Site icon Vistara News

Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

Heatwave Effect

ದೆಹೆಲಿಯಲ್ಲಿ ತಾಪಮಾನ (Heatwave Effect) 50 ಡಿಗ್ರಿ ಸೆಲ್ಶಿಯಸ್‌ ದಾಟಿಯಾಗಿದೆ. ದೇಶದ ಇನ್ನೂ ಕೆಲವೆಡೆಗಳಲ್ಲಿ ತಾಪಮಾನ ಗಗನಕ್ಕೇರಿದೆ. ದಕ್ಷಿಣದ ರಾಜ್ಯಗಳು ಮುಂಗಾರಿನ ಪ್ರವೇಶಕ್ಕೆ ಅಣಿಯಾಗುತ್ತಿದ್ದರೆ, ಉತ್ತರ ಭಾರತದಲ್ಲಿನ್ನೂ ಉಷ್ಣತೆಯ ಹೊಡೆತ ನಿಂತಿಲ್ಲ. ಬಿಸಿಲಿಗೆ ಎಚ್ಚರ ತಪ್ಪುವುದು, ನಿರ್ಜಲೀಕರಣದಿಂದ ಪ್ರಾಣಾಪಾಯಕ್ಕೆ ಒಳಗಾಗುವುದು ನಿಂತಿಲ್ಲ. ಮಾತ್ರವಲ್ಲ, ಕಣ್ಣಿನ ಪಾರ್ಶ್ವವಾಯುವಿಗೆ ತುತ್ತಾಗುವ ಪ್ರಕರಣಗಳೂ ವರದಿಯಾಗುತ್ತಿವೆ. ಏನು ಹಾಗೆಂದರೆ? ಬಿಸಿಲಿ ಹೆಚ್ಚಾದರೆ ಕಣ್ಣಿಗೆ ಏನಾಗುತ್ತದೆ?

ಏನು ನಂಟು?

ಅತಿಯಾದ ಬಿಸಿಲಿನ ಅಥವಾ ಉಷ್ಣತೆಯ ಹೊಡೆತವೇ ಈ ಸಮಸ್ಯೆಗೆ ನೇರವಾದ ಕಾರಣವಲ್ಲ. ಇದರಿಂದಾಗಿ ಉಂಟಾಗುವ ನಿರ್ಜಲೀಕರಣದಿಂದ ರಕ್ತ ಮಂದವಾಗುವುದು ಅಥವಾ ಹೆಪ್ಪುಗಟ್ಟುವಂತಾಗಬಹುದು. ಹೀಗೆ ಹೆಪ್ಪುಗಟ್ಟಿದ ರಕ್ತವು ಕಣ್ಣಿನ ಸಣ್ಣ ರಕ್ತನಾಳಗಳಲ್ಲಿ ಜಮೆಯಾಗಿ, ಕಣ್ಣಿಗೆ ಅಗತ್ಯವಾಗಿ ಬೇಕಾದ ರಕ್ತಸಂಚಾರವನ್ನು ತಡೆಯುತ್ತದೆ. ಇದರಿಂದ ಪಾರ್ಶ್ವವಾಯುವಿಗೆ ಕಾರಣವಾಗಿ, ಅಕ್ಯುಲರ್‌ ಸ್ಟ್ರೋಕ್‌ ಎಂದು ಕರೆಯಲಾಗುವ ಈ ಸಮಸ್ಯೆಯಿಂದ ದೃಷ್ಟಿಹೀನತೆಯೂ ಉಂಟಾಗಬಹುದು. ರಕ್ತ ಹೆಪ್ಪುಗಟ್ಟುವುದರಿಂದ ನಾಳಗಳು ಮುಚ್ಚಿಹೋಗಿ ಅಥವಾ ರಕ್ತಸಂಚಾರ ಸರಾಗ ಆಗದಿರುವಾಗ, ಮೆದುಳಿನಲ್ಲಿ ಸಂಭವಿಸುವ ಪಾರ್ಶ್ವವಾಯುವಿನ ಮಾದರಿಯಲ್ಲಿಯೇ ಇದು ಕಣ್ಣಿನಲ್ಲಿ ಸಂಭವಿಸುವಂಥದ್ದು. ಆಪ್ಟಿಕ್‌ ನರಗಳ ಮುಂಭಾಗಕ್ಕೆ ರಕ್ತಸಂಚಾರ ಇಲ್ಲದಿರುವಾಗ ಈ ತೊಂದರೆ ತಲೆದೋರುತ್ತದೆ. ಅಂದರೆ ಆಪ್ಟಿಕ್‌ ನರಗಳಿಗೆ ರಕ್ತ ಸಂಚಾರ ನಿಂತಾಗ ಹೀಗಾಗುತ್ತದೆ.

ಲಕ್ಷಣಗಳೇನು?

ಮೊದಲಿಗೆ ನಿರ್ಜಲೀಕರಣದ ಲಕ್ಷಣಗಳು ಕಂಡುಬರಬಹುದು. ಕೆಲವೊಮ್ಮೆ ಅದೂ ಕಾಣುವುದಿಲ್ಲ. ಬದಲಿಗೆ, ಯಾವುದೇ ನೋವಿಲ್ಲದೆ ಕಣ್ಣಿನ ಬೆಳಕು ಇದ್ದಕ್ಕಿದ್ದಂತೆ ಆರಬಹುದು. ಕಣ್ಣು ಪೂರ್ಣವಾಗಿ ಕಾಣದೆ ಹೋಗಬಹುದು ಅಥವಾ ಅರ್ಧ ಮಾತ್ರವೇ ಕಾಣಿಸಬಹುದು. ದೃಷ್ಟಿ ಮಸುಕಾಗಬಹುದು, ನೆರಳು ಬಿದ್ದಂತೆ ಕಾಣಬಹುದು, ಎದುರಿಗಿನ ವಸ್ತುವಿನ ನಡುವಿನ ಭಾಗ ಕಾಣದೆ ಕೇವಲ ಹೊರಗಿನ ಆವರಣವಷ್ಟೇ ಕಾಣಬಹುದು. ಕಪ್ಪಾಗಿ ಅಥವಾ ಅಸ್ಪಷ್ಟವಾಗಿ ಕಾಣಬಹುದು.

ಏನು ಮಾಡಬೇಕು?

ಇಂಥ ಸಂದರ್ಭದಲ್ಲಿ ತ್ವರಿತವಾಗಿ ವೈದ್ಯರನ್ನು ಕಾಣಬೇಕು. ತಡಮಾಡಿದರೆ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೆಪ್ಪುಗಟ್ಟಿರುವ ರಕ್ತಕಣಗಳನ್ನು ಕರಗಿಸಲು ವೈದ್ಯರು ತುರ್ತಾಗಿ ಔಷಧಿ ನೀಡುತ್ತಾರೆ. ರೆಟಿನಾಗೆ ಶಾಶ್ವತ ಹಾನಿ ಆಗದಂತೆ, ದೇಹಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಪೂರೈಕೆ ಮಾಡುವ ಅಗತ್ಯ ಬರಬಹುದು. ಹೃದಯ ಸಮಸ್ಯೆಗಳಿದ್ದರೆ, ರಕ್ತ ನೀರಾಗಿಸುವ ಬಗ್ಗೆ ಮತ್ತು ರಕ್ತದೊತ್ತಡವನ್ನು ನಿರ್ವಹಿಸುವ ಬಗ್ಗೆ ಇನ್ನಷ್ಟು ಎಚ್ಚರಿಕೆಯನ್ನು ವೈದ್ಯರು ತೆಗೆದುಕೊಳ್ಳಬೇಕಾಗಬಹುದು.

ಇದನ್ನೂ ಓದಿ: Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

ತಡೆಯುವುದು ಹೇಗೆ?

ಉಷ್ಣತೆ ತೀವ್ರವಾಗಿರುವಾಗ, ತಾಪಮಾನ 42 ಡಿಗ್ರಿ ಸೆಲ್ಶಿಯಸ್‌ ದಾಟಿದರೆ, ಮನೆಯಿಂದ ಹೊರಗೆ ಹೋಗುವುದು ಅಪಾಯ ತರಬಹುದು. ಮನೆಯೊಳಗೇ ಇದ್ದರೂ ಚೆನ್ನಾಗಿ ನೀರು ಕುಡಿಯುವುದು ಕಡ್ಡಾಯ. ಬಿಸಿಲಿನಲ್ಲಿದ್ದರಂತೂ ನಿರ್ಜಲೀಕರಣದ ಅಪಾಯದಿಂದ ಪಾರಾಗಲು ಆ ಕುರಿತ ಮಾರ್ಗಸೂಚಿಯನ್ನು ಪಾಲಿಸದಿದ್ದರೆ ಪ್ರಾಣಾಪಾಯವೇ ಉಂಟಾಗಬಹುದು. ಜೀವನಶೈಲಿಯನ್ನು ಆರೋಗ್ಯವಾಗಿ ಇರಿಸಿಕೊಳ್ಳಿ. ಬೇಸಿಗೆಗೆ ಸೂಕ್ತವಾದ ಆಹಾರವನ್ನೇ ಸೇವಿಸಿ. ಎಣ್ಣೆ-ಜಿಡ್ಡಿನ ಆಹಾರಗಳು, ಕರಿದ ಪದಾರ್ಥಗಳು ಬೇಡ. ಋತುಮಾನದ ಹಣ್ಣು-ತರಕಾರಿ ಮತ್ತು ಡೇರಿ ಉತ್ಪನ್ನಗಳು ಆಹಾರದಲ್ಲಿ ಸೇರಿರಲಿ. ನೀರು ಕುಡಿಯುವುದಕ್ಕೆ ಬೋರು ಎನ್ನುವಂಥ ನೆವಗಳನ್ನು ಹೇಳಿ ಯದ್ವಾತದ್ವಾ ಫ್ರೂಟ್‌ಜ್ಯೂಸ್‌ ಗಳನ್ನು ಕುಡಿಯಬೇಡಿ. ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಹೆಚ್ಚಾಗಿ, ಮಧುಮೇಹವಿದ್ದರೆ ಕಣ್ಣಿನ ಸಮಸ್ಯೆ ಬರಬಹುದು. ಮಧುಮೇಹ, ಹೃದ್ರೋಗಗಳಿದ್ದರೆ ಕಾಲಕಾಲಕ್ಕೆ ಕಣ್ಣಿನ ತಪಾಸಣೆಯನ್ನೂ ಮಾಡಿಸಿಕೊಳ್ಳಿ. ಧೂಮಪಾನ ಬೇಡ, ಆಲ್ಕೋಹಾಲ್‌ ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ನೆನಪಿಡಿ.

Exit mobile version