Site icon Vistara News

How Much Caffeine Is Too Much: ದಿನಕ್ಕೆಷ್ಟು ಬಾರಿ ಟೀ-ಕಾಫಿ ಕುಡಿಯಬಹುದು?

How Much Caffeine Is Too Much

ದಿನಕ್ಕೆ ಎಷ್ಟು ಕೆಫೇನ್‌ ಸೇವಿಸುತ್ತೇವೆ ನಾವು? ಸುಮ್ಮನೆ ಅಂದಾಜು ಮಾಡಿದರೆ, ಬೆಳಗಿನ ಹೊತ್ತಿನ ಕಾಫಿ ಅಥವಾ ಚಹಾ, ನಡುಬೆಳಗಿಗೆ ಚಾ/ಕಾಫಿಯದ್ದೊಂದು ಹೆಚ್ಚುವರಿ ಗುಟುಕು, ಸಂಜೆಯ ಹೊತ್ತಿಗೂ ಇವೇ ಬೇಕಲ್ಲ, ರಾತ್ರಿ ನಿದ್ದೆಗೆಡುವವರಾದರೆ ಅಲ್ಲೊಂದು ಡೋಸ್‌ ಬೇಕಾದೀತು, ವ್ಯಾಯಾಮದ ಉತ್ಸಾಹಿಗಳಾದರೆ ನಡುವಲ್ಲೊಂದು ಎನರ್ಜಿ ಡ್ರಿಂಕ್‌, ದೋಸ್ತರ ಜೊತೆ ಹರಟುವಾಗ ಜೊತೆಗೊಂದು ಸಾಫ್ಟ್‌ ಡ್ರಿಂಕ್‌, ಚಾಕಲೇಟ್‌ ಪ್ರಿಯರಾದರೆ ಅದೂ ಒಂದು… ಈ ಪಟ್ಟಿಯಿಂದ ದಿನಕ್ಕೆ ಎಷ್ಟು ಕೆಫೇನ್‌ ಸೇವಿಸುತ್ತೇವೆ ನಾವು ಎಂಬುದು ನಮಗೇ ಅಂದಾಜಾಗುವುದು ಕಷ್ಟವಲ್ಲ. ಹಾಗಾದರೆ ಕೆಫೇನ್‌ ಸೇವನೆಯ ಮಿತಿ ಎಷ್ಟು (How much caffeine is too much)?
ನಿದ್ದೆ ಮತ್ತು ಆರಾಮವನ್ನು ತರುವ ಅಡನೋಸಿನ್‌ ಎಂಬ ನರ ಸಂವೇದಕವನ್ನು ತಡೆಯುವ ಮೂಲಕ, ಮೆದುಳಿನ ಚುರುಕುತನ ಮತ್ತು ಏಕಾಗ್ರತೆಯನ್ನು ಕೆಫೇನ್‌ ಹೆಚ್ಚಿಸುತ್ತದೆ. ಇದು ಮೆದುಳನ್ನು ಮಾತ್ರವೇ ಅಲ್ಲ, ದೇಹದ ಅಂಗಾಂಗಗಳನ್ನೆಲ್ಲ ಚುರುಕಾಗಿಸುತ್ತದೆ. ಹಾಗಾಗಿಯೇ ಒತ್ತಡ ಹೆಚ್ಚಿದಾಗ, ತೀರ ಆಯಾಸವಾದಾಗ, ತಲೆ ನೋವು ಕಾಡುತ್ತಿದ್ದರೆ ಒಂದು ಸ್ಟ್ರಾಂಗ್‌ ಕಾಫಿ/ ಚಹಾ ನಮ್ಮ ಶಕ್ತಿಯನ್ನು ಹೆಚ್ಚಿಸಬಲ್ಲದು. ಸಮಸ್ಯೆ ಇರುವುದು ಅಲ್ಲಿಯೇ. ಇದೇನು ದೇಹದಲ್ಲಿ ಎಲ್ಲವನ್ನೂ ಸರಿ ಮಾಡುವಂಥ ಮಾಂತ್ರಿಕ ಪೇಯವಲ್ಲ. ಹೆಚ್ಚಾದರೆ ಕೆಫೇನ್‌ ಸಹ ಅಡ್ಡ ಪರಿಣಾಮಗಳನ್ನು ಖಂಡಿತವಾಗಿ ಉಂಟು ಮಾಡುತ್ತದೆ. ಹಾಗಾಗಿ ಮಾರ್ಚ್‌ ತಿಂಗಳನ್ನು ಕೆಫೇನ್‌ ಜಾಗೃತಿ ಮಾಸ ಎಂದು ಕರೆಯಲಾಗಿದೆ.

ಉಪಯೋಗವೇನು?

ದೇಹ ಮತ್ತು ಮೆದುಳನ್ನು ಕೆಫೇನ್‌ ಜಾಗೃತ ಸ್ಥಿತಿಯಲ್ಲಿ ಇರಿಸುತ್ತದೆ ಎಂಬುದನ್ನು ಅನುಭವದಿಂದಲೇ ಕಂಡುಕೊಂಡಿರುತ್ತೇವೆ. ಇದಲ್ಲದೆ, ಖಿನ್ನತೆಯಂಥ ಕೆಲವು ಮಾನಸಿಕ ತೊಂದರೆಗಳಿಗೆ ಇದು ಉಪಶಮನ ನೀಡಬಲ್ಲದು. ಅಲ್‌ಜೈಮರ್ಸ್‌ ಮತ್ತು ಪಾರ್ಕಿನ್ಸನ್‌ ರೋಗಿಗಳಲ್ಲಿ ಅಲ್ಪ ಪ್ರಮಾಣದ ಕೆಫೇನ್‌ ಉತ್ತಮ ಪ್ರಚೋದನೆಯನ್ನು ನೀಡಬಲ್ಲದು. ಅಥ್ಲೀಟ್‌ಗಳ ಕ್ಷಮತೆಯನ್ನು ಹೆಚ್ಚಿಸುವುದಕ್ಕೂ ನೆರವು ನೀಡಬಹುದು.
ಮಿತ ಪ್ರಮಾಣದಲ್ಲಿ ಇದನ್ನು ಸೇವಿಸುವುದರಿಂದ ಹಸಿವೆಯನ್ನು ಕಡಿಮೆ ಮಾಡಿ ತೂಕ ಇಳಿಸುವುದಕ್ಕೆ ಮತ್ತು ಯಕೃತ್‌, ಜೀರ್ಣಾಂಗಗಳನ್ನು ಚುರುಕು ಮಾಡುವುದಕ್ಕೆ ನೆರವಾಗುತ್ತದೆ. ಅಧ್ಯಯನಗಳ ಪ್ರಕಾರ, ಅಲ್ಪ ಪ್ರಮಾಣದಲ್ಲಿ ಕೆಫೇನ್‌ ಸೇವಿಸುವುದರಿಂದ ಶೇ. 13ರಷ್ಟು ಚಯಾಪಚಯವನ್ನು ಹೆಚ್ಚಿಸಬಹುದು; ಈ ಮೂಲಕ ಕೊಬ್ಬು ಕರಗಿಸಲೂಬಹುದು. ಈ ಕರಗಿದ ಕೊಬ್ಬನ್ನು ವ್ಯಾಯಾಮದಂಥ ಚಟುವಟಿಕೆಯಲ್ಲಿ ತೊಡಗಿಸಿದರೆ ಹೆಚ್ಚಿನ ಪ್ರಯೋಜನ ಒದಗಬಹುದು.

ಹಾನಿಯೇನು?

ಈಗ ಅದನ್ನೂ ತಿಳಿದುಕೊಳ್ಳಬೇಕಲ್ಲ. ದೊಡ್ಡ ಸಮಸ್ಯೆಯೆಂದರೆ ನಿದ್ರಾಹೀನತೆ. ನಿದ್ದೆ ಹಾಳಾಗುವುದರಿಂದ ಆರೋಗ್ಯಕ್ಕೆ ಸರಣಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಖಿನ್ನತೆಯೂ ಗಂಟು ಬೀಳುತ್ತದೆ. ಒತ್ತಡ ಹೆಚ್ಚುತ್ತದೆ. ಇದರಿಂದ ಹೃದಯದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ತಲೆ ಸುತ್ತು, ಬೆವರುವುದು, ಕೈ ನಡುಗುವುದು ಸಾಮಾನ್ಯವಾಗುತ್ತದೆ. ಜೀರ್ಣಾಂಗಗಳ ಗತಿಯಂತೂ… ಅಯ್ಯೋ ಪಾಪ! ಆಸಿಡಿಟಿ, ಎದೆಯುರಿಗಳು ನಿತ್ಯಸತ್ಯಗಳಾಗುತ್ತವೆ. ಎಲ್ಲಕ್ಕಿಂತ ದೊಡ್ಡ ಸಮಸ್ಯೆಯೆಂದರೆ ಕೆಫೇನ್‌ ವ್ಯಸನವಾಗಬಲ್ಲದು. ಇದಿಲ್ಲದಿದ್ದರೆ ಸಾಧ್ಯವೇ ಇಲ್ಲ ಎನ್ನುವಂತಾಗುವುದು ಚಟವನ್ನು ಅಂಟಿಸಿಕೊಂಡಂತೆ.

ಮಿತಿ ಎಷ್ಟು?

ಹಾಗಾದರೆ ಎಷ್ಟು ಕೆಫೇನ್‌ ಮಿತಿ? ಎಷ್ಟಾದರೆ ಅತಿ? ದಿನಕ್ಕೆ 200 ಮಿಲಿಗ್ರಾಂ ಕೆಫೇನ್‌ ಅಂಶ ಮೀರದಂತೆ ಎಚ್ಚರ ವಹಿಸುವುದು ಮುಖ್ಯ. ಒಂದು ಅಂದಾಜಿಗೆ ಹೇಳುವುದಾದರೆ, ದಿನಕ್ಕೆ ಮೂರು ಕಪ್‌ ಕೆಫೇನ್‌ ಮಿತಿಯನ್ನು ಇರಿಸಿಕೊಳ್ಳಿ. ಅದಕ್ಕಿಂತ ಹೆಚ್ಚಾದರೆ ಅಡ್ಡ ಪರಿಣಾಮಗಳು ಗೋಚರಿಸಬಹುದು, ಆರೋಗ್ಯ ಸಮಸ್ಯೆಗಳು ತಲೆದೋರಬಹುದು.
ಹಾಗಾಗಿ ಕೆಫೇನ್‌ ಪೇಯಗಳ ಬದಲಿಗೆ ಡಿಕ್ಯಾಫ್‌ ಪೇಯಗಳ ಆಯ್ಕೆಯಿದ್ದರೆ, ಅದನ್ನೇ ಕುಡಿಯಿರಿ. ಕೆಫೇನ್‌ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡುತ್ತಾ ಬನ್ನಿ. ಇದ್ದಕ್ಕಿದ್ದಂತೆ ನಿಲ್ಲಿಸಿದರೆ ತಲೆನೋವಿನಂಥ ಲಕ್ಷಣಗಳು ಕಾಣಬಹುದು. ಆಗ ಮತ್ತೆ ಕಾಫಿ-ಟೀ ಕುಡಿಯುವ ಹಂಬಲವಾಗುತ್ತದೆ. ಹರ್ಬಲ್‌ ಚಹಾಗಳು, ಗ್ರೀನ್‌ ಟೀ ಮುಂತಾದವು ಹೆಚ್ಚು ಆರೋಗ್ಯಕರ ಆಯ್ಕೆಗಳು. ಹೆಚ್ಚು ನೀರು ಕುಡಿದು, ದೇಹಕ್ಕೆ ಮರುಪೂರಣ ಮಾಡಿ. ಬೆಳಗ್ಗೆ ಎದ್ದ ತಕ್ಷಣ ಮೂರು ತಾಸುಗಳವರೆಗೆ ಹಾಗೂ ರಾತ್ರಿ ಮಲಗುವ ಮೂರು ತಾಸಿನ ಮುನ್ನ ಕೆಫೇನ್‌ ಬೇಡ. ಇದರಿಂದ ನಿದ್ದೆಗೆ ಮತ್ತು ಜೀರ್ಣಾಂಗಗಳಿಗೆ ಆಗುವ ತೊಂದರೆಯನ್ನು ಕಡಿಮೆ ಮಾಡಬಹುದು.

Exit mobile version