೀರಿಗೆ ಹಾಕಿ ಕುದಿ ಬರಿಸಿ ಅದಕ್ಕೆ ಒಂದು ಗ್ರೀನ್ ಟೀ ಬ್ಯಾಗನ್ನೂ ಮುಳುಗಿಸಿಟ್ಟು ತೆಗೆಯಬಹುದು. ಇದಕ್ಕೆ ಬಾದಾಮಿಯ ಚೂರುಗಳನ್ನು ಸೇರಿಸಿ, ರುಚಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿ ಕುಡಿಯಬಹುದು. ಇದೂ ಕೂಡಾ, ಚಳಿಚಳಿ ಮಳೆಗೆ ಬಿಸಿ ಬಿಸಿ ಖಾವಾ ಗಂಟಲಿಗಷ್ಟೇ ಒಳ್ಳೆಯದು ಅಂದುಕೊಂಡರೆ ತಪ್ಪಾದೀತು. ದೇಹಕ್ಕೆ ರೋಗನಿರೋಧಕತೆಯ ಸಾಮರ್ಥ್ಯ ನೀಡುವಲ್ಲಿ ಇದರ ಪಾತ್ರ ದೊಡ್ಡದು.
3. ಜೀರಿಗೆ ಕಷಾಯ: ಹೊಟ್ಟೆ ಸರಿಯಿಲ್ಲ, ಗ್ಯಾಸ್ ಆಗಿದೆ ಎಂದ ತಕ್ಷಣ ಜೀರಿಗೆ ಕಷಾಯ ನೆನಪಾಗುವುದು ಸಹಜ. ಆದರೆ, ಮಳೆಗಾಲದಲ್ಲೂ ಜೀರಿಗೆ ಕಷಾಯ ಬಹಳ ಒಳ್ಳೆಯದು. ಚಹಾ ಕಾಫಿ ಬೇಡ ಅಂತನಿಸಿದಾಗಲೆಲ್ಲ, ಈ ಕಷಾಯ ಕುಡಿಯಬಹುದು. ಜೀರಿಗೆ, ಕೊತ್ತಂಬರಿ, ಬಡೇಸೊಪ್ಪು ಈ ಮೂರೂ ಸೇರಿ ಒಂದೆರಡು ಚಮಚ ನೀರಿಗೆ ಹಾಕಿ ಕುದಿಸಿ ಮಾಡಬಹುದಾದ ಪೇಯ. ಮೊದಲೇ ಈ ಮೂರನ್ನೂ ಹುರಿದು ಪುಡಿ ಮಾಡಿಯೂ ಇಟ್ಟುಕೊಳ್ಳಬಹುದು. ಹಾಗೆಯೇ ಬಿಸಿಯಾಗಿ ನೀರಾಗಿಯೂ ಕುಡಿಯಬಹುದು ಅಥವಾ ಸ್ವಲ್ಪ ಹಾಲು ಸೇರಿಸಿಯೂ ಕುಡಿಯಬಹುದು. ರುಚಿಗೆ ತಕ್ಕಷ್ಟು ಬೆಲ್ಲವೋ ಸಕ್ಕರೆಯೋ ಸೇರಿಸಿಕೊಂಡರೆ ಕೆಫಿನ್ ಮುಕ್ತ, ಈ ಆರೋಗ್ಯವರ್ಧಕ ಕಷಾಯ ಮಳೆಗಾಲಕ್ಕೆ ಬಹಳ ಒಳ್ಳೆಯದು.
ಇದನ್ನೂ ಓದಿ: Monsoon Food: ಮಳೆಗಾಲದಲ್ಲಿ ನಿದ್ದೆ ಹೊಡೆದೋಡಿಸಬೇಕೆ? ಹಾಗಾದರೆ ಇವನ್ನೆಲ್ಲ ಸೇವಿಸಬಹುದು!
4. ಮುಲೇತಿ- ಶುಂಠಿ ಚಹಾ: ರೋಗ ನಿರೋಧಕ ಶಕ್ತಿಯೂ ಸೇರಿಸಿ ಸರ್ವಗುಣ ಸಂಪನ್ನ ಪೇಯವಿದು. ಮಳೆಗಾಲದ ಇನ್ಫೆಕ್ಷನ್‌ಗಳಿಗೆ ಇದು ಹೇಳಿ ಮಾಡಿಸಿದ್ದು ಕೂಡಾ, ನೆಗಡಿ, ಗಂಟಲುನೋವು, ಶೀತ, ವಿಪರೀತ ಸೀನು, ಅಲರ್ಜಿ ಇವೆಲ್ಲವುಗಳಿಗೆ ರಾಮಬಾಣವೂ ಹೌದು. ಶುಂಠಿಯನ್ನು ಒಂದು ಚಮಚವಾಗುವಷ್ಟು ತುರಿದು ಕುದಿಯುವ ನೀರಿಗೆ ಹಾಕಿ. ಅರ್ಧ ಚಮಚ ಮುಲೇತಿಯನ್ನೂ ಜೊತೆಗೇ ಸೇರಿಸಿ. ಸೋಸಿಕೊಂಡು, ಬೇಕಿದ್ದರೆ ನಿಂಬೆಹಣ್ಣನ್ನು ಹಿಂಡಬಹುದು, ಜೇನುತುಪ್ಪ ಸೇರಿಸಿಕೊಳ್ಳಬಹುದು. ಅಥವಾ ಹಾಗೆಯೇ ಕುಡಿಯಲೂಬಹುದು.
5. ಚೆಕ್ಕೆ ಹಾಕಿದ ಬ್ಲ್ಯಾಕ್ ಕಾಫಿ: ಕಾಫಿ ಪ್ರಿಯರು ನೀವಾಗಿದ್ದರೆ, ಈ ಬಗೆಯ ಬ್ಲ್ಯಾಕ್ ಕಾಫಿ ಕುಡಿಯಲೇಬೇಕು. ಬ್ಲ್ಯಾಕ್ ಕಾಫಿಗೆ ಸ್ವಲ್ಪವೇ ಸ್ವಲ್ಪ ಚೆಕ್ಕೆ ಪುಡಿಯನ್ನೂ ಸೇರಿಸಿ ಕುದಿಸಿ ನೋಡಿ. ಒಂದು ಅತ್ಯಾಕರ್ಷಕ ಘಮ ನಿಮ್ಮ ಕಾಫಿಯದ್ದಾಗುತ್ತದೆ. ಬಿಸಿಬಿಸಿಯಾಗಿ ಹೀರಿದರೆ, ಈಡೀ ದೇಹದಲ್ಲಿ ಉಲ್ಲಾಸ ಮೂಡಿ ಮಳೆಗಾಲದ ಆಲಸ್ಯವೆಲ್ಲ ಮಾಯವಾಗು ಮೈಮನ ಚುರುಕಾಗದಿದ್ದರೆ ಕೇಳಿ!
ಇದನ್ನೂ ಓದಿ: Monsoon Diet: ಮಳೆಗಾಲದಲ್ಲಿ ಆಹಾರ ಸೇವನೆ ಹೀಗಿರಲಿ