Site icon Vistara News

Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್‌ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು

Ash Gourd Juice Benefits

ಬೆಳಗ್ಗೆದ್ದ ಕೂಡಲೇ ಕಾಫಿ, ಚಹಾ ಸೇವನೆಗಿಂತ ಯಾವುದಾದರೂ ಬಗೆಯ ತರಕಾರಿಗಳ ಜ್ಯೂಸ್‌ ಸೇವನೆಯಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯುವುದು ನಿಮಗೆ ಗೊತ್ತೇ ಇದೆ. ಆರೋಗ್ಯದ ಹೆಸರಿನಲ್ಲಿ ಬಗೆಬಗೆಯ ಇಂತಹ ಜ್ಯೂಸುಗಳು ಇಂದು ಮಾರುಕಟ್ಟೆಯನ್ನೂ ಆವರಿಸಿವೆ. ಆದರೆ, ಇವೆಲ್ಲ ತಾಜಾ ಜ್ಯೂಸ್‌ಗಳಲ್ಲ. ಎಷ್ಟಾದರೂ ಅಡ್ಡ ಪರಿಣಾಮಗಳಿದ್ದೇ ಇರುತ್ತವೆ. ಬೆಳ್ಳಂಬೆಳಗ್ಗೆ ಮನೆಯಲ್ಲಿ ಇದನ್ನು ಮಾಡಲಾಗದವರು ಪಾರ್ಕುಗಳ ಬದಿಯಲ್ಲೋ ಅಥವಾ ರಸ್ತೆ ಬದಿಯಲ್ಲೋ ಇಂತಹ ಜ್ಯೂಸ್‌ಗಳನ್ನು ಕುಡಿಯುವುದುಂಟು. ಸಕಲ ಗುಣ ಸಂಪನ್ನವಾಗಿರುವ ಬೂದು ಕುಂಬಳಕಾಯಿಯನ್ನು ನಿರ್ಲಕ್ಷ್ಯ ಮಾಡದೇ ಆಗಾಗ ಆಹಾರದ ರೂಪದಲ್ಲಿ ಬಳಕೆ ಮಾಡುವುದರಿಂದಲೂ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಬನ್ನಿ, ಬೂದುಕುಂಬಳ ಕಾಯಿ ಜ್ಯೂಸನ್ನು (Ash Gourd Juice Benefits) ನಿತ್ಯವೂ ಕುಡಿಯುವುದರಿಂದ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ ಬನ್ನಿ.

ಬೇಸಿಗೆಯ ಮಿತ್ರ

ಆಯುರ್ವೇದದ ಪ್ರಕಾರ, ಕೂಷ್ಮಾಂಡ ಎಂದು ಕರೆಯಲ್ಪಡುವ ಬಿಳಿ ಅಥವಾ ಬೂದು ಬಣ್ಣದ ಕುಂಬಳಕಾಯಿ ಬೇಸಿಗೆಯ ಮಿತ್ರ.‌ ನಿತ್ಯವೂ ಈ ಬೂದುಗುಂಬಳಕಾಯಿ ಜ್ಯೂಸನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು. ಇದು ಇಡಿಯ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದರಲ್ಲಿ ಅನೇಕ ಒಳ್ಳೆಯ ಗುಣಗಳಿವೆ ಹಾಗೂ ಹಲವು ರೋಗಗಳನ್ನು ಬರದಂತೆ ತಡೆಯುವ ಶಕ್ತಿಯಿದೆ. ಇನ್ನೂ ಹಲವು ರೋಗಗಳಿಗೆ, ಆರೋಗ್ಯ ಸಮಸ್ಯೆಗಳಿಗೆ ಉತ್ತರವಿದೆ.

ತಂಪುಕಾರಕ ಗುಣ

ಬೂದು ಕುಂಬಳಕಾಯಿ ತನ್ನ ತಂಪುಕಾರಕ ಗುಣಗಳಿಂದಲೇ ಬೇಸಿಗೆಗೆ ಸರಿಯಾದ ಆಹಾರ. ಪ್ರಕೃತಿ ನೀಡಿದ ಅದ್ಭುತ ವರದಾನಗಳಲ್ಲಿ ಇದೂ ಒಂದು. ದೇಹದೊಳಗಿನ ಉಷ್ಣಕಾರಕ ಗುಣಗಳನ್ನು ಕಡಿಮೆ ಮಾಡಿ, ಅದನ್ನು ಸಮತೋಲನಕ್ಕೆ ತರುವಲ್ಲಿ ಇದು ಉತ್ತಮ ಪಾತ್ರ ವಹಿಸುತ್ತದೆ. ಸೂರ್ಯ ತನ್ನ ಪ್ರಖರ ಬಿಸಿಲಿನಿಂದ ಸುಡುವ ಸಂದರ್ಭ ಇವನ್ನು ಕುಡಿದರೆ, ದೇಹ ತಂಪಾಗಿರುತ್ತದೆ. ಮೊದಲೇ ಉಷ್ಣ ಪ್ರಕೃತಿಯ ದೇಹ ಅಥವಾ ಪಿತ್ತ ಪ್ರಕೃತಿಯ ಉಳ್ಳವರಿಗಂತೂ ಇದು ಅತ್ಯುತ್ತಮ ಪರಿಹಾರ ನೀಡಬಲ್ಲುದು.

Heart Health In Winter

ಜೀರ್ಣಕ್ರಿಯೆಗೆ ಸಹಕಾರಿ

ಬೂದು ಕುಂಬಳಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಇದರಿಂದಾಗಿ ಬೇಸಿಗೆಯಲ್ಲಿ ದೇಹಕ್ಕೆ ಬೇಕಾದ ನೀರನ್ನು ಇದರ ಮೂಲಕ ಪಡೆಯುವುದರಿಂದ ಸಾಕಷ್ಟು ಪ್ರಯೋಜನಗಳ ಪಡೆಯಬಹುದು. ಯಾಕೆಂದರೆ, ಇದು ದೇಹದ ಇತರ ಕೆಲಸಗಳಿಗೆ ಅಂದರೆ, ಜೀರ್ಣಕ್ರಿಯೆ, ರಕ್ತಪರಿಚಲನೆ, ಕಶ್ಮಲಗಳನ್ನು ಹೊರಹಾಕುವ ಪ್ರಕ್ರಿಯೆ ಇತ್ಯಾದಿಗಳಿಗೆ ಪೂರಕವಾಗಿ ಕೆಲಸ ಮಾಡಿ ಪ್ರಚೋದನೆ ನೀಡುತ್ತದೆ.
ಆಯುರ್ವೇದದ ಪ್ರಕಾರ ಬೂದು ಕುಂಬಳ ಕಾಯಿ ಜೀರ್ಣಕ್ರಿಯೆಯ ಸಾಮರ್ಥ್ಯ ವೃದ್ಧಿಯಾಗುತ್ತದೆ. ಆಗಾಗ ಮಲಬದ್ಧತೆಯ ಸಮಸ್ಯೆಯಿರುವ ಮಂದಿಗೆ ಇದರ ಜ್ಯೂಸ್‌ ನಿತ್ಯವೂ ಕುಡಿಯುವ ಮೂಲಕ ಸಮಸ್ಯೆಗೆ ಪರಿಹಾರ ಕಾಣಬಹುದು.

ಅತ್ಯುತ್ತಮ ಡಿಟಾಕ್ಸಿಫೈಯರ್‌

ಬೂದು ಕುಂಬಳಕಾಯಿ ಅತ್ಯುತ್ತಮ ಡಿಟಾಕ್ಸಿಫೈಯರ್‌ ಕೂಡ ಹೌದು. ಇದರ ಜ್ಯೂಸನ್ನು ನಿತ್ಯವೂ ಬೆಳಗ್ಗೆ ಎದ್ದ ಕೂಡಲೇ ಕುಡಿಯುವುದರಿಂದ ದೇಹದ ಕಶ್ಮಲಗಳೆಲ್ಲ ಹೊರ ಕಳಿಸುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ಆರೋಗ್ಯ ವೃದ್ಧಿಸುತ್ತದೆ. ಅಷ್ಟೇ ಅಲ್ಲ ರಕ್ತ ಶುದ್ಧಿಯಾಗಿ ಸಾಕಷ್ಟು ಸಮಸ್ಯೆಗಳೂ ಕಡಿಮೆಯಾಗುತ್ತದೆ. ಮುಖ್ಯವಾಗಿ ಚರ್ಮವೂ, ಆರೋಗ್ಯಯುತ ಕಾಂತಿ ಪಡೆದುಕೊಳ್ಳುತ್ತದೆ.

ತೂಕ ಇಳಿಸಲು ಸಹಕಾರಿ

ಬಹುತೇಕ ಎಲ್ಲ ಬಗೆಯ ಅತ್ಯಗತ್ಯ ಪೋಷಕಾಂಶಗಳು ಇದರಲ್ಲಿ ಇರುವುದರಿಂದ, ಹಾಗೂ ಇದು ಕಡಿಮೆ ಕ್ಯಾಲರಿ ಹೊಂದಿರುವುದರಿಂದ ಇದು ತೂಕ ಇಳಿಸುವ ಮಂದಿಗೆ ಅತ್ಯಂತ ಒಳ್ಳೆಯ ಡ್ರಿಂಕ್‌. ದೇಹಕ್ಕೆ ಬೇಕಾದ ನೀರಿನಂಶವನ್ನೂ ನೀಡುವ ಜೊತೆಗೆ ಪೋಷಕಾಂಶವನ್ನೂ ನೀಡುತ್ತದೆ.

ಮಾರಕ ರೋಗ ದೂರ

ಇದರ ಜ್ಯೂಸನ್ನು ನಿತ್ಯವೂ ಕುಡಿಯುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳ ಸಾಧ್ಯತೆಗಳೂ ಕುಂಠಿತಗೊಳ್ಳುತ್ತವಂತೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆಗಾಗ ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವವನ್ನು ಕಡಿಮೆ ಮಾಡುತ್ತದೆ.

ಶಾಂತಿ, ನೆಮ್ಮದಿ

ಬೂದು ಕುಂಬಳಕಾಯಿ ಒತ್ತಡ ನಿವಾರಣೆಗೆ ಅತ್ಯಂತ ಒಳ್ಳೆಯ ಪರಿಹಾರ ನೀಡುತ್ತದೆ. ನರಮಂಡಲಕ್ಕೆ ಬೇಕಾದ ಶಾಂತಿ ಹಾಗೂ ನೆಮ್ಮದಿಯ ಬಗೆಯ ಭಾವವನ್ನು ಇದು ನೀಡುತ್ತದೆ.

ಹೃದಯಸ್ನೇಹಿ

ಬೂದುಕುಂಬಳಕಾಯಿ ಹೃದಯಸ್ನೇಹಿಯಾದ್ದರಿಂದ ಹೃದಯದ ತೊಂದರೆ ಇರುವ ಮಂದಿಗೂ ಇದು ಒಳ್ಳೆಯದು.

ಕಣ್ಣಿನ ಆರೋಗ್ಯಕ್ಕೆ ಮುಖ್ಯ

ಇದರಲ್ಲಿ ವಿಟಮಿನ್‌ ಎ ಹೇರಳವಾಗಿ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ. ಕಣ್ಣಿನ ಸಮಸ್ಯೆ ಇರುವ ಮಂದಿ ಬೂದುಕುಂಬಳ ಕಾಯಿ ತಿನ್ನುವ ಹಾಘೂ ಜ್ಯೂಸ್‌ ಕುಡಿಯುವ ಮೂಲಕ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

Exit mobile version