ಸೊಳ್ಳೆಗಳೆಂದರೆ (Home remedies for mosquito) ಡೇಂಜರ್ ಎಂದೇ ಅರ್ಥ. ಯಾವ ಸೊಳ್ಳೆ ಡೆಂಗ್ಯೂ, ಮಲೇರಿಯಾವನ್ನು ಹೊತ್ತು ತರುತ್ತದೆ ಎನ್ನುವುದನ್ನು ಹೇಳಲಾಗದು. ಹಾಗಾಗಿ ಪ್ರತಿಯೊಬ್ಬರೂ ಸೊಳ್ಳೆಗಳಿಂದ ರಕ್ಷಿಸಿಕೊಳ್ಳುವುದು ಅತಿಮುಖ್ಯ. ಸೊಳ್ಳೆ ಕೊಲ್ಲುವುದಕ್ಕೆಂದೇ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಉತ್ಪನ್ನಗಳು ಲಭ್ಯವಿವೆ. ಆದರೆ ಇವು ಆರೋಗ್ಯಕ್ಕೆ ಅಪಾಯಕಾರಿ. ಆದರೆ ಹಿಂದಿನ ಕಾಲದಿಂದಲೂ ಸೊಳ್ಳೆಗಳನ್ನು ಓಡಿಸುವುದಕ್ಕೆ ಮನೆಯಲ್ಲೇ ಅನೇಕ ರೀತಿಯ ಉಪಾಯಗಳನ್ನು ಮಾಡಲಾಗುತ್ತಿದೆ. ಅಂತಹ ಹಲವು ಉಪಾಯಗಳನ್ನು ನಾವಿಲ್ಲಿ ತಿಳಿಸಿದ್ದೇವೆ.
ಬೆಳ್ಳುಳ್ಳಿ ನೀರು
ಹಿಂದಿನ ಕಾಲದಿಂದಲೂ ಬೆಳ್ಳುಳ್ಳಿ ನೀರನ್ನು ಸೊಳ್ಳೆಗಳನ್ನು ಓಡಿಸಲು ಉಪಯೋಗಿಸಲಾಗುತ್ತಿದೆ. ಬೆಳ್ಳುಳ್ಳಿ ಮತ್ತು ಲವಂಗವನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಅದನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಆ ದ್ರಾವಣವನ್ನು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಮನೆಯ ಸುತ್ತ ಹಾಗೆಯೇ ಸೊಳ್ಳೆಗಳು ಇರುವಂತಹ, ಮೊಟ್ಟೆ ಇಡುವಂತಹ ಜಾಗದಲ್ಲಿ ಸ್ಪ್ರೇ ಮಾಡಿ. ಈ ದ್ರಾವಣವು ಸೊಳ್ಳೆಗಳನ್ನು ಕೊಲ್ಲುತ್ತದೆ.
ನಿಂಬೆ ಹುಲ್ಲು
ನಿಂಬೆ ಹುಲ್ಲು ಸೊಳ್ಳೆಗಳ ಕಡಿತದಿಂದ ರಕ್ಷಿಸಿಕೊಳ್ಳಲು ಒಳ್ಳೆಯ ಔಷಧಿ. ನಿಂಬೆ ಹುಲ್ಲಿನ ಎಣ್ಣೆಯನ್ನು ಅದಕ್ಕೆ ಬಳಸಬಹುದು. ಒಂದು ವೇಳೆ ಅದರ ಎಣ್ಣೆ ಇಲ್ಲವೆಂದಾದಲ್ಲಿ ಲಿಂಬೆ ಹುಲ್ಲನ್ನು ಪುಡಿ ಮಾಡಿ ಅದನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡಿ ನೇರವಾಗಿ ಚರ್ಮಕ್ಕೆ ಹಚ್ಚಿಕೊಳ್ಳಿ. ಇದು ನಿಮಗೆ ಹಲವು ಗಂಟೆಗಳ ಕಾಲ ಸೊಳ್ಳೆಗಳ ಕಡಿತದಿಂದ ರಕ್ಷಿಸುತ್ತದೆ.
ವಿನೇಗರ್
ಎಲ್ಲರ ಮನೆಯಲ್ಲೂ ವಿನೇಗರ್ ಇದ್ದೇ ಇರುತ್ತದೆ. ಇದು ಕೂಡ ಸೊಳ್ಳೆಗಳಿಂದ ರಕ್ಷಣೆಗೆ ಸುಲಭ ವಿಧಾನವಾಗಿದೆ. ಒಂದು ಸ್ಪ್ರೇ ಬಾಟಲಿಯಲ್ಲಿ ಮೂರು ಕಪ್ ನೀರಿಗೆ ಒಂದು ಕಪ್ ವಿನೇಗರ್ ಅನ್ನು ಸೇರಿಸಿಟ್ಟುಕೊಳ್ಳಿ. ಅದನ್ನು ನೇರವಾಗಿ ನಿಮ್ಮ ಚರ್ಮದ ಮೇಲೆ ಸಿಂಪಡಿಸಿಕೊಳ್ಳಬಹುದು. ಹಾಗೆಯೇ ಅದನ್ನು ಮನೆಯಲ್ಲಿ ಸೊಳ್ಳೆಗಳು ಅಡಗಿ ಕೂರುವಂತಹ ಸ್ಥಳಗಳಲ್ಲೂ ಸ್ಪ್ರೇ ಮಾಡಬಹುದು. ಇದರಿಂದ ಸೊಳ್ಳೆಗಳು ನಿಮಗೆ ಕಚ್ಚುವುದಿಲ್ಲ ಹಾಗೂ ಆ ಸ್ಥಳದಲ್ಲಿ ನಿಲ್ಲುವುದಿಲ್ಲ.
ನಿಂಬೆ ಮತ್ತು ಲವಂಗ
ಒಂದು ಅರ್ಧ ನಿಂಬೆ ಹಣ್ಣನ್ನು ತೆಗೆದುಕೊಳ್ಳಿ. ಅದಕ್ಕೆ ಕೆಲವು ಲವಂಗಗಳನ್ನು ಚುಚ್ಚಿ ನಿಮ್ಮ ಕೋಣೆಯಲ್ಲಿ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ ಸೊಳ್ಳೆಗಳು ನಿಮ್ಮ ಕೋಣೆಯನ್ನು ಬಿಟ್ಟು ಓಡಿಹೋಗುತ್ತವೆ.
ಲ್ಯಾವೆಂಡರ್ ಎಣ್ಣೆ
ಲ್ಯಾವೆಂಡರ್ ಎಣ್ಣೆ ತುಂಬ ಪರಿಮಳವನ್ನು ಹೊಂದಿರುತ್ತದೆ. ಮನುಷ್ಯರಿಗೆ ಇಷ್ಟವಾಗುವ ಈ ವಾಸನೆ ಸೊಳ್ಳೆಗಳಿಗೆ ಆಗುವುದಿಲ್ಲ. ಹಾಗಾಗಿ ಈ ಪರಿಮಳ ಬಂದೊಡನೆ ಅವು ಆ ಸ್ಥಳದಿಂದ ಪರಾರಿಯಾಗುತ್ತವೆ. ನೀವು ಮಲಗುವ ಕೋಣೆ, ಮತ್ತು ಮನೆ ಸುತ್ತಲಿನ ಪ್ರದೇಶದಲ್ಲಿ ಈ ಎಣ್ಣೆಯನ್ನು ಸಿಂಪಡಿಸಿಡಬಹುದು. ಇದರಿಂದ ಸೊಳ್ಳೆಗಳು ಪರಿಮಳ ತಾಳಲಾರದೆ ಓಡಿಹೋಗುತ್ತವೆ.
ತುಳಸಿ
ತುಳಸಿಯನ್ನು ಪವಿತ್ರ ಸಸ್ಯವೆಂದು ಹಿಂದೂಗಳು ಪೂಜಿಸುತ್ತಾರೆ. ಇದರಿಂದ ಅನೇಕ ರೀತಿಯ ಆರೋಗ್ಯ ಸಹಾಯವೂ ಆಗುತ್ತದೆ. ಆದರೆ ಸೊಳ್ಳೆಗಳಿಗೆ ತುಳಸಿ ಕಂಡರೆ ಆಗಿಬರುವುದಿಲ್ಲ. ಹಾಗಾಗಿ ಅವುಗಳು ತುಳಸಿ ಗಿಡದತ್ತ ಸುಳಿಯುವುದಿಲ್ಲ. ನೀವು ನಿಮ್ಮ ಮನೆಯ ಕಿಟಕಿಗಳ ಬಳಿ ತುಳಸಿ ಗಿಡವನ್ನು ಇರಿಸಿ. ಅಥವಾ ತುಳಸಿ ಎಣ್ಣೆಯನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ. ಇದರಿಂದ ಸೊಳ್ಳೆಗಳು ನಿಮ್ಮ ಮನೆಯೊಳಗೆ ಬರಲು ಇಷ್ಟಪಡುವುದಿಲ್ಲ ಹಾಗೆಯೇ ನಿಮಗೆ ಕಚ್ಚುವುದಕ್ಕೂ ಮುಂದಾಗುವುದಿಲ್ಲ.
ಕರ್ಪೂರ
ತುಳಸಿ ರೀತಿಯಲ್ಲೇ ಕರ್ಪೂರ ಕೂಡ ಗಾಢವಾದ ವಾಸನೆ ಹೊಂದಿರುತ್ತದೆ. ಹಾಗಾಗಿ ನೀವು ಸೊಳ್ಳೆ ಓಡಿಸಲು ಕರ್ಪೂರವನ್ನೂ ಬಳಸಬಹುದು. ಕಾಲು ಕಪ್ ನೀರಿನಲ್ಲಿ ಎರಡು ದೊಡ್ಡ ಕರ್ಪೂರ ಹಾಕಿ ಅದನ್ನು ಕರಗಿಸಿ ನಿಮ್ಮ ಕೋಣೆಯಲ್ಲಿ ಮತ್ತು ಮನೆಯ ಸುತ್ತ ಸಿಂಪಡಿಸಿ. ಅಥವಾ ನಿಮ್ಮ ಕೋಣೆಯ ಬಾಗಿಲು ಮತ್ತು ಕಿಟಕಿ ಮುಚ್ಚಿ ಕೆಲವು ಕರ್ಪೂರಗಳನ್ನು ಸುಡಿ. ಇದರಿಂದ ಸೊಳ್ಳೆಗಳು ನಿಮ್ಮ ಕೋಣೆಯೊಳಗೆ ಬರುವ ಧೈರ್ಯ ಮಾಡುವುದಿಲ್ಲ.
ಪುದೀನಾ
ಪುದೀನಾವನ್ನೂ ಬಳಸಿಕೊಂಡು ಸೊಳ್ಳೆಗಳನ್ನು ಓಡಿಸಬಹುದು. ಪುದೀನಾ ಎಣ್ಣೆಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಚರ್ಮದ ಮೇಲೆ ಸಿಂಪಡಿಸಿಕೊಳ್ಳಿ. ಇದು ನಿಮ್ಮನ್ನು ಸೊಳ್ಳೆ ಕಡಿತದಿಂದ ರಕ್ಷಿಸುತ್ತದೆ. ಹಾಗೆಯೇ ನಿಮ್ಮ ಮೈ ಕೂಡ ಒಳ್ಳೆ ಪರಿಮಳದಿಂದ ಕೂಡಿರುತ್ತದೆ.
ಇದನ್ನೂ ಓದಿ: Mosquito Safety: ಸೊಳ್ಳೆಗಳೇಕೆ ಇಷ್ಟೊಂದು ಡೇಂಜರ್? ಅವುಗಳಿಂದ ರಕ್ಷಣೆ ಹೇಗೆ?