ಬಿಸಿಲಿನಲ್ಲಿ ಹೊರಗೆ ಹೋಗದೆ ಒಳಗೇ ಕುಳಿತಿರುವುದು ಸಾಧ್ಯವಾಗದ ಕೆಲಸ. ನಾಯಿಗೆ ವಾಕಿಂಗ್, ಗಿಡಕ್ಕೆ ನೀರುಣಿಸುವುದು, ಮಕ್ಕಳನ್ನು ಕರೆತರುವುದು, ಮನೆಗೆ ಬೇಕಾದ್ದನ್ನು ತರುವುದು- ಹೀಗೆ ಏನಾದರೊಂದು ಕೆಲಸಕ್ಕೆ ನಮ್ಮನ್ನು ಬಿರು ಬಿಸಿಲಿಗೆ ಒಡ್ಡಿಕೊಳ್ಳಬೇಕಾಗುತ್ತದೆ. ಕಚೇರಿಯೊಳಗೆ ತಂಪಿದ್ದರೂ ಹೋಗುವ ದಾರಿಯಲ್ಲಿ ಬಿಸಿಲೇ ತಾನೇ? ಈ ಕಠೋರ ಬಿಸಿಲಿನಲ್ಲಿ ಹತ್ತಿಪ್ಪತ್ತು ನಿಮಿಷಗಳಿದ್ದರೂ ಸಾಕು ಚರ್ಮ ಕೆಂಪಾಗುವುದಕ್ಕೆ. ಸದಾ ಕಾಲ ಸನ್‌ಸ್ಟ್ರೀನ್ ಧರಿಸಿಕೊಂಡಿರುವುದು, ಛತ್ರಿ ಹಿಡಿದು ಓಡಾಡುವುದು, ಮೈ-ಮುಖವೆಲ್ಲ ಮುಚ್ಚಿಕೊಂಡಿರುವುದು ಆಗದ ಕೆಲಸ. ಹೀಗೆ ಬಿಸಿಲಿಗೆ ಸುಟ್ಟು ಕೆಂಪಾಗುವ (Home remedies for sunburn) ಚರ್ಮಕ್ಕೆ ಆರೈಕೆ ಬೇಡವೇ?
ಸನ್‌ಬರ್ನ್ ಅಥವಾ ಬಿಸಿಲಿಗೆ ಸುಡುವುದೆಂದರೆ ಚರ್ಮ ಕೆಂಪಾಗುವುದು ಮಾತ್ರವಲ್ಲ. ಮೊದಲಿಗೆ ಉರಿಯೊಂದಿಗೆ ಕೆಂಪಾಗಿ, ನಂತರ ಕಪ್ಪಾಗಿ, ತುರಿಕೆ ಆರಂಭವಾಗಿ, ಕೆಲವೊಮ್ಮೆ ಸಣ್ಣ ಗುಳ್ಳೆಗಳೆದ್ದು, ಒಂದೆರಡು ದಿನಗಳಲ್ಲಿ ಸುಟ್ಟ ಚರ್ಮವೆಲ್ಲ ಸಿಪ್ಪೆ ಸುಲಿದಂತಾಗಿ… ಸೂಕ್ಷ್ಮ ಚರ್ಮದವರಿಗಂತೂ ಇದು ಇನ್ನೂ ಕಷ್ಟ. ಚರ್ಮ ಸುಟ್ಟಂತಾದಾಗ ತಣ್ಣನೆಯ ನೀರು ಹಾಕಿಕೊಳ್ಳುವುದು ನೆರವಾಗುತ್ತದೆ. ಹಾಗೆಂದು ಐಸ್ ಹಾಕಿದರೆ ಕೆಲವೊಮ್ಮೆ ಅದೂ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಸುಟ್ಟ ಗಾಯಕ್ಕೆ ಹಚ್ಚುವ ಮುಲಾಮುಗಳು, ಕ್ಯಾಲಮಿನ್ ಲೋಶನ್‌ನಂಥವು ತೊಂದರೆಯನ್ನು ಶಮನ ಮಾಡಬಲ್ಲವು. ಬಿಸಿಲಿಗೆ ಚರ್ಮ ಸುಟ್ಟಂತಾದಾಗ ಸುರಕ್ಷಿತವಾದ ಮನೆಮದ್ದುಗಳೇನು?
ಅರಿಶಿನ ಮತ್ತು ಗಂಧ
ಮನೆಯಲ್ಲಿ ಗಂಧದ ಕೊರಡಿದ್ದರೆ ಅದನ್ನು ಹಾಲಿನಲ್ಲಿ ತೇಯ್ದು, ತೆಳುವಾದ ಗಂಧವನ್ನು ಬಟ್ಟಲಿಗೆ ತೆಗೆದುಕೊಳ್ಳಿ. ಇದಕ್ಕೆ ಕೊಂಚ ಅರಿಶಿನವನ್ನು ಸೇರಿಸಿ. ಇದನ್ನು ಬಿಸಿಲಿಗೆ ಸುಟ್ಟಂತಾದ ಭಾಗಕ್ಕೆ ಹಚ್ಚುವುದು ಹಿತಕರ. ಅರಿಶಿನದಲ್ಲಿ ಉರಿಯೂತವನ್ನು ಶಮನ ಮಾಡುವ ಸಾಮರ್ಥ್ಯವಿದ್ದರೆ, ತಂಪುಂಟುಮಾಡುವ ಗುಣ ಗಂಧಕ್ಕಿದೆ. ಇವೆರಡರ ಮಿಶ್ರಣದಿಂದ ಸುಟ್ಟು ಕೆಂಪಾದ ಚರ್ಮದ ತೊಂದರೆ ಬೇಗನೆ ಗುಣವಾಗುತ್ತದೆ.
ಲೋಳೆಸರ
ಅಲೊವೇರಾ ಕೇವಲ ಸೌಂದರ್ಯವರ್ಧಕವಾಗಿ ಮಾತ್ರವೇ ಬಳಕೆಗೆ ಬರುವಂಥದ್ದಲ್ಲ. ಇದರ ಔಷಧೀಯ ಗುಣಗಳು ಬಹಳಷ್ಟಿವೆ. ಸುಟ್ಟಗಾಯಕ್ಕೂ ಲೋಳೆಸರ ಒಳ್ಳೆಯ ಮದ್ದಾಗಬಲ್ಲದು. ಬೀಚಿನಲ್ಲಿ ಆಡುವಾಗ ಮುಖ ಮಾತ್ರವಲ್ಲದೆ, ಮೈ-ಕೈಯೆಲ್ಲಾ ಕೆಂಪಾಗಿದೆ ಎನಿಸಿದರೆ, ಲೋಳೆಸರವನ್ನು ಚಪ್ಪಟೆಯಾಗಿ ಉದ್ದಕ್ಕೆ ಕತ್ತರಿಸಿ. ಇದರಿಂದ ಒಳಗಿನ ಜೆಲ್ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಇದನ್ನು ಧಾರಾಳವಾಗಿ ಸುಟ್ಟ ಭಾಗಗಳಿಗೆಲ್ಲಾ ಲೇಪಿಸಿಕೊಳ್ಳಿ. ಇದು ಉರಿಯಿಂದ ತ್ವರಿತ ಉಪಶಮನವನ್ನು ನೀಡುತ್ತದೆ.
ಗುಲಾಬಿ ಜಲ
ಜನಪ್ರಿಯವಾಗಿ ರೋಸ್ ವಾಟರ್ ಎಂದೇ ಹೇಳಲಾಗುವ ಇದನ್ನು ಬಿಸಿಲಿಗೆ ಸುಟ್ಟ ಭಾಗಕ್ಕೆ ಧಾರಾಳವಾಗಿ ಲೇಪಿಸಬೇಕಾಗುತ್ತದೆ. ಇದರಲ್ಲಿರುವ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಹಾನಿಗೊಳಗಾದ ಚರ್ಮದ ಕೋಶಗಳ ದುರಸ್ತಿಗೆ ನೆರವಾಗುತ್ತವೆ. ಸ್ವಚ್ಛವಾದ ಹತ್ತಿಯ ಬಟ್ಟೆಯೊಂದನ್ನು ಗುಲಾಬಿ ನೀರಿನಲ್ಲಿ ಅದ್ದಿ, ಅದನ್ನು ಕೆಂಪಾದ ಚರ್ಮದ ಮೇಲಿರಿಸಿ. ಇದನ್ನು ಸುಮಾರು ೧೫-೨೦ ನಿಮಿಷಗಳವರೆಗೆ ಹಾಗೆಯೇ ಚರ್ಮದ ಮೇಲಿರಿಸಿದ್ದರೆ ಸುಟ್ಟ ಉರಿ ಬೇಗನೆ ಗುಣವಾಗುತ್ತದೆ.
ಸೌತೇಕಾಯಿ
ಇದಕ್ಕಿರುವ ಜನಪ್ರಿಯತೆಯೇ ಇದರ ತಂಪಾದ ಗುಣಕ್ಕೆ ಸಾಕ್ಷಿ. ಫೇಸ್‌ಮಾಸ್ಕ್ ಮಾಡುವುದರಿಂದ ಹಿಡಿದು, ಕಣ್ಣು ತಂಪಾಗಿಸಲು, ಕಡೆಗೆ ಹೊಟ್ಟೆ ತಂಪಾಗಿಸುವುದಕ್ಕೂ ಇದು ಅಗತ್ಯ. ಸೌತೇಕಾಯಿಯ ತುರಿಯನ್ನು, ರಸದ ಸಮೇತವಾಗಿ ಸ್ವಚ್ಛ ಹತ್ತಿಯ ಬಟ್ಟೆಯಲ್ಲಿ ಕಟ್ಟಿ. ಅದನ್ನು ಸುಟ್ಟಭಾಗಗಳ ಮೇಲೆ ಇರಿಸುತ್ತಾ ಬನ್ನಿ. ಹಾಗಿಲ್ಲದಿದ್ದರೆ, ಈ ತರಕಾರಿಯನ್ನು ಗಾಲಿಯಂತೆ ಕತ್ತರಿಸಿಕೊಂಡು, ಆ ಗಾಲಿಗಳನ್ನು ಚರ್ಮದ ಮೇಲಿರಿಸಿ; ಕೆಲಕಾಲ ಹಾಗೆಯೇ ಬಿಡಿ.
ಮೊಸರು
ಹುಳಿಯಿಲ್ಲದ ಸಿಹಿ ಮೊಸರನ್ನು ಚರ್ಮ ಬಿಸಿಲಿಗೆ ಸುಟ್ಟಲ್ಲಿ ಹಾಕಬಹುದು. ಇದರಲ್ಲಿರುವ ಪ್ರೊಬಯಾಟಿಕ್ ಅಂಶಗಳು ಬೇಗ ಗುಣವಾಗುವುದಕ್ಕೆ ನೆರವಾಗುತ್ತವೆ. ಸುಟ್ಟ ಗುಳ್ಳೆಗಳನ್ನೆಲ್ಲ ಕಡಿಮೆ ಮಾಡುವುದಕ್ಕೆ ಇದು ಅನುಕೂಲ. ಆದರೆ ಮೊಸರಿನಲ್ಲಿ ಹುಳಿಯಂಶವಿದ್ದರೆ ಸುಟ್ಟ ಭಾಗದಲ್ಲಿ ಉರಿ ಹೆಚ್ಚುತ್ತದೆ. ಹಾಗಾಗಿ ಹುಳಿಯಿಲ್ಲದ ಸಿಹಿ ಮೊಸರಿನ ಬಳಕೆ ಸೂಕ್ತ.
ಇದನ್ನೂ ಓದಿ: Water For Health: ಯಾವ ಸಮಯದಲ್ಲಿ ನೀರು ಕುಡಿದರೆ ಆರೋಗ್ಯವಾಗಿರಬಹುದು?