Site icon Vistara News

Hot or cold: ಬಿಸಿನೀರೋ.. ತಣ್ಣೀರೋ.. ಕುಡಿಯಲು ಯಾವುದು ಉತ್ತಮ?

hot water

ಪ್ರತಿನಿತ್ಯ ಅಗತ್ಯ ಪ್ರಮಾಣದ ನೀರು ಕುಡಿಯುವುದು ದೇಹಕ್ಕೆ ಎಷ್ಟು ಅವಶ್ಯಕ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯಜ್ಞಾನ. ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಬೇಕಾಗುವ ನೀರು ಪೂರೈಕೆ ಮಾಡುತ್ತಿರುವುದರಿಂದಲೇ ಬಹಳಷ್ಟು ನಮ್ಮ ಆರೋಗ್ಯದ ಸಮಸ್ಯೆಗಳು ಸುಧಾರಿಸುತ್ತವೆ. ಆದರೂ ಬಹಳಷ್ಟು ಸಾರಿ ನಮಗೆ ಇಂತಹ ತೀರಾ ಸಾಮಾನ್ಯ ವಿಷಯಗಳ ಬಗೆಗೆ ಇರುವ ಅಲ್ಪಜ್ಞಾನದಿಂದಲೇ ತೊಂದರೆಗಳನ್ನು ಎಳೆದುಕೊಳ್ಳುತ್ತೇವೆ. ಹಾಗಾಗಿ ದಿನನಿತ್ಯ ಕುಡಿಯುವ ನೀರಿನ ಬಗ್ಗೆಗೆ ಕೆಲವು ಗೊಂದಲಗಳ ಪರಿಹಾರವನ್ನು ಇಲ್ಲಿ ಮಾಡುವ ಪ್ರಯತ್ನ ಮಾಡಲಾಗಿದೆ.

ಕೆಲವರು ತಣ್ಣೀರು (ಕೋಲ್ಡ್) ಕುಡಿಯುವುದು ದೇಹಕ್ಕೆ ಒಳ್ಳೆಯದಲ್ಲ ಎಂದು ಬಲವಾಗಿ ನಂಬಿರುತ್ತಾರೆ. ಇದು ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಅವರ ಅಂಬೋಣ. ತಣ್ಣಗಿನ ನೀರು ಜಠರವನ್ನು ಇದು ಕುಗ್ಗಿಸುತ್ತದೆ ಎಂಬ ಆಲೋಚನೆಯ ತಳಹದಿಯ ಲೆಕ್ಕಾಚಾರವಿದು. ಇನ್ನೂ ಕೆಲವರು ದೇಹದ ಉಷ್ಣತೆಗಿಂತ ಕಡಿಮೆ ಉಷ್ಣತೆಯ ನೀರು ಕುಡಿದರೆ, ದೇಹ ಸಾಮಾನ್ಯ ಉಷ್ಣತೆಯನ್ನು ಸಮದೂಗಿಸಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ ಎಂದು ನಂಬುತ್ತಾರೆ. ಚೀನಾದಲ್ಲಿ, ಅತೀ ತಣ್ಣಗಿನ ನೀರು ಹಾಗೂ ಬಿಸಿ ನೀರು ಎರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ನಂಬಿಕೆಯಿದೆ. ಕುಡಿಯುವ ನೀರಿನ ಕುರಿತು ಎಲ್ಲ ಮನೆಗಳಲ್ಲೂ ಒಂದಲ್ಲ ಒಂದು ನಂಬಿಕೆಗಳು ಇರುವುದರಿಂದಲೇ, ಈ ಸಂಶಯಗಳನ್ನು ಪರಿಹರಿಸುವ ಪ್ರಯತ್ನವಿದು.

ಸಂಶೋಧನೆಗಳ ಪ್ರಕಾರ, ಬೆಚ್ಚಗಿನ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ. ಹಾಗೆಂದು ಗಂಟಲು ಸುಟ್ಟುಹೋಗುವ ಬಿಸಿನೀರು ಕುಡಿಯಬಾರದು. ಶೀತ, ನೆಗಡಿ ಕೆಮ್ಮಿನಂತಹ ತೊಂದರೆಗಳಿದ್ದರೂ, ಆಗಾಗ ಕಫ ಆಗುತಿದ್ದರೂ, ಕಫದ ದೇಹಪ್ರಕೃತಿ ಹೊಂದಿದವರೂ ಬಿಸಿನೀರನ್ನು ಕುಡಿಯುವುದು ಉತ್ತಮ. ಬಿಸಿನೀರು ನಮ್ಮನ್ನು ರಿಲ್ಯಾಕ್ಸ್‌ ಮಾಡಿಸುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಕ್ಕೆ ತಳ್ಳುತ್ತದೆ. ಚಳಿಗಾಲದಲ್ಲಿ ನಡುಕವನ್ನೂ ಬಿಸಿನೀರು ಕಡಿಮೆಗೊಳಿಸುತ್ತದೆ. ರಕ್ತಪರಿಚಲನೆಯನ್ನು ಚುರುಕುಗೊಳಿಸುತ್ತದೆ.

ಹಾಗಾದರೆ ತಣ್ಣೀರು ಕೆಟ್ಟದ್ದೇ? ಎಂಬ ಪ್ರಶ್ನೆ ಒಡನೆಯೇ ಬಂದೇ ಬರುತ್ತದೆ. ತಣ್ಣೀರು ಫಟಾಫಟ್‌ ನಮ್ಮನ್ನು ರಿಫ್ರೆಶ್‌ ಮಾಡಿಸುವ ಗುಣವನ್ನು ಹೊಂದಿದೆ. ಕಠಿಣ ವ್ಯಾಯಾಮಗಳನ್ನು ಮಾಡಿದ ಮೇಲೆ ದೇಹದಲ್ಲಿರುವ ನೀರಿನ ಪ್ರಮಾಣವನ್ನು ಒಡನೆಯೇ ಸರಿದೂಗಿಸುವಲ್ಲಿ ತಣ್ಣೀರು ಮುಖ್ಯಪಾತ್ರ ವಹಿಸುತ್ತದೆ. ದೇಹದ ಉಷ್ಣತೆಯನ್ನೂ ಕಡಿಮೆ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಬಿಸಿಲಿನ ಝಳದಿಂದ ಎದುರಾಗುವ ತೊಂದರೆಗಳಿಂದ ಪಾರಾಗಲು ತಣ್ಣೀರು ಸಹಾಯ ಮಾಡುತ್ತದೆ.

ಇದನ್ನೂ ಓದಿ: Water for empty stomach | ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆರೋಗ್ಯದ ಕೀಲಿಕೈ

ಆದರೆ, ಕೆಲವು ವಿಷಯಗಳನ್ನು ಸದಾ ನೆನಪಿನಲ್ಲಿಡಬೇಕು. ಶೀತ, ನೆಗಡಿ, ಕಟ್ಟಿದ ಮೂಗು ಮತ್ತಿತರ ತೊಂದರೆಗಳಿದ್ದಾಗ ತಣ್ಣೀರು ಕುಡಿಯುವುದರಿಂದ ನಿಮ್ಮ ತೊಂದರೆ ಇನ್ನಷ್ಟು ಬಿಗಡಾಯಿಸಬಹುದು. ನಿಮಗೆ ನಿಜವಾಗಿಯೂ ಜೀರ್ಣಕ್ರಿಯೆಯ ತೊಂದರೆ ಹೆಚ್ಚಿದ್ದರೆ ಬಿಸಿನೀರನ್ನೇ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಮೈಗ್ರೇನ್‌ ತೊಂದರೆಯಿರುವವರು ಕೂಡಾ ತಣ್ಣೀರು ಕುಡಿದರೆ ಅದು ಉಲ್ಬಣಿಸುವ ಅಪಾಯವಿದೆ.

ಎರಡರಲ್ಲೂ ಲಾಭ ಹಾಗೂ ಅಡ್ಡ ಪರಿಣಾಮ ಇದ್ದೇ ಇವೆ. ಹಾಗಾಗಿ ಯಾವುದು ಯಾವ ಸಮಯಕ್ಕೆ ಬೇಕು ಎಂಬುದನ್ನು ಅರಿತು ಬಳಸಬೇಕು. ನಿಮ್ಮ ದೇಹವೇ ನಿಮಗೆ ಬೇಕಾಗುವ ಅಗತ್ಯವನ್ನು ವಿವರಿಸುತ್ತದೆ. ದೇಹವನ್ನು ನೋಡಿ, ತಮ್ಮ ಅಗತ್ಯಗಳನ್ನು ನಿರ್ಧರಿಸುವ ಜಾಣತನ ಇರಲಿ.

ಬೊಜ್ಜು ಕರಗಿಸಲು ಯಾವ ನೀರು ಒಳ್ಳೆಯದು ಎಂಬ ಸಂದೇಹ ಹಲವರದ್ದು. ಕೆಲವರು ಬಿಸಿನೀರು ಒಳ್ಳೆಯದು ಎಂದರೆ ಇನ್ನೂ ಕೆಲವರು ಕೋಲ್ಡ್‌ ನೀರು ಉತ್ತಮ ಎನ್ನುತ್ತಾರೆ. ಹಾಗೆ ನೋಡಿದರೆ ಕೊಬ್ಬು ಇಂತಹ ನೀರಿನಲ್ಲಿ ಕರಗುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ತೂಕ ಇಳಿಸಲು ಹೆಚ್ಚು ನೀರು ಕುಡಿಯುವುದು ಸಹಕಾರಿ. ಇದಕ್ಕೆ ಬಿಸಿ, ಅಥವಾ ತಣ್ಣಗೆ ಎಂಬ ವ್ಯತ್ಯಾಸಗಳಿಲ್ಲ. ಆದರೆ, ತಣ್ಣಗಿನ ನೀರು ಕುಡಿದರೆ, ದೇಹ ಅದನ್ನು ಸಾಮಾನ್ಯ ಉಷ್ಣತೆಗೆ ತರಲು ಹೆಚ್ಚು ಕೆಲಸ ಮಾಡಬೇಕಾಗುವುದರಿಂದ ಬೊಜ್ಜು ಕರಗುತ್ತದೆ ಎಂಬ ಲೆಕ್ಕಾಚಾರವಿದೆ. ಆದರೆ ಇದನ್ನೇ ಮಾಡಿ ತೂಕ ಇಳಿಸುತ್ತೇನೆ ಎಂದು ಹೊರಟರೆ ಮೂರ್ಖತನವಾದೀತು. ಉತ್ತಮ ಪ್ರೊಟೀನ್‌ಯುಕ್ತ ಆಹಾರ, ನಿಯಮಿತ ವ್ಯಾಯಾಮ, ಆರೋಗ್ಯಕರ ಜೀವನ, ಸರಿಯಾದ ಪ್ರಮಾಣದ ನೀರಿನ ಸೇವನೆ ಆರೋಗ್ಯಕರವಾಗಿ ತೂಕ ಇಳಿಸುವ ಕೀಲಿ ಕೈ.

ಇದನ್ನೂ ಓದಿ: Tea addiction : ಚಹಾವೆಂಬ ಚಟದಿಂದ ಬಿಡುಗಡೆ ಪಡೆಯಲು ಇವನ್ನು ಕುಡಿಯಿರಿ!

Exit mobile version