Site icon Vistara News

Home Remedies For Cough And Cold: ನೆಗಡಿ, ಕೆಮ್ಮೇ? ಬದಲಾಗುತ್ತಿರುವ ವಾತಾವರಣಕ್ಕೆ ಬೇಕಾದ ಮನೆಮದ್ದುಗಳಿವು

Home Remedies For Cough And Cold

ಹೊರಗಿನ ವಾತಾವರಣ ಚಳಿಗಾಲದತ್ತ ಬದಲಾಗುತ್ತಿದ್ದಂತೆ, ಶರೀರದ ಒಳಗಿನ ವಾತಾವರಣವೂ ಬದಲಾಗುತ್ತದೆ. ನೆಗಡಿ, ಕೆಮ್ಮು, ಗಂಟಲು ಉರಿ, ಎದೆಯಲ್ಲಿ ಕಫ ಬಿಗಿದ ಅನುಭವ ಮುಂತಾದವೆಲ್ಲ ಅನುಭವಕ್ಕೆ ಬರುತ್ತವೆ. ಅದರಲ್ಲೂ ಕೆಮ್ಮು ಒಮ್ಮೆ ಶುರುವಾದರೆ ಅದನ್ನು ನಿಲ್ಲಿಸುವುದು ಹೇಗಪ್ಪಾ ಎಂಬಷ್ಟು ಕಿರಿಕಿರಿ ಮಾಡುತ್ತದೆ. ರಾತ್ರಿ ಮಲಗಿದಾಗಲೇ ಹೆಚ್ಚಾಗಿ, ಉಸಿರಾಟಕ್ಕೂ ತೊಂದರೆ ಕೊಟ್ಟು ನಿದ್ದೆಗೆಡಿಸಿ, ಬೆಳಗ್ಗೆ ಎನ್ನುವಷ್ಟರಲ್ಲಿ ಹೈರಾಣಾಗಿಸುತ್ತದೆ. ಒಣ ಕೆಮ್ಮಾದರೆ ಅದಕ್ಕೆ ಉಮಶಮನಗಳು ಬೇರೆ, ಕಫದ ಕೆಮ್ಮಿದ್ದರೆ ಅದಕ್ಕೆ ಮಾಡುವ ಔಷಧಗಳೇ ಬೇರೆ. ಕೆಮ್ಮಿದಾಗ ಕಫ ಇದ್ದರೆ ಅದಕ್ಕೆ ಉಪಯುಕ್ತವಾದ ಮನೆಮದ್ದುಗಳು ಇಲ್ಲಿವೆ (home remedies for cough and cold). ಏನು ಮಾಡಬೇಕು ಎಂಬುದನ್ನು ತಿಳಿಯುವ ಮುನ್ನ, ಕೆಮ್ಮು ಹೆಚ್ಚಿಸುವಂಥ ವಿಷಯಗಳೇನು ಎಂಬುದನ್ನು ಅರ್ಥ ಮಾಡಿಕೊಂಡರೆ, ಯಾವುದನ್ನು ದೂರ ಇರಿಸಬೇಕು ಎಂಬುದು ಸುಲಭಕ್ಕೆ ಅರ್ಥವಾಗುತ್ತದೆ.

ಧೂಮಪಾನ

ಶ್ವಾಸಕೋಶದ ಯಾವುದೇ ಸಮಸ್ಯೆಯನ್ನು ಸಿಗರೇಟ್‌ ಹೊಗೆ ತೀವ್ರಗೊಳಿಸಬಲ್ಲದು. ಸಮಸ್ಯೆ ಇರುವವರು ಸ್ವತಃ ಸಿಗರೇಟ್‌ ಸೇದದಿದ್ದರೂ, ಇನ್ನೊಬ್ಬರು ಸೇದಿದಾಗ ಈ ಹೊಗೆಯನ್ನು ಉಸಿರಾಡಿದರೂ ಸಮಸ್ಯೆ ಬಿಗಡಾಯಿಸುತ್ತದೆ.

ಅಲರ್ಜಿ

ಚಳಿಗಾಲದ ಸಮಯದಲ್ಲಿ ವಾತಾವರಣದಲ್ಲಿ ಹೆಚ್ಚಾಗುವ ಪರಾಗಕಣಗಳು, ಧೂಳು, ಹೊಗೆ ಮುಂತಾದ ಯಾವುದೇ ರೀತಿಯ ತೇಲುಕಣಗಳು ಅಲರ್ಜಿ ಉಂಟು ಮಾಡಬಲ್ಲವು. ಇವುಗಳಿಂದ ಕೆಮ್ಮು ಮಾತ್ರವಲ್ಲ, ಶ್ವಾಸಕೋಶದ ಎಲ್ಲ ರೀತಿಯ ಸಮಸ್ಯೆಗಳು ಹೆಚ್ಚುತ್ತವೆ.

ತಂಪು ಮತ್ತು ಒಣ ಹವೆ

ಚಳಿ ಹೆಚ್ಚಾಗುತ್ತಿದ್ದಂತೆ ವಾತಾವರಣದಲ್ಲಿ ಥಂಡಿ ಮಾತ್ರವಲ್ಲ, ಶುಷ್ಕತೆಯೂ ಸೇರಿಕೊಳ್ಳುತ್ತದೆ. ಇದರಿಂದ ಶ್ವಾಸನಾಳಗಳು ಸಂಕುಚಿತಗೊಂಡು ಕೆಮ್ಮು, ಕಫ ಬಿಗಿಯುವ ಸಮಸ್ಯೆ ಇನ್ನಷ್ಟು ಹೆಚ್ಚಬಹುದು.

ಇತರ

ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯದೆ ಇರುವುದು, ಅಲರ್ಜಿ ಹೆಚ್ಚುವಂಥ ರಾಸಾಯನಿಕಗಳ ಬಳಕೆ, ಪರಿಮಳ ದ್ರವ್ಯಗಳು ಸಹ ಸಮಸ್ಯೆಯನ್ನು ಹೆಚ್ಚಿಸುತ್ತವೆ. ದೇಹಕ್ಕೆ ನೀರು ಸಾಕಾಗದಿದ್ದರೆ, ಕಫ ಬಿಗಿಯುವುದು ಹೆಚ್ಚಾಗಿ ಅಸ್ತಮಾದಂಥ ಲಕ್ಷಣಗಳೂ ಕಾಣಬಹುದು.

ಮನೆಮದ್ದುಗಳು

ಈ ಸಮಸ್ಯೆ ಆರಂಭಿಕ ಹಂತದಲ್ಲಿರುವಾಗಲೇ ಮನೆಮದ್ದಿನಿಂದ ಲಕ್ಷಣಗಳನ್ನು ತಹಬಂದಿಗೆ ತರಬಹುದು. ಮೊದಲಿಗೆ ನೆಗಡಿ, ಕೆಮ್ಮು, ಕಫದಂಥ ಲಕ್ಷಣಗಳು ಆರಂಭವಾಗುತ್ತಿದ್ದಂತೆ, ನೀರು ಹಾಗೂ ಇತರ ದ್ರವಾಹಾರಗಳನ್ನು ಹೆಚ್ಚುಹೆಚ್ಚಾಗಿ ಸೇವಿಸಿ. ಹರ್ಬಲ್‌ ಚಹಾ, ಕಷಾಯಗಳು, ಸೂಪ್‌ನಂಥವು ಈ ನಿಟ್ಟಿನಲ್ಲಿ ಸಹಾಯಕ. ಹೀಗೆ ದೇಹಕ್ಕೆ ನೀರು ಹೆಚ್ಚು ಹೋದಷ್ಟೂ, ಶ್ವಾಸನಾಳಗಳಲ್ಲಿ ಬಿಗಿದಿರುವ ಕಫ ನೀರಾಗುತ್ತದೆ.

ಜೇನುತುಪ್ಪ

ಬೆಚ್ಚಗಿನ ನೀರಿನ ಜೊತೆಗೆ ಸ್ವಲ್ಪ ಜೇನುತುಪ್ಪ ಹಾಕಿ ಕುಡಿಯುವುದು ಹಿತಕರ. ಶುಂಠಿ, ನಿಂಬೆಹುಲ್ಲು ಮುಂತಾದವುಗಳ ಚಹಾದ ಜೊತೆಗೂ ಕೊಂಚ ಜೇನುತುಪ್ಪ ಬೆರೆಸಿಕೊಳ್ಳಬಹುದು. ಇದರಿಂದ ನೆಗಡಿ, ಕೆಮ್ಮು ಎರಡಕ್ಕೂ ಉಪಶಮನ ದೊರೆಯುತ್ತದೆ

ಆವಿ ತೆಗೆದುಕೊಳ್ಳುವುದು

ನೆಗಡಿಯಾಗಿ ಮೂಗು ಕಟ್ಟಿದ್ದರೆ, ಕೆಮ್ಮು ಮತ್ತು ಕಫದ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರ. ಬಿಸಿ ನೀರಿನ ಪಾತ್ರೆಗೆ ಒಂದೆರಡು ಹನಿ ನೀಲಗಿರಿ ಎಣ್ಣೆ ಸೇರಿಸಿದರೆ ಪ್ರಯೋಜನಕಾರಿ. ಚಿಕ್ಕ ಮಕ್ಕಳಿಗೆ ಇದನ್ನು ಉಪಯೋಗಿಸುವುದಾದರೆ, ಪಾತ್ರೆಯಿಂದ ಕುದಿ ನೀರಿನ ಆವಿ ಸೇವಿಸುವುದು ಅಪಾಯಕಾರಿ. ಬದಲಿಗೆ, ಒಳ್ಳೆಯ ಸ್ಟೀಮರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಗಾರ್ಗಲ್‌

ಉಪ್ಪು ಹಾಕಿದ ಬೆಚ್ಚಗಿನ ನೀರಿನಿಂದ ಗಂಟಲು ಸ್ವಚ್ಛ ಮಾಡುವುದು ಅಥವಾ ಗಾರ್ಗಲ್‌ ಮಾಡುವುದು ಸರಳ ಮತ್ತು ಪರಿಣಾಮಕಾರಿ ಮನೆಮದ್ದು. ಗಂಟಲು ಉರಿ, ಕೆರೆತ, ನೋವು, ಕೆಮ್ಮು ಇಂಥ ಯಾವುದೇ ಸಮಸ್ಯೆಗೆ ಈ ಉಪಾಯ ಪರಿಹಾರ ನೀಡಬಲ್ಲದು. ಕೆಲವೊಮ್ಮೆ ಈ ನೀರಿಗೆ ಚಿಟಕೆ ಅರಿಶಿನ ಹಾಕಿಕೊಳ್ಳುವುದೂ ಉಪಯುಕ್ತ

ಶುಂಠಿ

ಇದರ ಚಹಾ ಅಥವಾ ಕಷಾಯ ಸೇವನೆ ಪ್ರಯೋಜನಕಾರಿ. ಶುಂಠಿಯಲ್ಲಿ ಉರಿಯೂತ ಕಡಿಮೆ ಮಾಡುವ ಗುಣಗಳು ಇರುವುದರಿಂದ, ಊದಿಕೊಂಡಂತಾಗಿ ಕುಗ್ಗಿರುವ ಶ್ವಾಸನಾಳವನ್ನು ಇದು ವಿಕಸನಗೊಳಿಸುವ ಸಾಧ್ಯತೆಯಿದೆ. ಸಣ್ಣ ತುಂಡು ಶುಂಠಿಯನ್ನು ಚಿಟಿಕೆ ಉಪ್ಪಿನೊಂದಿಗೆ ಬಾಯಲ್ಲಿ ಒತ್ತರಿಸಿಕೊಂಡರೆ, ಗಂಟಲಿನ ಕಿರಿಕಿರಿ ಉಪಶಮನವಾಗುತ್ತದೆ

ಬೆಳ್ಳುಳ್ಳಿ

ಸೋಂಕು ನಿರೋಧಕ ಗುಣ ಇದರಲ್ಲಿ ನೈಸರ್ಗಿಕವಾಗಿಯೇ ಇದೆ. ಆದರೆ ಹಸಿ ಬೆಳ್ಳುಳ್ಳಿ ತಿನ್ನುವುದು ಹೆಚ್ಚಿನವರಿಗೆ ಇಷ್ಟವಾಗದೆ ಇರಬಹುದು. ಹಾಗಾಗಿ ಇದನ್ನು ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಬಳಸುವುದು ಅಥವಾ ಕಷಾಯದ ರೂಪದಲ್ಲಿ ಸೇವಿಸಬಹುದು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ.

ಮಲಗುವ ಭಂಗಿ

ನೆಗಡಿ, ಕೆಮ್ಮುಗಳು ಹೆಚ್ಚಿನ ತೊಂದರೆರ ಕೊಡುವುದೇ ಮಲಗಿದಾಗ. ಉಸಿರಾಡಲು ಕಷ್ಟವಾಗಿ, ಕೆಮ್ಮು ನಿಲ್ಲಿಸಲಾಗದೆ ಒದ್ದಾಡುವ ಅವಸ್ಥೆ ಎಷ್ಟೋ ಬಾರಿ ಬರುತ್ತದೆ. ಆಗ ಮಲಗುವ ಭಂಗಿಯನ್ನು ಬದಲಿಸುವುದು ಅಗತ್ಯ. ದಿಂಬನ್ನು ಎತ್ತರಿಸಿ, ತಲೆಯ ಭಾಗವನ್ನು ಮೇಲಕ್ಕೇರಿಸಿ ಮಲಗುವುದು ಪರಿಣಾಮಕಾರಿಯಾದ ಉಪಶಮನ ನೀಡುತ್ತದೆ.

ಇದನ್ನೂ ಓದಿ: Health Tips: ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಬೇಕೇ? ಹಾಗಿದ್ದರೆ ಇಲ್ಲಿವೆ ಪೇಯಗಳು!

Exit mobile version