Site icon Vistara News

Heat Pack vs Cold Pack: ಅಯ್ಯೋ ನೋವು!; ಶಮನಕ್ಕೆ ಶಾಖ ಒಳ್ಳೆಯದೋ ತಣ್ಣೀರೋ?

Heat Pack vs Cold Pack

ಆಕಸ್ಮಿಕವಾಗಿ ನಾವು ದೈಹಿಕ ನೋವಿಗೆ ತುತ್ತಾದಾಗ ತಕ್ಷಣ ಏನು ಮಾಡಬೇಕೆಂದು ಹೊಳೆಯುವುದಿಲ್ಲ. ಸಲಹೆಗಳು ಬೇಕಾದಷ್ಟು ಸಿಗುತ್ತವೆ. (Heat pack vs cold pack) ಆದರೆ ಯಾವುದನ್ನು ಮಾಡಬೇಕು? ಎಷ್ಟು ಮಾಡಬೇಕು? ಯಾಕೆ ಮಾಡಬೇಕು ಎಂದೆಲ್ಲಾ ಗೊಂದಲ ಆವರಿಸುತ್ತದೆ.

ಅಪರೂಪಕ್ಕೊಮ್ಮೆ ಏನೋ ಭಾರ ಎತ್ತಿದಿರಿ ಅಥವಾ ಹೊಸದೊಂದು ವ್ಯಾಯಾಮ ಮಾಡಿದಿರಿ. ಇಲ್ಲವೇ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಾ ಚೆನ್ನಾಗಿ ಸೈಕಲ್‌ ಹೊಡೆದಿರಿ. ಇವುಗಳನ್ನು ಮಾಡುವಾಗ ಏನೂ ಗೊತ್ತಾಗಲಿಲ್ಲ. ಆದರೆ ಮಾರನೇ ದಿನಕ್ಕೆ ಕಾಲು, ಕೈಯೆಲ್ಲಾ ನೋವು. ಬೆನ್ನಿನ ಯಾವುದೋ ಭಾಗ ಮುಷ್ಕರ ಹೂಡುತ್ತಿದೆ. ಕುಯ್ಯೊ… ಮುರ್ರೊ ಎನ್ನುತ್ತಾ ಓಡಾಡುವ ನಿಮ್ಮನ್ನು ಕಂಡು ಸುತ್ತಲಿನವರೆಲ್ಲಾ ಔಷಧಿ ಹೇಳುತ್ತಾರೆ. ಒಬ್ಬರು ಉಪ್ಪಿನ ಶಾಖ, ಇನ್ನೊಬ್ಬರು ಮರಳಿನ ಶಾಖ, ಮತ್ತೊಬ್ಬರು ಬಿಸಿನೀರ ಶಾಖ, ಮಗದೊಬ್ಬರು ಐಸ್‌ಪ್ಯಾಕ್‌ ಇಡು ಎನ್ನುತ್ತಾರೆ. ಔಷಧಿ ಇಲ್ಲದಿದ್ದಾಗ ಮಾತ್ರವಲ್ಲ, ಹೆಚ್ಚಾದರೂ ಸಮಸ್ಯೆಯೇ! ಯಾವುದನ್ನು ಮಾಡಬೇಕು? ಎಷ್ಟು ಮಾಡಬೇಕು? ಯಾಕೆ ಮಾಡಬೇಕು ಎಂದೆಲ್ಲಾ ಗೊಂದಲ ಆವರಿಸುತ್ತದೆ. ಶಾಖ ಯಾವಾಗ ಉಪಯುಕ್ತ ಮತ್ತು ಐಸ್‌ಪ್ಯಾಕ್‌ ಅಥವಾ ತಣ್ಣೀರುಪಟ್ಟಿ ಯಾವಾಗ ನೆರವಾಗುತ್ತದೆ?

ಇವುಗಳಲ್ಲಿ ಯಾವುದನ್ನು ಬಳಸಿದರೂ ಪರಿಣಾಮ ಒಂದೇ ತಾನೆ- ನೋವು, ಊತ ಕಡಿಮೆಯಾಗುವುದು ಎಂದು ಬಹಳಷ್ಟು ಮಂದಿ ಭಾವಿಸುತ್ತಾರೆ. ಔಷಧಿಯನ್ನು ಅರಿತು ಮಾಡಿದರೆ ಪರಿಣಾಮ ಹೆಚ್ಚು ಎಂಬುದನ್ನು ಅರ್ಥಮಾಡಿಕೊಳ್ಳಲು ತಜ್ಞರ ವರದಿ ಬೇಕಿಲ್ಲವಲ್ಲ. ಉದಾ, ಮಗು ಆಡುವಾಗ ಬಿದ್ದು ಬಂದಿದೆ, ಗಾಯವಾಗಿದೆ, ತರಚಿ ಊದಿಕೊಂಡಿದೆ ಎಂದಾದರೆ ಇದಕ್ಕೆ ಶಾಖ ಪ್ರಯೋಜನವಿಲ್ಲ. ಮಾತ್ರವಲ್ಲ, ಗಾಯದಿಂದ ರಕ್ತ ಸುರಿಯುವುದನ್ನು ನಿಲ್ಲಿಸಲು ಕಷ್ಟವಾಗುತ್ತದೆ. ಈ ಹೊತ್ತಿಗೆ ಐಸ್‌ಪ್ಯಾಕ್‌ ಹಾಕಿದರೆ ಗಾಯದಿಂದ ರಕ್ತವೂ ನಿಲ್ಲುತ್ತದೆ, ಊತವೂ ಕಡಿಮೆಯಾಗುತ್ತದೆ. ಹಾಗಾದರೆ ಒಟ್ಟಾರೆ ಮದ್ದು ಮಾಡಿದರೆ ಪರಿಣಾಮವಿಲ್ಲ ಎಂಬುದು ದಿಟವಾಯ್ತು. ಯಾವಾಗ ಏನು ಮಾಡಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಮೊದಲು ಬಿಸಿ ಮತ್ತು ತಂಪಿನ ಅನುಭವಗಳು ಶರೀರದ ಮೇಲೆ ಉಂಟು ಮಾಡುವ ಪರಿಣಾಮವೇನು ಎಂಬುದನ್ನು ಅರ್ಥಮಾಡಿಕೊಳ್ಳೋಣ.

ಶಾಖದ ಪರಿಣಾಮ

ಇದು ನೋವು ಕಡಿಮೆ ಮಾಡುವ ಪ್ರಧಾನ ಕ್ರಮಗಳಲ್ಲಿ ಒಂದು. ದೇಹದ ಯಾವುದೇ ಭಾಗಕ್ಕೆ ಶಾಖ ನೀಡಿದರೆ, ಚರ್ಮದ ಕೋಶಗಳು ಹಿಗ್ಗಿ, ಅಲ್ಲಿನ ಸ್ನಾಯುಗಳ ಗಡಸುತನ ಕಡಿಮೆಯಾಗುತ್ತದೆ, ಅಂದರೆ ಕಾಲು, ಕುತ್ತಿಗೆಗಳು ಹಿಡಿದ ಅನುಭವ ಆಗುತ್ತಿದ್ದರೆ ಇದು ಪರಿಣಾಮಕಾರಿ. ಕೀಲುಗಳಲ್ಲಿ ಊತ ಇದ್ದರೆ ಕಡಿಮೆ ಮಾಡುತ್ತದೆ, ನರಗಳನ್ನೂ ಚುರುಕಾಗಿಸುತ್ತದೆ, ಶಾಖಕ್ಕೆ ಒಡ್ಡಿದ ಭಾಗದಲ್ಲಿ ರಕ್ತ ಸಂಚಾರ ವೃದ್ಧಿಸುತ್ತದೆ, ಚಯಾಪಚಯ ಹೆಚ್ಚಿಸುತ್ತದೆ.

ಕೋಲ್ಡ್‌ಪ್ಯಾಕ್‌ ಪರಿಣಾಮ

ಕ್ರಯೋಥೆರಪಿ ಅಥವಾ ಕೋಲ್ಡ್‌ಪ್ಯಾಕ್‌ ಥೆರಪಿ ಎನ್ನಲಾಗುವ ಇದು ಶಾಖದ ವಿರುದ್ಧ ಕ್ರಮ. ನೋವು ನಿವಾರಣೆಯಲ್ಲಿ ಇದು ಸಹ ಅತ್ಯಂತ ಪರಿಣಾಮಕಾರಿ ಕ್ರಮ. ಆದರೆ ತಂಪು ತಾಗಿದ ಶರೀರದ ಭಾಗದ ಚರ್ಮದ ಕೋಶಗಳು ಕುಗ್ಗಿ, ಕೀಲುಗಳಾದರೆ ಅಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ. ಇಲ್ಲಿನ ರಕ್ತದ ಪರಿಚಲನೆ ಕಡಿಮೆಯಾಗಿ, ಚಯಾಪಚಯವೂ ಕುಗ್ಗುತ್ತದೆ. ಇವೆಲ್ಲಾ ಆರಂಭದ ಪ್ರಕ್ರಿಯೆಯಾದರೆ, ಕೋಲ್ಡ್‌ಪ್ಯಾಕ್‌ ತೆಗೆದಾಕ್ಷಣ ಈ ಭಾಗದಲ್ಲಿ ರಕ್ತ ಸಂಚಾರ ದಿಢೀರನೆ ಚುರುಕುಗೊಳ್ಳುತ್ತದೆ. ಇದರಿಂದ ನೋವು ಬೇಗನೇ ಗುಣವಾಗುವ ಸಾಧ್ಯತೆಯಿದೆ. ಊತ, ನೋವು ಮತ್ತು ಸ್ನಾಯುಗಳು ಸಂಕುಚಿತಗೊಂಡರೆ ಈ ಕ್ರಮ ಉಪಯುಕ್ತ.

ಇದನ್ನು ನೆನಪಿಡಿ

ಯಾವುದೇ ಗಾಯ, ನೋವು ಹೊಸದಾಗಿದ್ದಾಗ ಕೋಲ್ಡ್‌ಪ್ಯಾಕ್‌ ಉಪಯುಕ್ತ. ಆದರೆ ವ್ಯಾಯಾಮ ಮಾಡುವಾಗ ನೋವು ಕಾಣಲಿಲ್ಲ, ಮಾರನೇದಿನ ಶುರುವಾಯಿತು ಎಂದಾದರೆ ಮೊದಲ 48 ತಾಸುಗಳಲ್ಲಿ ಶಾಖ ಅಥವಾ ಹೀಟ್‌ಪ್ಯಾಕ್ ಕೊಡುವುದರಿಂದ ನೋವನ್ನು ಬೇಗನೇ ತಗ್ಗಿಸಬಹುದು. ಹಾಗೆಂದು ಗಾಯವಾಗಿ ರಕ್ತ ಬಂದರೆ ಶಾಖದ ಬದಲು ಕೋಲ್ಡ್‌ಪ್ಯಾಕ್‌ ಸೂಕ್ತ. ‌ಯಾವುದೇ ಸ್ನಾಯು, ಲಿಗಮೆಂಟ್‌ ಅಥವಾ ಕೀಲುಗಳಲ್ಲಿ ಗಾಯ, ನೋವುಗಳಾದರೆ, ಊದಿಕೊಂಡರೆ ಮೊದಲಿಗೆ ಕೋಲ್ಡ್‌ಪ್ಯಾಕ್‌ ಅಗತ್ಯ.

ಆರ್ಥರೈಟಿಸ್‌ ನೋವು

ಮಂಡಿ, ಕುತ್ತಿಗೆ, ಬೆನ್ನು ಮುಂತಾದೆಡೆ ಆರ್ಥರೈಟಿಸ್‌ನಿಂದಾಗಿ ನೋವಿದ್ದರೆ ಶಾಖ ಉಪಯುಕ್ತ. ಕೆಲವೊಮ್ಮೆ ಕೋಲ್ಡ್‌ಪ್ಯಾಕ್‌ ಮತ್ತು ಹೀಟ್‌ಪ್ಯಾಕ್‌ಗಳನ್ನು ಒಂದರನಂತರ ಒಂದು ಉಪಯೋಗಿಸಲು ಹೇಳುತ್ತಾರೆ ವೈದ್ಯರು. ಮಂಡಿಯಲ್ಲಿ ಪೆಡಸುತನವಿದ್ದರೆ, ಸ್ನಾಯುಗಳಲ್ಲಿ ಬಿಗಿತವಿದ್ದರೂ ಶಾಖವೇ ಸೂಕ್ತ. ನೋವಿದ್ದಲ್ಲಿ ಸೈನೋವಿಯಲ್‌ ದ್ರವದ ಸಾಂದ್ರತೆ ಕಡಿಮೆಯಾದರೆ ನೋವಿನ ಬಾಧೆಯೂ ಕಡಿಮೆಯಾದೀತು. ಅದಕ್ಕೂ ಶಾಖವೇ ಅಗತ್ಯ.

ಮುಟ್ಟಿನ ನೋವು

ತಿಂಗಳ ಆ ದಿನಗಳಲ್ಲಿ ಬರುವ ತೀವ್ರ ಹೊಟ್ಟೆನೋವಿಗೂ ಶಾಖ ಅನುಕೂಲ. ಗರ್ಭಾಶಯ ಸಂಕುಚಿತಗೊಂಡು ನೋವು ಹೆಚ್ಚಿರಬಹುದು. ಶಾಖದಿಂದ ಗರ್ಭಾಶಯದ ಸ್ನಾಯುಗಳನ್ನು ವಿಕಸನಗೊಳಿಸಬಹುದು. ಇದಕ್ಕಾಗಿ ಕಿಬ್ಬೊಟ್ಟೆಯ ಭಾಗಕ್ಕೆ ಶಾಖ ಕೊಡುವುದು ಹಿತವೆನಿಸುತ್ತದೆ. ಹೆರಿಗೆ ನೋವಿನ ಸಮಯದಲ್ಲೂ ಶಾಖ ನೆರವಾಗುತ್ತದೆ. ಆದರೆ ನೇರವಾಗಿ ಕಿಬ್ಬೊಟ್ಟೆಯ ಮೇಲೆ ಬೇಡ, ಬದಲಿಗೆ ಬೆನ್ನಿನ ಕೆಳಭಾಗಕ್ಕೆ ಶಾಖ ಕೊಡಬಹುದು.

ಇದನ್ನೂ ಓದಿ: Health Tips: ಚಹಾದ ಜೊತೆಗೆ ಈ ಬಗೆಯ ಆಹಾರಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಗೊತ್ತೇ?!

Exit mobile version