ವ್ಯಾಯಾಮವೆಂಬುದು ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗವಾಗಿದ್ದರೆ, ಅದಕ್ಕೆ ಪೂರಕವಾದ ಉತ್ತಮ ಆಹಾರ ಕೂಡಾ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ಎಷ್ಟೇ ಈ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೂ ಹಲವು ಮಂದಿಯ ಸಮಸ್ಯೆ ಎಂದರೆ ಕೊಲೆಸ್ಟೆರಾಲ್. ಬಹಳಷ್ಟು ಮಂದಿ ಕೊಲೆಸ್ಟೆರಾಲ್ ಹೆಸರು ಹೇಳುತ್ತಿದ್ದಂತೆಯೇ ಇದು ನಮ್ಮ ದೇಹದಲ್ಲಿ ಇರಲೇಬಾರದು ಎಂಬ ನಿರ್ಧಾರಕ್ಕೆ ಬಂದು ಎಲ್ಲ ಕೊಬ್ಬಿನಂಶದ ಆಹಾರಕ್ಕೆ ಗುಡ್‌ಬೈ ಹೇಳಲಾರಂಭಿಸುತ್ತಾರೆ. ಆದರೆ, ನಮ್ಮ ದೇಹಕ್ಕೆ ಕೊಬ್ಬು ಅಗತ್ಯ ಬೇಕು ಎಂಬ ಸತ್ಯ ಅರ್ಥ ಮಾಡಿಕೊಳ್ಳುವುದೇ ಇಲ್ಲ.
ಎಡವಟ್ಟಾಗುವುದೇ ಇಲ್ಲಿ! ಅತಿಯಾದ ಸಂಸ್ಕರಿಸಿದ ಆಹಾರದ ಸೇವನೆ, ಜೀವನ ಶೈಲಿ ಇಂದು ಸಣ್ಣ ವಯಸ್ಸಿನಲ್ಲಿಯೇ ಕೊಲೆಸ್ಟೆರಾಲ್ ಹೆಚ್ಚಾಗುವ ಸಮಸ್ಯೆಯನ್ನೂ ತಂದೊಡ್ಡುತ್ತದೆ ನಿಜ. ಆದರೆ, ಇಲ್ಲಿ ಬಹಳ ತಪ್ಪು ತಿಳುವಳಿಕೆಗಳೂ ಆಗುತ್ತದೆ. ಬಹಳಷ್ಟು ಬಂದಿ ಕೊಲೆಸ್ಟೆರಾಲ್ ಹೆಚ್ಚು ಮಾಡುವ ಎಲ್ಲ ಬಗೆಯ ಎಣ್ಣೆ, ತುಪ್ಪ ಸೇರಿದಂತೆ ಹಲವಾರು ಆಹಾರವನ್ನು ತಮ್ಮ ದಿನನಿತ್ಯದ ಆಹಾರ ಕ್ರಮದಿಂದ ಬಿಡುವ ಮೂಲಕ ಕೊಲೆಸ್ಟೆರಾಲ್ ಮಟ್ಟವನ್ನು ಸಮತೋಲನಕ್ಕೆ ತರಬಹುದು ಎಂದು ಭಾವಿಸುತ್ತಾರೆ. ಆದರೆ, ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವಿದೆ. ನಮ್ಮ ದೇಹಕ್ಕೆ ಕೊಬ್ಬಿನಂಶ ಬೇಡವೇ ಬೇಡ, ಇದು ತಿಂದರಷ್ಟೇ ಸಮಸ್ಯೆ ಎಂಬುದು ತಪ್ಪು ತಿಳುವಳಿಕೆ. ಕೊಬ್ಬಿನಂಶ, ಕಾರ್ಬೋಹೈಡ್ರೇಟಿನ ಅಂಶವನ್ನು ದೇಹಕ್ಕೆ ನಿತ್ಯ ಪೂರೈಕೆ ಮಾಡದಿದ್ದರೆ, ದೇಹವೆಂಬ ಯಂತ್ರ ಸರಿಯಾಗಿ ಕೆಲಸ ಮಾಡುವುದಿಲ್ಲ. ಯಂತ್ರ ಸರಿಯಾಗಿ ಕೆಲಸ ಮಾಡಲು ಆಗಾಗ ಎಣ್ಣೆ ಹಾಕಬೇಕಾಗುವ ಹಾಗೆಯೇ ನಮ್ಮ ದೇಹಕ್ಕೂ ಕೊಬ್ಬಿನಂಶದ ಅಗತ್ಯವಿದೆ. ಒಳ್ಳೆಯ ಕೊಲೆಸ್ಟೆರಾಲ್ (ಎಚ್‌ಡಿಎಲ್), ಕೆಟ್ಟ ಕೊಲೆಸ್ಟೆರಾಲ್ (ಎಲ್‌ಡಿಎಲ್) ಎಂಬ ಎರಡು ಬಗೆಯ ಕೊಲೆಸ್ಟೆರಾಲ್‌ಗಳ ಬಗ್ಗೆ ನಾವು ತಿಳಿದುಕೊಂಡು ಆಹಾರಕ್ರಮದಲ್ಲಿ ಕೊಂಚ ಮಾರ್ಪಾಡುಗಳನ್ನು ಮಾಡುವುದನ್ನು ಕಲಿಯಬೇಕು.
ಹಾಗಾದರೆ ದೇಹದ ಒಳ್ಳೆಯ ಕೊಲೆಸ್ಟೆರಾಲ್ ಹೆಚ್ಚಿಸಬಲ್ಲ ಮಾರ್ಗಗಳಾವುವು, ಯಾವ ಆಹಾರ ಸೇವನೆಯಿಂದ ದೇಹಕ್ಕೆ ಅಗತ್ಯ ಬೇಕಾಗಿರುವ ಒಳ್ಳೆಯ ಕೊಲೆಸ್ಟೆರಾಲ್ ಮಟ್ಟವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ನೋಡೋಣ.
೧. ಚಿಯಾ ಸೀಡ್ಸ್: ಪುಟಾಣಿ ಗಾತ್ರದ ಚಿಯಾ ಬೀಜಗಳು ಸೂಪರ್ ಫುಡ್ ಎಂಬ ಹೆಸರನ್ನೂ ಪಡೆದುಕೊಂಡಿದೆ. ಇದರಲ್ಲಿರುವ ಪೋಷಕಾಂಶಗಳು ಒಂದೆರಡಲ್ಲ. ಸಸ್ಯಜನ್ಯ ಒಮೆಗಾ ೩ಫ್ಯಾಟಿ ಆಸಿಡ್, ನಾರಿನಂಶವು ದೇಹಕ್ಕೆ ಅಗತ್ಯ ಬೇಕಾಗಿರುವ ಉತ್ತಮ ಕೊಲೆಸ್ಟೆರಾಲ್ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.
ಇದನ್ನೂ ಓದಿ | Walking after dinner | ಊಟದ ನಂತರ ಕಾಲಾಡಿಸುವುದು ಎಷ್ಟು ಒಳ್ಳೆಯದು?
೨. ಬಾರ್ಲಿ: ದೇಹವನ್ನು ತಂಪಾಗಿಟ್ಟಿರುವ ಗುಣವನ್ನು ಹೊಂದಿರುವ ಬಾರ್ಲಿ ಒಂದು ಉತ್ತಮ ಧಾನ್ಯ. ಇದರ ಬಳಕೆ ದಿನನಿತ್ಯದ ಜೀವನದಲ್ಲಿ ಕಡಿಮೆಯಾದರೂ, ಇದನ್ನು ಬಳಸುವ ಮಾರ್ಗಗಳನ್ನು ಕಂಡುಕೊಂಡು ಬಳಸುವುದರಿಂದ ಇದರ ಉಪಯೋಗಗಳನ್ನು ಪಡೆಯಬಹುದು. ಇದು ಕೆಟ್ಟ ಕೊಲೆಸ್ಟೆರಾಲ್ ಹಾಗೂ ಒಳ್ಳೆಯ ಕೊಲೆಸ್ಟೆರಾಲ್ ನಡುವಿನ ಸಮತೋಲನ ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
೩. ವಾಲ್ನಟ್: ಮಿದುಳಿನಾಕಾರದ ಮಾಲ್ನಟ್ ಎಂಬ ಬೀಜದ ಆರೋಗ್ಯಕರ ಲಾಭಗಳು ಅನೇಕ. ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು ಎಂಬಲ್ಲಿಂದ ಹಿಡಿದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟೆರಾಲ್ ನಿಯಂತ್ರಿಸುವ ಗುಣವನ್ನೂ ಹೊಂದಿರುವ ಈ ಬೀಜ ನಿತ್ಯ ಬಳಕೆಗೆ ಯೋಗ್ಯ. ಆದರೆ, ಹಿತಮಿತವಾದ ಬಳಕೆ ಒಳ್ಳೆಯದು ಎಂಬುದು ನೆನಪಿನಲ್ಲಿಡಬೇಕಾದ್ದು ಅಗತ್ಯ ಕೂಡಾ.
೪. ತೆಂಗಿನೆಣ್ಣೆ: ನಮ್ಮ ತಲೆತಲಾಂತರಗಳಿಂದ ತೆಂಗಿನೆಣ್ಣೆಯನ್ನು ನಿತ್ಯದ ಬಳಕೆಯಲ್ಲಿ ಉಪಯೋಗಿಸುತ್ತಾ ಬಂದರೂ, ತೆಂಗಿನೆಣ್ಣೆ ಆರೋಗ್ಯಕರವಲ್ಲ ಎಂಬ ಇತ್ತೀಚಿನ ಕೆಲ ವರ್ಷಗಳ ವಾದದಿಂದಾಗಿ, ತೆಂಗಿನೆಣ್ಣೆಯ ಬಳಕೆಯ ಬಗೆಗೆ ಸಂಶಯಗಳು ಜನರಲ್ಲಿ ಎದ್ದಿದ್ದು ನಿಜ. ಆದರೆ, ತೆಂಗಿನೆಣ್ಣೆ ಒಳ್ಳೆಯ ಕೊಲೆಸ್ಟೆರಾಲ್ ಮಟ್ಟವನ್ನು ಏರಿಸುತ್ತದೆ ಎಂಬುದು ಸಂಶೋಧನೆಗಳು ಕಂಡುಕೊಂಡ ಸತ್ಯ. ದಿನನಿತ್ಯದ ಅತಿಯಾದ ಬಳಕೆ ಸಲ್ಲದಿದ್ದರೂ, ಆಗಾಗ ತೆಂಗಿನೆಣ್ಣೆಯ ಉಪಯೋಗ ದೇಹಕ್ಕೆ ಒಳ್ಳೆದನ್ನೇ ಮಾಡುತ್ತದೆ.
೫. ಸೋಯಾಬೀನ್: ಸೋಯಾಬೀನನ್ನು ಮಾಂಸಕ್ಕೆ ಪರ್ಯಾಯವಾದ ಸಸ್ಯಮೂಲ ಎಂದು ಹೇಳುವುದುಂಟು. ಯಾಕೆಂದರೆ ಪ್ರೊಟೀನ್, ನಾರಿನಂಶ ಹಾಗೂ ಉತ್ತಮ ಕೊಲೆಸ್ಟೆರಾಲ್ ಹೆಚ್ಚಿಸುವ ಅನ್ ಸ್ಯಾಚುರೇಟೆಡ್ ಫ್ಯಾಟ್ ಎಲ್ಲವೂ ದೇಹಕ್ಕೆ ಅತ್ಯಂತ ಅಗತ್ಯವಾದವು. ಇದರ ಹಿತಮಿತ ಬಳಕೆ ನಮ್ಮ ಲಿಪಿಡ್ ಪ್ರೊಫೈಲನ್ನು ಉತ್ತಮಗೊಳಿಸುತ್ತದೆ.
ಇದನ್ನೂ ಓದಿ | International men’s day | ಓ ಗಂಡಸರೇ, ಈ ಒಂಬತ್ತು ಆಹಾರ ನಿಮ್ಮ ತಟ್ಟೆಯಲ್ಲಿರಲಿ!