Site icon Vistara News

Natural Ways to Balance Hormones: ನೈಸರ್ಗಿಕ ಮಾರ್ಗಗಳಿಂದಲೇ ಹಾರ್ಮೋನುಗಳ ಸಮತೋಲನ ಮಾಡಬಹುದು…ಪ್ರಯತ್ನಿಸಿ

Natural Ways to Balance Hormones

ಹಾರ್ಮೋನುಗಳನ್ನು ಸಮತೋಲನದಲ್ಲಿ ಇರಿಸುವುದು ದೇಹಸ್ವಾಸ್ಥ್ಯಕ್ಕೆ ಅಗತ್ಯವಾದದ್ದು. ಫಲವಂತಿಕೆ, ಮೆದುಳಿನ ಕ್ಷಮತೆ, ಚಯಾಪಚಯ ಸೇರಿದಂತೆ ದೇಹದ ಬಹಳಷ್ಟು ಕೆಲಸಗಳ ಮೇಲೆ ಚೋದಕಗಳು ಪರಿಣಾಮ ಬೀರುತ್ತವೆ. ಚೋದಕಗಳ ಸಮತೋಲನದಲ್ಲಿ ವ್ಯತ್ಯಾಸವಾದರೆ ಸರಿಪಡಿಸುವುದು ಹೇಗೆ? ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ವಿಷಯಗಳನ್ನು ಸರಿಪಡಿಸಿಕೊಳ್ಳುವುದಾದರೂ ಯಾವ ರೀತಿಯಲ್ಲಿ? ಯಾವುದೇ ಔಷಧಗಳನ್ನು ತೆಗೆದುಕೊಳ್ಳಬೇಕಾದರೆ ವೈದ್ಯರ ಸಲಹೆ ಬೇಕೆಬೇಕು. ಆದರೆ ಔಷಧಿಯ ಹೊರತಾಗಿ ಕೆಲವು ನೈಸರ್ಗಿಕ ಉಪಕ್ರಮಗಳ ಮೂಲಕ ಹಾರ್ಮೋನುಗಳ ಸಮತೋಲನಕ್ಕೆ (Natural Ways to Balance Hormones) ಪ್ರಯತ್ನಿಸಬಹುದೇ?

ಎಳೆ ಬಿಸಿಲು

ಬೆಳಗಿನ ಹೊತ್ತಿನಲ್ಲಿ ಆಗಷ್ಟೇ ಮೂಡಿರುವ ಸೂರ್ಯನ ಬಿಸಿಲಿನಲ್ಲಿ 20 ನಿಮಿಷ ನಿಲ್ಲುವುದು ಬಹಳಷ್ಟು ಸಮಸ್ಯೆಗಳಿಗೆ ಸಮಾಧಾನ ಆಗಬಲ್ಲದು. ದೇಹದ ಆಂತರಿಕ ಗಡಿಯಾರ ಅಥವಾ ಸರ್ಕೇಡಿಯನ್‌ ಲಯವನ್ನು ಸರಿಪಡಿಸುವಲ್ಲಿ ಎಳೆ ಬಿಸಿಲು ಮಹತ್ವದ ಪರಿಣಾಮ ಬೀರುತ್ತದೆ. ದೇಹಕ್ಕೆ ಬೇಕಾದಷ್ಟು ಸೆರೋಟೋನಿನ್‌ ಉತ್ಪಾದನೆಗೆ ಎಳೆಬಿಸಿಲು ಸಹಾಯ ಮಾಡುತ್ತದೆ.

ಪ್ರೊಟೀನ್‌ಭರಿತ ಆಹಾರ

ದೇಹದಲ್ಲಿರುವ ಆಗಿರುವ ಹಾನಿಯನ್ನೆಲ್ಲ ಸರಿಪಡಿಸಲು ಅಗತ್ಯವಾಗಿದ್ದು ಪ್ರೊಟೀನ್.‌ ಅದರಲ್ಲೂ ಬೆಳಗಿನ ಉಪಾಹಾರಕ್ಕೆ ಹೆಚ್ಚಿನ ಪ್ರೊಟೀನ್‌ ಸೇವಿಸುವುದು ಮುಖ್ಯ ಎನ್ನುತ್ತಾರೆ ಪೋಷಕಾಂಶ ತಜ್ಞರು. ಅನಗತ್ಯ ಹಸಿವೆಯನ್ನು ನಿಯಂತ್ರಿಸಲು, ಇನ್‌ಸುಲಿನ್‌ ಪ್ರತಿರೋಧಕತೆಯನ್ನು ಕಡಿಮೆ ಮಾಡಲು ಪ್ರೊಟೀನ್‌ಭರಿತ ಆಹಾರ ಬೇಕಾಗುತ್ತದೆ.

ಕೆಫೇನ್‌ ಬೇಡ

ಬೆಳಗಿನ ಖಾಲಿ ಹೊಟ್ಟೆಗೆ ಕೆಫೇನ್‌ ಬೇಡ. ಏಳುತ್ತಿದ್ದಂತೆ ಕಾಫಿ, ಚಹಾ ಸುರಿದುಕೊಳ್ಳುವ ಅಭ್ಯಾಸವಿದ್ದರೆ ಅದನ್ನು ನಿಲ್ಲಿಸಿ. ಹಾಗೊಮ್ಮೆ ಚಹಾ, ಕಾಫಿ ಬೇಕಾದರೆ ಅದನ್ನು ತಿಂಡಿಯ ನಂತರ ಸೇವಿಸಬಹುದೆ ಹೊರತು ಖಾಲಿ ಹೊಟ್ಟೆಗೆ ಇವೆಲ್ಲ ಬೇಡ. ಅದಕ್ಕೂ ಮಿತಿ ಇರಲಿ. ಅದನ್ನು ಹೆಚ್ಚು ಸೇವಿಸುತ್ತಿದ್ದಂತೆ ಸಮಸ್ಯೆಗಳು ಹೆಚ್ಚು ಮುತ್ತಿಕೊಳ್ಳುತ್ತವೆ.

ಖನಿಜಯುಕ್ತ ನೀರು

ದೇಹದಲ್ಲಿ ಅಗತ್ಯ ಖನಿಜಗಳ ಕೊರತೆಯಾದರೆ ಹಾರ್ಮೋನುಗಳ ಏರುಪೇರು ನಿಶ್ಚಿತ. ಕ್ಯಾಲ್ಶಿಯಂ, ಮೆಗ್ನೀಶಿಯಂ, ಪೊಟಾಶಿಯಂ ಮುಂತಾದ ಲವಣಗಳನ್ನು ಹೊಂದಿರುವ ನೀರು ಕುಡಿಯುವುದು ಇದಕ್ಕೆ ಸೂಕ್ತ ಉಪಾಯ. ಇಂಥ ಸರಳ ಪರಿಹಾರಗಳನ್ನು ಪ್ರಯತ್ನಿಸಿ ನೈಸರ್ಗಿಕವಾಗಿಯೇ ಹಾರ್ಮೋನುಗಳನ್ನು ಸಮತೋಲನದಲ್ಲಿ ಇರಿಸಲು ಪ್ರಯತ್ನಿಸಬಹುದು.

ವ್ಯಾಯಾಮ

ಕೆಲವು ಹಾರ್ಮೋನುಗಳ ವ್ಯಾಯಾಮದಿಂದ ವೃದ್ಧಿಸುತ್ತವೆ. ಟೆಸ್ಟೋಸ್ಟೆರಾನ್‌, ಡಿಎಚ್‌ಇಎಇ, ಬೆಳವಣಿಗೆ ಚೋದಕಗಳಿಗೆಲ್ಲ ವ್ಯಾಯಾಮವೆಂದರೆ ಪ್ರೀತಿ. ಹಾಗಾಗಿ ದಿನವೂ 30 ನಿಮಿಷಗಳ ಸಮಯವನ್ನು ದೈಹಿಕ ಚಟುವಟಿಕೆಗೆ ಮೀಸಲಿಡಿ. ನಿಮಗಾಗುವಂಥ ಯಾವ ವ್ಯಾಯಾಮವೂ ಸರಿ, ಇಂಥದ್ದೇ ಬೇಕೆಂದಿಲ್ಲ. ಆದರೆ ವಾರದಲ್ಲಿ ಐದು ದಿನಗಳಾದರೂ ದೈಹಿಕ ಸಕ್ರಿಯತೆ ಅಗತ್ಯ.

ಹುದುಗು ಬಂದ ಆಹಾರ

ನಮ್ಮ ಜೀರ್ಣಾಂಗಗಳಲ್ಲಿರುವ ಬ್ಯಾಕ್ಟೀರಿಯಗಳ ಸಮತೋಲನಕ್ಕೂ ಹಾರ್ಮೋನುಗಳ ಸಮತೋಲನಕ್ಕೂ ನೇರ ನಂಟಿದೆ. ಎಲ್ಲಿಯವರೆಗೆ ಪಚನಾಂಗಗಳ ಆರೋಗ್ಯ ಚೆನ್ನಾಗಿರುತ್ತದೊ ಅಲ್ಲಿಯವರೆಗೆ ಹಾರ್ಮೋನುಗಳ ಮಟ್ಟವೂ ಆರೋಗ್ಯಕರವಾಗಿಯೇ ಇರುವ ಸಂಭವ ಹೆಚ್ಚು. ಮೊಸರು, ಮಜ್ಜಿಗೆ, ಕೆಫಿರ್‌, ಹುದುಗಿಸಿದ ತರಕಾರಿಗಳು (ಅಂದರೆ ಕೊಳೆತಿದ್ದಲ್ಲ!), ಆಲಿವ್‌ಗಳು ಮುಂತಾದವು ನೆರವಾಗುತ್ತವೆ.

ಸ್ಕ್ರೀನ್‌ ಟೈಮ್‌

ಇದನ್ನೀಗ ಕಡಿಮೆ ಮಾಡಬೇಕು ಅಥವಾ ಬಿಟ್ಟರೂ ಸುಖವೇ! ಅದರಲ್ಲೂ ಮಲಗುವುದಕ್ಕಿಂತ ಒಂದು ತಾಸು ಮೊದಲು ಪರದೆಗಳನ್ನು ನೋಡುವುದರಿಂದ ನಿದ್ದೆಯಲ್ಲಿ ಏರುಪೇರಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ನಿದ್ದೆ ಹಾಳಾದರೆ ಮತ್ತೆ ಉಳಿದಿದ್ದೆಲ್ಲ ಹಾಳಾಗಲು ಹೆಚ್ಚು ಸಮಯ ಬೇಡ. ಬದಲಿಗೆ, ನಿದ್ದೆ ಬರಿಸಿಕೊಳ್ಳುವುದಕ್ಕೆ ಪುಸ್ತಕ ಓದುವುದು, ಸಂಗೀತ ಕೇಳುವುದು ನೆರವಾಗಬಹುದು.

ಇದನ್ನೂ ಓದಿ: Milk With Banana Side Effects: ಬಾಳೆಹಣ್ಣನ್ನೂ ಹಾಲನ್ನೂ ಜೊತೆಯಾಗಿ ಸೇವಿಸಬಾರದು, ಯಾಕೆ ಗೊತ್ತೆ?

Exit mobile version