ಬಹಳಷ್ಟು ಮಂದಿಗೆ ಮುಖ್ಯವಾಗಿ ಮಹಿಳೆಯರಿಗೆ ಉಗುರು ಎಂದರೆ ಜೀವ. ಉಗುರು ಮುರಿದರೆ, ಜೀವ ಹೋದಂತೆ ವಿಲವಿಲ ಒದ್ದಾಡುತ್ತಾರೆ. ಚೆಂದಕ್ಕೆ ಬೆಳೆಸಿ, ನೇಲ್ ಪಾಲಿಶ್ ಹಚ್ಚಿ, ಆರ್ಟ್ ಕೂಡಾ ಮಾಡಿಸಿ, ಕೈ ಬೆರಳುಗಳನ್ನು ಕೋಮಲವಾಗಿ ಇಟ್ಟುಕೊಂಡ ಮಂದಿಗೆಲ್ಲ ಒಂದು ಉಗುರು ಪಟ್ಟನೆಮುರಿದರೆ, ಎದೆ ಧಸಕ್ಕೆಂದು ಸದ್ದಾಗದೆ ಇರದು. ಜೀವವನ್ನೇ ಇಟ್ಟಿರುವ ಉಗುರು ಅಷ್ಟು ಸುಲಭವಾಗಿ ಮುರಿದದ್ದಾದರೂ ಹೇಗೆ ಅನಿಸಿ ಬೇಸರವಾಗುತ್ತದೆ. ಇನ್ನೂ ಕೆಲವರು, ನಿತ್ಯ ಪೂಜೆಯಂತೆ ಉಗುರಿಗೆ ಬೇಕುಬೇಕಾದ್ದಲ್ಲ ಮಾಡಿ ಉಗುರನ್ನು ಬೆಳೆಸುತ್ತಲೇ ಇರುತ್ತಾರೆ. ಕತ್ತರಿಸದೆ, ಜೀವಮಾನದಲ್ಲಿ ಎಷ್ಟು ಉದ್ದ ಉಗುರು ಬೆಳೆಯಬಹುದು ಎಂಬುದನ್ನು ನೋಡಲು ಇಂಥವರ ಕೈಗಲ್ಲಿ ಸುರುಳಿ ಸುತ್ತಿ ಕೂರಿಸಿದ ಉಗುರನ್ನು ನೋಡಬೇಕು. ಇನ್ನೂ ಕೆಲವರು ಉಗುರು ಮುರಿದರೇನಂತೆ, ಈಗೆಲ್ಲ ಬೇಕಾದಷ್ಟು ಕೃತಕ ಉಗುರುಗಳನ್ನು ಅಂಟಿಸಿಕೊಂಡು ನೇಲ್ ಆರ್ಟ್ ಮಾಡಬಹುದಲ್ಲಾ ಎಂದುಕೊಳ್ಳುತ್ತಾ, ಯಕಶ್ಚಿತ್ ಉಗುರಿನಲ್ಲೇನಿದೆ ಮಹಾ ಎಂದು ಉಗುರನ್ನು ಕಡೆಗಣಿಸಿ, ನಿಜವಾದ ತೊಂದರೆ ಅರಿಯುವಲ್ಲಿ ಎಡವುತ್ತಾರೆ.
ಆದರೆ, ಉಗುರು ನಮ್ಮ ಆರೋಗ್ಯದ ಪರಿಸ್ಥಿತಿಗೆ ಕನ್ನಡಿಯಂತೆ! ಮಹಿಳೆಯರು ಹಾಗೂ ಪುರುಷರು ಇಬ್ಬರೂ ಕೂಡಾ ಉಗುರಿನ ಸಮಸ್ಯೆ ಎದುರಿಸುತ್ತಾರೆ. ಆಗಾಗ ಮುರಿಯುವ ಸಿಪ್ಪೆಯೇಳುವ ತೊಂದರೆಯನ್ನು ನೀವು ಅನುಭವಿಸುತ್ತಿದ್ದೀರೆಂದಾದಲ್ಲಿ ಖಂಡಿತವಾಗಿಯೂ ನಿಮಗೆ ಸರಿಯಾದ ಪೋಷಕಾಂಶ ಸಿಗುತ್ತಿಲ್ಲ, ಅವುಗಳ ಕೊರತೆಯಿದೆ ಎಂದರ್ಥ. ಪ್ರೊಟೀನ್, ಖನಿಜಾಂಶ ಹಾಗೂ ವಿಟಮಿನ್‌ಗಳ ಕೊರತೆ ಇದ್ದಲ್ಲಿ ಮಾತ್ರ ಇಂತಹ ತೊಂದರೆ ಬರುತ್ತದೆ. ಹಾಗಾದರೆ, ದೇಹಕ್ಕೆ ಬೇಕಾದ ಅವಶ್ಯಕ ಪೋಷಕಾಂಶಗಳನ್ನು ಯಾವ ಆಹಾರದ ಮೂಲಕ ಉಗುರಿನ ಆರೋಗ್ಯ ಉತ್ತಮ ಪಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
೧. ಮೊಟ್ಟೆ: ಮೊಟ್ಟೆ ದೇಹಕ್ಕೆ ಬೇಕಾದ ವಿಟಮಿನ್ ಡಿ ಹಾಗೂ ಪ್ರೊಟೀನನ್ನು ಒದಗಿಸುವುದಷ್ಟೇ ಅಲ್ಲ ಇದು ಹೇರಳವಾಗಿ ವಿಟಮಿನ್ ಬಿ೧೨, ಕಬ್ಬಿಣಾಂಶ, ಬಯೋಟಿನ್ ಅನ್ನೂ ನೀಡುತ್ತದೆ. ಆ ಮೂಲಕ ಉಗುರನ್ನು ಗಟ್ಟಿಯಾಗಿಸುತ್ತದೆ.
೨. ಹಸಿರು ಸೊಪ್ಪು: ಹಸಿರು ಸೊಪ್ಪಿನ ತರಕಾರಿಗಳು ಪೋಷಕಾಂಶಗಳ ಪವರ್‌ಹೌಸ್. ಇದರಲ್ಲಿರುವ ಕ್ಯಾಲ್ಶಿಯಂ ಹಾಗೂ ಕನ್ನಿಣಾಂಶ ಜೊತೆಗೆ ಆಂಟಿ ಆಕ್ಸಿಡೆಂಟ್‌ಗಳು ಉಗುರಗಳು ಸೀಳದೆ, ಮುರಿಯದೆ, ಸಿಪ್ಪೆಯಾಗಿ ಏಳದಂತೆ ತಡೆದು ಗಟ್ಟಿಯಾಗಿಸುತ್ತದೆ.
ಇದನ್ನೂ ಓದಿ: Immunity Foods for Pregnant Women: ಗರ್ಭಿಣಿಯರಿಗೆ ಅಗತ್ಯವಾದ ರೋಗ ನಿರೋಧಕ ಶಕ್ತಿ ನೀಡುವ ಆಹಾರಗಳಿವು
೩. ಮೀನು: ಮೀನು ಒಂದು ಅತ್ಯಂತ ಆರೋಗ್ಯಕಾರಿ ಮಾಂಸಾಹಾರದ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದರಲ್ಲಿರುವ ಪ್ರೊಟೀನ್, ಸಲ್ಫರ್ ಹಾಗೂ ಒಮೆಗಾ ೩ ಫ್ಯಾಟಿ ಆಸಿಡ್‌ಗಳು ಉಗುರಿಗೆ ಬೇಕಾದ ನೀರಿನಂಶವನ್ನು ನೀಡಿ, ಮುರಿಯದಂತೆ, ಒಣಕಲಾಗದಂತೆ ನೋಡಿಕೊಳ್ಳುತ್ತದೆ.
೪. ಒಣಬೀಜಗಳು: ಬಾದಾಮಿ, ವಾಲ್ನಟ್, ನೆಲಗಡಲೆ, ಇತ್ಯಾದಿ ಬೀಜಗಳು ಕಬ್ಬಿಣಾಂಶವನ್ನೂ, ಪ್ರೊಟೀನನ್ನೂ ಸಮೃದ್ಧವಾಗಿ ಹೊಂದಿರುವಂಥವು. ಇವು, ಉಗುರಿನಲ್ಲಿರುವ ಅಂಗಾಂಶಗಳಿಗೆ ಬೇಕಾದ ಆಮ್ಲಜನಕವನ್ನು ಒದಗಿಸಿ, ಆರೋಗ್ಯಪೂರ್ಣ ಉಗುರು ಹೊಂದುವಂತೆ ಮಾಡುತ್ತವೆ.
೫. ಬೇಳೆಕಾಳುಗಳು: ಬೇಳೆಕಾಳುಗಳು ಪ್ರೊಟೀನನ್ನು ತಮ್ಮಲ್ಲಿ ಹೊಂದಿರುವಂಥವುಗಳು. ಇವು ಕೆರಾಟಿನ್ ಉತ್ಪಾದನೆ ಬೇಕೇ ಬೇಕಾಗಿದೆ. ಇದರಿಂದ ಉಗುರು ಗಟ್ಟಿಮುಟ್ಟಾಗಿ ರೂಪುಗೊಳ್ಳುತ್ತದೆ.
ಇದನ್ನೂ ಓದಿ: Food Tips: ಅಡುಗೆಮನೆಯ ಒಗ್ಗರಣೆ ಡಬ್ಬಿ ನಿಮ್ಮ ಲೈಂಗಿಕ ಜೀವನಕ್ಕೂ ಒಗ್ಗರಣೆಯೇ!