Site icon Vistara News

Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

Home Remedy For Cracked Heels

ಒಡೆದ ಹಿಮ್ಮಡಿಗಳಿಗೆ (Home Remedy For Cracked Heels) ಕಾಡುವುದಕ್ಕೆ ಚಳಿಗಾಲದವೇ ಆಗಬೇಕೆಂದಿಲ್ಲ. ಶುಷ್ಕವಾದ ಬಿರುಬೇಸಿಗೆಯಲ್ಲೂ ಹಿಮ್ಮಡಿಗಳು ಬಿರಿದು, ಅತೀವ ನೋವು ಕೊಡಬಹುದು. ಕೆಲವೊಮ್ಮೆ ಎಷ್ಟೇ ಕ್ರೀಮುಗಳನ್ನು ಹಚ್ಚಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಜೊತೆಗೆ, ಬೇಸಿಗೆಯ ದಿನಗಳಲ್ಲಿ ತ್ವಚೆ ಅಂಟಾದಂತಾಗಿ ಅತಿಯಾಗಿ ಕ್ರೀಮುಗಳನ್ನು ಲೇಪಿಸುವುದಕ್ಕೂ ಕಷ್ಟವಾಗುತ್ತದೆ. ಅದನ್ನು ಹಾಗೆಯೇ ಬಿಟ್ಟರೆ ನೋವು ಹೆಚ್ಚಾಗಿ, ಬಿರುಕು ಅತಿಯಾಗಿ ರಕ್ತ ಸೋರಲೂ ಬಹುದು. ಒಡೆದ ಹಿಮ್ಮಡಿಗಳಿಗೆ ಮದ್ದರೆಯುವುದಕ್ಕೆ ಪರಂಪರಾಗತ ಔಷಧಿಯಾಗಿ ಬಳಕೆಯಲ್ಲಿರುವ ವಸ್ತುಗಳ ಪೈಕಿ ಕರ್ಪೂರ ಸಹ ಒಂದು. ಒಣಗಿ ಪುಡಿಯಾಗುವ ಚರ್ಮಕ್ಕೆ ಅಗತ್ಯವಾದ ತೇವವನ್ನು ಒದಗಿಸುವುದರ ಜೊತೆಗೆ, ಇದರ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರ ನಿರೋಧಕ ಗುಣಗಳು ಹಿಮ್ಮಡಿಯ ಆರೈಕೆಗೆ ಪೂರಕವಾಗುತ್ತವೆ. ಮಾತ್ರವಲ್ಲ, ಕರ್ಪೂರದಲ್ಲಿ ಉರಿಯೂತ ಶಾಮಕ ಗುಣಗಳೂ ಇದ್ದು, ಹಿಮ್ಮಡಿಯ ನೋವು, ಊತ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒಡೆದ ಹಿಮ್ಮಡಿಗಳು (Home Remedy For Cracked Heels) ಯಾವುದೇ ಪಾದಗಳನ್ನೂ ಕಾಡಬಹುದು. ಆ ಭಾಗದ ಚರ್ಮ ದಪ್ಪವಾಗಿ, ಒಣಗಿ, ಒರಟಾಗಿ ಬಿರಿಯಲು, ಪುಡಿಯಾಗಲು ಪ್ರಾರಂಭವಾಗುತ್ತದೆ. ಇದಕ್ಕೆ ಆರಂಭದಲ್ಲೇ ಮದ್ದರೆದರೆ ತಹಬಂದಿಗೆ ಬಂದೀತು. ಸ್ವಲ್ಪ ಅಜಾಗ್ರತೆ ತೋರಿದರೂ, ಹೆಜ್ಜೆ ಇಡಲಾಗದಂತೆ ನೋವು ಕಾಡುತ್ತದೆ. ಎಳೆಯರಿಂದ ಹಿಡಿದು ವಯಸ್ಸಾದವರವರೆಗೆ, ಸ್ತ್ರೀ-ಪುರುಷರೆನ್ನದೆ ಯಾರೂ ಈ ತೊಂದರೆಗೆ ತುತ್ತಾಗಬಹುದು. ಒಂದು ಸಮೀಕ್ಷೆಯ ಪ್ರಕಾರ, ಶೇ. ೨೦ರಷ್ಟು ವಯಸ್ಕರಲ್ಲಿ ಈ ಸಮಸ್ಯೆ ಒಂದಿಲ್ಲೊಂದು ಕಾಲದಲ್ಲಿ ಬಾಧಿಸುತ್ತದೆ.

ಕಾರಣಗಳೇನು?

ಎಲ್ಲಕ್ಕಿಂತ ಮುಖ್ಯವಾದ ಕಾರಣವೆಂದರೆ ಹವಾಮಾನ. ಬೇಸಿಗೆಯಲ್ಲಿ ಅತಿಯಾದ ಶುಷ್ಕತೆಗೆ ಈ ತೊಂದರೆ ಎದುರಾದರೆ, ಚಳಿಗಾಲದಲ್ಲಿ ಒಣಹವೆಗೆ ಈ ಅವಸ್ಥೆ ಉಂಟಾಗಬಹುದು. ಮಳೆಗಾಲದಲ್ಲಿ ಮಣ್ಣು ನೀರು ಸೋಕುವುದು ಸಹ ಇರುವ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅದಲ್ಲದೆ, ದೀರ್ಘ ಕಾಲದವರೆಗೆ ನಿಂತು ಕೆಲಸ ಮಾಡುವುದು, ಧೂಳಿಗೆ ತೆರೆದುಕೊಳ್ಳುವುದು, ಸದಾಕಾಲ ಪಾದ ಮುಚ್ಚದಂಥ ಪಾದರಕ್ಷೆಗಳ ಬಳಕೆ, ಬೊಜ್ಜು, ಮಧುಮೇಹ, ಥೈರಾಯ್ಡ್‌ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆಗಳು ಹಿಮ್ಮಡಿಯ ಒಡಕಿಗೆ ಕಾರಣವಾಗುತ್ತವೆ.

ಕರ್ಪೂರ ಹೇಗೆ ಸಹಕಾರಿ?

ಹಿಂದಿನ ಕಾಲದಿಂದಲೂ ಒಡೆದ ಹಿಮ್ಮಡಿಗಳನ್ನು ಗುಣ ಪಡಿಸುವುದಕ್ಕೆ ಕರ್ಪೂರ ಬಳಕೆಯಲ್ಲಿದೆ. ಮೇಲ್ಮೈಗೆ ಇದನ್ನು ಲೇಪಿಸುವುದರಿಂದ ಚರ್ಮ ಮೃದುವಾಗಿ, ತೇವಭರಿತವಾಗಿ, ಒಡೆದು ಬಿರಿದ ಹಿಮ್ಮಡಿ ಕೂಡಿಕೊಳ್ಳುತ್ತದೆ. ಜೊತೆಗೆ, ಬಿರಿದ ಹಿಮ್ಮಡಿಗಳಲ್ಲಿ ಕೆಲವೊಮ್ಮೆ ಸೂಕ್ಷ್ಮ ಗಾಯಗಳಾಗಬಹುದು. ನೆಲದ ಧೂಳು, ಸೂಕ್ಷ್ಮಾಣುಗಳು ಈ ಗಾಯಗಳಲ್ಲಿ ಸೇರಿ, ಯಾವ ಕ್ರೀಮುಗಳನ್ನು ಹಚ್ಚಿದರೂ ಸಮಸ್ಯೆ ಪರಿಹಾರವಾಗದೆ ಉಳಿಯುವ ಸಂದರ್ಭವೇ ಹೆಚ್ಚಾಗುತ್ತದೆ. ಇಂಧ ಸಂದರ್ಭದಲ್ಲಿ ಕರ್ಪೂರದ ಚಿಕಿತ್ಸೆ ಪರಿಣಾಮಕಾರಿ. ಇದರಲ್ಲಿರುವ ಬ್ಯಾಕ್ಟೀರಿಯ ಮತ್ತು ಫಂಗಸ್‌ ವಿರೋಧಿ ಗುಣಗಳು, ಗಾಯದಲ್ಲಿರುವ ಸೋಂಕನ್ನು ಕಡಿಮೆ ಮಾಡುತ್ತವೆ. ಕರ್ಪೂರ ಪ್ರಬಲವಾದ ಉತ್ಕರ್ಷಣ ನಿರೋಧಕ. ಹಾಗಾಗಿಯೇ ಹಲವಾರು ವೇಪರ್‌ ರಬ್‌ಗಳು, ನೋವಿನ ಮುಲಾಮುಗಳಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ. ಇದು ಊತವನ್ನು ಕಡಿಮೆ ಮಾಡಿ, ನೋವನ್ನೂ ಶಮನ ಮಾಡುತ್ತದೆ. ಇದನ್ನು ಒಡೆದ ಹಿಮ್ಮಡಿಗಳಿಗೆ ಹಚ್ಚುವುದರಿಂದ ಅಲ್ಲಿನ ಊತ ಮತ್ತು ನೋವು ಶಮನವಾಗುತ್ತದೆ. ಜೊತೆಗೆ ಹೊಸ ಕೋಶಗಳ ಉತ್ಪತ್ತಿಯನ್ನು ಇದು ಪ್ರೋತ್ಸಾಹಿಸುತ್ತದೆ. ಹಾಗಾಗಿ ತುಂಡಾದ ಚರ್ಮದಲ್ಲಿನ ಕೋಶಗಳು ನಾಶವಾಗಿ, ಹೊಸ ಚರ್ಮ ಮೂಡಿ, ಪಾದ ನಯವಾಗುತ್ತದೆ.

ಇದನ್ನೂ ಓದಿ: Summer Nail Art : ಸಮ್ಮರ್ ಸೀಸನ್​ನಲ್ಲಿ ಟ್ರೆಂಡಿಯಾದ ಕಲ್ಲಂಗಡಿ ಹಣ್ಣಿನ ನೇಲ್ಆರ್ಟ್

ಉಪಯೋಗಿಸುವುದು ಹೇಗೆ?

ಸಾಮಾನ್ಯವಾಗಿ ಕರ್ಪೂರದ ಎಣ್ಣೆ ಇಂಥ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ಆದರೆ ಶುದ್ಧ ಎಣ್ಣೆಯನ್ನು ನೇರವಾಗಿ ಲೇಪಿಸಿದರೆ, ಅದರ ತೀವ್ರತೆಯಿಂದ ಚರ್ಮಕ್ಕೆ ಕಿರಿಕಿರಿ ಆಗಬಹುದು. ಹಾಗಾಗಿ ನಾಲ್ಕಾರು ಹನಿ ಕರ್ಪೂರದ ತೈಲವನ್ನು ಕೊಬ್ಬರಿ ಎಣ್ಣೆ, ಆಲಿವ್‌ ಎಣ್ಣೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಮಿಶ್ರ ಮಾಡಿ, ಬೇಕಾದ ಭಾಗಕ್ಕೆ ಲೇಪಿಸುವುದು ಒಂದು ಕ್ರಮ. ಇದಲ್ಲದೆ, ಉಗುರು ಬಿಸಿಯಾದ ನೀರಿಗೆ ನಾಲ್ಕೆಂಟು ಹನಿ ಕರ್ಪೂರದ ತೈಲವನ್ನು ಬೆರೆಸಿ. ಆ ನೀರಿನಲ್ಲಿ 20 ನಿಮಿಷಗಳ ಕಾಲ ಪಾದವನ್ನು ನೆನೆಸುವುದು ಇನ್ನೊಂದು ಕ್ರಮ. ಇದನ್ನು ವಿವರವಾಗಿ ಹೇಳಬೇಕೆಂದರೆ, ಹಿಮ್ಮಡಿಗಳಿಗೆ ಕರ್ಪೂರದ ತೈಲವನ್ನು ಲೇಪಿಸಿದ 30 ನಿಮಿಷಗಳ ನಂತರ, ಉಗುರು ಬಿಸಿಯಾದ ಸೋಪಿನ ನೀರಿನಲ್ಲಿ 10 ನಿಮಿಷಗಳವರೆಗೆ ಪಾದಗಳನ್ನು ನೆನೆಸಿಡಿ. ನಂತರ ಆ ಬಿರುಕುಗಳನ್ನು ನಯವಾಗಿ ಉಜ್ಜಿ ಸ್ವಚ್ಛಗೊಳಿಸಿ. ಇದರಿಂದ ಬಿರುಕುಗಳು ಶುಚಿಯಾಗಿ, ಕರ್ಪೂರದೆಣ್ಣೆ ಆ ಬಿರುಕುಗಳ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದರ ನಂತರ, ಪಾದಗಳನ್ನು ತೊಳೆದು ಶುಚಿ ಮಾಡಿ. ಸ್ವಚ್ಛವಾದ ಬಟ್ಟೆಯಿಂದ ಒರೆಸಿ, ಒಣಗಿಸಿ. ಈಗ ಕೊಬ್ಬರಿ ಎಣ್ಣೆಯ ಜೊತೆಗೆ ಸ್ವಲ್ಪವೇ ಕರ್ಪೂರದೆಣ್ಣೆ ಬೆರೆಸಿ ಪಾದಗಳಿಗೆ ನಯವಾಗಿ ಉಜ್ಜಿ. ಇದನ್ನು ರಾತ್ರಿ ಮಲಗುವ ಮುನ್ನ ಮಾಡುವುದು ಒಳ್ಳೆಯದು. ನಿಯಮಿತವಾಗಿ ಈ ಚಿಕಿತ್ಸೆಯನ್ನು ಮಾಡಿದಲ್ಲಿ, ಒಡೆದ ಹಿಮ್ಮಡಿಗಳಿಂದ ಮುಕ್ತರಾಗಬಹುದು.

Exit mobile version