Site icon Vistara News

Heart Attack Sign: ಹೃದಯಾಘಾತ ಆಗುವುದಿದ್ದರೆ ನಮ್ಮ ದೇಹ ಮೊದಲೇ ಈ ಸೂಚನೆಗಳನ್ನು ನೀಡುತ್ತದೆ!

Heart Attack Sign

ಬದುಕು ನೀರ ಮೇಲಿನ ಗುಳ್ಳೆ ಎಂಬುದು ಮತ್ತೆ ಮತ್ತೆ ಅರ್ಥವಾಗುವುದು ಹೃದಯಾಘಾತದ ಸಂದರ್ಭದಲ್ಲಿ. ಇವೆಲ್ಲ ಗೊತ್ತಾಗುವುದರೊಳಗೇ ಹೀಗಾಗಿ ಹೋಯ್ತು ಎಂದು ಶೋಕಿಸುವಂತಾಗುತ್ತದೆ. ಹೃದಯಾಘಾತದ ಸೂಚನೆಗಳನ್ನು ದೇಹ ನೀಡಿದರೂ ಹೆಚ್ಚಿನ ಬಾರಿ ಗುರುತಿಸುವಲ್ಲಿ ವಿಫಲರಾಗುತ್ತೇವೆ. ಕಾರಣ, ಅಂಥ ಸೂಚನೆಗಳು ಯಾವುವು ಎಂಬುದೇ ನಮಗೆ ತಿಳಿದಿರುವುದಿಲ್ಲ. ಎದೆನೋವು ಮತ್ತು ಉಸಿರಾಡಲು ಕಷ್ಟವಾಗುವಂಥ ಸೂಚನೆಗಳು ಕಂಡಾಗಲೇ ನಮಗೆ ಹೃದಯದ ತೊಂದರೆ ಇರಬಹುದೆಂಬುದು ಅರಿವಾಗುತ್ತದೆ. ಆದರೆ ಇತರ ಕೆಲವು ಸೂಚನೆಗಳು ಆಸಿಡಿಟಿ, ಎದೆಯುರಿ, ಸುಸ್ತು ಮುಂತಾದ ಬೇರೆ ಸಮಸ್ಯೆಗಳ ಲಕ್ಷಣಗಳೂ ಆಗಿರಬಹುದಾದ್ದರಿಂದ ಮುಂಬರುವ ಅನಾಹುತವನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಮುಂದಾಗಿ ಈ ಬಗ್ಗೆ ಕಾಳಜಿ ತೆಗೆದುಕೊಂಡಲ್ಲಿ ಆಗುವಂಥ ಅನಾಹುತವನ್ನು ತಪ್ಪಿಸಲು ಸಾಧ್ಯವಿದೆ. ಹೃದಯಾಘಾತವಾಗುವ ಹಲವಾರು ದಿನಗಳ ಮೊದಲಿನಿಂದಲೇ ಈ ಸೂಚನೆಗಳನ್ನು ದೇಹ ತೋರಿಸುತ್ತದೆ. ಕೆಲವೊಮ್ಮೆ ಒಂದು ತಿಂಗಳ ಮುನ್ನವೂ (Heart Attack Sign) ಇವು ಕಾಣಬಹುದು.

ಎದೆಯಲ್ಲಿ ಬಿಗಿ, ಒತ್ತಡ

ಎದೆಯಲ್ಲಿ ಒತ್ತಡದ ಅನುಭವ, ಏನೋ ಹಿಂಡಿದಂತೆ, ಬಿಗಿದಂತೆ ಭಾಸವಾಗುವುದು, ನೋವು ಮುಂತಾದವೆಲ್ಲ ಆರಂಭದಲ್ಲಿ ಕಾಣುತ್ತವೆ. ಇಂಥವು ಏನೇ ಕಂಡರೂ ಹೃದಯ ತಜ್ಞರಲ್ಲೇ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಈ ಬಗ್ಗೆ ಉದಾಸೀನ ಸಲ್ಲದು.

ತಲೆ ಸುತ್ತುವುದು

ನೀರು, ಆಹಾರ ಎಲ್ಲರೂ ಕಾಲಕಾಲಕ್ಕೆ ಹೊಟ್ಟೆ ಸೇರುತ್ತಿದ್ದರೂ ನಿಲ್ಲದ ಸುಸ್ತು, ಆಯಾಸ, ಉಸಿರು ಕಟ್ಟುವುದು, ತಲೆ ಸುತ್ತುವುದು ಮುಂತಾದ ಲಕ್ಷಣಗಳು ಪದೇಪದೆ ಕಾಣುತ್ತಿವೆ ಎಂದರೆ ಇದು ನಿರ್ಲಕ್ಷ್ಯ ಮಾಡುವ ವಿಷಯವಲ್ಲ. ಹೃದಯಕ್ಕೆ ಹರಿಯುವ ರಕ್ತದ ಪ್ರಮಾಣ ಕಡಿಮೆಯಾದರೆ, ದೊರೆಯುವ ಆಮ್ಲಜನಕದಲ್ಲಿ ಕೊರತೆಯಾದರೆ ಇಂಥ ಸೂಚನೆಗಳು ಕಾಣುತ್ತವೆ.

ಅಜೀರ್ಣ, ವಾಂತಿ

ಹೀಗೆನ್ನುತ್ತಿದ್ದಂತೆ ನಿನ್ನೆ ತಿಂದದ್ದು ಯಾವುದೋ ಸರಿಯಾಗಲಿಲ್ಲ ಎಂದೇ ಭಾವಿಸಿ, ಅದಕ್ಕೆ ಔಷಧಿ ಮಾಡುತ್ತೇವೆ. ಅದಿಲ್ಲದಿದ್ದರೆ, ಆಸಿಡಿಟಿ ತೊಂದರೆಯಿದ್ದರೆ ಸಹ ಇಂಥದ್ದೇ ಲಕ್ಷಣಗಳು ಕಾಣಬಹುದು. ಆದರೆ ಇವೆಲ್ಲ ಹುಳಿತೇಗು, ಎದೆಯುರಿಯ ಪ್ರಕೋಪಗಳು ಎಂದು ಸುಮ್ಮನಿರಬೇಡಿ. ರಕ್ತಸಂಚಾರ ಕಡಿಮೆ ಆದಾಗಲೂ ಇಂಥ ಸೂಚನೆಗಳು ಕಾಣುತ್ತವೆ.

ಬೆವರು

ಸೆಕೆಯಲ್ಲಿ ಬೆವರುವುದು ಸಹಜ. ಮಹಿಳೆಯರಿಗೆ ಋತುಬಂಧದ ಕಾಲದಲ್ಲಿ ವಿಪರೀತ ಬೆವರುವುದೂ ಸ್ವಾಭಾವಿಕ. ಆದರೆ ಕಾಲ ಯಾವುದೇ ಆದರೂ ಬೆವರುತ್ತಿದ್ದೀರಿ ಎಂದಾದರೆ ವೈದ್ಯರಲ್ಲಿಗೆ ಹೋಗಬೇಕು ಎಂದೇ ಅರ್ಥ. ದೇಹಕ್ಕೆ ಅಪಾಯವಾದಾಗ ಫ್ಲೈಟ್‌-ಫೈಟ್‌ ಹಂತಕ್ಕೆ ದೇಹ ತನ್ನನ್ನು ತಾನು ದೂಡಿಕೊಳ್ಳುವ ಸೂಚನೆಯಾಗಿ ಈ ಅತಿಯಾದ ಬೆವರು ಕಾಣುತ್ತದೆ.

ಉಸಿರುಗಟ್ಟುವುದು

ಸಣ್ಣ-ಪುಟ್ಟ ಕೆಲಸ ಮಾಡುವಾಗ, ಮೆಟ್ಟುಲು ಹತ್ತುವಾಗ, ಎಷ್ಟೋ ವರ್ಷಗಳಿಂದ ಮಾಡುತ್ತಿರುವ ಮಾಮೂಲಿ ವಾಕಿಂಗ್‌ನಲ್ಲೂ ಮೇಲುಸಿರು ಬರುತ್ತಿದೆ ಎಂದಾದರೆ ಮುಂಬರುವ ಅಪಾಯದ ಸೂಚನೆಯಿದು. ಅಂದರೆ ಹೃದಯಾಘಾತ ಆಗಿಯೇ ಬಿಡುತ್ತದೆ ಎಂದಲ್ಲ, ಆದರೆ ಹೃದಯದ ಆರೋಗ್ಯ ಚೆನ್ನಾಗಿಲ್ಲ ಎಂಬುದು ಸ್ಪಷ್ಟ.

ಇದನ್ನೂ ಓದಿ: Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ

ನೋವು

ಹೀಗೆನ್ನುತ್ತಿದ್ದಂತೆ ಎದೆನೋವೇ ಬರಬೇಕೆಂದಿಲ್ಲ. ಬೆನ್ನು, ಭುಜ, ತೋಳು, ಕುತ್ತಿಗೆ, ದವಡೆಯಲ್ಲೂ ನೋವು ಕಾಣುತ್ತಿದೆ ಎಂದಾದರೆ ಖಂಡಿತಕ್ಕೂ ಏನೋ ಸರಿಯಿಲ್ಲ ಎಂಬುದು ಸ್ಪಷ್ಟ. ಹೆಚ್ಚಿನ ಸಾರಿ ರಕ್ತನಾಳಗಳಲ್ಲಿ ಜಮೆಯಾಗಿರುವ ಕೊಬ್ಬಿನಿಂದಾಗಿ ಪರಿಚಲನೆಯಲ್ಲಿ ತೊಂದರೆಯಾಗಿ ಬರುವಂಥ ತೊಂದರೆಗಳಿವು. ವೇಗಸ್‌ ನರವು ಹೃದಯದಿಂದ ಮೆದುಳು, ಎದೆ, ಕುತ್ತಿಗೆ, ಕಿಬ್ಬೊಟ್ಟೆ ಮುಂತಾದ ಹಲವೆಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಹೃದಯದಲ್ಲಿ ಆಗುವಂಥ ತೊಂದರೆಗಳನ್ನು ಇತರ ಭಾಗಗಳಿಗೆ ನೋವಿನ ಮೂಲಕ ಸೂಚನೆ ನೀಡುತ್ತದೆ.

Exit mobile version