Site icon Vistara News

Migraine Control: ಮೈಗ್ರೇನ್‌ನಿಂದ ಪಾರಾಗುವುದು ಹೇಗೆ?

Migraine Problem

ಅರೆತಲೆಶೋಲೆ ಎಂದು ಕರೆಯಲಾಗುವ ಮೈಗ್ರೇನ್‌ ನೀಡುವ ಹಿಂಸೆ ಅಷ್ಟಿಷ್ಟೇ ಅಲ್ಲ. ತಲೆಯನ್ನು ಕುಟ್ಟಿ ಪುಡಿಮಾಡುವಂಥ ನೋವು, ಕೆಲವೊಮ್ಮೆ ತಲೆಯ ಒಂದೇ ಭಾಗಕ್ಕೆ ನೋವು, ಹೊಟ್ಟೆ ತೊಳೆಸಿದಂತಾಗಿ ವಾಂತಿ, ಬೆಳಕು ಮತ್ತು ಶಬ್ದಕ್ಕೆ ತೊಂದರೆ ಹೆಚ್ಚಾಗುವುದು, ಕಣ್ಣಲ್ಲಿ ಬಣ್ಣ ಕಾಣುವುದು, ದೃಷ್ಟಿ ಮಂಜಾಗುವುದು… ಇಂಥವೆಲ್ಲಾ ಮೈಗ್ರೇನ್‌ ಲಕ್ಷಣಗಳು. ಒಮ್ಮೆ ಮೈಗ್ರೇನ್‌ ಶೂಲೆ ಆರಂಭವಾದರೆ, ಹಲವಾರು ಗಂಟೆಗಳು ಅಥವಾ ಒಂದೆರಡು ದಿನಗಳವರೆಗೆ ನಿತ್ಯದ ಕೆಲಸವನ್ನೂ ಮಾಡಲಿಕ್ಕಾಗದಷ್ಟು ಅವಸ್ಥೆ ಹದಗೆಡುತ್ತದೆ.
ಇದನ್ನು ಸಂಪೂರ್ಣ ಹೋಗಲಾಡಿಸುವ ಮದ್ದು ಎಂದಾದರೂ ಬಂದೀತು. ಅದ್ಯಕ್ಕೀಗ ವೈದ್ಯರ ಸಲಹೆಯ ಜೊತೆಗೆ, ಕೆಲವು ಹೆಚ್ಚುವರಿ ಪ್ರಯತ್ನಗಳಿಂದ ಈ ತಲೆಶೂಲೆಯನ್ನು ನಿಯಂತ್ರಣದಲ್ಲಿಡಲು ಸಾಧ್ಯ. ಜೀವನಶೈಲಿಯಲ್ಲಿ, ಆಹಾರಕ್ರಮಗಳಲ್ಲಿ ಕೆಲವು ಬದಲಾವಣೆ ಮತ್ತು ಬೆರಳೆಣಿಕೆಯ ಮನೆಮದ್ದುಗಳೂ (migraine control) ಈ ನಿಟ್ಟಿನಲ್ಲಿ ಸಹಾಯಕಾರಿ.

ಆಹಾರ ಕ್ರಮ

ಈ ಆಹಾರಗಳನ್ನು ಬಿಟ್ಟರೆ ಮೈಗ್ರೇನ್‌ ಹತೋಟಿಗೆ ಅನುಕೂಲ. ನೈಟ್ರೇಟ್‌ ಅಂಶ ಹೆಚ್ಚಿರುವ ಸಾಸೇಜ್‌ ಮತ್ತು ಕೆಲವು ಮಾಂಸಾಹಾರಗಳು, ಚಾಕಲೇಟ್‌, ಟೈರಮಿನ್‌ ಅಂಶ ಹೆಚ್ಚಿರುವ ಫೆಟಾ, ಚೆಡ್ಡರ್‌, ಪರ್ಮೇಸನ್‌ ಮತ್ತು ಸ್ವಿಸ್‌ ಚೀಸ್‌ಗಳು, ಆಲ್ಕೋಹಾಲ್-‌ ಅದರಲ್ಲೂ ರೆಡ್‌ ವೈನ್‌, ಮಾನೋ ಸೋಡಿಯಂ ಗ್ಲೂಟಮೇಟ್‌ (ಎಮ್‌ಎಸ್‌ಜಿ) ಸೇರಿಸಿರುವ ಆಹಾರ, ಐಸ್ಕ್ರೀಂನಂತಹ ತಣ್ಣನೆಯ ಆಹಾರ, ಸಂಸ್ಕರಿಸಿದ ಆಹಾರಗಳು, ಕಟುವಾದ ಉಪ್ಪಿನಕಾಯಿಯಂಥ ಪದಾರ್ಥಗಳು ಮತ್ತು ಅತಿಯಾದ ಕೆಫೇನ್‌ ಸೇವನೆ- ಇವಿಷ್ಟನ್ನು ದೂರ ಇಟ್ಟಷ್ಟೂ ಅರೆ ತಲೆಶೂಲೆಯನ್ನೂ ದೂರ ಇರಿಸಬಹುದು. ಕೆಲವು ನೈಸರ್ಗಿಕ ಸುಗಂಧ ತೈಲಗಳು: ಲ್ಯಾವೆಂಡರ್‌ ಮತ್ತು ಪೆಪ್ಪರ್ಮಿಂಟ್‌ ತೈಲಗಳ ಬಳಕೆಯಿಂದ ಮೈಗ್ರೇನ್‌ ಕಡಿಮೆ ಆಗುವ ಸಂಭವವಿದೆ. ಈ ತೈಲಗಳನ್ನು ಹಣೆಯ ಸುತ್ತಮುತ್ತ ಲೇಪಿಸಬಹುದು. ಆಗಾಗ ಆಘ್ರಾಣಿಸಬಹುದು. ಮುಖ್ಯವಾಗಿ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸಲು ಈ ತೈಲಗಳು ನೆರವು ನೀಡುತ್ತವೆ.

ಅಕ್ಯುಪಂಕ್ಚರ್ ಮತ್ತು ಅಕ್ಯುಪ್ರೆಶರ್:

ಅತ್ಯಂತ ತೆಳುವಾದ ಸೂಕ್ಷ್ಮ ಸೂಜಿಯನ್ನು ದೇಹದ ಕೆಲವು ಭಾಗಗಳಿಗೆ ಚುಚ್ಚುವ ಮೂಲಕ ನೀಡುವ ಚಿಕಿತ್ಸೆಯಿದು. ವೈದ್ಯರ ಸಲಹೆಯ ಜೊತೆಗೆ, ತಜ್ಞರಿಂದ ಅಕ್ಯುಪಂಕ್ಚರ್‌ ಮಾಡಿಸಿಕೊಳ್ಳುವುದು, ಮೈಗ್ರೇನ್‌ ನಿಯಂತ್ರಣಕ್ಕೆ ಸಹಕಾರಿಯಾಗಬಹುದು. ‌ಅಕ್ಯುಪ್ರೆಶರ್‌ ಚಿಕಿತ್ಸೆಯೆಂದರೆ ಕೈ ಮತ್ತು ಬೆರಳುಗಳ ಕೆಲವು ನಿರ್ದಿಷ್ಟ ಬಿಂದುಗಳ ಮೇಲೆ ಒತ್ತಡ ಹಾಕಿ, ನೋವು ಶಮನಗೊಳಿಸುವ ತಂತ್ರ. ವಾಂತಿಯಂಥ ಮೈಗ್ರೇನ್‌ ವಿಕಾರಗಳ ಶಮನಕ್ಕೆ ಇದು ಉಪಯುಕ್ತ.

ಮನೆಮದ್ದು

ಕೆಲವು ಸಸ್ಯಮೂಲಗಳಿಂದಲೂ ಮೈಗ್ರೇನ್ ಕಡಿಮೆ ಮಾಡುವುದು ಸಾಧ್ಯ ಎಂದು ನಂಬಲಾಗಿದೆ. ಯುರೋಪ್‌ ಮತ್ತು ಹಿಮಾಲಯದ ತಪ್ಪಲುಗಳಲ್ಲಿ ದೊರೆಯುವ ಫೀವರ್‌ಫ್ಯೂ ಅಥವಾ ಮಿಡ್‌ಸಮ್ಮರ್‌ ಡೈಸಿ ಅಥವಾ ವೈಲ್ಡ್‌ ಕ್ಯಾಮಮೈಲ್‌ ಎಂದು ಕರೆಯಲ್ಪಡುವ ಸಸ್ಯದ ಮೇಲೆ ಸಂಶೋಧನೆ ನಡೆಯುತ್ತಿದೆ. ನೋಡುವುದಕ್ಕೆ ಸೇವಂತಿಗೆಯ ರೂಪಾಂತರಿಯಂತೆ ಕಾಣುವ, ಬಿಳಿ ಮತ್ತು ತಿಳಿಹಳದಿ ಬಣ್ಣದ ಪುಟ್ಟ ಹೂವುಗಳಿರುವ ಸಸ್ಯವಿದು. ಮುಖ್ಯವಾಗಿ ಜ್ವರ ಕಡಿಮೆ ಮಾಡಲು ಮನೆಮದ್ದಾಗಿ ಉಪಯೋಗಿಸುವ ಈ ಸಸ್ಯ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ತಲೆ ಶೂಲೆಯಿಂದಾಗಿ ವಾಂತಿಯಾಗುವವರಿಗೆ ಶುಂಠಿಯನ್ನೂ ಕೆಲವೊಮ್ಮೆ ಮನೆಮದ್ದಾಗಿ ನೀಡಲಾಗುತ್ತದೆ.

ಯೋಗ ಮತ್ತು ಧ್ಯಾನ

ಯೋಗ, ‍‍ಧ್ಯಾನ ಮತ್ತು ಪ್ರಾಣಾಯಾಮದಂಥ ಕ್ರಿಯೆಗಳು ಮಾನಸಿಕ ಒತ್ತಡವನ್ನು ಶಮನಗೊಳಿಸುತ್ತವೆ. ಇದರಿಂದ ಮೈಗ್ರೇನ್‌ನ ಪುನರಾವರ್ತನೆ, ತೀವ್ರತೆ ಮತ್ತು ಶೂಲೆಯ ಸಮಯವನ್ನೂ ಕಡಿತಗೊಳಿಸಲು ಸಾಧ್ಯ. ಆದರೆ ಇವೆಲ್ಲ ಒಂದೆರಡು ದಿನಗಳಲ್ಲಿ ಪರಿಣಾಮ ಬೀರುವ ಕ್ರಮಗಳಲ್ಲ. ಇವನ್ನು ನಿಯಮಿತವಾಗಿ ಜೀವನದಲ್ಲಿ ಅಳವಡಿಸಿಕೊಂಡಾಗಲೇ ಪರಿಣಾಮ ಕಾಣಲು ಸಾಧ್ಯ.

ಮೆಗ್ನೀಶಿಯಂ ಸಾಂದ್ರಿತ ಆಹಾರ

ದೇಹದಲ್ಲಿ ಮೆಗ್ನೀಶಿಯಂ ಕೊರತೆಯಿದ್ದರೆ ಮೈಗ್ರೇನ್‌ ಮತ್ತು ಇತರ ತಲೆನೋವುಗಳಿಗೆ ಆಹ್ವಾನ ನೀಡಿದಂತೆ. ಇತ್ತೀಚಿನ ಅ‍ಧ್ಯಯನದಲ್ಲಿ, ದಿನಕ್ಕೆ ೫೦೦ ಮಿ.ಗ್ರಾಂ. ಮೆಗ್ನೀಶಿಯಂ ಪೂರಕವಾಗಿ ನೀಡಿದ್ದರಿಂದ, ರೋಗಿಗಳು ಹೆಚ್ಚಿನ ಅಡ್ಡಪರಿಣಾಮಗಳಿಲ್ಲದೆ ಚೇತರಿಸಿಕೊಂಡಿದ್ದನ್ನು ದಾಖಲಿಸಲಾಗಿದೆ. ಬಾದಾಮಿ, ಎಳ್ಳು, ಸೂರ್ಯಕಾಂತಿ ಬೀಜಗಳು, ಗೋಡಂಬಿ, ಶೇಂಗಾ, ಓಟ್‌ಮೀಲ್‌, ಹಾಲು ಮತ್ತು ಮೊಟ್ಟೆಯಲ್ಲಿ ಮೆಗ್ನೀಶಿಯಂ ಪೋಷಕಾಂಶ ಹೇರಳವಾಗಿದೆ.

ನೀರು ಮತ್ತು ನಿದ್ದೆ

ಶರೀರಕ್ಕೆ ಇವೆರಡೂ ಧಾರಾಳವಾಗಿ ದೊರೆಯಬೇಕು. ದೇಹಕ್ಕೆ ನೀರಿನ ಕೊರತೆಯಾಗುವುದರಿಂದಲೂ ಮೈಗ್ರೇನ್‌ಗೆ ಚೋದನೆ ನೀಡಿದಂತಾಗುತ್ತದೆ. ಹಾಗಾಗಿ ನೀರು ಸ್ವಲ್ಪ ಹೆಚ್ಚೇ ಕುಡಿದರೂ ತೊಂದರೆಯಿಲ್ಲ. ಇನ್ನು ನಿದ್ದೆಯ ಕೊರತೆಯೂ ತಲೆಶೂಲೆಯನ್ನು ಕೈಬೀಸಿ ಕರೆಯುತ್ತದೆ. ಹಾಗಾಗಿ, ರಾತ್ರಿ ನಿಯಮಿತವಾಗಿ ನಿದ್ದೆ ಅತ್ಯಗತ್ಯ. ನಿದ್ದೆಗೆ ಮುನ್ನ ಕೆಫೇನ್‌ ಸೇವನೆ, ಸ್ಕ್ರೀನ್‌ ನೋಡುವುದು… ಇಂಥದ್ದೆಲ್ಲ ತ್ಯಜಿಸಿ, ಕಣ್ತುಂಬಾ ನಿದ್ದೆ ಮಾಡುವುದು ಆರೋಗ್ಯಕರ.

Exit mobile version