Site icon Vistara News

Home Remedies: ಚಳಿಗಾಲದಲ್ಲಿ ಪಾದ ನೋವೇ? ಇಲ್ಲಿದೆ ಮನೆಮದ್ದು

pain

pain

ಬೆಂಗಳೂರು: ಪಾದ ಮತ್ತು ಹಿಮ್ಮಡಿಗಳ ನೋವು (Pain in ankles and heels) ಯಾವುದೇ ಋತುವಿನಲ್ಲೂ ಕಾಡಬಹುದಾದರೂ ಚಳಿಗಾಲದಲ್ಲಿ ತೊಂದರೆ ಕೊಡುವುದು ಹೆಚ್ಚು. ಇದಕ್ಕೆ ಕಾರಣಗಳು ಹಲವಾರು. ತೂಕ ಹೆಚ್ಚಾಗುವುದು, ದಿನದಲ್ಲಿ ಬಹಳ ಹೊತ್ತು ನಿಂತುಕೊಂಡಿರುವುದು, ದೇಹದಲ್ಲಿ ಕ್ಯಾಲ್ಶಿಯಂ ಕೊರತೆ, ಅತೀ ಎತ್ತರದ ಚಪ್ಪಲಿಗಳನ್ನು ಧರಿಸುವುದು, ಚಳಿಗಾಲದಲ್ಲಿ ಹೆಚ್ಚುವ ಉರಿಯೂತದಿಂದ ಕೆರಳುವ ನೋವುಗಳ ಬಾಧೆ- ಇಂಥವುಗಳಿಂದ ಹಿಮ್ಮಡಿ ಹಾಗೂ ಪಾದದ ಗಂಟುಗಳಲ್ಲಿ ನೋವು, ಊತ ಕಾಣಬಹುದು. ಈ ಸಮಸ್ಯೆಯ ಪ್ರಾರಂಭದಲ್ಲಿ ಉಪಶಮನಕ್ಕೆ ಮಾಡಬಹುದಾದ ಮನೆಮದ್ದುಗಳು (Home remedies) ಇಲ್ಲಿವೆ.

ಶುಂಠಿ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ನೋವು ನಿವಾರಣೆಗೆ ಪರಿಣಾಮಕಾರಿಯಾದ ಮಾರ್ಗ. ಅದರಲ್ಲೂ ಮುಖ್ಯವಾಗಿ ಚಳಿಗಾಲದಲ್ಲಿ ಕಾಟ ಕೊಡುವ ಹಿಮ್ಮಡಿ ಮತ್ತು ಪಾದಗಳ ನೋವಿಗೆ ಶುಂಠಿ ಕೆಲಸ ಮಾಡುತ್ತದೆ. ಒಂದು ಲೋಟ ನೀರಿಗೆ ಒಂದಿಂಚು ಶುಂಠಿ ಕತ್ತರಿಸಿ ಹಾಕಿ ಕುದಿಸಿ. ಇರುವ ನೀರು ಅರ್ಧದಷ್ಟಾದ ಮೇಲೆ ಆರಲು ಬಿಡಿ. ಸ್ವಲ್ಪ ಬೆಚ್ಚಗಿರುವಾಗಲೇ ಇದಕ್ಕೆ ಕೆಲವು ಹನಿ ನಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದರಿಂದ ಪಾದ ಮತ್ತು ಹಿಮ್ಮಡಿಗಳ ನೋವು ಕಡಿಮೆಯಾಗುತ್ತದೆ.

ಅರಿಶಿನ

ಚಳಿಗಾಲದಲ್ಲಿ ಅರಿಶಿನದ ಬಳಕೆ ಸಹಜವಾಗಿಯೇ ಹೆಚ್ಚಿಸಿಕೊಂಡರೆ ಎಲ್ಲ ರೀತಿಯಲ್ಲೂ ಒಳ್ಳೆಯದು. ಅರಿಶಿನದ ಹಾಲು ಸೇವನೆಯಿಂದ ಉತ್ಕರ್ಷಣ ನಿರೋಧಕಗಳು ದೇಹ ಸೇರುತ್ತವೆ. ಅದಿಲ್ಲದಿದ್ದರೆ ಬೆಚ್ಚನೆಯ ನೀರಿಗೆ ಚಿಟಿಕೆ ಅರಿಶಿನ ಮತ್ತು ಕೊಂಚ ಜೇನುತುಪ್ಪ ಬೆರೆಸಿ ಸೇವಿಸಬಹುದು. ಅಂತೂ ಚಳಿಗಾಲದಲ್ಲಿ ಅರಿಶಿನದ ಸೇವನೆ ಶೀತ-ನೆಗಡಿಗೆ ಮಾತ್ರವಲ್ಲ, ನೋವು ನಿವಾರಣೆಗೂ ಅಗತ್ಯ.

ಕೊಬ್ಬಿನ ಮೀನುಗಳು

ಒಮೇಗಾ 3 ಕೊಬ್ಬಿನಾಮ್ಲವಿರುವ ಮೀನುಗಳ ಸೇವನೆಯಿಂದಲೂ ಪಾದಗಂಟುಗಳು ಮತ್ತು ಹಿಮ್ಮಡಿಗಳಲ್ಲಿನ ನೋವನ್ನು ಶಮನ ಮಾಡಬಹುದು. ಈ ಮೀನುಗಳಲ್ಲಿನ ಪೋಷಕಾಂಶಗಳು ಮೂಳೆಗಳಲ್ಲಿ ಬಲ ತುಂಬುತ್ತವೆ. ಇದರ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ.

ಆ್ಯಪಲ್‌ ಸೈಡರ್‌ ವಿನೇಗರ್

ಉರಿಯೂತ ಕಡಿಮೆ ಮಾಡುವುದಲ್ಲಿ ಇದೂ ಸಹ ಪರಿಣಾಮಕಾರಿ ಕೆಲಸವನ್ನು ಮಾಡುತ್ತದೆ. ನಾಲ್ಕಾರು ಚಮಚಗಳಷ್ಟು ನೀರನ್ನು ಬಿಸಿ ಮಾಡಿಕೊಳ್ಳಿ. ಇದಕ್ಕೆ ಕೆಲವು ಹನಿಗಳಷ್ಟು ಆ್ಯಪಲ್‌ ಸೈಡರ್‌ ವಿನೇಗರ್‌ ಸೇರಿಸಿ. ಬಿಸಿಯಿರುವಾಗಲೇ ಈ ಮಿಶ್ರಣವನ್ನು ನೋವಿರುವ ಭಾಗಗಳಿಗೆ ನವಿರಾಗಿ ಮಸಾಜ್‌ ಮಾಡಿ. ಇದರಿಂದ ಪಾದಗಂಟು ಮತ್ತು ಹಿಮ್ಮಡಿಗಳ ನೋವು ಕಡಿಮೆಯಾಗುತ್ತದೆ.

ಸೈಂಧವ ಲವಣ

ಇದೂ ಸಹ ನೋವು ನಿವಾರಣಗೆ ಉತ್ತಮವಾಗಿ ಕೆಲಸ ಮಾಡುತ್ತದೆ. ಮಧ್ಯಮ ಗಾತ್ರದ ಕಡಾಯಿಯಲ್ಲಿ ನೀರು ಬಿಸಿ ಮಾಡಿಕೊಳ್ಳಿ. ಈ ಬಿಸಿ ನೀರಿಗೆ ಮೂರ್ನಾಲ್ಕು ಚಮಚದಷ್ಟು ಸೈಂಧವ ಲವಣವನ್ನು ಸೇರಿಸಿ. ಈ ಉಪ್ಪು ಮಿಶ್ರಿತ ನೀರಿನಲ್ಲಿ 20 ನಿಮಿಷ ಪಾದಗಳನ್ನು ನೆನೆಸಿಡಿ. ಕಡೆಯವರೆಗೂ ನೀರು ಬಿಡಿಯಿರಬೇಕು, ಆರಬಾರದು. ಇದರಿಂದ ಪಾದ ಮತ್ತು ಹಿಮ್ಮಡಿಗಳ ನೋವು ಮತ್ತು ಊತ ಬಹಳಷ್ಟು ಶಮನವಾಗುತ್ತದೆ.

ತೈಲದ ಮಸಾಜ್‌

ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ ಮುಂತಾದ ಯಾವುದೇ ಎಣ್ಣೆಗಳಿಂದಲೂ ನೋವಿರುವ ಭಾಗಕ್ಕೆ ಲಘುವಾಗಿ ಮಸಾಜ್‌ ಮಾಡಬಹುದು. ನೀಲಗಿರಿ ತೈಲ, ಪೆಪ್ಪರ್‌ಮಿಂಟ್‌ ತೈಲ ಇಲ್ಲವೇ ಲವಂಗದೆಣ್ಣೆಯಂಥ ತೈಲಗಳನ್ನು ಬಳಸುವಾಗ ಜೊತೆಗೆ ನಾಲ್ಕಾರು ಹನಿ ಕೊಬ್ಬರಿ ಎಣ್ಣೆಯನ್ನು ಸೇರಿಸಿಕೊಳ್ಳಿ. ಇದರಿಂದ ಮಸಾಜ್‌ ಮಾಡುವುದು ಸುಲಭವಾಗುತ್ತದೆ. ನೋವಿರುವ ಭಾಗಕ್ಕೆ ರಕ್ತ ಸಂಚಾರ ಹೆಚ್ಚುತ್ತಿದ್ದಂತೆ ನೋವಿನ ತೀವ್ರತೆಯೂ ಕಡಿಮೆಯಾಗುತ್ತದೆ.

ಐಸ್‌ಪ್ಯಾಕ್‌

ನೋವಿಗೆ ಐಸ್‌ಪ್ಯಾಕ್‌ ಸಹ ಪರಿಣಾಮಕಾರಿ. ಉಳಿದ ಮನೆಮದ್ದುಗಳ ಜೊತೆಗೆ, ದಿನಕ್ಕೆ ಮೂರ್ನಾಲ್ಕು ಬಾರಿ ಐಸ್‌ ಹಾಕುವುದರಿಂದ ನೋವಿನ ತೀವ್ರತೆ ಬೇಗನೆ ನಿಯಂತ್ರಣಕ್ಕೆ ಬರುತ್ತದೆ. ತಣ್ಣೀರಿನಲ್ಲಿ ಅದ್ದಿ ಹಿಂಡಿದ ಬಟ್ಟೆಯನ್ನಾದರೂ ನೋವಿರುವ ಭಾಗಕ್ಕೆ ಸುತ್ತಬಹುದು.

ಬದಲಾವಣೆ

ನೋವಿರುವಾಗ ಅತಿ ಎತ್ತರದ ಚಪ್ಪಲಿಗಳನ್ನು ಹಾಕುವುದು, ದಿನದ ಹೆಚ್ಚು ಹೊತ್ತು ನಿಂತುಕೊಂಡಿರುವುದು- ಇಂಥವೆಲ್ಲ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತವೆ. ಆರಾಮವೆನಿಸುವ ಪಾದರಕ್ಷೆಗಳನ್ನು ಮಾತ್ರವೇ ಹಾಕಿ, ಅಲಂಕಾರದತ್ತ ಗಮನ ಬೇಡ. ಸತತವಾಗಿ ನಿಲ್ಲುವ ಅನಿವಾರ್ಯತೆಯಿದ್ದರೆ, ಎತ್ತರದ ಕುರ್ಚಿಗಳನ್ನು ಬಳಸಲು ಯತ್ನಿಸಿ. ತೂಕ ಹೆಚ್ಚಿದ್ದರೆ ಇಳಿಸುವುದು ಸೂಕ್ತ. ಇಷ್ಟಾಗಿಯೂ ಹಿಮ್ಮಡಿ ಮತ್ತು ಪಾದಗಂಟಿನ ನೋವು ಕಡಿಮೆಯಾಗದಿದ್ದರೆ, ಚಳಿಗಾಲ ಮುಗಿದರೂ ನೋವು ಮುಗಿಯದಿದ್ದರೆ ವೈದ್ಯರ ದರ್ಶನ ಅಗತ್ಯವಾಗುತ್ತದೆ.

ಇದನ್ನೂ ಓದಿ: Home Remedies For Cough And Cold: ನೆಗಡಿ, ಕೆಮ್ಮೇ? ಬದಲಾಗುತ್ತಿರುವ ವಾತಾವರಣಕ್ಕೆ ಬೇಕಾದ ಮನೆಮದ್ದುಗಳಿವು

Exit mobile version