ಇತ್ತೀಚೆಗೆ ಹೃದಯಾಘಾತ ಪ್ರಕರಣಗಳ ವಾರ್ತೆ ಹೆಚ್ಚುತ್ತಿದೆ. ಯುವ ಮಂದಿಯಲ್ಲೂ ಹೃದಯಾಘಾತವಾದ ಸುದ್ದಿ ಕೇಳುತ್ತಿದ್ದೇವೆ. ಇದು ಯಾಕಾಗಿ ಎಂದು ನಾವು ನಾನಾ ಕಾರಣಗಳನ್ನು ಹುಡುಕುತ್ತೇವೆ. ಇಂದಿನ ಜೀವನಕ್ರಮ, ಕೋವಿಡ್ ನಂತರದ ಸಮಸ್ಯೆಗಳು ಇತ್ಯಾದಿಗಳೂ ಕಾರಣವಾಗಿರುವ ಸಾಧ್ಯತೆಗಳನ್ನು ಹುಡುಕಿಕೊಂಡಿದ್ದೇವೆ. ಆದರೂ ಚಳಿಗಾಲದಲ್ಲೇ ಇಂತಹ ಆರೋಗ್ಯ ಸಮಸ್ಯೆಗಳು ಜಾಸ್ತಿಯಾಗುತ್ತದಲ್ಲವೇ ಅಂತ ನಿಮಗನಿಸಿದರೆ ಅದು ನಿಜ. ಚಳಿಗಾಲಕ್ಕೂ ಹೃದಯ ಸಂಬಂಧೀ ಸಮಸ್ಯೆಗಳಿಗೂ ಸಂಬಂಧ ಇದೆ.
ಚಳಿಗಾಲದಲ್ಲಿ ರಕ್ತನಾಳಗಳು ಕುಗ್ಗುತ್ತವೆ. ಇದೇ ಕೆಲವೊಮ್ಮೆ ಹೃದಯಾಘಾತ ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಎದೆನೋವು, ಉಸಿರಾಟದಲ್ಲಿ ತೊಂದರೆ, ಹೃದಯ ಸಂಬಂಧೀ ರೋಗಗಳು, ಚಳಿಗಾಲದಲ್ಲೇ ಹೆಚ್ಚು ಉಲ್ಬಣಿಸುತ್ತದೆ.
ಹೊರಗಡೆ ಚಳಿ ಹೆಚ್ಚಾಗುತ್ತಿದ್ದಂತೆ ಹೃದಯ ಸರಿಯಾಗಿ ಕೆಲಸ ಮಾಡಬೇಕೆಂದರೆ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಜೊತೆಗೆ ದೇಹದ ಉಷ್ಣತೆಯನ್ನೂ ಆರೋಗ್ಯಕರ ಮಟ್ಟದಲ್ಲಿ ಉಳಿಸಿಕೊಳ್ಳುವುದು ದೇಹಕ್ಕಿರುವ ಸವಾಲು. ಚಳಿಗಾಲದಲ್ಲಿ ಬೀಸುವ ಕುಳಿರ್ಗಾಳಿ ಈ ಸವಾಲನ್ನು ಇನ್ನಷ್ಟು ಕಠಿಣವಾಗಿಸಿ, ದೇಹ ತನ್ನ ನಿಜವಾದ ಉಷ್ಣತೆಯನ್ನು ಬಹುಬೇಗ ಕಡಿಮೆಯಾಗುವಂತೆ ಮಾಡುತ್ತದೆ. ಹೀಗಾಗಿ ದೇಹ ತನ್ನ ಆರೋಗ್ಯಯುತ ಉಷ್ಣತೆಯಲ್ಲಿ ಇಳಿಕೆ ಕಂಡರೆ, ಉಂಟಾಗುವ ಹೈಪೋಥರ್ಮಿಯಾ ಹೃದಯದ ಮಾಂಸಖಂಡಗಳನ್ನು ದುರ್ಬಲವಾಗಿಸುವ ಸಂಭವವಿದೆ.
ಆಗ ಹೆಚ್ಚಾಗುವ ರಕ್ತದೊತ್ತಡ, ಹೃದಯಕ್ಕೆ ರಕ್ತಪೂರಣ ಮಾಡುವ ರಕ್ತನಾಳಗಳನ್ನು ಕುಗ್ಗುವಂತೆ ಮಾಡುತ್ತದೆ. ಇದರಿಂದಾಗಿ ರಕ್ತ ಪೂರೈಕೆ ಮಾಡುವಾಗ ಹೃದಯಕ್ಕೆ ತಲುಪಬೇಕಾದ ರಕ್ತ ಹಾಗೂ ಆಮ್ಲಜನಕದ ಪ್ರಮಾಣದಲ್ಲಿ ವ್ಯತ್ಯಯವಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ಇದ್ದಕ್ಕಿದ್ದಂತ ಹೃದಯಾಘಾತದಂತಹ ಸಮಸ್ಯೆಯೂ ಬಂದೊದಗಬಹುದು.
ಹಾಗಾದರೆ, ಇಂತಹ ಸಮಸ್ಯೆಗಳಾಗದಂತೆ ನಾವು ಯಾವ ರೀತಿಯ ಮುನ್ನೆಚ್ಚರಿಕೆಯನ್ನು ಕೈಗೊಳ್ಳಬಹುದು ನೋಡೋಣ.
೧. ಸರಿಯಾಗಿ ತಿನ್ನಿ. ಚಳಿಗಾಲಕ್ಕೆ ಸರಿಯಾದ ಆಹಾರ ಸೇವನೆ ಬಹಳ ಮುಖ್ಯ. ಚಳಿಗಾಲ ಬಂದ ಕೂಡಲೇ, ಬಿಸಿಬಿಸಿಯಾಗಿ, ಬಗೆಬಗೆಯ ಆಹಾರವನ್ನು ಹೊರಡೆ ತಿನ್ನಬೇಕೆಂಬ ಆಕರ್ಷಣೆ ಸಹಜ. ಆದರೆ, ಇವನ್ನು ಕೊಂಚ ಬದಿಯಲ್ಲಿಟ್ಟು, ದೇಹಕ್ಕೆ ಅಗತ್ಯ ಪೋಷಕಾಂಶಗಳ ಪೂರೈಕೆ ಇರುವ ಆಹಾರ ತಿನ್ನುವುದು ಬಹಳ ಮುಖ್ಯ. ತರಕಾರಿ, ಹಣ್ಣುಗಳ ಸೇವನೆ ಬಹಳ ಅಗತ್ಯ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಆಹಾರ ಸೇವನೆಯತ್ತ ಗಮನ ಹರಿಸುವುದು ಒಳ್ಳೆಯದು.
ಇದನ್ನೂ ಓದಿ | World Heart day | ವಾಲ್ನಟ್ ತಿನ್ನಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳಿ!
೨. ಔಷಧಿಗಳ ಬಗ್ಗೆ ನಿಗಾ ವಹಿಸಿ. ಚಳಿಗಾಲದ ಸಮಯದಲ್ಲಿ ಹೃದಯ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾಗಿರುವುದರಿಂದ ಹೃದಯದ ಸಮಸ್ಯೆಯಿರುವ ಮಂದಿ ಹೆಚ್ಚು ಗಮನ ಕೊಡಬೇಕು. ಹೃದಯ ಅಥವಾ ಈ ಸಂಬಂಧೀ ನಿಯಮಿತವಾಗಿ ಯಾವುದೇ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಚಳಿಗಾಲ ಸಮೀಪಿಸುತ್ತಿದ್ದಂತೆ, ತಮ್ಮ ಎಂದಿನ ವೈದ್ಯರನ್ನು ಕಂಡು ಔಷಧಿಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಸರಿಯಾಗಿ ಸೇವಿಸುತ್ತಿರಬೇಕು. ಈ ಬಗ್ಗೆ ನಿರ್ಲಕ್ಷ್ಯ ಸಲ್ಲ.
೩. ಚಳಿಗಾಲದಲ್ಲಿ ಉಲ್ಲಾಸ ಕಡಿಮೆ. ಆಲಸ್ಯ ಜಾಸ್ತಿ. ಆದರೆ, ಚಳಿಗಾಲವೆಂದು ಹೊದ್ದು ಮಲಗುವ ಚಾಳಿ ಬಿಟ್ಟು ನಿಯಮಿತವಾಗಿ ವ್ಯಾಯಾಮದ ಅಭ್ಯಾಸವನ್ನು ರೂಢಿಸಿಕೊಳ್ಳಿ. ಚುರುಕಿನ ಜೀವನಕ್ರಮ ಒಳ್ಲೆಯದು. ಇದು ಹೃದಯವನ್ನೂ ಚುರುಕಾಗಿ ಇಟ್ಟುಕೊಳ್ಳುತ್ತದೆ.
೪. ಮುಖ್ಯವಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಏನೇ ಆದರೂ ಮಾನಸಿಕ ನೆಮ್ಮದಿ ಇಟ್ಟುಕೊಳ್ಳಿ. ಚಳಿಗಾಲದಲ್ಲಿ ಹಗಲಿನ ಅವಧಿ ಕಡಿಮೆ ಹಾಗೂ ರಾತ್ರಿಯ ಅವಧಿ ಹೆಚ್ಚು ಇರುವುದರಿಂದ ಸೂರ್ಯನ ಬೆಳಕು ಭೂಮಿಗೆ ತಲುಪುವ ಅವದಿಯೂ ಕಡಿಮೆ ಇರುವುದರಿಂದ, ಬೆಳಗುಗಳು ಮಂಜಿನಿಂದ ಆವೃತವಾಗಿರುವುದರಿಂದ ಮಾನಸಿಕವಾಗಿ ಕುಗ್ಗುವುದುದ ಹೆಚ್ಚು. ಮಾನಸಿಕ ಆರೋಗ್ಯಕ್ಕೂ ದೈಹಿಕ ಆರೋಗ್ಯಕ್ಕೂ ಸಂಬಂಧವಿದೆ. ನಿಮ್ಮ ಮಾನಸಿಕ ಆರೋಗ್ಯ ಚೆನ್ನಾಗಿ ಇಟ್ಟುಕೊಂಡರೆ, ದೈಹಿಕವಾಗಿಯೂ ನೀವು ಆರೋಗ್ಯವಂತರಾಗಿರುತ್ತೀರಿ.
೫. ಹೃದಯ ಸಂಬಂಧೀ ಸಮಸ್ಯೆ ಇರುವವರು, ತಮ್ಮ ಆರೋಗ್ಯವನ್ನು ಚಳಿಗಾಲದಲ್ಲಿ ಹೆಚ್ಚು ಮುತುವರ್ಜಿಯಿಂದ ಕಾಪಾಡಿಕೊಳ್ಳುವುದು ಒಳ್ಳೆಯದು. ಮುಖ್ಯವಾಗಿ, ಚಳಿಗಾಲದಲ್ಲಿ, ಶೀತ, ಜ್ವರ ಇತ್ಯಾದಿ ಸಮಸ್ಯೆಗಳೂ ಹೆಚ್ಚು ಕಾಡುವುದರಿಂದ ಈ ಎಲ್ಲ ಸಮಸ್ಯೆಗಳ ಬಗ್ಗೆ ಜಾಗರೂಕತೆ ಇರಿಸಿಕೊಳ್ಳಿ.
ಇದನ್ನೂ ಓದಿ | Heart attack | ಚಳಿ ಗಾಳಿ ಎಫೆಕ್ಟ್: ಕಾನ್ಪುರದಲ್ಲಿ ಐದೇ ದಿನದೊಳಗೆ 98 ಮಂದಿ ಹೃದಯಾಘಾತಕ್ಕೆ ಬಲಿ! ಏನಿದಕ್ಕೆ ಕಾರಣ?