Site icon Vistara News

Nature and health | ಪ್ರಕೃತಿಯ ಜತೆ ಸಮಯ ಕಳೆಯುವುದು ಎನರ್ಜಿ ಬೂಸ್ಟರ್!

nature

ನಿಸರ್ಗದೆಡೆಗೆ ಮಾನವರ ಸೆಳೆತವೇನು ಮತ್ತು ಏಕೆ ಎಂಬ ಬಗ್ಗೆ ಬಹಳಷ್ಟು ವಾದ, ತರ್ಕಗಳು ಚಾಲ್ತಿಯಲ್ಲಿವೆ. ನಿಸರ್ಗದ ಜೊತೆಗಿನ ಒಡನಾಟದಿಂದ ನಮ್ಮ ಕ್ಷೇಮ ಮತ್ತು ಸ್ವಾಸ್ಥ್ಯಕ್ಕೆ ಹೆಚ್ಚಿನ ಒತ್ತು ದೊರೆಯುತ್ತದೆ ಎಂಬ ವಾದವನ್ನು ಹೆಚ್ಚಿನ ಅಧ್ಯಯನದ ಮೂಸೆಯಲ್ಲಿಟ್ಟು ನೋಡಲು ಟೋಕಿಯೊ ವಿಶ್ವವಿದ್ಯಾಲಯದ ವಿಜ್ಞಾನಿಗಳು ಯತ್ನಿಸಿದ್ದಾರೆ.

ನಮ್ಮ ನಿಸರ್ಗ ಮತ್ತು ನಾವು ಬದುಕುವ ಸುತ್ತಮುತ್ತಲ ಪರಿಸರದಿಂದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಹೆಚ್ಚುತ್ತದೆ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಈ ಎಲ್ಲಾ ಆಧ್ಯಯನಗಳು ಹೇಳುವುದಕ್ಕಿಂತ ಹೆಚ್ಚಿನ ಯೋಗಕ್ಷೇಮವನ್ನು ನಿಸರ್ಗದೊಂದಿಗಿನ ನಂಟಿನಲ್ಲಿ ಸಾಧಿಸಲು ಸಾಧ್ಯವಿದೆ ಎಂಬುದನ್ನು ಇತ್ತೀಚೆಗೆ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಟೋಕಿಯೊ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

62 ದೇಶಗಳಲ್ಲಿ ಈಗಾಗಲೇ ಪ್ರಕಟಗೊಂಡಿರುವ 300ಕ್ಕೂ ಹೆಚ್ಚಿನ ಅಧ್ಯಯನ ವರದಿಗಳನ್ನು ಪರಿಶೀಲಿಸಿರುವ ತಜ್ಞರ ತಂಡ, ನಿಸರ್ಗದತ್ತವಾಗಿ ನಮಗೆ ಒದಗುವ ಸಾಂಸ್ಕೃತಿ ಪರಿಸರ ಸೇವೆ (ಸಿಇಎಸ್‌) ಬಗ್ಗೆ, ಅಂದರೆ ಪರಿಸರದಿಂದ ಅಮೂರ್ತವಾಗಿ ದೊರೆಯುವ ಕೊಡುಗೆಯ ಬಗ್ಗೆ ವಿಸ್ತಾರವಾಗಿ ಸಂಶೋಧಿಸಿದೆ. ಈವರೆಗಿನ ಅಧ್ಯಯನಗಳಲ್ಲಿ ಗಮನಿಸಿದ್ದಕ್ಕಿಂತ ಹೆಚ್ಚಿನ ಮಹತ್ವ ಮಾನವ-ನಿಸರ್ಗ ಸಂಬಂಧಕ್ಕಿದೆ ಎಂದು ಟೋಕಿಯೊ ವಿ‍ಶ್ವವಿದ್ಯಾಲಯದ ಪ್ರಾಧ್ಯಾಪಕ ಅಲೆಕ್ಸಾಂದ್ರೋಸ್‌ ಗಾಸ್ಪರಾತೋಸ್‌ ಹೇಳಿದ್ದಾರೆ.‌

ಇದನ್ನೂ ಓದಿ: ತೂಕ ಇಳಿಸಿಕೊಳ್ಳುವ ಸವಾಲು: ಬೆಳಗಿನ ಉಪಾಹಾರ ಬೇಕೋ? ಬೇಡವೋ?

ಏನು ಲಾಭ?: ಈವರೆಗಿನ ಅಧ್ಯಯನಗಳಲ್ಲಿ ದೈಹಿಕ-ಮಾನಸಿಕ ಸ್ವಾಸ್ಥ್ಯ, ಸಾಮಾಜಿಕ ಸಂಸರ್ಗಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಆದರೆ ಇತ್ತೀಚಿನ ವರದಿಯಲ್ಲಿ ಇನ್ನಷ್ಟು ವಿಷಯಗಳು ಮುನ್ನೆಲೆಗೆ ಬಂದಿವೆ.

· ರಚನಾತ್ಮಕ ಆಯಾಮ: ಪ್ರಕೃತಿಯ ಒಡನಾಟದಿಂದ ವ್ಯಕ್ತಿಗಳ ವರ್ತನೆ, ಚಟುವಟಿಕೆ, ಮೌಲ್ಯಗಳು, ಮಾನಸಿಕ ಸ್ಥಿತಿ ಮುಂತಾದವುಗಳ ಮೇಲೆ ಪೂರಕ ಪರಿಣಾಮ.

· ತೃಪ್ತ ಮನಸ್ಥಿತಿ: ನಿಸರ್ಗದ ಒಡನಾಟದಿಂದ ಅಗತ್ಯಗಳು ಮತ್ತು ನಿರೀಕ್ಷೆಗಳು ಫಲಿಸಿತೆಂಬ ತೃಪ್ತ ಮನೋಭಾವ

· ಸಾಂಸರ್ಗಿಕ ಪ್ರಯೋಜನ: ನಿಸರ್ಗದ ಮಡಿಲಲ್ಲಿ ಸಾಮಾಜಿಕ ಸಂಬಂಧಗಳ ಸುಧಾರಣೆ

· ಆಧ್ಯಾತ್ಮಿಕ ಉನ್ನತಿ: ನಿಸರ್ಗದ ಒಡಲಲ್ಲಿ ಆಧ್ಯಾತ್ಮಿಕ ಸಾಧನೆಗಳಿಗೆ ಸೂಕ್ತ ಪ್ರೇರಣೆ

ಇದಾವುದೂ ಅಚ್ಚರಿ ಹುಟ್ಟಿಸುವ, ಹೊಸ ವಿಷಯಗಳೇನಲ್ಲ. ಆದರೆ ಈ ಬಗ್ಗೆ ಸಂಘಟಿತವಾದ ಮಾಹಿತಿಯ ಕೊರತೆಯಿತ್ತು ಎಂಬುದು ಅಧ್ಯಯನಕಾರರ ಅಂಬೋಣ. ಪರಿಸರದ ಜೊತೆಗಿನ ನಂಟನ್ನು ಯಾವುದೇ ರೀತಿಯಲ್ಲಿ ಅಂಟಿಸಿಕೊಳ್ಳುವುದರಿಂದಲೂ ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ಉದಾ, ಕಾಡಿನಲ್ಲಿ ಸುಮ್ಮನೆ ಸುತ್ತುವುದು, ಸಮುದ್ರ ದಂಡಗಳನ್ನು ಶುಚಿಗೊಳಿಸುವುದು, ಹೊಸ ಸ್ಥಳವನ್ನು ತನ್ನಷ್ಟಕ್ಕೇ ಸುತ್ತಾಡುವುದು, ಕುಳಿ ತೋಡಿ ಗಿಡ ನೆಡುವುದು…ಹೀಗೆ ಯಾವುದಾದರೂ ಚಟುವಟಿಕೆಗಳಿರಬಹುದು.

ʻಮಾನವರ ಸ್ವಾಸ್ಥ್ಯಕ್ಕೆ ನಿಸರ್ಗದೊಂದಿಗಿನ ನಂಟು ಬಹಳಷ್ಟು ಅಮೂರ್ತ ಕೊಡುಗೆಯನ್ನು ನೀಡುತ್ತದೆ ಎಂಬುದು ನಿರ್ವಿವಾದಿತ. ಆದರೆ ಇದು ಸಂಭವಿಸುವ ಸ್ವರೂಪದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಅಧ್ಯಯನದ ಸ್ವರೂಪಗಳಲ್ಲಿನ ಭಿನ್ನತೆ, ಭೌಗೋಳಿಕ ಮತ್ತು ನೈಸರ್ಗಿಕ ಪರಿಸರಗಳಲ್ಲಿನ ವ್ಯತ್ಯಾಸ…ಇಂಥ ಹಲವು ಕಾರಣಗಳಿದ್ದವು. ಇದಲ್ಲದೆ, ಜನರ ಹಿನ್ನೆಲೆ (ಲಿಂಗ, ವಯಸ್ಸು, ಆದಾಯ, ವಿದ್ಯೆ), ನೈಸರ್ಗಿಕ ಲಕ್ಷಣಗಳು (ಒಣಭೂಮಿ, ಮಲೆನಾಡು), ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಯಾಮಗಳು, ವೈಯಕ್ತಿಕ ಆಯ್ಕೆಗಳೆಲ್ಲ ಅಧ್ಯಯನಕ್ಕೆ ಭಿನ್ನ ಪ್ರಭಾವಳಿಯನ್ನೇ ಒದಗಿಸುತ್ತವೆ ಎಂಬುದು ಅಧ್ಯಯನಕಾರರ ಅಭಿಪ್ರಾಯ.

ಇದನ್ನೂ ಓದಿ: Sleep secret | ಇಷ್ಟಿದ್ದರೆ ದೇಹಕ್ಕೊಂದು ನೆಮ್ಮದಿಯ ಗುಡ್‌ ನೈಟ್‌!

ಎಲ್ಲವೂ ಪೂರಕವಲ್ಲ!: ಹಾಗಂತ ನಿಸರ್ಗದ ನಂಟಿನಿಂದ ಒದಗಿಬರುವುದೆಲ್ಲಾ ಬದುಕಿಗೆ ಪೂರಕವಾದ ಅಂಶಗಳೇ ಎನ್ನುವ ಹಾಗಿಲ್ಲವಂತೆ! ಉದಾ, ಸುಂದರ ನೈಸರ್ಗಿಕ ತಾಣಗಳಲ್ಲಿ ಪ್ರವಾಸಿಗಳ ದಂಡು ಹೆಚ್ಚಾದರೆ, ಪ್ರವಾಸಿಗರಿಗೆ ಸಂತೋಷ ಮತ್ತು ಅಲ್ಲಿನ ವ್ಯಾಪಾರ ವಹಿವಾಟಿಗೆ ಅನುಕೂಲ ಎಂಬುದು ನಿಜ. ಆದರೆ ಸ್ಥಳೀಯರಿಗೆ ಈ ಗದ್ದಲದಿಂದಾಗಿ ಶಾಂತಿ-ಸೌಖ್ಯ ಕಳೆದುಕೊಂಡಂತಾಗುವ ಸಾಧ್ಯತೆ ಇದೆ. ಹಾಗಂತ ಹೆಚ್ಚಿನವು ಪೂರಕ ಫಲಿತಾಂಶಗಳಾದರೂ, ಇಂಥ ಕೆಲವು ಸಾಧ್ಯತೆಗಳು ಇಲ್ಲದಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಎಷ್ಟೊತ್ತು ಇರಬೇಕು?: ದಿನದ ವ್ಯಸ್ತ ಬದುಕಿನಲ್ಲಿ ಬಹಳ ಹೊತ್ತು ನಿಸರ್ಗದೊಂದಿಗೆ ಇರಲು ಯಾರಿಗೂ ಸಾಧ್ಯವಿಲ್ಲ. ಆದರೆ ಇಂಥ ಲಾಭಗಳನ್ನು ಪಡೆಯಲು ಇಷ್ಟು ಹೊತ್ತು ಪ್ರಕೃತಿಯೊಂದಿಗೆ ಕಳೆಯಬೇಕು ಎಂಬ ಮಾನದಂಡವೇನಾದರೂ ಇದೆಯೇ? ಒಂದು ಅಧ್ಯಯನದ ಪ್ರಕಾರ, ವಾರವೊಂದಕ್ಕೆ ೧೨೦ ನಿಮಿಷಗಳಷ್ಟು ಪ್ರಕೃತಿಯೊಂದಿಗಿನ ಸಾಹಚರ್ಯ ಅಪೇಕ್ಷಣೀಯ. ಈ ೧೨೦ ನಿಮಿಷಗಳನ್ನು ಸಣ್ಣ-ಸಣ್ಣ ಅವಧಿಗಳನ್ನಾಗಿ ವಿಂಗಡಿಸಿಕೊಳ್ಳಬಹುದು. ಹಾಗಿಲ್ಲದಿದ್ದರೆ ದಿನಕ್ಕೆ ೨೦ ನಿಮಿಷಗಳ ಅವಧಿ ನೀಡಿದರೆ ಸಾಕು. ಇದೂ ಆಗುವುದಿಲ್ಲವೇ? ಎಷ್ಟಾಗುತ್ತದೆಯೋ ಅಷ್ಟು!

Exit mobile version