ಉಪ್ಪು ಎಂಬ ವಸ್ತು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಉಪ್ಪಿಲ್ಲದೆ ಒಂದು ದಿನವನ್ನು ದೂಡುವುದು ಕೂಡಾ ಕಷ್ಟವೇ ಸರಿ. ಉಪ್ಪಿಗಿಂತ ಬೇರೆ ರುಚಿಯೇ ಇಲ್ಲ ಎಂದು ಹಿರಿಯರು ಹೇಳಿದ್ದು ಇದಕ್ಕಾಗಿಯೇ. ಉಪ್ಪಿನ ರುಚಿ, ಉಪ್ಪು ಹಾಕಿದ ಆಹಾರದ ಜೊತೆಗಿದ್ದರೆ ತಿಳಿದೀತು. ಉಪ್ಪಿಲ್ಲದ ಊಟ ನೀರಸವಾಗಿ, ಬದುಕೇ ವ್ಯರ್ಥವಾಗಿ ಕಂಡೀತು. ಇಂತಹ ಉಪ್ಪು ನಮಗೆ ನಿತ್ಯ ಜೀವನದಲ್ಲಿ ಕೇವಲ ಊಟಕ್ಕೆ, ಆಹಾರಕ್ಕೆ ಮಾತ್ರವೇ ಅಲ್ಲ, ಹಲವಾರು ಕೆಲಸಗಳಿಗೂ ಸಹಾಯ ಮಾಡುತ್ತದೆ. ವಸ್ತುಗಳನ್ನು ಶುದ್ಧವಾಗಿ ತೊಳೆಯಲು ಉಪ್ಪು ಕೆಲಸಕ್ಕೆ ಬರುತ್ತದೆ. ಆಹಾರವನ್ನು ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸಿಡುವಲ್ಲಿಯೂ ಉಪ್ಪು ಬಹುಮುಖ್ಯ ಪಾತ್ರ ವಹಿಸುತ್ತದೆ. ಉಪ್ಪಿನಲ್ಲಿರುವ ಸೋಡಿಯಂ ಹಾಗೂ ಇತರ ಖನಿಜಾಂಶಗಳು ನಮ್ಮ ದೇಹಕ್ಕೆ ಪೋಷಣೆಯನ್ನು ಒದಗಿಸುತ್ತದೆ. ಇಂತಹ ಉಪ್ಪು ಇಂದು ಅನೇಕ ಇತರ ಆಹಾರಗಳ ಮೂಲಕವೂ ನಮ್ಮ ದೇಹ ಸೇರುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ನಾವು ಉಪ್ಪನ್ನು ನಮ್ಮ ದೇಹಕ್ಕೆ ನೀಡುತ್ತಿದ್ದೇವೆ. ಹೊರಗೆ ಪ್ಯಾಕೆಟ್ಟುಗಳಲ್ಲಿ ದೊರಕುವ ಕುರುಕಲು ಸೇರಿದಂತೆ ನಾನಾ ಆಹಾರ ವಸ್ತುಗಳಲ್ಲಿ ಇಂದು ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಇರುತ್ತದೆ. ಹೀಗಾಗಿ ನಮ್ಮ ಬದಲಾದ ಆಹಾರ ಶೈಲಿಯ ಪರಿಣಾಮವಾಗಿ ಇಂದು ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಸೇರುವ ಮೂಲಕ ಇದರ ವ್ಯತಿರಿಕ್ತ ಪರಿಣಾಮಗಳನ್ನೂ ನಾವು ಎದುರಿಸುತ್ತಿದ್ದೇವೆ. ಹೃದ್ರೋಗ, ಹೈಪರ್‌ಟೆನ್ಶನ್ ಸೇರಿದಂತೆ ಹಲವು ಸಮಸ್ಯೆಗಳು ಸಣ್ಣ ವಯಸ್ಸಿನಲ್ಲೇ ಎಡತಾಕುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಒಬ್ಬ ಆರೋಗ್ಯವಂತ ದಿನಕ್ಕೆ ೫ ಗ್ರಾಂಗಿಂತ ಹೆಚ್ಚು ಸೋಡಿಯಂ ಸೇವಿಸಬಾರದು. ಐಸಿಎಂಆರ್ ಹೇಳುವಂತೆ ಒಬ್ಬನಿಗೆ ಪ್ರತಿನಿತ್ಯ ೧.೧ರಿಂದ ೩.೩ ಗ್ರಾಂ ಸೋಡಿಯಂ ಅಥವಾ ೨.೮ರಿಂದ ೮.೩ ಗ್ರಾಂ ಸೋಡಿಯಂ ಕ್ಲೋರೈಡ್ ಅಗತ್ಯವಿದೆ. ಆದರೆ, ಸದ್ಯ ನಾವೆಲ್ಲರೂ ನಮ್ಮ ದೇಹಕ್ಕೆ ನೀಡುತ್ತಿರುವ ಸೋಡಿಂ ಇದರ ದುಪ್ಪಟ್ಟಿದೆ. ಆಧುನೀಕರಣ, ಆಧುನಿಕ ಆಹಾರ ಶೈಲಿಯ ಪರಿಣಾಮದಿಂದ ನಾವು ನಮ್ಮ ದೇಹಕ್ಕೆ ಅಗತ್ಯವಿರುವ ಸೋಡಿಯಂಗಿಂತ ಹೆಚ್ಚೇ ಸೋಡಿಯಂ ತಿನ್ನುವ ಕಾರಣ ಈ ಬಗ್ಗೆ ನಾವು ಗಂಭೀರವಾಗಿ ಯೋಚನೆ ಮಾಡಬೇಕಿದೆ.
ಹಾಗಾದರೆ, ಸೋಡಿಯಂ ನಮ್ಮ ದೇಹಕ್ಕೆ ಅನಗತ್ಯವಾಗಿ ಸೇರದಂತೆ ಮಾಡಲು ನಾವು ಯಾವ ಕ್ರಮ ಕೈಗೊಳ್ಳಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಈ ಕೆಲವು ಕ್ರಮಗಳನ್ನು ನೀವು ಗಂಭೀರವಾಗಿ (How Much Salt Is Too Much) ಪರಿಗಣಿಸಬಹುದು.
- ಬೇಳೆಕಾಳುಗಳಲ್ಲಿ ಸೋಡಿಯಂ ಅತ್ಯಂತ ಕಡಿಮೆ ಇದೆ. ಇವುಗಳಲ್ಲಿ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಪ್ರೊಟೀನ್, ಪೊಟಾಶಿಯಂ, ಪಾಸ್ಪರಸ್ ಹಾಗೂ ನಾರಿನಂಶವಿದೆ. ಹಾಗಾಗಿ, ಬೇಳೆ ಕಾಳುಗಳ ಸೇವನೆಯನ್ನು ಹೆಚ್ಚು ಮಾಡಿ. ಮಾಂಸ ಸೇವಿಸುವವರಾಗಿದ್ದರೆ, ಸಂಸ್ಕರಿಸಿದ ಮಾಂಸಕ್ಕೆ ಬದಲಾಗಿ ತಾಜಾ ಮಾಂಸವನ್ನೇ ಬಳಸಿ.
- ತಾಜಾ ಹಾಲು, ಪನೀರ್, ಮೊಸರು ಇವುಗಳಲ್ಲಿ ಕಡಿಮೆ ಸೋಡಿಯಂ ಇರುತ್ತದೆ. ಸಂಸ್ಕರಿಸಿದ ಚೀಸ್ನಲ್ಲಿ ಹೆಚ್ಚು ಸೋಡಿಯಂ ಇರುತ್ತದೆ.
- ಹಣ್ಣುಗಳು ಹಾಗೂ ತರಕಾರಿಗಳ ಪೈಕಿ, ಆಯಾ ಕಾಲಕ್ಕೆ ದೊರೆಯುವುದನ್ನೇ ಹೆಚ್ಚು ಬಳಸಿ. ಋತುಮಾನಕ್ಕೆ ಅನುಗುಣವಾಗಿ ದೊರೆಯುವ ತರಕಾರಿ ಹಣ್ಣುಗಳನ್ನು ಸೇವನೆ ಮಾಡಿ. ತಾಜಾ ಆಹಾರಗಳಲ್ಲಿ ಸೋಡಿಯಂ ಕಡಿಮೆ ಇರುತ್ತದೆ. ಸೋಡಿಯಂ ಕಡಿಮೆ ಇರುವ ಆಹಾರಗಳಲ್ಲಿ ಸಹಜವಾಗಿಯೇ ಪೊಟಾಶಿಯಂ ಹೆಚ್ಚು ಇರುತ್ತದೆ. ಪೊಟಾಶಿಯಂ ಹೈಪರ್ ಟೆನ್ಶನ್ ಸೇರಿದಂತೆ ಹಲವು ಸಮಸ್ಯೆಗೆ ಆರೋಗ್ಯಕರವಾದ ಪೋಷಕಾಂಶವಾಗಿದೆ. ಒಣಹಣ್ಣುಗಳನ್ನೂ ತಿನ್ನಬಹುದು. ಆದರೆ, ಒಣಹಣ್ಣುಗಳನ್ನು ಸಂಸ್ಕರಿಸಿ ಮಾಡಿದ ಆರೋಗ್ಯಕರದ ಹೆಸರಿನಲ್ಲಿ ಉಪ್ಪು ಸಕ್ಕರೆ ಸೇರಿಸಿದ ಪ್ಯಾಕೆಟ್ಟುಗಳ ಆಹಾರಗಳನ್ನು ಕಡಿಮೆ ಮಾಡಿ. ತಾಜಾ ಒಣಹಣ್ಣುಗಳಾಗಿದ್ದರೆ ಒಳ್ಳೆಯದೇ. ಟೊಮೆಟೋ ಕೆಚಪ್ಗಳು, ಸಾಸ್ಗಳು, ಡಿಪ್ಗಳು ಇತ್ಯಾದಿಗಳ ಬಳಕೆ ಆದಷ್ಟು ಕಡಿಮೆ ಮಾಡಿ.
- ಪುಡಿ ಉಪ್ಪಾದರೂ ಸರಿ, ಹಿಮಾಲಯನ್ ಕಲ್ಲುಪ್ಪಾದರೂ ಸರಿ, ಉಪ್ಪು ಉಪ್ಪೇ. ಅದು ಅತಿಯಾಗಬಾರದು. ಹೀಗಾಗಿ, ಬಹುಮುಖ್ಯವಾಗಿ ನಿಯಂತ್ರಣ ಸಾಧಿಸಬೇಕಾದ ಆಹಾರ ಎಂದರೆ ಅದು ಕುರುಕಲು ತಿಂಡಿಗಳು. ಹೊರಗೆ ದೊರೆಯುವ ಚಿಪ್ಸ್ ಸೇರಿದಂತೆ ನಾನಾ ಬಗೆಯ ಆಕರ್ಷಕ ಕುರುಕಲು ತಿಂಡಿಗಳ ಬಳಕೆ ಆದಷ್ಟೂ ಕಡಿಮೆ ಮಾಡಿ. ಇದನ್ನು ನಿಯಂತ್ರಿಸಿದರೆ ನಿಮ್ಮ ದೇಹಕ್ಕೆ ಅಧಿಕವಾಗ ಸೇರುವ ಉಪ್ಪಿನ ಪ್ರಮಾಣ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬರುತ್ತದೆ. ಹಾಗಂತ ಯಾವುದಕ್ಕೂ ಉಪ್ಪು ಹಾಕದೆ ತಿನ್ನಬೇಕಾಗಿಲ್ಲ. ಅಗತ್ಯ ಪ್ರಮಾಣದ ಉಪ್ಪು ದೇಹಕ್ಕೆ ಬೇಕೇ ಬೇಕು ಎಂಬುದೂ ನೆನಪಿನಲ್ಲಿರಲಿ.