Site icon Vistara News

Heart Health In Winter: ಚಳಿಗಾಲದಲ್ಲಿ ಹೃದಯಾಘಾತದಿಂದ ಪಾರಾಗುವುದು ಹೇಗೆ?

Heart Health In Winter

ಭಾರತದ ದಕ್ಷಿಣ ಭಾಗದಲ್ಲಿ ಕೆಲವೇ ಪ್ರದೇಶಗಳನ್ನು ಹೊರತುಪಡಿಸಿದರೆ ಇಲ್ಲಿ ಚಳಿಗಾಲ ತೀವ್ರವಲ್ಲ. ಹಾಗಾಗಿ ಚಳಿಗಾಲದ ಪ್ರತಿಕೂಲ ಹವಾಮಾನಗಳ ಬಿಸಿ ಅಷ್ಟಾಗಿ ತಾಗುವುದಿಲ್ಲ. ಆದಾಗ್ಯೂ ಮಾಗಿ ಬಂತೆಂದರೆ ವಯಸ್ಸಾದವರು, ಅನಾರೋಗ್ಯದಿಂದ ನರಳುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಕಾಲವಿದು ಎಂದೇ ಅರ್ಥ. ಕಾರಣ, ಕೆಲವು ಆರೋಗ್ಯ ಸಮಸ್ಯೆಗಳು ಬಿಗಡಾಯಿಸುತ್ತವೆ, ಇನ್ನು ಕೆಲವು ನಿಯಂತ್ರಣಕ್ಕೆ ಬಾರದೆ ಸತಾಯಿಸುತ್ತವೆ. ಉದಾ, ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಯಂಥವು ಚಳಿಗಾಲದಲ್ಲಿ ನಿಯಂತ್ರಣ ತಪ್ಪುವುದು ಹೆಚ್ಚು. ರಕ್ತದೊತ್ತಡ, ಮಧುಮೇಹದಂಥವು ನಿಯಂತ್ರಣಕ್ಕೆ ಒಳಪಡಲು ಒಲ್ಲೆ ಎನ್ನುತ್ತವೆ. ಹೃದಯವೂ (Heart Health In Winter) ಅಷ್ಟೆ… ಸೂಚನೆ ಕೊಡದೆಯೇ ಕೆಲಸ ನಿಲ್ಲಿಸಿಬಿಡುತ್ತದೆ! ಹೀಗಾಗದಂತೆ ಎಚ್ಚರಿಕೆ ತೆಗೆದುಕೊಳ್ಳಲು ಸಾಧ್ಯವೇ?

ಯಾಕಿಲ್ಲ! ಹೃದಯಾಘಾತದ ವರ್ತಮಾನಗಳು ಚಳಿಗಾಲದಲ್ಲಿ ಹೆಚ್ಚು. ಕಾರಣ, ಚಳಿಗೆ ರಕ್ತನಾಳಗಳು ಸಂಕೋಚಗೊಂಡು ರಕ್ತದೊತ್ತಡ ಹೆಚ್ಚಿಸುತ್ತವೆ. ಇದರಿಂದ ರಕ್ತ ಹೆಪ್ಪುಗಟ್ಟುವುದು, ಪಾರ್ಶ್ವವಾಯು, ಹೃದಯಾಘಾತ ಹೆಚ್ಚುವುದು ಹೌದಾದರೂ, ಹಾಗಾದಂತೆ ಜಾಗ್ರತೆ ವಹಿಸುವುದು ಕಷ್ಟವೇನಲ್ಲ. ಚಳಿಗಾಲದಲ್ಲಿ ನಿಯಮಿತವಾಗಿ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುವುದು, ಚಳಿಗೆ ಹೆಚ್ಚು ಒಡ್ಡಿಕೊಳ್ಳದೆ ಬೆಚ್ಚನೆಯ ಬಟ್ಟೆಗಳನ್ನು ಧರಿಸುವುದು, ನಸುಕಿನ ಮತ್ತು ತಡರಾತ್ರಿಯ ವೇಳೆಗೆ ಮನೆಯಿಂದ ಹೊರಗೆ ಬಾರದಿರುವುದು ಮುಂತಾದ ಕೆಲವು ಕ್ರಮಗಳು ಹೃದಯಕ್ಕೆ (cardiac health) ಪೆಟ್ಟು ಕೊಡುವುದನ್ನು ತಪ್ಪಿಸಬಲ್ಲವು. ಇದಕ್ಕೇನು ಮಾಡಬೇಕು?

ರಕ್ತದೊತ್ತಡ ನಿರ್ವಹಣೆ

ಹೆಚ್ಚಿನ ಹೃದಯಾಘಾತದ ಪ್ರಕರಣಗಳಲ್ಲಿ ಇದೇ ಸಮಸ್ಯೆಯ ಮೂಲ. ಚಳಿಗೆ ರಕ್ತನಾಳಗಳು ಸಂಕುಚಿತಗೊಂಡು ರಕ್ತದೊತ್ತಡವನ್ನು ಏರಿಸುತ್ತವೆ. ಇದಲ್ಲದೆ, ಕೌಟುಂಬಿಕ ಅಥವಾ ಔದ್ಯೋಗಿಕ ಒತ್ತಡಗಳು ಹೆಚ್ಚಾದರೆ, ಪ್ರಯಾಣ ಅಥವಾ ರಜೆಯ ವಿರಾಮವೂ ಆಯಾಸ ಹೆಚ್ಚಿಸಿದರೆ ರಕ್ತದೊತ್ತಡ ನಿಯಂತ್ರಣ ದುಸ್ತರವಾಗುತ್ತದೆ. ಹಾಗಾಗಿ ನಿಯಮಿತವಾಗಿ ರಕ್ತದೊತ್ತಡವನ್ನು ತಪಾಸಣೆ ಮಾಡಿ, ಇದರಲ್ಲಿ ಏರಿಳಿತ ಕಂಡುಬಂದಲ್ಲಿ ವೈದ್ಯರೊಂದಿಗೆ ಸಮಾಲೋಚಿಸಬೇಕು. ಇದರಿಂದ ಪ್ರಾಣಾಪಾಯಗಳನ್ನು ತಡೆಯಲು ಸಾಧ್ಯವಿದೆ

ಔಷಧಗಳನ್ನು ನಿಲ್ಲಿಸಬೇಡಿ

ಈಗಾಗಲೇ ಇರುವಂಥ ಆರೋಗ್ಯ ಸಮಸ್ಯೆಗಳಿಗೆ ವೈದ್ಯರು ಸೂಚಿಸಿದ ಔಷಧಿಗಳನ್ನು ಮರೆಯದೆ ತೆಗೆದುಕೊಳ್ಳಿ. ಔಷಧಿಗಳನ್ನು ತಪ್ಪಿಸುವುದಕ್ಕೆ ನೆವಗಳು ಬೇಕಾದಷ್ಟು ದೊರೆಯಬಹುದು. ಆದರೆ ಇದರಿಂದ ಹಾನಿಯಾಗುವುದು ನಿಮಗೇ. ಚಳಿಗಾಲಕ್ಕೂ ಮುನ್ನ ಫ್ಲೂ ಲಸಿಕೆ ಅಥವಾ ನ್ಯುಮೋನಿಯ ಲಸಿಕೆಗಳು ಅಗತ್ಯವಿದ್ದರೆ ತೆಗೆದುಕೊಳ್ಳಿ. ಒಂದೊಮ್ಮೆ ಸೋಂಕಾದರೆ ಅದಕ್ಕೂ ಸ್ವಯಂವೈದ್ಯ ಮಾಡದೆ, ವೈದ್ಯರು ಹೇಳಿದ ಮದ್ದುಗಳನ್ನು ಸೇವಿಸಿ.

ಬೆಚ್ಚನೆಯ ವಸ್ತ್ರಗಳು

ಚಳಿಗಾಲದಲ್ಲಿ ಹಲವು ರೀತಿಯ ನೋವುಗಳು ಕಾಡುತ್ತವೆ. ಇದಕ್ಕಾಗಿ ಬೆಚ್ಚನೆಯ ವಸ್ತ್ರಗಳು ಅಗತ್ಯ. ಆದರೆ ಒಂದು ಭರ್ಜರಿ ಜಾಕೆಟ್‌ ಹಾಕಿ ಕೂತರೆ, ಹತ್ತು ನಿಮಿಷಗಳಲ್ಲಿ ಬೆವರು ಒರೆಸುವಂತಾದರೆ ಕಷ್ಟ. ಹಾಗಾಗಿ ಹಲವು ಪದರಗಳಲ್ಲಿ ದೇಹವನ್ನು ಬೆಚ್ಚಗಾಗಿಸಿ. ಇದರಿಂದ ಹೊರಗಿನ ತಾಪಮಾನಕ್ಕೆ ಸರಿಯಾಗಿ ದೇಹದ ಉಷ್ಣತೆಯನ್ನೂ ಹೊಂದಿಸಿಕೊಳ್ಳಬಹುದು. ಶೀತಕ್ಕೆ ಒಡ್ಡಿಕೊಂಡರೆ ಹೃದಯ, ಶ್ವಾಸಕೋಶಗಳು ನರಳುತ್ತವೆ.

ಆಹಾರ

ಹಬ್ಬಗಳ ಸಾಲನ್ನು ಈಗಷ್ಟೇ ಮುಗಿಸಿ ಕುಳಿತಿದ್ದೇವೆ. ಬೇಕಾದ್ದು, ಬೇಡದ್ದೆಲ್ಲಾ ತಿಂದಿದ್ದಾಗಿದೆ. ಇನ್ನೀಗ ಆಹಾರವನ್ನು ಮರಳಿ ಹಳಿಗೆ ತರುವ ಕೆಲಸ ಆಗಬೇಕಿದೆ. ಪೌಷ್ಟಿಕಾಂಶಗಳತ್ತ ಗಮನ ಕೊಡಿ. ಎಣ್ಣೆ, ಜಿಡ್ಡು, ಸಕ್ಕರೆ, ಸಂಸ್ಕರಿಸಿದ್ದು ಎಲ್ಲಾ ಸಾಕು ಮಾಡಿ. ಹಣ್ಣು, ತರಕಾರಿಗಳು, ಇಡೀ ಧಾನ್ಯಗಳು ಮುಂತಾದವು ಆಹಾರದ ಭಾಗವಾಗಲಿ. ಉಪ್ಪು, ಉಪ್ಪಿನಕಾಯಿ ಎಡೆ ಶೃಂಗಾರ ಮಾಡಿದರೆ ಸಾಕು, ಹೊಟ್ಟೆ ಸೇರಬೇಕಿಲ್ಲ. ಹೃದಯದ ಆರೋಗ್ಯಕ್ಕೆ ಪೂರಕವಾದ ಉತ್ಕರ್ಷಣ ನಿರೋಧಕಗಳು ಆಹಾರದಲ್ಲಿ ಹೆಚ್ಚಿರಲಿ. ಚೆನ್ನಾಗಿ ನೀರು ಕುಡಿಯುವುದನ್ನು ಮರೆಯಬೇಡಿ.

ವ್ಯಾಯಾಮ ಬೇಕು

ಹೊರಗಿನ ವಾತಾವರಣ ದೈಹಿಕ ಚಟುವಟಿಕೆಗೆ ಪೂರಕವಾಗಿಲ್ಲ ಎಂದರೆ ಒಳಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ. ಅಂದರೆ ಕೂತು ಚೆಸ್‌, ಕೇರಂ ಅಥವಾ ಕಾರ್ಡ್ಸ್‌ ಆಡುವುದಲ್ಲ. ಸ್ಕ್ವಾಷ್‌, ಬ್ಯಾಡ್ಮಿಂಟನ್‌ ಮುಂತಾದವುಗಳನ್ನು ಅಲ್ಪ ಕಾಲ ಆಡಿ. ಅದಿಲ್ಲದಿದ್ದರೆ ಜಿಮ್‌, ಯೋಗ, ಜುಂಬಾ ಇಂಥ ಯಾವುದೂ ಆದೀತು. ಇದರಿಂದ ತೂಕ ಹೆಚ್ಚದಂತೆ ಕಾಪಾಡಿಕೊಳ್ಳಬಹುದು ಮತ್ತು ರಕ್ತದ ಪರಿಚಲನೆಗೂ ಇದು ಅಗತ್ಯವಾಗಿದೆ.

ಒತ್ತಡ ನಿರ್ವಹಣೆ

ಇದಂತೂ ಜೀವನವನ್ನು ಎತ್ತಾಡಿಸಿ ಬಿಡುತ್ತದೆ. ಹಾಗಾಗಿ ಮನಸ್ಸನ್ನು ಶಾಂತವಾಗಿಸುವತ್ತ ಚಿತ್ತ ಹರಿಸಿ. ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ ಕೇಳುವುದು, ಯಾವುದಾದರೂ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದು- ಇವೆಲ್ಲ ಬದುಕಿನ ಆಯಾಮಗಳನ್ನು ಬದಲಿಸಬಲ್ಲವು.

ಇದನ್ನೂ ಓದಿ: Health Tips: ತಡರಾತ್ರಿಯವರೆಗಿನ ಅಧ್ಯಯನ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ?

Exit mobile version