Site icon Vistara News

Heartburn during pregnancy : ಗರ್ಭಿಣಿಯರಲ್ಲಿ ಕಾಡುವ ಎದೆಯುರಿಗೆ ಇಲ್ಲಿದೆ ಪರಿಹಾರ?

Heartburn during pregnancy

ಗರ್ಭಾವಸ್ಥೆ ಬದುಕಿನ ಮಹತ್ತರ ಘಟ್ಟಗಳಲ್ಲಿ ಒಂದು ಎನ್ನುವುದು ಸರ್ವವಿಧಿತ. ಮೊದಲ ತ್ರೈ ಮಾಸಿಕದ ಸುಸ್ತು, ಸಂಕಟ, ವಾಂತಿ, ತಲೆಸುತ್ತುಗಳೆಲ್ಲಾ ಕಡಿಮೆಯಾದ ಮೇಲೆ, ಇನ್ನೇನು ಆರೋಗ್ಯ ಸುಧಾರಿಸಿತು ಎನ್ನುವಷ್ಟರಲ್ಲಿ ಎದೆಯುರಿಯ ಕಿರಿಕಿರಿ ಗಂಟು ಬೀಳುತ್ತದೆ. ತಿಂದರೆ ಜೀವಸಂಕಟ, ತಿನ್ನದಿದ್ದರೆ ಪ್ರಾಣ ಸಂಕಟ ಎನ್ನುವಂತೆ ತಿಂದರೂ-ತಿನ್ನದಿದ್ದರೂ ಎದೆಯಲ್ಲಿ ಉರಿ ತಪ್ಪುವುದಿಲ್ಲ (Heartburn during pregnancy). ಎಲ್ಲರಿಗೂ ಹೀಗೆಯೇ ಆಗುತ್ತದೆ ಎಂಬುದು ಖಾತ್ರಿ ಇಲ್ಲದಿದ್ದರೂ ಹೆಚ್ಚಿನ ಗರ್ಭಿಣಿಯರಿಗೆ ಇದು ಕಟ್ಟಿಟ್ಟಿದ್ದು. ಎದೆಯಿಂದ ಆರಂಭವಾಗಿ ಗಂಟಲವರೆಗೂ ಈ ಉರಿಯ ಅನುಭವ ವ್ಯಾಪಿಸುತ್ತದೆ. ಇದಕ್ಕೇನು ಮಾಡಬಹುದು ಎನ್ನುವುದಕ್ಕಿಂತ ಮೊದಲು ಹೀಗೇಕಾಗುತ್ತದೆ ಎಂಬುದು ತಿಳಿಯಬೇಡವೇ?

ಕಾರಣಗಳಿವು

ಉದರದಲ್ಲಿ ಬೆಳೆಯುತ್ತಿರುವ ಶಿಶು ದಿನದಿಂದ ದಿನಕ್ಕೆ ಹೆಚ್ಚಿನ ಜಾಗ ಆಕ್ರಮಿಸುತ್ತಾ ಹೋಗುವುದರಿಂದ ಹೊಟ್ಟೆಯಲ್ಲಿರುವ ಇತರ ಅಂಗಗಳ ಮೇಲೆ ಒತ್ತಡ ಹೆಚ್ಚುತ್ತದೆ (Heartburn during pregnancy). ಇದರಿಂದ ಹುಳಿತೇಗು, ಎದೆಯುರಿ, ಆಸಿಡಿಟಿಯ ಅನುಭವವೂ ಆಗಬಹುದು.

ಹಾರ್ಮೋನಿನ ಬದಲಾವಣೆ

ಹಾರ್ಮೋನಿನಲ್ಲಿ ಆಗುವ ಬದಲಾವಣೆಗಳಿಂದಲೂ ಎದೆ ಉರಿಯುವ ಅನುಭವ ಆಗುತ್ತದೆ. ದೇಹದಲ್ಲಿ ಪ್ರೊಜೆಸ್ಟಿರಾನ್ ಮಟ್ಟ ಹೆಚ್ಚುತ್ತಿದ್ದಂತೆ, ಮಾಂಸಖಂಡಗಳು ವಿಶ್ರಾಂತ ಸ್ಥಿತಿಗೆ ಸರಿಯುತ್ತವೆ. ಇದರಿಂದ ಅನ್ನನಾಳದ ಮಾಂಸಖಂಡಗಳು ಸಡಿಲವಾದಂತಾಗಿ, ಜಠರದಲ್ಲಿನ ಆಮ್ಲರಸ ಗಂಟಲಿಗೆ ಬಂದ ಅನುಭವ, ಅಂದರೆ ಹುಳಿತೇಗಿನ ಅನುಭವ ಉಂಟಾಗುತ್ತದೆ

ಕೆಲಸದಲ್ಲಿನ ವ್ಯತ್ಯಾಸ

ತನ್ನಲ್ಲಿರುವ ಆಹಾರ ವಸ್ತುಗಳನ್ನು ಮುಂದಿನ ಸಂಸ್ಕರಣೆಗೆ ದೂಡುವುದನ್ನು ಜಠರ ಕೆಲವೊಮ್ಮೆ ನಿಧಾನ ಮಾಡುತ್ತದೆ. ಇದರಿಂದ ಜಠರದಲ್ಲಿನ ಆಮ್ಲದ ಸ್ರವಿಸುವಿಕೆ ಹೆಚ್ಚಾಗುತ್ತದೆ. ಜತೆಗೆ ಅನ್ನನಾಳಕ್ಕೆ ಈ ಆಮ್ಲರಸ ಹೋಗುವುದೂ ಹೆಚ್ಚುತ್ತದೆ.

ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?

ಆಹಾರ

ಕೆಲವು ರೀತಿಯ ಆಹಾರಗಳಿಂದಲೂ ಈ ಸಮಸ್ಯೆ ಬಿಗಡಾಯಿಸುತ್ತದೆ. ಕರಿದ ತಿನಿಸು, ಖಾರದ, ಕೊಬ್ಬಿನ ಅಂಶ ಹೆಚ್ಚಿರುವ ಆಹಾರ, ಕೆಫೇನ್, ಚಾಕಲೇಟ್, ಹುಳಿ ಹಣ್ಣುಗಳು, ಸೋಡಾ, ಹುದುಗು ಬರಿಸಿದ ಆಹಾರ ಮುಂತಾದವು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ

ಮಾನಸಿಕ ಬದಲಾವಣೆ

ಈ ದಿನಗಳಲ್ಲಿ ಹೆಚ್ಚುವ ಆತಂಕ, ಬೇಡದ ಹೆದರಿಕೆ, ಆಲೋಚನೆಗಳು, ಕಾತರ, ನಿರೀಕ್ಷೆಗಳು, ಮಾನಸಿಕ ಒತ್ತಡಗಳಿಂದಲೂ ಆಸಿಡಿಟಿ ಹೆಚ್ಚುತ್ತದೆ. ಹಾಗಾಗಿ ಮಾನಸಿಕ ಬದಲಾವಣೆಗಳತ್ತಲೂ ಗಮನ ನೀಡುವುದು ಅಗತ್ಯ.

ಇವಿಷ್ಟು ಎದೆಯುರಿಯ (Heartburn during pregnancy) ಕಾರಣಗಳಾದರೆ, ಇದಕ್ಕೆ ಪರಿಹಾರಗಳು ಇಲ್ಲವೆಂದಲ್ಲ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ. ನವಮಾಸಗಳು ತುಂಬಿ, ಜೀವಕ್ಕೆ ಜೀವ ಕೊಡುವುದೆಂದರೆ… ಜೀವಬಿಡುವ ಅನುಭವವೇ ಆಗಬೇಕೆಂದಿಲ್ಲವಲ್ಲ!

ಉಪಶಮನಗಳು ಏನಿವೆ?

ಯಾವೆಲ್ಲಾ ಆಹಾರಗಳಿಂದ ಎದೆಯುರಿ ಹೆಚ್ಚುತ್ತದೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಕೆಲವರಿಗೆ ಹುಳಿ ಆಹಾರಗಳಿಂದ ಎದೆಯುರಿ ಹೆಚ್ಚಾದರೆ, ಇನ್ನೂ ಕೆಲವರಿಗೆ ಐಸ್ ಕ್ರೀಂ ನಂಥ ತಣ್ಣನೆಯ ಆಹಾರ ಸಮಸ್ಯೆ ತರಬಹುದು. ಆದಷ್ಟು ಖಾರ ಕಡಿಮೆ ಇರುವ, ಸೌಮ್ಯ ಮತ್ತು ಲಘು ಆಹಾರಗಳು ಹೊಟ್ಟೆಗೆ ತೊಂದರೆ ತರುವುದಿಲ್ಲ. ದೊಡ್ಡ ಊಟವನ್ನು ಒಟ್ಟಿಗೆ ಮಾಡುವುದರ ಬದಲು ಸ್ವಲ್ಪವಾಗಿಯೇ ಸೇವಿಸುವುದು ಸಮಸ್ಯೆಯ ಶಮನಕ್ಕೆ ನೆರವಾಗುತ್ತದೆ.

ಸೇವನೆಯ ಕ್ರಮ

ಹೌದು! ಆಹಾರ ಸೇವನೆಗೆ ಸರಿಯಾದ ಕ್ರಮವೆಂಬುದಿದೆ. ಇತ್ತೀಚಿನ ವರ್ಷಗಳಲ್ಲಿ ಇದನ್ನು ಎಲ್ಲರೂ ಮರೆತಿರುವುದು ಹೌದು. ಟಿವಿ ನೋಡುತ್ತಾ, ಮೊಬಯ್ಲ್ ಗೀರುತ್ತಾ, ವಕ್ರವಾಗಿ ಮತ್ತು ಎಲ್ಲೆಂದರಲ್ಲಿ ಕುಳಿತು- ತಿನ್ನುವುದಲ್ಲ. ಆದಷ್ಟೂ ಬೆನ್ನು ನೇರವಾಗಿರಿಸಿಕೊಂಡು ಏನನ್ನು ಮತ್ತು ಎಷ್ಟು ತಿನ್ನುತ್ತಿದ್ದೇವೆ ಎಂಬುದನ್ನು ಅರಿತು ತಿಂದರೆ ಆಹಾರ ಸರಿಯಾಗಿ ಜೀರ್ಣಾವಾಗುತ್ತದೆ. ಮಾತ್ರವಲ್ಲ, ಗಬಗಬನೆ ಗಡಿಬಿಡಿಯಲ್ಲಿ ತಿನ್ನದೆ ನಿಧಾನವಾಗಿ ಅಗಿದು ತಿನ್ನುವುದೂ ಅಷ್ಟೇ ಅಗತ್ಯ.

ಮಲಗುವ ಭಂಗಿ

ಊಟದ ನಂತರ ತಕ್ಷಣವೇ ಮಲಗುವುದು ಸಲ್ಲದು. ಸ್ವಲ್ಪ ಕಾಲಾಡಿ, ಕೆಲವು ಹೆಜ್ಜೆಗಳು ನಡೆದಾಡಿ ಮಲಗುವುದು ಸೂಕ್ತ. ಮಲಗುವಾಗಲೂ ಕಟಿಯ ಮೇಲಿನ ಭಾಗವನ್ನು ಕೊಂಚ ಏರಿಸಿ ಮಲಗುವುದರಿಂದ ಆಮ್ಲರಸ ಅನ್ನನಾಳಕ್ಕೆ ಬರುವುದನ್ನು ತಡೆಯಲು ಸಾಧ್ಯವಾಗಬಹುದು.

ಇದನ್ನೂ ಓದಿ: Mysugar Factory: ಮೈಶುಗರ್‌ ಕಾರ್ಖಾನೆಗೆ 50 ಕೋಟಿ ರೂ. ಮಂಜೂರಿಗೆ ಒಪ್ಪಿಗೆ; ಸಿಎಂಗೆ ದಿನೇಶ್‌ ಗೂಳಿಗೌಡ ಅಭಿನಂದನೆ

ಇದಿಷ್ಟೇ ಅಲ್ಲ, ಪ್ರತಿದಿನ ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯುವುದರಿಂದಲೂ ಆಸಿಡಿಟಿಯನ್ನು ನಿಯಂತ್ರಿಸಬಹುದು. ಮಾನಸಿಕ ಒತ್ತಡಗಳಿಗೆ ಕಡಿವಾಣ ಹಾಕಿ ಉತ್ತಮ ಚಿಂತನೆಗಳಿಗೆ ದಾರಿ ಮಾಡುವುದು ತಾಯಿ-ಮಗು ಇಬ್ಬರ ಆರೋಗ್ಯಕ್ಕೂ ಪೂರಕ. ಬಿಗಿಯದೆ ಇರುವಂಥ ಅನುಕೂಲಕರ ಹತ್ತಿಯ ಬಟ್ಟೆಗಳಿಗೆ ಆದ್ಯತೆ ನೀಡಿ. ಸಮಸ್ಯೆ ಪರಿಹಾರವಾಗದಿದ್ದರೆ ವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆಯಿರಿ.

Exit mobile version